5

ರೈಲು ಹಳಿ ಮೇಲೆ ವಿದ್ಯಾರ್ಥಿ ಮೃತದೇಹ ಪತ್ತೆ

Published:
Updated:

ಬೆಂಗಳೂರು: ಕೆಂಗೇರಿ–ನಾಯಂಡಹಳ್ಳಿ ನಡುವಿನ ರೈಲು ಹಳಿ ಮೇಲೆ ಶುಕ್ರವಾರ ರಾತ್ರಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿ ಷಣ್ಮುಗಂ (20) ಅವರ ಮೃತದೇಹ ಪತ್ತೆಯಾಗಿದೆ.

ಷಣ್ಮುಗಂ ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಅಥವಾ ಯಾರಾದರೂ ಕೊಲೆ ಮಾಡಿ ಶವವನ್ನು ಹಳಿ ಮೇಲೆ ಎಸೆದಿದ್ದಾರೋ ಗೊತ್ತಿಲ್ಲ. ಹೀಗಾಗಿ, ಅನುಮಾನಾಸ್ಪದ ಸಾವು (ಐಪಿಸಿ 174ಸಿ) ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ನಗರ ರೈಲ್ವೆ ಪೊಲೀಸರು ತಿಳಿಸಿದರು.

ಕಡಪದ ಷಣ್ಮುಗಂ, ಉತ್ತರಹಳ್ಳಿ ಮುಖ್ಯರಸ್ತೆಯಲ್ಲಿರುವ ಎಸ್‌ಜೆಬಿ ತಾಂತ್ರಿಕ ಕಾಲೇಜಿನಲ್ಲಿ ವ್ಯಾಸಂಗ ಮಾಡಿಕೊಂಡು ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದರು. ಶುಕ್ರವಾರ ಸಂಜೆ 6 ಗಂಟೆಗೆ ಹಾಸ್ಟೆಲ್‌ನಿಂದ ಹೊರಬಂದಿದ್ದ ಅವರು, 11 ಗಂಟೆ ಸುಮಾರಿಗೆ ಶವವಾಗಿ ಪತ್ತೆಯಾಗಿದ್ದಾರೆ.

ಹಳಿ ಮೇಲೆ ದೇಹವನ್ನು ಕಂಡ ದಾರಿಹೋಕರು, ಪೊಲೀಸ್ ನಿಯಂತ್ರಣ ಕೊಠಡಿಗೆ (100) ಕರೆ ಮಾಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ರೈಲ್ವೆ ಪೊಲೀಸರು, ಮೃತರ ಜೇಬಿನಲ್ಲಿ ಸಿಕ್ಕ ಮೊಬೈಲ್‌ನಿಂದ ಕುಟುಂಬ ಸದಸ್ಯರಿಗೆ ಹಾಗೂ ಸ್ನೇಹಿತರಿಗೆ ವಿಷಯ ತಿಳಿಸಿದ್ದಾರೆ.

‘ಹಾಸ್ಟೆಲ್‌ನಲ್ಲಾಗಲೀ, ಘಟನಾ ಸ್ಥಳದಲ್ಲಾಗಲೀ ಯಾವುದೇ ಮರಣ ಪತ್ರ ಸಿಕ್ಕಿಲ್ಲ. ‘ಷಣ್ಮುಗಂ ಅನಾರೋಗ್ಯದಿಂದ ಬಳಲುತ್ತಿದ್ದ. ಆತನ ಪೋಷಕರೂ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಇದೇ ಬೇಸರದಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು’ ಎಂದು ಮೃತರ ಸ್ನೇಹಿತರು ಅನುಮಾನ ವ್ಯಕ್ತಪಡಿಸಿದ್ದಾರೆ. ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯುತ್ತಿದ್ದೇವೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry