1.25 ಲಕ್ಷ ಪ್ರಮಾಣಪತ್ರ ಖರೀದಿಗೆ ಒಪ್ಪಿಗೆ

7
ಸದ್ಯದಲ್ಲೇ ಆಟೊಗಳಿಗೆ ‘ಇ–ಪರ್ಮಿಟ್’ l ನಕಲಿ ಪರವಾನಗಿ ಹಾವಳಿ ತಡೆಗೆ ಸಾರಿಗೆ ಇಲಾಖೆ ಕ್ರಮ

1.25 ಲಕ್ಷ ಪ್ರಮಾಣಪತ್ರ ಖರೀದಿಗೆ ಒಪ್ಪಿಗೆ

Published:
Updated:
1.25 ಲಕ್ಷ ಪ್ರಮಾಣಪತ್ರ ಖರೀದಿಗೆ ಒಪ್ಪಿಗೆ

ಬೆಂಗಳೂರು: ನಗರದಲ್ಲಿ ಸಂಚರಿಸುವ ಆಟೊಗಳಿಗೆ ‘ಇ– ಪರ್ಮಿಟ್‌’ ನೀಡುವುದಕ್ಕಾಗಿ 1.25 ಲಕ್ಷ ಸುರಕ್ಷತಾ ಪ್ರಮಾಣ ಪತ್ರ ಖರೀದಿಸಲು ಸಾರಿಗೆ ಇಲಾಖೆಯ ಉನ್ನತ ಅಧಿಕಾರಿಗಳು ಕೊನೆಗೂ ಒಪ್ಪಿಗೆ ನೀಡಿದ್ದಾರೆ. ನನೆಗುದಿಗೆ ಬಿದ್ದಿದ್ದ ‘ಇ–ಪರ್ಮಿಟ್’ ವ್ಯವಸ್ಥೆಗೆ ಮರುಜೀವ ಸಿಕ್ಕಂತಾಗಿದೆ.

ನಗರದ 25 ಸಾವಿರಕ್ಕೂ ಹೆಚ್ಚು ಆಟೊಗಳು ನಕಲಿ ಪರವಾನಗಿ ಹೊಂದಿದ್ದನ್ನು ಪತ್ತೆ ಹಚ್ಚಿದ್ದ ಅಧಿಕಾರಿಗಳು, ಪ್ರತಿಯೊಂದು ಆಟೊಗಳಿಗೆ ‘ಇ– ಪರ್ಮಿಟ್‌’ ನೀಡುವ ವ್ಯವಸ್ಥೆ ಜಾರಿಗೆ ತರುವಂತೆ ಸಲಹೆ ನೀಡಿದ್ದರು. ಅದರಂತೆ ಇಲಾಖೆಯ ಆಯುಕ್ತರು, ಶಾಂತಿನಗರದ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ) ಕಚೇರಿಯಲ್ಲಿ ಜನವರಿ ಮೊದಲ ವಾರದಲ್ಲೇ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತಂದಿದ್ದರು.

ಆದರೆ, ‘ಇ–‍ಪರ್ಮಿಟ್‌’ ದೃಢಪಡಿಸುವ ಪ್ರಮಾಣಪತ್ರವನ್ನು ವಿತರಿಸುವ ಬಗ್ಗೆ ಗೊಂದಲ ಉಂಟಾಗಿತ್ತು. ಸುರಕ್ಷಿತವಾದ ಕಾಗದದಲ್ಲಿ ಪ್ರಮಾಣ ಪತ್ರ ನೀಡಲು ಯೋಚಿಸಿದ್ದ ಅಧಿಕಾರಿಗಳು, ಅದಕ್ಕಾಗಿ ₹76 ಲಕ್ಷ ಅಗತ್ಯವಿರುವುದಾಗಿ ಉನ್ನತ ಅಧಿಕಾರಿಗಳಿಗೆ ಪ್ರಸ್ತಾವ ಸಲ್ಲಿಸಿದ್ದರು. ತಿಂಗಳು ಕಳೆದರೂ ಅದಕ್ಕೆ ಒಪ್ಪಿಗೆ ಸಿಕ್ಕಿರಲಿಲ್ಲ. ‘ಅಷ್ಟು ಹಣ ಕೊಡಲು ಸಾಧ್ಯವಿಲ್ಲ’ ಎಂದು ಹಿಂಬರಹ ಬಂದಿತ್ತು. ಹೀಗಾಗಿ, ಈ ವ್ಯವಸ್ಥೆ ಜಾರಿ ಬಗ್ಗೆ ಸಂಶಯವಿತ್ತು.

ಇದೀಗ, ಇಲಾಖೆಯ ತಾಂತ್ರಿಕ ಸಲಹಾ ಸಮಿತಿಯೇ ಪ್ರಸ್ತಾವಕ್ಕೆ ಒಪ್ಪಿಗೆ ನೀಡಿದೆ. ಪ್ರಮಾಣಪತ್ರ ಖರೀದಿಗೆ ₹76 ಲಕ್ಷ ಬಳಸಿಕೊಳ್ಳುವಂತೆ ಹೇಳಿದೆ.

‘ಇ–ಪರ್ಮಿಟ್‌ ನೀಡಲು ಹಾಗೂ ಅದಕ್ಕೆ ಅಗತ್ಯವಾದ ಪ್ರಮಾಣಪತ್ರ ಖರೀದಿಸಲು ಅನುಮತಿ ಸಿಕ್ಕಿದೆ. ಕೆಲವೇ ದಿನಗಳಲ್ಲಿ  ಎಲ್ಲ ಆಟೊಗಳಿಗೆ ಪ್ರಮಾಣ ಪತ್ರ ವಿತರಿಸುವ ಪ್ರಕ್ರಿಯೆ ಆರಂಭಿಸಲಿದ್ದೇವೆ’ ಎಂದು ಸಾರಿಗೆ ಇಲಾಖೆ ಆಯುಕ್ತ ಬಿ.ದಯಾನಂದ್  ‘ಪ್ರಜಾವಾಣಿ’ಗೆ ತಿಳಿಸಿದರು.

ಒಂದು ಪತ್ರಕ್ಕೆ ₹56: ನಕಲು ಮಾಡಲಾಗದ, ಜೆರಾಕ್ಸ್ ಮಾಡಿದರೂ ‘ಜೆರಾಕ್ಸ್ ಪ್ರತಿ’ ಎಂಬ ಮುದ್ರಿತ ಅಕ್ಷರಗಳು ಬರುವಂತಹ ಗುಣಮಟ್ಟದ ಪ್ರಮಾಣಪತ್ರಗಳನ್ನು ಆಟೊ ಚಾಲಕರಿಗೆ ನೀಡಲು ಅಧಿಕಾರಿಗಳು ಯೋಚಿಸಿದ್ದಾರೆ.

‘ಕಾಗದ ಖರೀದಿ ಸಂಬಂಧ ‘ಮೈಸೂರು ಪೇಪರ್ ಮಿಲ್’ ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದೇವೆ. ಗುಣಮಟ್ಟದ ಕಾಗದ ನೀಡಲು ಒಪ್ಪಿಕೊಂಡಿದ್ದಾರೆ’ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

‘ಕಾಗದಗಳ ಖರೀದಿಗೆ ಕೆಲವೇ ದಿನಗಳಲ್ಲಿ ಕಾರ್ಯಾದೇಶ ನೀಡಲಿದ್ದೇವೆ. ಅದಾದ ವಾರದ ನಂತರವೇ ಪ್ರಮಾಣಪತ್ರ ವಿತರಣೆ ಆರಂಭವಾಗಲಿದೆ’ ಎಂದು ವಿವರಿಸಿದರು.

ಆಧಾರ್‌ ಸಂಖ್ಯೆ ಸಮೇತ ಅರ್ಜಿ ಸಲ್ಲಿಕೆ ಕಡ್ಡಾಯ ಶಾಂತಿನಗರದ ಆರ್‌ಟಿಒ ಕಚೇರಿಯಲ್ಲಿ ನೋಂದಣಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ನ್ಯಾಷನಲ್ ಇನ್‌ಫಾರ್ಮೆಟಿಕ್ಸ್ ಸೆಂಟರ್ (ಎನ್ಐಸಿ) ಸಿಬ್ಬಂದಿ ವ್ಯವಸ್ಥೆಯ ನಿರ್ವಹಣೆ ಮಾಡಲಿದ್ದಾರೆ.

ಪರ್ಮಿಟ್‌ ಪಡೆಯಬೇಕಿರುವ ಆಟೊ ಚಾಲಕರು, ತಮ್ಮ ಆಧಾರ್‌ ಸಂಖ್ಯೆ ಸಮೇತ ಅರ್ಜಿ ಸಲ್ಲಿಸಬೇಕು. ಅದನ್ನು ಪರಿಶೀಲಿಸಿರುವ ಸಿಬ್ಬಂದಿ, ಹೊಸದಾದ ಪರವಾನಗಿ ಪತ್ರವನ್ನು ಸಿದ್ಧಪಡಿಸಿ ವಿತರಿಸಲಿದ್ದಾರೆ. ನಗರದ ಎಲ್ಲ ಆರ್‌ಟಿಒ ಕಚೇರಿಗಳಲ್ಲಿ ಪ್ರತ್ಯೇಕ ಕೌಂಟರ್‌ ತೆರೆಯಲು ಕ್ರಮ ಕೈಗೊಳ್ಳಲಿದ್ದೇವೆ ಎಂದು ಅಧಿಕಾರಿ ತಿಳಿಸಿದರು.

**

ತ್ವರಿತವಾಗಿ ಕೇಂದ್ರ ಆರಂಭಕ್ಕೆ ಸಚಿವರ ಸೂಚನೆ

‘ಇ–‍ಪರ್ಮಿಟ್’ ನೀಡುವ ಕೇಂದ್ರವನ್ನು ತ್ವರಿತವಾಗಿ ಆರಂಭಿಸುವಂತೆ ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಸೂಚನೆ ನೀಡಿದ್ದಾರೆ.

‘ಚುನಾವಣಾ ನೀತಿಸಂಹಿತೆ ಜಾರಿಯಾಗುವ ಮುನ್ನವೇ ಕೇಂದ್ರದ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಿ. ನಮ್ಮ ಸರ್ಕಾರದ ಅವಧಿಯಲ್ಲೇ ಕೇಂದ್ರ ಆರಂಭವಾಗಬೇಕು’ ಎಂದು ಸಚಿವರು ಹೇಳಿದ್ದಾರೆ. ಹೀಗಾಗಿ ತಯಾರಿ ಮಾಡಿಕೊಳ್ಳುತ್ತಿದ್ದೇವೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

**

ಪತ್ರ ವಿತರಣೆ ಬಳಿಕ ಕಾರ್ಯಾಚರಣೆ

ನಗರದ ಎಲ್ಲ ಆಟೊಗಳಿಗೆ 2–3 ತಿಂಗಳಿನಲ್ಲಿ ‍‘ಇ–ಪರ್ಮಿಟ್‌’ ವಿತರಿಸುವ

ಕೆಲಸ ಮುಗಿಯಲಿದೆ. ಅದಾದ ನಂತರ, ನಕಲಿ ಪರವಾನಗಿಗಳ ಪತ್ತೆಗೆ ಕಾರ್ಯಾಚರಣೆ ಆರಂಭಿಸಲಾಗುವುದು ಎಂದು ಅಧಿಕಾರಿ ಹೇಳಿದರು.

‘ನಮ್ಮ(ಸಾರಿಗೆ) ಅಧಿಕಾರಿಗಳು ಹಾಗೂ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಕಲಿ ಪರವಾನಗಿ ಹೊಂದಿದ್ದ ಆಟೊಗಳನ್ನು ಜಪ್ತಿ ಮಾಡಿ, ಕಾನೂನು ಕ್ರಮ ಕೈಗೊಳ್ಳಲಿದ್ದಾರೆ. ಹೀಗಾಗಿ, ನಗರದ ಪ್ರತಿಯೊಬ್ಬ ಆಟೊ ಚಾಲಕರು ‘ಇ–ಪರ್ಮಿಟ್‌’ ಪಡೆಯಬೇಕು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry