ಮತದಾನ ತಡೆ ಮನವಿ ತಿರಸ್ಕೃತ

7
ಆಕ್ಷೇಪಣೆಗೆ ಸಮಯ ಕೋರಿದ ವಿಧಾನಸಭಾಧ್ಯಕ್ಷ; ಪುರಸ್ಕರಿಸದ ಹೈಕೋರ್ಟ್

ಮತದಾನ ತಡೆ ಮನವಿ ತಿರಸ್ಕೃತ

Published:
Updated:

ಬೆಂಗಳೂರು: ‘ರಾಜ್ಯಸಭೆಗೆ ಇದೇ 23ರಂದು ನಡೆಯಲಿರುವ ಚುನಾವಣೆಯಲ್ಲಿ ಜೆಡಿಎಸ್‌ನ ಏಳು ಬಂಡಾಯ ಶಾಸಕರು ಮತ ಚಲಾಯಿಸಲು ಅವಕಾಶ ನೀಡಬಾರದು’ ಎಂಬ ಮೂಡಿಗೆರೆ ಶಾಸಕ ಬಿ.ಬಿ.ನಿಂಗಯ್ಯ ಹಾಗೂ ಶ್ರವಣಬೆಳಗೊಳದ ಶಾಸಕ ಸಿ.ಎನ್‌. ಬಾಲಕೃಷ್ಣ ಅವರ ಮನವಿಯನ್ನು ಹೈಕೋರ್ಟ್‌ ಸ್ಪಷ್ಟವಾಗಿ ತಳ್ಳಿ ಹಾಕಿದೆ.

ಏಳು ಶಾಸಕರಿಗೆ ಮತದಾನದಲ್ಲಿ ಭಾಗವಹಿಸದಂತೆ ನಿರ್ದೇಶನ ನೀಡಬೇಕು ಎಂದು ಕೋರಿ ಇವರಿಬ್ಬರೂ ಸಲ್ಲಿಸಿದ್ದ ರಿಟ್‌ ಅರ್ಜಿ ವಿಚಾರಣೆಯನ್ನು ಆರ್.ಎಸ್.ಚೌಹಾಣ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರವೂ ಮುಂದುವರಿಸಿತು.

ವಿಚಾರಣೆ ವೇಳೆ ನಿಂಗಯ್ಯ ಮತ್ತು ಬಾಲಕೃಷ್ಣ ಪರ ಹಾಜರಿದ್ದ ಹಿರಿಯ ವಕೀಲ ಉದಯ ಹೊಳ್ಳ, ‘ಒಂದು ವೇಳೆ ಮತದಾನದಲ್ಲಿ ಪಾಲ್ಗೊಳ್ಳುವುದನ್ನು ನಿರ್ಬಂಧಿಸಲು ಸಾಧ್ಯವಿಲ್ಲ ಎಂದಾದರೆ, ಕಡೇ ಪಕ್ಷ ಅವರ ಮತ ಪತ್ರಗಳನ್ನು ಪ್ರತ್ಯೇಕವಾಗಿ ಇರಿಸುವಂತಾದರೂ ನಿರ್ದೇಶಿಸಿ’ ಎಂದು ಕೋರಿದರು. ಆದರೆ, ಇದನ್ನೂ ನ್ಯಾಯಪೀಠ ಮಾನ್ಯ ಮಾಡಲಿಲ್ಲ. ‘ಸುಪ್ರೀಂ ಕೋರ್ಟ್‌ ಆದೇಶಗಳ ಪ್ರಕಾರ ಇಂತಹ ಪ್ರಕ್ರಿಯೆಯಲ್ಲಿ ಹೀಗೆಲ್ಲಾ ನಿರ್ದೇಶನ ನೀಡಲು ಸಾಧ್ಯವಿಲ್ಲ’ ಎಂದೂ ಹೇಳಿತು.

ವಿಧಾನ ಸಭಾಧ್ಯಕ್ಷರ ಪರ ಹಾಜರಾಗಿದ್ದ ಹಿರಿಯ ವಕೀಲ ಜಯಕುಮಾರ್ ಎಸ್.ಪಾಟೀಲ, ‘ಅರ್ಜಿದಾರರ ಕೋರಿಕೆಯಂತೆ ಯಾವುದೇ ನಿರ್ದೇಶನ ನೀಡಲು ಕೋರ್ಟ್‌ಗೆ ಅಧಿಕಾರವಿಲ್ಲ’ ಎಂದರು.

‘ಈ ಕುರಿತಂತೆ ವಿಧಾನ ಸಭಾಧ್ಯಕ್ಷರು ಸಂಬಂಧಿಸಿದವರೊಂದಿಗೆ ಚರ್ಚಿಸಬೇಕಿದೆ. ಹೀಗಾಗಿ ಸುದೀರ್ಘ ವಾದ ಮಂಡನೆಗೆ ಹಾಗೂ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಬೇಕು’ ಎಂದು ಕೋರಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ವಿಚಾರಣೆಯನ್ನು ಏಪ್ರಿಲ್‌ 2ಕ್ಕೆ ಮುಂದೂಡಿದೆ.

ಪ್ರಕರಣವೇನು?: ‘ಪ್ರತಿವಾದಿ ಶಾಸಕರಾದ ಜಮೀರ್‌ ಅಹಮದ್ ಖಾನ್‌, ಚೆಲುವರಾಯ ಸ್ವಾಮಿ, ಎ.ಬಿ.ರಮೇಶ್ ಬಂಡಿಸಿದ್ದೇಗೌಡ, ಎಚ್‌.ಸಿ.ಬಾಲಕೃಷ್ಣ, ಆರ್.ಅಖಂಡ ಶ್ರೀನಿವಾಸ ಮೂರ್ತಿ, ಇಕ್ಬಾಲ್‌ ಅನ್ಸಾರಿ ಹಾಗೂ ಎಸ್. ಭೀಮಾನಾಯ್ಕ್‌ 2016ರ ಜೂನ್‌ 11ರಂದು ನಡೆದಿದ್ದ ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದ ವಿಪ್‌ ಉಲ್ಲಂಘಿಸಿ ಅಡ್ಡ ಮತದಾನ ಮಾಡಿದ್ದಾರೆ. ಆದ್ದರಿಂದ ಇವರನ್ನು ಪಕ್ಷಾಂತರ ನಿಷೇಧ ಕಾಯ್ದೆ–1986ರ ಅನ್ವಯ ಅನರ್ಹಗೊಳಿಸಿ’ ಎಂದು ನಿಂಗಯ್ಯ ಹಾಗೂ ಬಾಲಕೃಷ್ಣ ಸ್ಪೀಕರ್‌ಗೆ ದೂರು ಸಲ್ಲಿಸಿದ್ದರು.

ಈ ದೂರಿನ ವಿಚಾರಣೆಯನ್ನು ಇದೇ 19ರಂದು ಪೂರ್ಣಗೊಳಿಸಿರುವ ಸ್ಪೀಕರ್ ಕೆ.ಬಿ. ಕೋಳಿವಾಡ ತೀರ್ಪನ್ನು ಕಾಯ್ದಿರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry