ಮಕ್ಕಳಲ್ಲಿ ಭಾಷಾ ದಾರಿದ್ರ್ಯ

7
ಪಾಂಡವಪುರ: 7ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಎಂ.ಅಂಕೇಗೌಡ ವಿಷಾದ

ಮಕ್ಕಳಲ್ಲಿ ಭಾಷಾ ದಾರಿದ್ರ್ಯ

Published:
Updated:
ಮಕ್ಕಳಲ್ಲಿ ಭಾಷಾ ದಾರಿದ್ರ್ಯ

ಪಾಂಡವಪುರ (ಕೆ.ಎಸ್‌.ಪುಟ್ಟಣ್ಣಯ್ಯ ವೇದಿಕೆ): ಶಿಕ್ಷಣ ಮಾಧ್ಯಮದ ಬಗೆಗಿನ ಗೊಂದಲದಿಂದಾಗಿ ಇಂದಿನ ಮಕ್ಕಳಿಗೆ ಇತ್ತ ಮಾತೃಭಾಷೆಯೂ ಬರದೇ, ಅತ್ತ ಇತರ ಭಾಷೆಗಳನ್ನೂ ಕಲಿಯಲು ಸಾಧ್ಯವಾಗದೇ ಭಾಷಾ ದಾರಿದ್ರ್ಯ ಉಂಟಾಗಿದೆ ಎಂದು 7ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಎಂ.ಅಂಕೇಗೌಡ ಅಭಿಪ್ರಾಯಪಟ್ಟರು.

ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ಗುರುವಾರ ನಡೆದ 7ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಸರ್ಕಾರದ ಶಿಕ್ಷಣ ನೀತಿ ಹಾಗೂ ಪೋಷಕರ ತೀರ್ಮಾನದಿಂದ ಶಿಕ್ಷಣ ಮಾಧ್ಯಮ ಸರಿಹೋಗಬೇಕಿದೆ. ಜಗತ್ತಿನಲ್ಲಿ ಎಂದಿಗೂ ಮಾತೃಭಾಷೆ ಶಿಕ್ಷಣವೇ ಸರಿಯಾದುದು ಎಂಬುದು ಸಾರ್ವತ್ರಿಕ ಸತ್ಯ. ಹಾಗಾಗಿ ಸರ್ಕಾರಿ ಶಾಲೆಗಳು, ಕನ್ನಡ ಮಾಧ್ಯಮದ ಶಾಲೆಗಳು ಉಳಿಯಬೇಕಿದೆ ಎಂದರು.

‘ಇಂದಿನ ಯುವಜನತೆಯ ಮುಂದೆ ತಂತ್ರಜ್ಞಾನವಿದೆ. ಮೊಬೈಲ್‌ ಮೂಲಕ ಇಡೀ ಜಗತ್ತನ್ನೇ ಕಾಣುವ ಅವಕಾಶವಿದೆ. ಆದರೆ ‘ದೀಪದ ಕೆಳಗೆ ಕತ್ತಲು’ ಎಂಬಂತೆ ನಮ್ಮನ್ನು ತಿದ್ದಿಕೊಳ್ಳಲು ಅದರ ನೆರವು ಹೆಚ್ಚಿಲ್ಲ. ಹಾಗಾಗಿ ನಮ್ಮ ಮನಸ್ಸುಗಳನ್ನು ಸಂಸ್ಕಾರಕ್ಕೆ ಒಡ್ಡಿಕೊಳ್ಳಲು, ಸುತ್ತಲನ್ನು ಅರಿತುಕೊಳ್ಳಲು, ಬಾಳಿನಲ್ಲಿ ಬರುವ ಎಲ್ಲವನ್ನೂ ಸ್ವೀಕರಿಸಲು, ಸಾರ್ಥಕವಾಗಿ ಬದುಕಲು, ಜ್ಞಾನವಂತರಾಗಲು, ಹುದ್ದೆ ಪಡೆಯಲು ಪ್ರತಿಯೊಬ್ಬರಿಗೂ ಪುಸ್ತಕಗಳ ನೆರವು ಬೇಕಿದೆ’ ಎಂದು ಹೇಳಿದರು. ‘ನನ್ನ ಪಾಡಿಗೆ ಹವ್ಯಾಸವೆಂದು ರೂಢಿಸಿಕೊಂಡ ಪುಸ್ತಕ ಪ್ರೀತಿ ಇಂದಿಗೆ ಅಗಾಧವಾಗಿ ಬೆಳೆದು ನಿಂತಿದೆ. ಹರಳಹಳ್ಳಿ ಗ್ರಾಮದಲ್ಲಿರುವ ಎಂ.ಅಂಕೇಗೌಡ ಜ್ಞಾನ ಪ್ರತಿಷ್ಠಾನದ ನನ್ನ ‘ಪುಸ್ತಕದ ಮನೆ’ ಗ್ರಂಥಾಲಯವಾಗಿ ಉಳಿಯದೇ ಅದು ಪ್ರತಿಯೊಬ್ಬರಲ್ಲೂ ಪುಸ್ತಕ ಪ್ರೀತಿ ಹುಟ್ಟುಹಾಕಬೇಕು’ ಎಂದು ಆಶಯ ವ್ಯಕ್ತಪಡಿಸಿದರು.

ಪಿಎಸ್‌ಎಸ್‌ಕೆ ಉಳಿಯಲಿ: ಈ ಭಾಗದ ಪಿಎಸ್‌ಎಸ್‌ಕೆ ಕಾರ್ಖಾನೆ ಒಂದು ಕಾಲದಲ್ಲಿ ರಾಜ್ಯದಲ್ಲಿಯೇ ಸಕ್ಕರೆ ಉತ್ಪಾದನೆಯಲ್ಲಿ ದ್ವಿತೀಯ ಸ್ಥಾನದಲ್ಲಿತ್ತು. ಕಾವೇರಿ ನೀರಿನ ಸಮಸ್ಯೆ, ಸರಿಯಾಗಿ ಮಳೆಯಾಗದೇ ಅದು ಸಂಕಷ್ಟದಲ್ಲಿದೆ. ಜನನಾಯಕರು ಈ ಕಡೆ ಗಮನಹರಿಸಬೇಕು’ ಎಂದು ಮನವಿ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry