ಸ್ವಂತ ಉದ್ಯೋಗದಲ್ಲಿ ಸಿಗುವ ತೃಪ್ತಿಯೇ ಬೇರೆ

7

ಸ್ವಂತ ಉದ್ಯೋಗದಲ್ಲಿ ಸಿಗುವ ತೃಪ್ತಿಯೇ ಬೇರೆ

Published:
Updated:
ಸ್ವಂತ ಉದ್ಯೋಗದಲ್ಲಿ ಸಿಗುವ ತೃಪ್ತಿಯೇ ಬೇರೆ

ಶಿಕ್ಷಣ ಜ್ಞಾನ ಸಂಪಾದನೆಯ ಗುರಿ ಹೊಂದಿರಬೇಕೇ ಹೊರತು, ಉದ್ಯೋಗಕ್ಕಾಗಿಯೇ ಶಿಕ್ಷಣ ಎಂಬ ಭಾವವ ಇರಬಾರದು. ವೃತ್ತಿಯ ಆಯ್ಕೆಗೆ ನಮಗಿರುವ ಕೌಶಲ ಮತ್ತು ಆಸಕ್ತಿಯೇ ಮಾನದಂಡವಾಗಬೇಕು ಎಂದು ನಂಬಿದವನು ನಾನು. ಹಾಗಾಗಿಯೇ 40 ವರ್ಷಗಳ ಹಿಂದೆಯೇ ಶೇಷಾದ್ರಿಪುರ ಸಂಜೆ ಕಾಲೇಜಿನಲ್ಲಿ ಬಿ.ಕಾಂ. ಪದವಿ ಪೂರೈಸಿದ್ದರೂ, ತಂದೆಯಿಂದ ಬಳುವಳಿಯಾಗಿ ಬಂದಿದ್ದ ಸೈಕಲ್ ದುರಸ್ತಿಯನ್ನೇ ವೃತ್ತಿಯಾಗಿ ಆಯ್ಕೆಮಾಡಿಕೊಂಡೆ.

ನನ್ನ ಹಸರು ನಾರಾಯಣರಾಜು ಬಿ.ವಿ. ಕಳೆದ 40 ವರ್ಷಗಳಿಂದ ವೈಯಾಲಿಕಾವಲ್‌ನ ಪ್ಯಾಲೇಸ್‌ ಗುಟ್ಟಳ್ಳಿ ಮುಖ್ಯರಸ್ತೆಯಲ್ಲಿನ ‘ಲಕ್ಷ್ಮೀ ವೆಂಕಟೇಶ್ವರ ಸೈಕಲ್ ವರ್ಕ್ಸ್‌’ ನಡೆಸುತ್ತಿದ್ದೇನೆ. ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿಯೆ. 1976 ರಲ್ಲಿ ನಾನು 5ನೇ ತರಗತಿಯಲ್ಲಿ ಓದುತ್ತಿರುವಾಗ ಅಪ್ಪನಿಗೆ ಊಟ ತಂದುಕೊಡುವುದಕ್ಕಾಗಿ ಗ್ಯಾರೇಜ್‌ಗೆ ಬರುತ್ತಿದ್ದೆ. ಆಗೆಲ್ಲಾ ನಿತ್ಯ ಎರಡರಿಂದ ಮೂರು ಗಂಟೆ ಈ ಸೈಕಲ್ ದುರಸ್ತಿ ಮಾಡುತ್ತಿದ್ದೆ. 1980ರಲ್ಲಿ ನನ್ನ ತಂದೆ ಪಾರ್ಶ್ವವಾಯು ಪೀಡಿತರಾದರು. ಅಣ್ಣಂದಿರು ಬೇರೆ ಊರುಗಳಲ್ಲಿ ಅಧ್ಯಯನ ಮಾಡುತ್ತಿದ್ದ ಕಾರಣ ಗ್ಯಾರೇಜ್‌ನ ಸಂಪೂರ್ಣ ಜವಾಬ್ದಾರಿ ನನ್ನ ಹೆಗಲೇರಿತು.

ಬಿ.ಕಾಂ. ಮುಗಿದ ಬಳಿಕ ಸಿ.ಎ. ಮಾಡಬೇಕೆಂಬ ನನ್ನ ಆಸೆಯನ್ನು ಮನೆಯವರ ಮುಂದೆ ವ್ಯಕ್ತಪಡಿಸಿದಾಗ ಅವರು ಸಮ್ಮತಿಸಲಿಲ್ಲ. ಸಿ.ಎ. ಮಾಡಿ ಕೆಲಸ ಅರಸುವುದು ನಂತರ ಜೀವನಪರ್ಯಂತ ಬೇರೆಯವರ ಕೈಕೆಳಗೆ ದುಡಿಯುವ ಬದಲು, ಸಿಕ್ಕ ಅವಕಾಶವನ್ನೇ ಬಳಸಿಕೊಂಡು ಸ್ವಂತ ಉದ್ಯೋಗದಲ್ಲಿ ತೊಡಗಿಕೊಳ್ಳುವುದು ಲೇಸು ಎಂಬ ಭಾವ ನನ್ನೊಳಗೂ ಬಲವಾಯಿತು. ಅಂದಿನಿಂದ ಶ್ರದ್ಧೆಯಿಂದ ಸೈಕಲ್ ರಿಪೇರಿಯಲ್ಲಿಯೇ ತಲ್ಲೀನನಾದೆ. ನೆಚ್ಚಿಕೊಂಡ ಈ ಉದ್ಯೋಗ ನನ್ನ ಜೀವನ ನಿರ್ವಹಣೆಗೆ ಎಂದೂ ಮೋಸಮಾಡಿಲ್ಲ. ನಮ್ಮ ಶ್ರದ್ಧೆ ಮತ್ತು ಕೌಶಲದ ಮೇಲೆ ದುಡಿಮೆ ಅವಲಂಬಿತವಾಗಿರುತ್ತದೆ. ಗುಟ್ಟಳ್ಳಿಯಲ್ಲಿಯೇ ಸ್ವಂತ ಮನೆ ಇದೆ. ಪತ್ನಿ ಆಕ್ಸ್‌ಫರ್ಡ್‌ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕೆಲಸ ಮಾಡುತ್ತಾರೆ. ಮಗ ಬಿ.ಕಾಂ. ಓದುತ್ತಿದ್ದಾನೆ.

ಅಂಗಡಿಯ ಇದೇ ಕಟ್ಟಡಕ್ಕೆ ನನ್ನ ತಂದೆ ₹ 65 ಬಾಡಿಗೆ ಕಟ್ಟುತ್ತಿದ್ದರು. ಸದ್ಯ ನಾನು ತಿಂಗಳಿಗೆ ₹6,000 ಬಾಡಿಗೆ ನೀಡುತ್ತಿದ್ದೇನೆ. ಎಲ್ಲ ಉದ್ಯೋಗಗಳಲ್ಲಿರುವಂತೆ ಈ ವೃತ್ತಿಯಲ್ಲಿಯೂ ಸಾಕಷ್ಟು ಸವಾಲುಗಳಿವೆ. ಮುಖ್ಯವಾಗಿ ಸ್ಪರ್ಧೆ ಹೆಚ್ಚುತ್ತಿದೆ. ಅದರ ನಡುವೆ ನಮ್ಮ ಉದ್ಯೋಗವನ್ನು ಕಾಪಾಡಿಕೊಳ್ಳಲು ನಿರಂತರವಾಗಿ ಕಲಿಯುತ್ತಿರಬೇಕು. ಆರಂಭದ ದಿನಗಳಲ್ಲಿ ನಾನು ಕೇವಲ ಸೈಕಲ್‌ ದುರಸ್ತಿ ಮಾಡುತ್ತಿದೆ. ಈಗ ನಗರದಲ್ಲಿ ಸೈಕಲ್ ಓಡಿಸುವವರ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆಯಾಗಿದೆ. ಬೈಕ್, ಕಾರುಗಳ ಆ ಸ್ಥಳವನ್ನು ತುಂಬಿವೆ. ಹಾಗಾಗಿಯೇ ನಾನೀಗ ಬೈಕ್‌ ಹಾಗೂ ತ್ರಿಚಕ್ರವಾಹನಗಳ ದುರಸ್ತಿಯನ್ನೂ ಕಲಿತಿದ್ದೇನೆ.

ಈ ಕ್ಷೇತ್ರದಲ್ಲಿ ಯಂತ್ರಗಳ ಬಳಕೆ ಯಥೇಚ್ಚವಾಗಿದೆ. ದುಬಾರಿ ಸೈಕಲ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಅವುಗಳ ದುರಸ್ತಿ ಮಾಡುವ ಸಲುವಾಗಿ ನಿರಂತರ ಕಲಿಕೆಯಲ್ಲಿ ತೊಡಗಿಕೊಂಡಿದ್ದೇನೆ. ಹಿಂದೆ ಸೀಮೆಎಣ್ಣೆ ಸ್ಟೌಗಳನ್ನು ಮಾತ್ರ ದುರಸ್ತಿ ಮಾಡುತ್ತಿದ್ದೆ. ಈಗ ಗ್ಯಾಸ್‌ ಸ್ಟೌ ದುರಸ್ತಿಯನ್ನೂ ಮಾಡುತ್ತೇನೆ. ಹೀಗೆ ಜೀವನಶೈಲಿಗೆ ಅನುಗುಣವಾಗಿ ವೃತ್ತಿಯಲ್ಲಿಯೂ ಬದಲಾವಣೆಯಾಗುತ್ತಿದೆ. ಕಾಲಕ್ಕೆ ತಕ್ಕಂತೆ ಹೊಂದಿಕೊಂಡಿದ್ದೇನೆ. 10 ವರ್ಷಗಳ ಹಿಂದೆ 4 ರಿಂದ 5 ಜನರಿಗೆ ಉದ್ಯೋಗ ನೀಡಿದ್ದೆ. ಇತ್ತೀಚೆಗೆ ಕೌಶಲಪೂರ್ಣ ಉದ್ಯೋಗಿಗಳು ವಿರಳ. ಅವರ ಕೆಲಸ ನನಗೆ ತೃಪ್ತಿ ನೀಡುವುದಿಲ್ಲ ಹಾಗಾಗಿ ನಾನೊಬ್ಬನೇ ನಿರ್ವಹಿಸುತ್ತೇನೆ.

ಬೆಳಿಗ್ಗೆ 9 ರಿಂದ ರಾತ್ರಿ 9ಗಂಟೆವರೆಗೆ ಇಲ್ಲಿಯೇ ದುಡಿಯುತ್ತೇನೆ. ರಜೆ ಬೇಕು, ಕೆಲಸಕ್ಕೆ ಬರುವುದು ತಡವಾಗುತ್ತದೆ ಅಥವಾ ಬೇಗ ಮನೆಗೆ ತೆರಳಬೇಕು ಎಂಬೆಲ್ಲಾ ಅನಿವಾರ್ಯತೆಗಳಿದ್ದಾಗ ಯಾರ ಅನುಮತಿಗೂ ಕಾಯಬೇಕಿಲ್ಲ. ನಾನು ಗಟ್ಟಿ ಇರುವವರೆಗೂ ಇದನ್ನೇ ಮುಂದುವರೆಸುತ್ತೇನೆ. ಮಗನಿಗೆ ಈ ಕ್ಷೇತ್ರದಲ್ಲಿ ಆಸಕ್ತಿ ಇಲ್ಲ. ಆತನ ಉದ್ಯೋಗದ ಆಯ್ಕೆ ಅವನ ವಿವೇಚನೆಗೆ ಬಿಟ್ಟಿದ್ದು. ಇದೇ ವೃತ್ತಿಗೆ ಬಂದರೂ ಆತನಿಗೆ ನನ್ನ ತುಂಬು ಹೃದಯದ ಸ್ವಾಗತ, ಸಹಕಾರವಂತೂ ಇದ್ದೇ ಇರುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry