ಐಟಿ–ಕಾಂಗ್ರೆಸ್‌ ಜಟಾಪಟಿ

7

ಐಟಿ–ಕಾಂಗ್ರೆಸ್‌ ಜಟಾಪಟಿ

Published:
Updated:
ಐಟಿ–ಕಾಂಗ್ರೆಸ್‌ ಜಟಾಪಟಿ

ಬೆಂಗಳೂರು: ‘ಕಾಂಗ್ರೆಸ್‌ ನಾಯಕರ ಮೇಲೆ ನಡೆಯುತ್ತಿರುವ ಆದಾಯ ತೆರಿಗೆ ದಾಳಿ ರಾಜಕೀಯ ಪ್ರೇರಿತವೆಂದು ಆರೋಪಿಸುವವರು ತಾಕತ್ತಿದ್ದರೆ ಇಲಾಖೆ ಕ್ರಮವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಿ’ ಎಂದು ಕರ್ನಾಟಕ ಹಾಗೂ ಗೋವಾ ವೃತ್ತದ ಪ್ರಧಾನ ಮುಖ್ಯ ಕಮಿಷನರ್‌ ರಜನೀಶ್‌ ಕುಮಾರ್‌ ಸವಾಲು ಹಾಕಿದರು.

ಕಾಂಗ್ರೆಸ್‌ ನಾಯಕರನ್ನು ಗುರಿಯಾಗಿಸಿಕೊಂಡು ಐ.ಟಿ ದಾಳಿ ನಡೆಸಲಾಗುತ್ತಿದೆ’ ಎಂದು ಆರೋಪಿಸಿ ಗುರುವಾರ ಕೆಪಿಸಿಸಿ ಕಚೇರಿಯಿಂದ ಐ.ಟಿ.ಇಲಾಖೆ ಕಚೇರಿ

ವರೆಗೆ ಪಾದಯಾತ್ರೆ ನಡೆಸಿದ ಸಾವಿರಾರು ಕಾರ್ಯಕರ್ತರು, ಐ.ಟಿ. ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಘೋಷಣೆಗಳನ್ನು ಕೂಗಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.‌

ಈ ಪ್ರತಿಭಟನೆಗೆ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಖಾರವಾಗಿ ಪ್ರತಿಕ್ರಿಯಿಸಿದ ರಜನಿಶ್ ಕುಮಾರ್‌, ‘ತಪ್ಪು ಮಾಹಿತಿ ಆಧರಿಸಿ ನಮ್ಮ ಇಲಾಖೆ ದಾಳಿ ಮಾಡಿದೆ ಎಂದು ಯಾರಿಗಾದರೂ ಅನಿಸಿದ್ದರೆ ಅಂತಹವರು ಹೈಕೋರ್ಟ್‌ ಮೆಟ್ಟಿಲು ತುಳಿಯಲು ಕಾನೂನಿನಲ್ಲಿ ಅವಕಾಶ ಇದೆ’ ಎಂದರು.

‘ನಮ್ಮ ವಿರುದ್ಧ ಕರ್ನಾಟಕದಲ್ಲಿ ಯಾರೂ ಇದುವರೆಗೆ ನ್ಯಾಯಾಲಯಕ್ಕೆ ಹೋಗಿಲ್ಲ. ತಪ್ಪಾಗಿದ್ದರೆ ವಿಚಾರಣೆ ನಡೆಸಲು ಹೈಕೋರ್ಟ್‌ಗೆ ಅಧಿಕಾರ ಇದೆಯಲ್ಲವೇ’ ಎಂದರು.

ನಿರಾಕರಣೆ: ‘ರಾಜಕೀಯ ಆರೋಪಗಳಿಗೆ ನಾನು ಯಾವುದೇ ಉತ್ತರ ನೀಡುವುದಿಲ್ಲ. ಕಾಂಗ್ರೆಸ್ ನಾಯಕರು ಕೊಟ್ಟಿರುವ ಮನವಿಯನ್ನು ಮೇಲಿನವರಿಗೆ ರವಾನಿಸಿದ್ದೇನೆ’ ಎಂದಷ್ಟೇ ಅವರು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.

‘ಐ.ಟಿ ತನಿಖಾ ವಿಭಾಗದ ಪ್ರಧಾನ ನಿರ್ದೇಶಕ ಬಿ.ಆರ್. ಬಾಲಕೃಷ್ಣನ್ ವರ್ಗಾವಣೆಗೆ ಕಾಂಗ್ರೆಸ್ ನಾಯಕರು ಚುನಾವಣಾ ಆಯೋಗಕ್ಕೆ ದೂರು ನೀಡಿರುವ ಬಗ್ಗೆಯೂ ನಾನು ಪ್ರತಿಕ್ರಿಯಿಸುವುದಿಲ್ಲ. ಅವರನ್ನು ವರ್ಗಾವಣೆ ಮಾಡುವ ಅಧಿಕಾರ ನನಗೂ ಇಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

ಬೆದರಿಕೆ ಒಡ್ಡುತ್ತಿದ್ದಾರೆ: ಪ್ರತಿಭಟನೆ ನೇತೃತ್ವ ವಹಿಸಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‍ ಗುಂಡೂರಾವ್ ‘ಐ.ಟಿ ಅಧಿಕಾರಿಗಳು ದಾಳಿ ನಡೆಸುವ ಮೂಲಕ ಕಾಂಗ್ರೆಸ್ ನಾಯಕರ ತೇಜೋವಧೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಕಾಂಗ್ರೆಸ್‌ನಲ್ಲೇ ಮುಂದುವರಿದರೆ ಇನ್ನಷ್ಟು ತೊಂದರೆ ಕೊಡುವುದಾಗಿ ಬೆದರಿಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ದಾಳಿ ಮಾಡಿದ ಬೆನ್ನಲ್ಲೇ ಕೋಟಿಗಟ್ಟಲೆ ಹಣ ದೊರೆತಿದೆ ಎಂಬ ಮಾಹಿತಿಯನ್ನು ಸೋರಿಕೆ ಮಾಡಲಾಗುತ್ತಿದೆ. ಅದು ಸತ್ಯವೋ, ಸುಳ್ಳೋ ಎಂಬುದನ್ನು ಅರ್ಥ ಮಾಡಿಕೊಳ್ಳಲಾಗದೆ ಜನ ಗೊಂದಲದಲ್ಲಿ ಮುಳುಗಿ ತಪ್ಪು ಅಭಿಪ್ರಾಯಕ್ಕೆ ಬರುತ್ತಿದ್ದಾರೆ’ ಎಂದರು.

‘ಸಚಿವ ಡಿ.ಕೆ. ಶಿವಕುಮಾರ್ ಮನೆ ಮೇಲಿನ ದಾಳಿ ಬಳಿಕ ಶಾಸಕರಾದ ಎಂ.ಟಿ.ಬಿ ನಾಗರಾಜ್, ರಘು ಆಚಾರ್ ಮನೆಯನ್ನು ಗುರಿಯಾಗಿಸಿಕೊಳ್ಳಲಾಗಿದೆ. ಕೇವಲ ಕಾಂಗ್ರೆಸ್‌ ನಾಯಕರನ್ನೇ ಹುಡುಕಿ ದಾಳಿ ನಡೆಸುವ ಅಧಿಕಾರಿಗಳು ಬಿಜೆಪಿ ಮುಖಂಡರಾದ ಕೆ.ಎಸ್.ಈಶ್ವರಪ್ಪ, ಬಿ.ಎಸ್. ಯಡಿಯೂರಪ್ಪ ಮೇಲೆ ದೂರುಗಳಿದ್ದರೂ ಏಕೆ ಕಾರ್ಯಾಚರಣೆ ನಡೆಸಿಲ್ಲ’ ಎಂದು ಕಿಡಿ ಕಾರಿದರು‌.

‘ಕಾಂಗ್ರೆಸ್ ನಾಯಕರನ್ನು ಹೆದರಿಸಲು ಕೆಲ ಅಧಿಕಾರಿಗಳನ್ನು ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಕಳುಹಿಸಿದೆ. ಕೆಲವರು ಬಿಜೆಪಿಯ ಕೈಗೊಂಬೆಯಾಗಿದ್ದಾರೆ. ಇದರ ಹಿಂದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಷಡ್ಯಂತ್ರ ಇದೆ’ ಎಂದೂ ಅವರು ಆರೋಪಿಸಿದರು.

‘ಐ.ಟಿ ಅಧಿಕಾರಿಗಳ ಪಕ್ಷಪಾತದ ಕಾರ್ಯಾಚಣೆಗಳ ಬಗ್ಗೆ ಚುನಾವಣಾ ಆಯೋಗಕ್ಕೆ ಈಗಾಗಲೇ ದೂರು ನೀಡಿದ್ದೇವೆ’ ಎಂದ ಅವರು, ‘ಯಾವುದೇ ಸರ್ಕಾರ ಆಡಳಿತಕ್ಕೆ ಬರಲಿ ಐ.ಟಿ ಇಲಾಖೆ ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕು. ಒಂದು ವೇಳೆ ಉದ್ದೇಶಪೂರ್ವಕವಾಗಿ ನಮ್ಮನ್ನು ಮುಟ್ಟಿದರೆ ಸುಮ್ಮನಿರುವುದಿಲ್ಲ’ ಎಂದೂ ದಿನೇಶ್ ಗುಂಡೂರಾವ್ ಎಚ್ಚರಿಸಿದರು.

ದುರ್ಬಳಕೆ: ಸಚಿವ ಕೆ.ಜೆ. ಜಾರ್ಜ್ ಮಾತನಾಡಿ, ‘ಸುಳ್ಳು ಭರವಸೆಗಳ ಮೂಲಕ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿದೆ. ವಿಧಾನಸಭೆ ಚುನಾವಣೆಯನ್ನು ನೇರವಾಗಿ ಎದುರಿಸಲು ತಾಕತ್ತಿಲ್ಲದ ಬಿಜೆಪಿ, ಐ.ಟಿ ಇಲಾಖೆ ದುರ್ಬಳಕೆ ಮಾಡಿಕೊಂಡು ದಾಳಿ ನಡೆಸುತ್ತಿದೆ. ರಾಜಕೀಯ ಲಾಭ ಪಡೆಯಲು ಇಷ್ಟೊಂದು ಕೆಳಮಟ್ಟಕ್ಕೆ ಇಳಿಯಬಾರದು. ಇಂತಹ ಬೆದರಿಕೆಗಳಿಗೆಲ್ಲಾ ಕಾಂಗ್ರೆಸ್ ಜಗ್ಗುವುದಿಲ್ಲ’ ಎಂದರು.

ಡಿಕೆಶಿಗೆ ಜಾಮೀನು

ತೆರಿಗೆ ವಂಚನೆ ಆರೋಪದ ಪ್ರರಣದಲ್ಲಿ ಇಂಧನ ಸಚಿವ ಡಿ.ಕೆ‌.ಶಿವಕುಮಾರ್‌ಗೆ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ಗುರುವಾರ ಜಾಮೀನು ಮಂಜೂರು ಮಾಡಿದೆ.

₹ 25,000 ಭದ್ರತಾ ಠೇವಣಿ ಇರಿಸಬೇಕು, ಸಾಕ್ಷ್ಯ ನಾಶ ಮಾಡಬಾರದು, ಸಾಕ್ಷಿಗಳ ಮೇಲೆ ಒತ್ತಡ ಹೇರಬಾರದು, ತನಿಖೆಗೆ ಸಹಕರಿಸಬೇಕು ಎಂಬ ಷರತ್ತುಗಳ ವಿಧಿಸಿ ನ್ಯಾಯಾಧೀಶ ಎಂ.ಎಸ್.ಆಳ್ವ ಜಾಮೀನು ಮಂಜೂರು ಮಾಡಿದರು. ಐ.ಟಿ ಇಲಾಖೆಯ ತನಿಖಾ ವಿಭಾಗದ ಉಪ ನಿರ್ದೇಶಕ ಸುನೀಲ್ ಗೌತಮ್ ಸಲ್ಲಿಸಿದ್ದ ವರದಿ ಆಧರಿಸಿ ನ್ಯಾಯಾಲಯ ಶಿವಕುಮಾರ್ ವಿರುದ್ಧ ಮೂರು ಕ್ರಿಮಿನಲ್ ಪ್ರಕರಣ ದಾಖಲಿಸಿತ್ತು.

ಐ.ಟಿ. ಇಲಾಖೆ ಫಲಕಕ್ಕೆ ಮಸಿ

ಕಾಂಗ್ರೆಸ್‌ ಪ್ರತಿಭಟನಾಕಾರರು ಸಂಚಾರ ಪೊಲೀಸ್ ಕಚೇರಿ ದಾಟುತ್ತಿದ್ದಂತೆ ಪೊಲೀಸರು ಬ್ಯಾರಿಕೇಡ್ ಅಡ್ಡ ಇಟ್ಟು ತಡೆದರು. ಆದರೆ, ಪ್ರತಿಭಟನಾಕಾರರು ಬ್ಯಾರಿಕೇಡ್‌ ತಳ್ಳಿ ಮುಂದೆ ಹೋಗಲು ಯತ್ನಿಸಿದರು. ಇದಕ್ಕೆ ಅವಕಾಶ ಕೊಡದ ಪೊಲೀಸರು ಅವರನ್ನು ಬಂಧಿಸಿ ಬಳಿಕ ಬಿಡುಗಡೆ ಮಾಡಿದರು.

ಈ ನಡುವೆ ಪೊಲೀಸರ ಕಣ್ತಪ್ಪಿಸಿ ಮುಂದೆ ಬಂದ ಮೂವರು ಕಾರ್ಯಕರ್ತರು, ಕಚೇರಿಯ ನಾಮಫಲಕಕ್ಕೆ ಮಸಿ ಎರಚಿದರು. ಕೂಡಲೇ ಪೊಲೀಸರು ಅವರನ್ನು ವಶಕ್ಕೆ ಪಡೆದರು. ಬಳಿಕ ಕಾಂಗ್ರೆಸ್ ಮುಖಂಡರು ಐ.ಟಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

* ಕೇಂದ್ರ, ಕಾಂಗ್ರೆಸ್‌ ಮುಖಂಡರನ್ನೇ ಗುರಿಯಾಗಿಸಿಕೊಂಡು ಐಟಿ ದಾಳಿ ನಡೆಸುತ್ತಿದೆ. ಚುನಾವಣೆ ಸಂದರ್ಭದಲ್ಲಿ ನಡೆಯುತ್ತಿರುವ ಉದ್ದೇಶಪೂರ್ವಕ ದಾಳಿ

–ಸಿದ್ದರಾಮಯ್ಯ, ಮುಖ್ಯಮಂತ್ರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry