ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡಾಯ ಶಾಸಕರ ರಾಜೀನಾಮೆ

ಮೈಸೂರಿನಲ್ಲಿ ಇಂದು ಕಾಂಗ್ರೆಸ್‌ಗೆ ಸೇರ್ಪಡೆ
Last Updated 24 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಜೆಡಿಎಸ್‌ನ ಏಳು ಬಂಡಾಯ ಶಾಸಕರು ಶನಿವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ವಿಧಾನಸಭೆ ಸ್ಪೀಕರ್‌ ಕೆ.ಬಿ.ಕೋಳಿವಾಡ ಅವುಗಳನ್ನು ಅಂಗೀಕರಿಸಿದ್ದಾರೆ.

ಎನ್‌.ಚೆಲುವರಾಯಸ್ವಾಮಿ, ಅಖಂಡ ಶ್ರೀನಿವಾಸಮೂರ್ತಿ, ಭೀಮಾ ನಾಯ್ಕ, ಜಮೀರ್ ಅಹಮ್ಮದ್ ಖಾನ್, ರಮೇಶ್‌ ಬಂಡಿಸಿದ್ದೇಗೌಡ, ಎಚ್‌.ಸಿ. ಬಾಲಕೃಷ್ಣ ಮತ್ತು ಇಕ್ಬಾಲ್ ಅನ್ಸಾರಿ ಸ್ಪೀಕರ್‌ ಮನೆಗೆ ತೆರಳಿ ರಾಜೀನಾಮೆ ಸಲ್ಲಿಸಿದರು.

ಭಾನುವಾರ ಮೈಸೂರಿನಲ್ಲಿ ನಡೆಯುವ ಜನಾಶೀರ್ವಾದ ಸಮಾವೇಶದಲ್ಲಿ ರಾಹುಲ್‌ ಗಾಂಧಿ ಸಮ್ಮುಖದಲ್ಲಿ ಏಳೂ ಬಂಡಾಯ ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ. ಇವರೆಲ್ಲರಿಗೂ ಅವರು ಪ್ರತಿನಿಧಿಸಿದ್ದ ಕ್ಷೇತ್ರಗಳಿಂದಲೇ ಟಿಕೆಟ್‌ ಕೊಡುವುದಾಗಿ ಭರವಸೆ ಕೊಡಲಾಗಿದೆ.

2016 ರಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ‍ಪಕ್ಷದ ವಿಪ್‌ ಉಲ್ಲಂಘಿಸಿ, ಕಾಂಗ್ರೆಸ್‌ ಅಭ್ಯರ್ಥಿಗೆ ಮತ ಹಾಕಿದ್ದ ಎಂಟು ಶಾಸಕರಲ್ಲಿ ಗೋಪಾಲಯ್ಯ ಅವರನ್ನು ಬಿಟ್ಟು ಉಳಿದವರು ಪಕ್ಷದ ಜೊತೆ ಅಂತರ ಕಾಯ್ದುಕೊಂಡಿದ್ದರು. ಜೆಡಿಎಸ್‌ ಈ ಶಾಸಕರನ್ನು ಅಮಾನತ್ತಿನಲ್ಲಿಟ್ಟು, ಸದಸ್ಯತ್ವ ಅನರ್ಹಗೊಳಿಸುವಂತೆ ಸ್ಪೀಕರ್‌ಗೆ ಅರ್ಜಿ ಸಲ್ಲಿಸಿತ್ತು.

ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಶುಕ್ರವಾರ (ಮಾರ್ಚ್‌ 23) ನಡೆದ ಚುನಾವಣೆಯಲ್ಲೂ ಈ ಬಂಡಾಯ ಶಾಸಕರು ವಿಪ್‌ ಉಲ್ಲಂಘಿಸಿ ಅಡ್ಡ ಮತದಾನ ಮಾಡಿದ್ದು, ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಬೆಂಬಲಿಸಿದ್ದಾರೆ.

‘ಶಾಸಕರು ತಮ್ಮ ಸ್ವಂತ ಹಸ್ತಾಕ್ಷರದಿಂದ ರಾಜೀನಾಮೆ ಬರೆದು ಕೊಟ್ಟಿದ್ದಾರೆ. ಆದ್ದರಿಂದ, ರಾಜೀನಾಮೆ ಅಂಗೀಕರಿಸಿದ್ದೇನೆ. ಬಂಡಾಯ ಶಾಸಕರ ವಿಚಾರಣೆ ಇನ್ನೂ ಪೂರ್ಣಗೊಂಡಿಲ್ಲ. ಜೆಡಿಎಸ್‌ ಶುಕ್ರವಾರ ಮತ್ತೊಂದು ದೂರು ನೀಡಿದೆ. ಎಲ್ಲ ದೂರುಗಳನ್ನು ಒಟ್ಟಿಗೆ ಸೇರಿಸಿ ವಿಚಾರಣೆ ನಡೆಸುತ್ತೇನೆ. ರಾಜೀನಾಮೆ ಅಂಗೀಕಾರವಾದ ಕೂಡಲೇ ಪ್ರಕರಣ ಮುಗಿದು ಹೋಯಿತು ಎಂದು ಭಾವಿಸಬೇಕಾಗಿಲ್ಲ.

ಯಾವಾಗ ವಿಚಾರಣೆ ನಡೆಸಬೇಕು ಮತ್ತು ತೀರ್ಪು ನೀಡಬೇಕು ಎಂಬುದು ನನ್ನ ವಿವೇಚನೆಗೆ ಬಿಟ್ಟಿದ್ದು’ ಎಂದು ಕೋಳಿವಾಡ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಪಕ್ಷ ದ್ರೋಹಿಗಳು: ಕುಮಾರಸ್ವಾಮಿ ಟೀಕೆ

‘ಏಳೂ ಶಾಸಕರು ಗೆದ್ದಿದ್ದು ನಮ್ಮ ಪಕ್ಷದಿಂದ. ನಾನು ಕೂಡ ಅವರ ಪರವಾಗಿ ಪ್ರಚಾರ ಮಾಡಿದ್ದೇನೆ, ಅವರ ಗೆಲುವಿಗೆ ಶ್ರಮಿಸಿದ್ದೇನೆ. ಪಕ್ಷದ ಕಾರ್ಯಕರ್ತರು ಅವರನ್ನು ಗೆಲ್ಲಿಸಿದ್ದರು. ಪಕ್ಷದಿಂದ ಸಕಲವನ್ನೂ ಪಡೆದ ಅವರಿಂದ ನಾವು ಪಕ್ಷ ನಿಷ್ಠೆಯನ್ನಷ್ಟೇ ಬಯಸಿದ್ದೆವು. ಆದರೆ ಎರಡು ಚುನಾವಣೆಗಳಲ್ಲೂ ಪಕ್ಷ ದ್ರೋಹ ಬಗೆದಿದ್ದಾರೆ. ರಾಜಕಾರಣಿಗಳು ಪಕ್ಷವನ್ನು ತಾಯಿಯಂತೆ ಭಾವಿಸಬೇಕು. ಆದರೆ ಇವರು ತಾಯಿಯನ್ನೇ ಕಡೆಗಣಿಸಿದರು’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ.

‘ಪಕ್ಷ ಮತ್ತು ಧರ್ಮಗಳನ್ನು ಒಡೆಯುತ್ತಾ ಸಾಗಿರುವ ಕಾಂಗ್ರೆಸ್‌ ಸಮಾಜಕ್ಕೆ ನೀಡುತ್ತಿರುವ ಸಂದೇಶವೇನು. ಚುನಾವಣೆ ಗೆಲ್ಲಲು ನೀವು ಹಾಕಿ ಕೊಟ್ಟ ಸೂತ್ರ ಮುಂದೊಂದು ದಿನ ನಿಮ್ಮ ಪಕ್ಷದ ಕೊರಳನ್ನೇ ಬಿಗಿಯಲಿದೆ. ಕಾಲ ಚಕ್ರ ತಿರುಗುವ ಸನ್ನಿವೇಶದಲ್ಲಿ ಇಂದು ಜೆಡಿಎಸ್ ಅನುಭವಿಸಿದ ಸೋಲು ಮುಂದೊಂದು ದಿನ ನಿಮಗೂ ಬರಲಿದೆ. ಬಂಡೆದ್ದವರು, ನಮ್ಮ ಪಕ್ಷವನ್ನು ಒಡೆದವರು, ಒಡೆಯಲೆತ್ನಿಸುತ್ತಿರುವವರನ್ನು ಚುನಾವಣಾ ಕಣದಲ್ಲಿ ಎದುರಿಸುತ್ತೇನೆ’ ಎಂದು ಸವಾಲು ಹಾಕಿದ್ದಾರೆ.

* ಕಳೆದ ಬಾರಿ ಸ್ಪರ್ಧಿಸಿದ್ದ ಕ್ಷೇತ್ರದಿಂದಲೇ ಏಳೂ ಶಾಸಕರಿಗೆ ಈ ಬಾರಿ ವಿಧಾನಸಭಾ ಚುನಾವಣೆಗೆ ಟಿಕೆಟ್‌ ನೀಡುವ ಭರವಸೆ ಸಿಕ್ಕಿದೆ

-ಭೀಮಾ ನಾಯ್ಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT