ಚೆಂಡು ವಿರೂಪಗೊಳಿಸಿದ ಪ್ರಕರಣ: ಐಸಿಸಿ ವಿರುದ್ಧ ಹಿರಿಯ ಕ್ರಿಕೆಟಿಗರ ಆಕ್ರೋಶ

7

ಚೆಂಡು ವಿರೂಪಗೊಳಿಸಿದ ಪ್ರಕರಣ: ಐಸಿಸಿ ವಿರುದ್ಧ ಹಿರಿಯ ಕ್ರಿಕೆಟಿಗರ ಆಕ್ರೋಶ

Published:
Updated:

ಮುಂಬೈ: ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್ ಪಂದ್ಯದಲ್ಲಿ ಚೆಂಡು ವಿರೂಪಗೊಳಿಸಲು ‘ತಂತ್ರ ರೂಪಿಸಿದ’ ಪ್ರಕರಣಕ್ಕೆ ಸಂಬಂಧಿಸಿದಂತೆ, ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಸ್ಟೀವ್ ಸ್ಮಿತ್ ಹಾಗೂ ಸಹ ಆಟಗಾರರಿಗೆ ಕಡಿಮೆ ಪ್ರಮಾಣದ ಶಿಕ್ಷೆ ವಿಧಿಸಿರುವುದನ್ನು ಹಿರಿಯ ಕ್ರಿಕೆಟಿಗರು ಟೀಕಿಸಿದ್ದಾರೆ.

ನ್ಯೂಲ್ಯಾಂಡ್ಸ್‌ನಲ್ಲಿ ನಡೆದ ಮೂರನೇ ಟೆಸ್ಟ್‌ ಪಂದ್ಯದ ವೇಳೆ ಆಸ್ಟ್ರೇಲಿಯಾ ಯುವ ಕ್ರಿಕೆಟಿಗ ಕ್ಯಾಮರಾನ್‌ ಬ್ಯಾಂಕ್ರಾಫ್ಟ್‌ ಹರಿತವಾದ ಸಾಧನದಿಂದ ಚೆಂಡನ್ನು ಕೆರೆದಿದ್ದರು. ನಂತರ ಆ ವಸ್ತುವನ್ನು ಒಳ ಉಡುಪಿನೊಳಗೆ ಬಚ್ಚಿಟ್ಟಿದ್ದರು. ಇದು ಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿತ್ತು.

ದಿನದಾಟದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಯಕ ಸ್ಟೀವ್ ಸ್ಮಿತ್‌, ಚೆಂಡು ವಿರೂಪಗೊಳಿಸಲು ಬೆಂಬಲ ನೀಡಿದ್ದನ್ನು ಒಪ್ಪಿಕೊಂಡಿದ್ದರು.

‘ಇದು ತಂಡದ ನಿರ್ಧಾರ ಆಗಿತ್ತು. ಮಧ್ಯಾಹ್ನ ಭೋಜನದ ಸಂದರ್ಭದಲ್ಲಿ ಈ ಕುರಿತು ಮಾತುಕತೆ ನಡೆದಿತ್ತು’ ಎಂದು ಹೇಳಿದ್ದ ಸ್ಟೀವ್ ಸ್ಮಿತ್‌, ‘ಪ್ರಕರಣಕ್ಕೆ ಸಂಬಂಧಿಸಿ ನಾಯಕತ್ವ ತೊರೆಯುವುದಿಲ್ಲ’ ಎಂದಿದ್ದರು.

ಆದರೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಸ್ಮಿತ್ ಮತ್ತು ಉಪನಾಯಕ ಡೇವಿಡ್ ವಾರ್ನರ್ ಅವರನ್ನು ಅವರ ಸ್ಥಾನದಿಂದ ವಜಾಗೊಳಿಸಿ, ನಾಯಕತ್ವದ ಜವಾಬ್ದಾರಿಯನ್ನು ವಿಕೆಟ್ ಕೀಪರ್‌ ಟಿಮ್ ಪೈನೆ ಅವರಿಗೆ ವಹಿಸಿತ್ತು.

ಐಸಿಸಿ ಆಸ್ಟ್ರೇಲಿಯಾ ಕ್ರಿಕೆಟಿಗರಿಗೆ ಶಿಕ್ಷೆ ವಿಧಿಸುವಲ್ಲಿ ಉದಾರತೆ ಮೆರೆಯುತ್ತಿದೆ ಎಂದು ಅಭಿಪ್ರಾಯಪಟ್ಟಿರುವ ಹಲವು ಹಿರಿಯ ಕ್ರಿಕೆಟಿಗರು ಮತ್ತು ಅಭಿಮಾನಿಗಳು ಟ್ವಿಟರ್‌ನಲ್ಲಿ ಟೀಕಿಸಿದ್ದಾರೆ.

ಐಸಿಸಿ ವಿರುದ್ಧ ಅಸಮಾಧಾನ: ಹಿರಿಯ ಕ್ರಿಕೆಟಿಗರ ಟ್ವೀಟ್‌ಗಳು

* ಗ್ರೇಮ್‌ ಫ್ಲವರ್‌ (ಇಂಗ್ಲೆಂಡ್‌ ಕ್ರಿಕೆಟ್‌ ತಂಡದ ಮಾಜಿ ಆಟಗಾರ)

ಆಸ್ಟ್ರೇಲಿಯಾ ಕ್ರಿಕೆಟ್‌ ಮಂಡಳಿ ಮತ್ತು ಐಸಿಸಿಯ ಶಿಸ್ತು, ವಿಶ್ವಾಸಾರ್ಹತೆ ಹೋಮಿಯೋಪತಿ ಔಷದೋಪಚಾರಕ್ಕಿಂತ ದುರ್ಬಲ.

* ಹರ್‌ಭಜನ್‌ ಸಿಂಗ್‌ (ಭಾರತ ಕ್ರಿಕೆಟ್‌ ತಂಡದ ಆಟಗಾರ)

ವ್ಹಾ ಐಸಿಸಿ ವ್ಹಾ. ಬಹಳ ಚೆನ್ನಾಗಿ ನಡೆಸಿಕೊಂಡಿದ್ದೀರಿ.

ಎಲ್ಲ ಸಾಕ್ಷಿಗಳು ಇದ್ದಾಗ್ಯೂ ಬ್ಯಾಂಕ್ರಾಫ್ಟ್‌ಗೆ ಯಾವುದೇ ನಿಷೇಧವಿಲ್ಲ. 2001 ರಲ್ಲಿ ದಕ್ಷಿಣ ಆಫ್ರಿಕನ್ನರ ಬಲವಾದ ಮನವಿಯಿಂದಾಗಿ ಯಾವುದೇ ಸಾಕ್ಷಿಗಳು ಲಭ್ಯವಿಲ್ಲದಿದ್ದರೂ ನಮಗೆ ಆರು ಪಂದ್ಯಗಳ ನಿಷೇಧ ಹೇರಲಾಗಿತ್ತು. ಅದೇ ರೀತಿ 2008ರಲ್ಲಿ ಸಿಡ್ನಿ ಪ್ರಕರಣವನ್ನು ನೆನಪಿಸಿಕೊಳ್ಳಿ. ಯಾವುದೇ ತಪ್ಪು ಕಾಣದಿದ್ದರೂ 3 ಪಂದ್ಯಗಳಿಗೆ ನಿಷೇಧ ಹೇರಲಾಗಿತ್ತು. ಬೇರೆಬೇರೆ ಜನರಿಗೆ ಬೇರೆಬೇರೆ ನಿಯಮಗಳು.

* ಮ್ಯಾಟ್‌ ಪ್ರಿಯಾರ್‌ (ಇಂಗ್ಲೆಂಡ್‌ ಕ್ರಿಕೆಟ್‌ ತಂಡದ ಮಾಜಿ ಆಟಗಾರ)

ಪಂದ್ಯದಲ್ಲಿ ಮೋಸ ಮಾಡಲು ತಂಡದ ಎಲ್ಲ ಆಟಗಾರರು ಸಂಚು ರೂಪಿಸಿದ್ದೆವು ಎಂದು ಹೇಳಿಕೆ ನೀಡಿದ ಮೇಲೂ ಐಸಿಸಿ ಕೇವಲ ಒಂದು ಟೆಸ್ಟ್‌ ಪಂದ್ಯದಿಂದ ನಾಯಕನಿಗೆ ನಿಷೇಧ ಹೇರಿದೆ. ಶಿಕ್ಷೆ ವಿಧಿಸುವಲ್ಲಿ ಐಸಿಸಿ ತೋರಿರುವ ಉದಾರತೆ ನೆನೆದು ಆಸಿಸ್‌ ಮುಸಿ ಮುಸಿ ನಗುತ್ತಿದೆ.

* ಮೈಕಲ್‌ ವಾನ್‌ (ಇಂಗ್ಲೆಂಡ್‌ ಕ್ರಿಕೆಟ್‌ ತಂಡದ ಮಾಜಿ ಆಟಗಾರ)

ಸ್ಮಿತ್‌ಗೆ 1 ಪಂದ್ಯದ ನಿಷೇಧ ಹಾಗೂ ಪಂದ್ಯ ಶುಲ್ಕದ ಶೇ. 100 ರಷ್ಟು ದಂಡ ವಿಧಿಸಲಾಗಿದೆ. ಬ್ಯಾಂಕ್ರಾಫ್ಟ್‌ ಮಾಡಿದ ತಪ್ಪಿಗಾಗಿ ಬ್ಯಾಂಕ್ರಾಫ್ಟ್‌ ಮತ್ತು ಉಳಿದ ಆಟಗಾರರಿಗೆ ಪಂದ್ಯ ಶುಲ್ಕದ ಶೇ. 75 ರಷ್ಟು ದಂಡ ವಿಧಿಸಲಾಗಿದೆ. ಮೋಸದಾಟಕ್ಕೆ ವಿಧಿಸಿದ ಕರುಣಾಜನಕ ಶಿಕ್ಷೆಗಳಿವು. ಪೂರ್ವನಿರ್ದೇಶನಗಳನ್ನು ರೂಪಿಸಲು ಖಂಡಿತ ಇದು ಉತ್ತಮ ಸಮಯ. ತಂಡದ ಎಲ್ಲರನ್ನೂ ಶಿಕ್ಷೆಗೊಳಪಡಿಸಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry