ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೂಟಿಂಗ್‌: ವಿವಾನ್‌ಗೆ ಕಂಚು

Last Updated 23 ಮಾರ್ಚ್ 2018, 19:11 IST
ಅಕ್ಷರ ಗಾತ್ರ

ಸಿಡ್ನಿ: ಭಾರತದ ವಿವಾನ್‌ ಕಪೂರ್‌ ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ ಜೂನಿಯರ್ ವಿಶ್ವಕಪ್ ಶೂಟಿಂಗ್‌ನಲ್ಲಿ ಶುಕ್ರವಾರ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.‌

ಪುರುಷರ ಟ್ರ್ಯಾಪ್‌ ವಿಭಾಗದಲ್ಲಿ ವಿವಾನ್‌ ಮೂರನೇ ಸ್ಥಾನ ಗಳಿಸಿದರು. ಅಂತಿಮ ಸುತ್ತಿನ ಪೈಪೋಟಿಯಲ್ಲಿ 40 ರಲ್ಲಿ 30 ನಿಖರ ಗುರಿಗಳನ್ನು ಹಿಡಿದ ಅವರು ಚೀನಾ ತೈಪೆಯ ಕುನ್ ಪಿ ಯಾಂಗ್ (26 ಪಾಯಿಂಟ್ಸ್‌) ಅವರನ್ನು ಹಿಂದಿಕ್ಕಿದರು. ಇಟಲಿಯಲ್ಲಿ ನಡೆದ ಟೂರ್ನಿಯಲ್ಲಿ ವಿವಾನ್‌ 18ನೇ ಸ್ಥಾನ ಗಳಿಸಿದ್ದರು.‌

ಅರ್ಹತಾ ಸುತ್ತಿನಲ್ಲಿ ಅವರು 113 ಪಾಯಿಂಟ್ಸ್‌ಗಳೊಂದಿಗೆ ಐದನೇ ಸ್ಥಾನ ಗಳಿಸಿ ಫೈನಲ್ ತಲುಪಿದ್ದರು. ಲಕ್ಷ್ಯ ಹಾಗೂ ಅಲಿ ಅಮನ್‌ ಇಲಾಹಿ ಅರ್ಹತಾ ಸುತ್ತಿನಲ್ಲಿ 8 ಮತ್ತು 13ನೇ ಸ್ಥಾನ ಗಳಿಸಿದ್ದರು.  ಇಟಲಿಯ 18 ವರ್ಷದ ಶೂಟರ್‌ ಮಟ್ಟೆವೊ ಮರಾಂಗಿ ಮೊದಲ ಅಂತರರಾಷ್ಟ್ರೀಯ ಚಿನ್ನದ ಪದಕ ಜಯಿಸಿದರು.

ತಂಡ ವಿಭಾಗದಲ್ಲಿ ವಿವಾನ್, ಲಕ್ಷ್ಯ ಹಾಗೂ ಇಲಾಹಿ ಅವರನ್ನು ಒಳಗೊಂಡ ಭಾರತ ತಂಡ ಕಂಚಿಗೆ ಕೊರಳೊಡ್ಡಿದೆ. ವಿವಾನ್‌ 113 ಪಾಯಿಂಟ್ಸ್ ಕಲೆಹಾಕಿದರೆ, ಲಕ್ಷ್ಯ 112 ಹಾಗೂ ಇಲಾಹಿ 103 ಪಾಯಿಂಟ್ಸ್ ಗಿಟ್ಟಿಸಿದರು. ಒಟ್ಟು 328 ಪಾಯಿಂಟ್ಸ್‌ಗಳಿಂದ ಭಾರತ ಮೂರನೇ ಸ್ಥಾನ ಪಡೆಯಿತು. ಆಸ್ಟ್ರೇಲಿಯಾ (331) ಬೆಳ್ಳಿ ಗೆದ್ದರೆ, ಚೀನಾ (335) ಚಿನ್ನ ಜಯಿಸಿತು.

50ಮೀ ತ್ರಿ ಪೊಸಿಷನ್ ವಿಭಾಗದಲ್ಲಿ ಭಾರತದ ಸ್ಯಾಮ್‌ ಜಾರ್ಜ್‌, ಸಾಜನ್‌ ಕ್ರಿಸ್ಟೋಫರ್‌ ಫೈನಲ್‌ನಲ್ಲಿ 402.5 ಪಾಯಿಂಟ್ಸ್‌ಗಳೊಂದಿಗೆ 6ನೇ ಸ್ಥಾನ ಗಳಿಸಿದರು. ಅರ್ಹತಾ ಸುತ್ತಿನಲ್ಲಿ 1140 ಪಾಯಿಂಟ್ಸ್‌ ಕಲೆಹಾಕಿದ್ದರು.

ಹರ್ಷಿತ್‌ ಬಿಂಜ್ವಾ, ಸರ್ತಾಜ್‌ ಸಿಂಗ್, ತಿವಾನಾ ಬಾಬು ಕ್ರಮವಾಗಿ 9, 12 ಮತ್ತು 13ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಈ ವಿಭಾಗದಲ್ಲಿ ಚೀನಾದ ಜಾಂಗ್‌ ಚಿನ್ನದ ಪದಕ ಗೆದ್ದುಕೊಂಡರು. ಫಿನ್‌ಲೆಂಡ್‌ನ ಸೆಬಾಸ್ಟಿಯನ್‌ ಬೆಳ್ಳಿ ಗೆದ್ದರೆ, ಹಂಗೇರಿಯ ಜಾಲನ್‌ ಪೆಕ್ಲರ್‌ ಕಂಚು ಜಯಿಸಿದರು.

ಭಾರತ ತಂಡ ಟೂರ್ನಿಯಲ್ಲಿ ಎರಡು ಚಿನ್ನ, ಮೂರು ಕಂಚು ಸೇರಿದಂತೆ ಐದು ಪದಕ ಗೆದ್ದಿದೆ. ಪಾಯಿಂಟ್ಸ್‌ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಐದು ಚಿನ್ನ, ಒಂದು ಬೆಳ್ಳಿ, ಮೂರು ಕಂಚು ಗೆದ್ದಿರುವ ಚೀನಾ ಅಗ್ರಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT