ಕ್ಷಯ ರೋಗಕ್ಕೆ 6 ವರ್ಷಗಳಲ್ಲಿ 403 ಬಲಿ!

7
ಆರೋಗ್ಯ ಇಲಾಖೆಯ ವರದಿ; ಗುಣಮಟ್ಟದ ಡಾಟ್ಸ್ ಅಲ್ಪಾವಧಿ ಚಿಕಿತ್ಸೆಯಿಂದ ರೋಗ ವಾಸಿ

ಕ್ಷಯ ರೋಗಕ್ಕೆ 6 ವರ್ಷಗಳಲ್ಲಿ 403 ಬಲಿ!

Published:
Updated:

ಕಾರವಾರ: ಕಳೆದ ಆರು ವರ್ಷಗಳಲ್ಲಿ ಕ್ಷಯ ರೋಗಕ್ಕೆ ಜಿಲ್ಲೆಯಲ್ಲಿ 403 ರೋಗಿಗಳು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆಯ ವರದಿ ತಿಳಿಸಿದೆ.

ಅವರಿಗೆ ಈ ರೋಗಕ್ಕೆ ಮೊದಲ ಹಂತದಲ್ಲೇ ಸೂಕ್ತ ಚಿಕಿತ್ಸೆ ಪಡೆಯದ ಕಾರಣ ಬಹು ಔಷಧ ನಿರೋಧಕ (ಎಂ.ಡಿ.ಆರ್) ಕ್ಷಯ ಉಂಟಾಗಿತ್ತು ಎಂದು ಮಾಹಿತಿ ನೀಡಿದೆ. 2017ರಲ್ಲಿ 10,362 ಮಂದಿ ಕಫ ಪರೀಕ್ಷೆ ಮಾಡಿಸಿಕೊಂಡಿದ್ದು, 986 ಮಂದಿಯಲ್ಲಿ ಈ ರೋಗ ಪತ್ತೆಯಾಗಿದೆ. 845 ಮಂದಿ ಚಿಕಿತ್ಸೆಗೆ ಒಳಗಾಗಿದ್ದು, 66 ಮಂದಿ ಮೃತಪಟ್ಟಿದ್ದಾರೆ. 41 ಮಂದಿ ಚಿಕಿತ್ಸೆಯನ್ನು ಮೊಟಕುಗೊಳಿಸಿದ್ದು, 19 ಮಂದಿಯಲ್ಲಿ ಎಂ.ಡಿ.ಆರ್ ಕ್ಷಯ ದೃಢವಾಗಿದೆ.

ರೋಗದ ಲಕ್ಷಣ: ಸತತವಾದ ಕೆಮ್ಮು, ಸಂಜೆ ವೇಳೆ ಜ್ವರ, ಕಫ, ಕಫದಲ್ಲಿ ರಕ್ತ, ಎದೆ ನೋವು, ಉಸಿರಾಟದ ತೊಂದರೆ, ತೂಕ ಕಡಿಮೆಯಾಗುವುದು, ದುಗ್ಧ ರಸಗ್ರಂಥಿಗಳಲ್ಲಿ ಊತ ಉಂಟಾಗುವುದು ಈ ರೋಗದ ಲಕ್ಷಣಗಳಾಗಿವೆ ಎನ್ನುತ್ತಾರೆ ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಮಹಾಬಲೇಶ್ವರ ಹೆಗಡೆ.

‘ಇವುಗಳಲ್ಲಿ ಯಾವುದೇ ಒಂದು ಲಕ್ಷಣ ಕಂಡುಬಂದರೂ ನಿರ್ಲಕ್ಷಿಸದೇ ಕಫ ಪರೀಕ್ಷೆಗೆ ಮಾಡಿಸಬೇಕು. ಪರೀಕ್ಷೆ

ಯಲ್ಲಿ ಕ್ಷಯವೆಂದು ದೃಢಪಟ್ಟಲ್ಲಿ ಸರಿಯಾದ ಚಿಕಿತ್ಸೆ ಪಡೆಯಬೇಕು. ಇಲ್ಲದಿದ್ದರೆ ಆ ವ್ಯಕ್ತಿಯು ರೋಗದಿಂದ ನರಳುವುದರ ಜತೆಗೆ ಕುಟುಂಬದವರಿಗೆ ಹಾಗೂ ಸುತ್ತಲಿನ ಸಮುದಾಯದವರಿಗೂ ರೋಗ ಹರಡಲು ಕಾರಣನಾಗುತ್ತಾನೆ’ ಎಂದು ಎಚ್ಚರಿಸುತ್ತಾರೆ ಅವರು.

ಪತ್ತೆ ಹೇಗೆ?: ‘ಕ್ಷಯ ರೋಗದ ಲಕ್ಷಣಗಳು ಕಂಡುಬಂದರೆ ಹತ್ತಿರದ ಆಸ್ಪತ್ರೆಯಲ್ಲಿ ಎರಡು ಬಾರಿ ಕಫ ಪರೀಕ್ಷೆ ಮಾಡಿಸಿ ರೋಗವನ್ನು ಪತ್ತೆ ಹಚ್ಚಬಹುದು. ಎಕ್ಸ್‌– ರೇ ಪರೀಕ್ಷೆ ಮೂಲಕವೂ ಕಂಡು ಹಿಡಿಯಬಹುದು’ ಎನ್ನುತ್ತಾರೆ.

ಚಿಕಿತ್ಸೆ ಹೇಗೆ?: ‘ಒಂದು ವೇಳೆ ಕ್ಷಯವೆಂದು ದೃಢಪಟ್ಟಲ್ಲಿ ಈಗ ಲಭ್ಯವಿರುವ ಅಗತ್ಯ ಗುಣಮಟ್ಟದ ಡಾಟ್ಸ್ ಅಲ್ಪಾವಧಿ ಚಿಕಿತ್ಸೆಯಿಂದ ರೋಗಿಯನ್ನು ಸಂಪೂರ್ಣ ಗುಣ ಪಡಿಸಬಹುದು. ಸಂಪೂರ್ಣ 6-8 ತಿಂಗಳ ಚಿಕಿತ್ಸೆಯಿಂದಾಗಿ ಪೂರ್ತಿ ಗುಣ ಹೊಂದಬಹುದು’ ಎಂದು ತಿಳಿಸಿದರು.

**

ಏನಿದು ಕ್ಷಯ ರೋಗ?

ಮೈಕೋ ಬ್ಯಾಕ್ಟೀರಿಯಂ ಟ್ಯುಬರೊಕ್ಯುಲೋಸಿಸ್ ಎಂಬ ರೋಗಾಣುವಿನಿಂದ ಬರುವ ಕ್ಷಯವು ಸಾಂಕ್ರಾಮಿಕ ರೋಗವಾಗಿದೆ. ರೋಗ ಸೋಂಕಿತರ ಉಸಿರಿನ ತೇವಾಂಶದಲ್ಲಿ ಈ ಬ್ಯಾಕ್ಟೀರಿಯಾಗಳು ಇರುತ್ತವೆ. ರೋಗಿಯು ಕೆಮ್ಮಿದಾಗ, ಸೀನಿದಾಗ ಅದು ಗಾಳಿಯಲ್ಲಿ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ.

**

ವಿಶ್ವ ಕ್ಷಯ ರೋಗ ದಿನಾಚರಣೆ ಇಂದು

ವಿಶ್ವ ಕ್ಷಯ ರೋಗ ದಿನಾಚರಣೆಯ ನಿಮಿತ್ತ ಶನಿವಾರ ಬೆಳಿಗ್ಗೆ 10ಕ್ಕೆ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಜಾಗೃತಿ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ11ಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಚೇರಿ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮವೂ ಇದೆ.

**

16 ಪರೀಕ್ಷೆ ಕೇಂದ್ರ...

ಜಿಲ್ಲೆಯಲ್ಲಿ ಈಗಾಗಲೇ ಜಿಲ್ಲಾ ಆಸ್ಪತ್ರೆ ಮತ್ತು ಶಿರಸಿಯ ಪಂಡಿತ್ ಸಾರ್ವಜನಿಕ ಆಸ್ಪತ್ರೆಯಲ್ಲಿ CB-– NAAT ಯಂತ್ರದ ಮೂಲಕ ಕ್ಷಯ ರೋಗವನ್ನು ಕಂಡು ಹಿಡಿಯುವ ವ್ಯವಸ್ಥೆ ಇದೆ. ಎಲ್ಲ ತಾಲ್ಲೂಕು ಆಸ್ಪತ್ರೆ ಹಾಗೂ ಆಯ್ದ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿದಂತೆ 16 ನಿಗದಿಪಡಿಸಿದ ಸೂಕ್ಷ್ಮ ದರ್ಶಕ ಕಫ ಪರೀಕ್ಷಾ ಕೇಂದ್ರಗಳಲ್ಲಿ ಈ ರೋಗದ ತಪಾಸಣೆಯನ್ನು ಉಚಿತವಾಗಿ ಮಾಡಲಾಗುತ್ತದೆ ಎಂದು ಮಹಾಬಲೇಶ್ವರ ಹೆಗಡೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry