ಕೂಲಿ ಹಣ ಪಾವತಿಗೆ ಆಗ್ರಹ

7
ಸಂಬಳ ಪಾವತಿಸದ ಅಂಬೇಡ್ಕರ್ ಸಂಸ್ಥೆ: ಕಾರ್ಮಿಕ ಮಹಿಳೆಯರ ಆರೋಪ

ಕೂಲಿ ಹಣ ಪಾವತಿಗೆ ಆಗ್ರಹ

Published:
Updated:

ನರೇಗಲ್: ಇಲ್ಲಿನ ಅಂಬೇಡ್ಕರ್ ವಿವಿಧೋದ್ದೇಶ ಸರ್ಕಾರೇತರ ಸಂಸ್ಥೇಯಡಿ ಗುತ್ತಿಗೆ ಆಧಾರ ಮೇಲೆ ಮಾಡಿದ ಕೆಲಸಕ್ಕೆ ಕಳೆದ ಮೂರು ವರ್ಷಗಳಿಂದ ವೇತನ ನೀಡದೇ ಸತಾಯಿಸುತ್ತಿದ್ಧಾರೆ. ಆ ಸಂಸ್ಥೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪಟ್ಟಣದ ಮಹಿಳಾ ಕೂಲಿ ಕಾರ್ಮಿಕರು ಶಾಸಕ ಜಿ.ಎಸ್.ಪಾಟೀಲ, ಪಟ್ಟಣ ಪಂಚಾಯಿತಿ ಅಧ್ಯಕ್ಷ, ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ 2013–14ನೇ ಸಾಲಿನಲ್ಲಿ ಮಹಿಳಾ ಶೌಚಾಲಯ ನಿರ್ವಹಣೆ ಕೆಲಸಕ್ಕೆ ಸುಮಾರು 10ಕ್ಕೂ ಹೆಚ್ಚು ಮಹಿಳಾ ಕಾರ್ಮಿಕರನ್ನು ಬಳಸಿಕೊಳ್ಳಲಾಗಿದೆ. ಕೆಲಸ ಮಾಡಿದ ಅನಕ್ಷರಸ್ಥ ಕೂಲಿ ಕಾರ್ಮಿಕರಿಂದ ಖಾಲಿ ಹಾಳೆಗಳ ಮೇಲೆ ಸಹಿ ಮಾಡಿಸಿಕೊಂಡು ಕೇವಲ 8 ತಿಂಗಳ ಸಂಬಳವನ್ನು ಮಾತ್ರ ನೀಡಿದ್ದಾರೆ. ಬಾಕಿ ಕೂಲಿ ಕೇಳಲು ಹೋದರೆ, ‘ಪಗಾರು ತಗೆದುಕೊಂಡಿದ್ದಕ್ಕೆ ಸಹಿ ಮಾಡಿದ್ದೀರಿ. ಗಲಾಟೆ ಮಾಡಿದರೆ, ಪೊಲೀಸರಿಗೆ ದೂರು ನೀಡುತ್ತೇವೆ’ ಎಂದು ಬೆದರಿಕೆ ಹಾಕುತ್ತಿದ್ದಾರೆ. ಇದರಿಂದ ನಮಗೆ ಅನ್ಯಾಯವಾಗಿದೆ’ ಎಂದು ಮಹಿಳಾ ಕಾರ್ಮಿಕರು ಆರೋಪಿಸಿದರು.

ಕಾರ್ಮಿಕ ಮಹಿಳೆ ಶಾಂತವ್ವ ಪಾದಗಟ್ಟಿ ಮಾತನಾಡಿ, ‘ಪಟ್ಟಣ ಪಂಚಾಯಿತಿಯಿಂದ ಟೆಂಡರ್ ಪಡೆದು ತನಗೆ ಇಷ್ಟಬಂದಂತೆ ನಮ್ಮಿಂದ ಕೆಲಸ ಮಾಡಿಸಿಕೊಂಡು ಸಂಬಳ ನೀಡದೇ ನಮ್ಮನ್ನು ಸತಾಯಿಸುತ್ತಿದ್ದಾರೆ. ಈಗ ಕೂಲಿ ಹಣ ಸಿಗದೇ ಪರದಾಡುವಂತಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣ ಪಂಚಾಯಿತಿ ಸದಸ್ಯ ಯಲ್ಲಪ್ಪ ಮಣ್ಣೋಡ್ಡರ ಮಾತನಾಡಿ, ‘ಸರ್ಕಾರದಿಂದ ಬಿಲ್ ಪಾವತಿಸಿದ್ದರೂ ಕಾರ್ಮಿಕರಿಗೆ ಕೂಲಿಯನ್ನು ನೀಡದ ಎನ್‌ಜಿಒಗಳನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ಅಂಥ ಸಂಸ್ಥೆಗಳಿಗೆ ಪಟ್ಟಣ ಪಂಚಾಯಿತಿಯಿಂದ ಯಾವುದೇ ಟೆಂಡರ್‌ ನೀಡಬಾರದು’ ಎಂದರು.

ಕಾರ್ಮಿಕ ಮಹಿಳೆಯರ ಮನವಿ ಸ್ವಿಕರಿಸಿ ಮಾತನಾಡಿದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ, ‘ಇಲಾಖೆ ವತಿಯಿಂದ ಎನ್‌ಜಿಒಗೆ ಹಣ ಸಂದಾಯವಾಗಿರುತ್ತದೆ. ಕೂಲಿ ಕಾರ್ಮಿಕರ ಸಂಬಳ ನೀಡದೇ ಇರುವ ಕುರಿತು, ಸಂಸ್ಥೆಗೆ ನೋಟಿಸ್‌ ಜಾರಿ ಮಾಡಿ ಕಾರ್ಮಿಕರ ಕೆಲಸದ ಕುರಿತು ಪುನರ ಪರಿಶೀಲಿಸಿ, ಅವರಿಗೆ ಸಿಗಬೇಕಾದ ಸಂಬಳ ಪಾವತಿಸುವಂತೆ ಸೂಚಿಸಲಾಗುವುದು’ ಎಂದು ಭರವಸೆ ನೀಡಿದರು.

ಕಾರ್ಮಿಕರಾದ ರೇಣವ್ವ ನಡವಲಕೇರಿ, ಕುಮ್ಮವ್ವ ಚಳ್ಳಮರದ, ಈರವ್ವ ಪಾದಗಟ್ಟಿ ಹಾಗೂ ಹುಲಗವ್ವ ಚಳ್ಳಮರದ, ಇದ್ದರು.

ಈ ಕುರಿತು ಪ್ರತಿಕ್ರಿಯೆ ನೀಡಿದ ಅಂಬೇಡ್ಕರ್ ವಿವಿಧೋದ್ದೇಶ ಸಂಘದ ಮುಖ್ಯಸ್ಥ ಶಿವಾನಂದ ಗೋಗೇರಿ, ‘ನಮಗೆ ಕೇವಲ 8 ತಿಂಗಳ ಟೆಂಡರ್ ಮಾತ್ರ ಆಗಿದ್ದು, ಅದರಂತೆ ನಾವು 8 ತಿಂಗಳ ಸಂಬಳ ಪಾವತಿಸಿದ್ದೇವೆ. ಸಂಬಳ ಪಾವತಿಸಿರುವ ಕುರಿತು ದಾಖಲೆಯೂ ನಮ್ಮಲ್ಲಿದೆ. ಮೂರು ವರ್ಷಗಟ್ಟಲೆ ನಾವು ಯಾರನ್ನೂ ದುಡಿಸಿಕೊಂಡಿಲ್ಲ. ನಮ್ಮ ಎನ್‌ಜಿಒ ಏಳಿಗೆ ಸಹಿಸಿದ ಕೆಲವರು ಕಾರ್ಮಿಕರನ್ನು ಮುಂದೆ ಬಿಟ್ಟು ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry