ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಜಕೀಯ ಜಾಗೃತಿಗೆ ಸಿನಿಮಾ ಮಾಡಿದೆ’

Last Updated 22 ಮಾರ್ಚ್ 2018, 19:30 IST
ಅಕ್ಷರ ಗಾತ್ರ

* ‘ಸ್ವಣಂ’ ಬಗ್ಗೆ ಹೇಳಿ...
ನಮ್ಮ ಕಣ್ಣಿಗೆ ಕಾಣುವ ರಾಜಕೀಯ ಸಂಗತಿಗಳನ್ನು ಇಬ್ಬರು ಬಾಲಕರ ಕತೆಯ ಮೂಲಕ ತೋರಿಸಿದ್ದೇನೆ. ನಮ್ಮ ದೇಶದಲ್ಲಿ ಸಣ್ಣಸಣ್ಣ ವಿಚಾರಗಳಲ್ಲೂ ರಾಜಕೀಯದ ಆಟ, ಮುಗ್ಧ ಜನರ ವಂಚನೆ ಸಾಮಾನ್ಯ ಎನ್ನುವಂತಾಗಿದೆ. ಇದು ಮಲಯಾಳಂ ಭಾಷೆಯ ಸಿನಿಮಾವಾದರೂ, ಈ ಸಿನಿಮಾ ಕತೆ ಎಲ್ಲಾ ಕಡೆಗೆ ಒಗ್ಗುತ್ತದೆ. ರಾಜಕೀಯ ವಿಡಂಬನೆ ಈ ಚಿತ್ರದ ಆಶಯ.

* ಚಿತ್ರಕಲೆಯಲ್ಲಿ ಆಸಕ್ತಿ ಇದ್ದ ನೀವು ಸಿನಿಮಾಗೆ ಆಕರ್ಷಿತರಾಗಿದ್ದು ಯಾಕೆ?
ಒಬ್ಬ ಚಿತ್ರ ಕಲಾವಿದ ತನಗೆ ಹೊಳೆದ ಚಿತ್ರಗಳನ್ನು ಕ್ಯಾನ್ವಾಸ್‌ನಲ್ಲಿ ಬಿಡಿಸುತ್ತಾನೆ. ಆದರೆ ನನ್ನ ತಲೆಯಲ್ಲಿ ಸಾವಿರಾರು ಕತೆಗಳು ಹುಟ್ಟಿಕೊಳ್ಳುತ್ತವೆ. ಕೆಲ ದೃಶ್ಯಗಳು, ಕತೆಗಳು ನನ್ನನ್ನು ಸಿನಿಮಾ ಮಾಡುವಂತೆ ಪ್ರಚೋದಿಸಿದವು. ಬಣ್ಣ, ಕ್ಯಾಮೆರಾ ಎರಡೂ ನನಗಿಷ್ಟ. ರಾಜಕೀಯವೂ ನನ್ನ ಆಸಕ್ತಿಯ ಕ್ಷೇತ್ರ. ಅಲ್ಲಿನ ಕೆಲ ಹುಳುಕುಗಳನ್ನು ಜನರಿಗೆ ತಿಳಿಸಬೇಕು ಎಂದು ಸಿನಿಮಾ ಕ್ಷೇತ್ರಕ್ಕೆ ಬಂದಿದ್ದೇನೆ.

* ನಿಮ್ಮ ‘ಪಿತಾವೀನಂ ಪುತ್ರನುಂ’ ಚಿತ್ರ ನಿಷೇಧ ಆಗಿದ್ದು ಯಾಕೆ?
ಕ್ರಿಶ್ಚಿಯನ್‌ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಸಿನಿಮಾದ ಕೆಲ ದೃಶ್ಯಗಳು ನೋವನ್ನುಂಟು ಮಾಡುತ್ತವೆ ಎಂದು ಕಾರಣ ನೀಡಿ ಸಿಬಿಎಫ್‌ಸಿ (ಸೆನ್ಸಾರ್ ಮಂಡಳಿ) ಪ್ರಮಾಣ ಪತ್ರವನ್ನೇ ನೀಡಲಿಲ್ಲ. ನನ್ನ ಸಿನಿಮಾದಲ್ಲಿ ಅಂತಹ ಯಾವುದೇ ದೃಶ್ಯಗಳಿರಲಿಲ್ಲ. ಚಿತ್ರವು ಇಬ್ಬರು ನನ್‌ಗಳ ಜೀವನದ ಕತೆ ಹೊಂದಿದೆ. ಮನಸ್ಸಿನ ಭಾವನೆಗಳು, ಬಣ್ಣದ ಬಟ್ಟೆಗಳು, ಜೀವನವನ್ನು ಸ್ವಚ್ಛಂದವಾಗಿ ಅನುಭವಿಸುವ ಅವರ ಕನಸನ್ನು ಇಲ್ಲಿ ಚಿತ್ರಿಸಲಾಗಿದೆ. ಚಿತ್ರಕ್ಕೆ ಮೊದಲು ‘ಫೀತಾವೀನಂ ಪುತ್ರನುಂ, ಪರಿಶುದ್ಧತ್ಮಾವೀನಂ’ (ಅಪ್ಪ, ಮಗ ಮತ್ತು ಪರಿಶುದ್ಧ ಆತ್ಮ) ಎಂದು ಹೆಸರಿಟ್ಟಿದ್ದೆ. ಆದರೆ ಬಳಿಕ ವಿವಾದ ಬೇಡ ಅಂತ ‘ಫೀತಾವೀನಂ ಪುತ್ರನುಂ’ ಎಂದು ಹೆಸರು ಬದಲಾಯಿಸಿದೆ. ಆದರೂ ಸಿನಿಮಾ ಬಿಡುಗಡೆಯಾಗಲಿಲ್ಲ.

* ಸಿನಿಮಾಕ್ಕೆ ಕೇರಳದಲ್ಲಿ ಬೆಂಬಲ ಹೇಗಿದೆ?
ಸಿನಿಮಾ ಮಾಡುವವರಿಗೆ, ಹೊಸಬರಿಗೆ ಕೇರಳ ಸರ್ಕಾರ ಹಾಗೂ ಸಿನಿಮಾ ಮಂಡಳಿ ಬೆಂಬಲ ನೀಡುತ್ತದೆ. ಆದರೆ ವಿಶೇಷ ಆಸಕ್ತಿ ಅಂತಾ ಏನೂ ಇಲ್ಲ. ಕೆಲ ಸಿನಿಮಾಗಳ ಚಿತ್ರಕತೆಯಲ್ಲಿ ಸರ್ಕಾರ, ಮಂಡಳಿ ಎರಡೂ ಹಸ್ತಕ್ಷೇಪ ಮಾಡುತ್ತವೆ.

* ಕನ್ನಡ ಸಿನಿಮಾ ನೋಡಿದ್ದೀರಾ?
ಗಿರೀಶ್‌ ಕಾಸರವಳ್ಳಿ ನಿರ್ದೇಶನದ ಸುಮಾರು ಸಿನಿಮಾಗಳನ್ನು ನೋಡಿದ್ದೇನೆ. ಹಾಗೇ ಕನ್ನಡದ ಹಿಟ್‌ ಚಿತ್ರಗಳನ್ನು ನೋಡುತ್ತಿರುತ್ತೇನೆ. ನಮ್ಮ ಮಲಯಾಳಂ ಚಿತ್ರದಲ್ಲಿ ನಿಜಸ್ಥಿತಿಯೇ ಸಿನಿಮಾದ ಕಥೆಯಾಗುತ್ತದೆ. ಆದರೆ ಕನ್ನಡದ ಕೆಲ ಹಿಟ್‌ ಸಿನಿಮಾಗಳು ವಾಸ್ತವಕ್ಕಿಂತ ದೂರ ಎನಿಸುತ್ತವೆ.


ನಿರ್ದೇಶಕ ದೀಪೇಶ್‌ ಕುಮಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT