ಆಧಾರ್‌ ಗೂಢಲಿಪಿ ಅಭೇದ್ಯ

7
ಸಂವಿಧಾನ ಪೀಠದ ಮುಂದೆ ಗುರುತು ಚೀಟಿ ಪ್ರಾಧಿಕಾರದ ಹೇಳಿಕೆ

ಆಧಾರ್‌ ಗೂಢಲಿಪಿ ಅಭೇದ್ಯ

Published:
Updated:
ಆಧಾರ್‌ ಗೂಢಲಿಪಿ ಅಭೇದ್ಯ

ನವದೆಹಲಿ: ದೇಶದಲ್ಲಿ ಆಧಾರ್‌ ಮೂಲಕ ಪ್ರತಿ ದಿನ ನಾಲ್ಕು ಕೋಟಿಗೂ ಹೆಚ್ಚು ಗುರುತು ದೃಢೀಕರಣ ನಡೆಯುತ್ತಿದೆ. ಬಯೊಮೆಟ್ರಿಕ್‌ ದತ್ತಾಂಶ ಸೇರಿ ಎಲ್ಲ ಮಾಹಿತಿ ಸುರಕ್ಷಿತವಾಗಿದೆ. ದತ್ತಾಂಶಗಳನ್ನು ಪ್ರತ್ಯೇಕವಾಗಿ ಸಂರಕ್ಷಿಸಲಾಗುತ್ತಿದೆ. ಈ ದತ್ತಾಂಶದ ಹಂಚಿಕೆಯನ್ನು ನಿಷೇಧಿಸಲಾಗಿದೆ. ಅದಕ್ಕಾಗಿ ಕಾನೂನು ರೂಪಿಸಲಾಗಿದೆ ಎಂದು ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರದ (ಯುಐಡಿಎಐ) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಜಯ್‌ ಭೂಷಣ್‌ ಪಾಂಡೆ ಅವರು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.

‘2048 ಬಿಟ್‌ ಗೂಢಲಿಪಿಯಲ್ಲಿ ಆಧಾರ್‌ ದತ್ತಾಂಶವನ್ನು ಸುರಕ್ಷಿತವಾಗಿ ಇರಿಸಲಾಗಿದೆ. ಈ ದತ್ತಾಂಶವು ಕೇಂದ್ರೀಯ ಗುರುತಿನ ದತ್ತಾಂಶ ಕೋಠಿಯಲ್ಲಿ ಭದ್ರವಾಗಿದೆ. ಇಲ್ಲಿ ಸಂಗ್ರಹವಾಗುವ ಬಯೊಮೆಟ್ರಿಕ್‌ ದತ್ತಾಂಶ ಸೋರಿಕೆಯಾಗುವ ಸಾಧ್ಯತೆಯೇ ಇಲ್ಲ. ಜಗತ್ತಿನ ಅತ್ಯಂತ ವೇಗದ ಕಂಪ್ಯೂಟರ್‌ ಅಥವಾ ಯಾವುದೇ ಸೂಪರ್‌ ಕಂಪ್ಯೂಟರ್‌ಗೆ ಒಂದು ಬಿಟ್‌ ಗೂಢಲಿಪಿಯನ್ನು ಭೇದಿಸಲು ಬ್ರಹ್ಮಾಂಡದ ಒಂದು ವಯೋಮಾನವೂ ಸಾಕಾಗದು’ ಎಂದು ಪಾಂಡೆ ವಿವರಿಸಿದ್ದಾರೆ.

ಆಧಾರ್‌ ದೃಢೀಕರಣ ವಿಫಲವಾಗಿದೆ ಎಂಬ ಕಾರಣಕ್ಕೆ ಸೌಲಭ್ಯಗಳನ್ನು ನಿರಾಕರಿಸಲಾಗುತ್ತಿದೆ ಎಂಬ ವರದಿಗಳನ್ನು ಅವರು ಅಲ್ಲಗಳೆದಿದ್ದಾರೆ.

ಆಧಾರ್‌ ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಸಂವಿಧಾನ ಪೀಠದ ಮುಂದೆ ಆಧಾರ್‌ ದತ್ತಾಂಶ ಸುರಕ್ಷತೆಯ ಬಗ್ಗೆ ಪವರ್‌ ಪಾಯಿಂಟ್‌ ಪ್ರಸೆಂಟೇಶನ್‌ಗೆ (ಪಿಪಿಟಿ) ಪಾಂಡೆ ಅವರಿಗೆ ಅವಕಾಶ ಕೊಡಲಾಗಿತ್ತು.

ಆಧಾರ್‌ ಮೂಲಕ ಶೇಕಡ ನೂರರಷ್ಟು ದೃಢೀಕರಣ ಸಾಧ್ಯವಾಗದು ಎಂಬುದನ್ನು ಅವರು ಒಪ್ಪಿಕೊಂಡರು. ಧರ್ಮ, ಜಾತಿ ಅಥವಾ ಇತರ ಯಾವುದೇ ಅಂಶಗಳ ಆಧಾರದಲ್ಲಿ ಆಧಾರ್‌ ನೋಂದಾಯಿತರ ಮಾಹಿತಿಯನ್ನು ಸಂಗ್ರಹಿಸಲು ಸಾಧ್ಯವಿಲ್ಲ. ನೋಂದಾಯಿತರ ಯಾವುದೇ ಮಾಹಿತಿ ಯುಐಡಿಎಐಗೆ ಕೂಡ ದೊರಕುವುದಿಲ್ಲ ಎಂದು ಅವರು ತಿಳಿಸಿದರು. ಯಾವುದೇ ವ್ಯಕ್ತಿ ಒಂದಕ್ಕಿಂತ ಹೆಚ್ಚು ಆಧಾರ್‌ ನೋಂದಣಿ ಮಾಡಿಸಿಕೊಳ್ಳುವುದು ಸಾಧ್ಯವಿಲ್ಲ ಎಂದು ಅವರು ಹೇಳಿದರು.

49 ಸಾವಿರಕ್ಕೂ ಹೆಚ್ಚು ಆಧಾರ್‌ ನೋಂದಣಿ ಸಂಸ್ಥೆಗಳನ್ನು ಕಪ್ಪುಪಟ್ಟಿಗೆ ಸೇರಿಸಲು ಕಾರಣವೇನು ಎಂದು ಪೀಠವು ಪಾಂಡೆ ಅವರನ್ನು ಪ್ರಶ್ನಿಸಿತು. ಭ್ರಷ್ಟಾಚಾರ, ನಿರ್ಲಕ್ಷ್ಯಮತ್ತು ಜನರಿಗೆ ಕಿರುಕುಳ ನೀಡಿದ್ದರಿಂದಾಗಿ ಈ ಸಂಸ್ಥೆಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಯಿತು ಎಂದು ಅವರು ಉತ್ತರಿಸಿದರು. ದೇಶದಲ್ಲಿ ಈಗ 30 ಸಾವಿರ ಸಂಸ್ಥೆಗಳು ದಿನಕ್ಕೆ 15 ಲಕ್ಷ ಆಧಾರ್‌ ನೋಂದಣಿ ಮಾಡುತ್ತಿವೆ ಎಂದು ಅವರು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry