ಸಾಲ ಮರುಪಾವತಿಯಿಂದ ದೇಶದ ಅಭಿವೃದ್ಧಿ

7
ಕುಂಟಿಟಿಗ ಮಹಾಸಂಸ್ಥಾನದ ಶಾಂತವೀರ ಸ್ವಾಮೀಜಿ

ಸಾಲ ಮರುಪಾವತಿಯಿಂದ ದೇಶದ ಅಭಿವೃದ್ಧಿ

Published:
Updated:

ಹೊಸದುರ್ಗ: ಬ್ಯಾಂಕ್‌ಗಳಲ್ಲಿ ಪಡೆದ ಸಾಲವನ್ನು ಸಕಾಲಕ್ಕೆ ಮರು ಪಾವತಿಸುವುದರಿಂದ ದೇಶದ ಅಭಿವೃದ್ಧಿ ಸಾಧ್ಯ ಎಂದು ಡಾ.ಶಾಂತವೀರ ಸ್ವಾಮೀಜಿ ಹೇಳಿದರು.

ಪಟ್ಟಣದ ಕುಂಚಿಟಿಗ ಮಹಾಸಂಸ್ಥಾನ ಮಠದ ಸಭಾಂಗಣದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಕಲ್ಮಠ್‌ ಮೋಟರ್ಸ್‌, ಸೆಲ್ಕೋ ಸೋಲರ್‌ ಕಂಪನಿ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ನಡೆದ ಆಟೊ, ದ್ವಿಚಕ್ರ ವಾಹನ ವಿತರಣಾ ಸಮಾರಂಭದ ನೇತೃತ್ವ ವಹಿಸಿ ಮಾತನಾಡಿದರು.

ಸಂಘ–ಸಂಸ್ಥೆಗಳ ಸಹಕಾರದಿಂದ ಕುಟುಂಬಗಳು ಪ್ರಗತಿ ಹೊಂದಲು ಸಾಧ್ಯ. ಕುಟುಂಬಗಳು ಸಬಲೀಕರಣದಿಂದ ದೇಶವು ಅಭಿವೃದ್ಧಿ ಸಾಧಿಸುತ್ತದೆ. ಜನಸಾಮಾನ್ಯರ ಸಹಭಾಗಿತ್ವದಿಂದ ಸಂಘ–ಸಂಸ್ಥೆಗಳು ಪ್ರಗತಿಯಾಗಲು ಸಾಧ್ಯ. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಕುಟುಂಬದ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ನೀಡುತ್ತಿರುವ ಆಟೊ, ದ್ವಿಚಕ್ರ ವಾಹನ ಸೌಲಭ್ಯವನ್ನು   ಪ್ರಗತಿಯ ನಿಧಿ ಎಂದು ಭಾವಿಸಿಕೊಂಡು ಸಕಾಲಕ್ಕೆ ಸಂಸ್ಥೆ ಸಾಲವನ್ನು ಮರುಪಾವತಿಸಬೇಕು. ಇದರಿಂದ ಇನ್ನೊಬ್ಬರಿಗೆ ಆರ್ಥಿಕ ನೆರವು ನೀಡಲು ಸಹಕಾರಿಯಾಗುತ್ತದೆ. ಬ್ಯಾಂಕ್‌ಗಳಲ್ಲಿ ಸಾಲ ಪಡೆದವರು ದೇಶ ಬಿಟ್ಟು ಓಡಿ ಹೋದರೆ ಆರ್ಥಿಕ ದಿವಾಳಿತನ ಉಂಟಾಗುತ್ತದೆ ಎಂದು ತಿಳಿಸಿದರು.

ಪಟ್ಟಣದ ಕಲ್ಮಠ್‌ ಮೋಟರ್ಸ್‌ ಮಾಲೀಕ ಕೆ.ಎಸ್‌.ಕಲ್ಮಠ್‌ ಮಾತನಾಡಿ, ಒಂದು ಮಠ, ಸರ್ಕಾರ ಮಾಡುವಂತಹ ಕೆಲಸವನ್ನು ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರು ಮಾಡುತ್ತಿದ್ದಾರೆ. ಆಡು ಮುಟ್ಟದ ಸೊಪ್ಪಿಲ್ಲ ಎಂಬ ರೀತಿಯಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಈ ಸಂಸ್ಥೆಯ ಕೆಲಸವನ್ನು ಸರ್ಕಾರವು ನೋಡಿ ಕಲಿಯಬೇಕು ಎಂದು ಹೇಳಿದರು.

ಪ್ರಗತಿಬಂಧು ಸ್ವಸಹಾಯ ಸಂಘದ 3 ಸದಸ್ಯರಿಗೆ ಆಟೊ, 15 ಸದಸ್ಯರಿಗೆ ಸ್ವ–ಉದ್ಯೋಗಕ್ಕೆ ಪೂರಕವಾಗಿ ದ್ವಿಚಕ್ರ ವಾಹನ ವಿತರಿಸಲಾಯಿತು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಜಿಲ್ಲಾ ನಿರ್ದೇಶಕ ಬಿ.ಗಣೇಶ್‌, ತಾಲ್ಲೂಕು ಯೋಜನಾಧಿಕಾರಿ ವಿಶ್ವನಾಥ್‌, ನಿರಂಜನ್‌ ಕಲ್ಮಠ್‌, ಪ್ರದೀಪ್‌, ವೀಣಾ, ನಾಗರಾಜು, ರಾಘವೇಂದ್ರ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry