ಒಳಗಿನ ಸೌಂದರ್ಯವತಿಯ ವಿನ್ಯಾಸಿತ ಬದುಕು

7

ಒಳಗಿನ ಸೌಂದರ್ಯವತಿಯ ವಿನ್ಯಾಸಿತ ಬದುಕು

Published:
Updated:
ಒಳಗಿನ ಸೌಂದರ್ಯವತಿಯ ವಿನ್ಯಾಸಿತ ಬದುಕು

ಜಗತ್ತಿನ ಸುಂದರಿಯರಲ್ಲಿ ನೀವೂ ಒಬ್ಬರು. ಸೌಂದರ್ಯ ಎಂದರೆ ನಿಮ್ಮ ಪ್ರಕಾರ ಏನು’– ಈ ಪ್ರಶ್ನೆ ಎದುರಾದೊಡನೆ ಐಶ್ವರ್ಯಾ ರೈ ತೀಡಿದ ತುಟಿಗಳ ಮೇಲೆ ಕಿರುನಗೆ. ಅವರು ಕೊಟ್ಟ ಉತ್ತರವಂತೂ ಅರ್ಥಗರ್ಭಿತ: ‘ಸೌಂದರ್ಯವನ್ನು ಮಹಿಳೆಗೇ ತಳುಕು ಹಾಕಿ ಅದೇಕೆ ವ್ಯಾಖ್ಯಾನಿಸುತ್ತಾರೋ? ಅದು ಲಿಂಗಾತೀತ; ರಸಿಕರ ನೋಟಕ್ಕೆ ಸಿಲುಕುವಂಥದು. ಕವಿ ಎಂಥದ್ದನ್ನೂ ಚೆಂದ ಮಾಡಿ ತೋರಬಲ್ಲ ಎಂದು ಓದುತ್ತಾ ಬಂದಿದ್ದೇನೆ. ಸಣ್ಣ ಭಾವಗಳಲ್ಲೂ ಕವಿ ಸೌಂದರ್ಯ ಕಾಣಿಸಬಲ್ಲ. ಯಾರಾದರೂ ನೀವು ಚೆಂದ ಕಾಣುತ್ತಿದ್ದೀರಿ ಎಂದು ಹೊಗಳಿದರೆ ಒಂದು ಧನ್ಯವಾದ ಹೇಳಿ, ಧನ್ಯಳಾಗುವವಳು ನಾನಲ್ಲ. ಒಳಗಿನ ಸೌಂದರ್ಯ ಉಳಿಸಿಕೊಳ್ಳುವ ಸವಾಲು ಎಂಥದೆಂಬುದನ್ನು ಬಲ್ಲೆ. ನಮ್ಮ ಒಳಗಿನ ಸೌಂದರ್ಯ, ಮನಸಿನ ಸೌಂದರ್ಯ ಜನರನ್ನು ಹೇಗಾದರೂ ಮುಟ್ಟುತ್ತದಲ್ಲ; ಆಗಲೇ ನಿಜವಾದ ಸಾರ್ಥಕ್ಯ’.

ಸೌಂದರ್ಯ ಸ್ಪರ್ಧೆಯಲ್ಲಿ ಐಶ್ವರ್ಯಾ ರೈ ದೇಶದ ಹೆಸರು ಬೆಳಗಿಸಿ ಇಪ್ಪತ್ತನಾಲ್ಕು ವರ್ಷಗಳಾದವು. ‘ಇರುವರ್’ ತಮಿಳು ಸಿನಿಮಾ ಮೂಲಕ ಅಭಿನಯಲೋಕಕ್ಕೆ ಕಾಲಿಟ್ಟು ಇಪ್ಪತ್ತು ವರ್ಷಗಳೂ ಸಂದವು. ದಾಂಪತ್ಯಗೀತೆ ಹಾಡತೊಡಗಿ ಹನ್ನೊಂದು ವಸಂತಗಳು ಮುಗಿದವು. ಮಗಳು ಹೀಗೆಯೇ ಬೆಳೆಯಬೇಕು ಎಂದು ಲಾಲನೆ–ಪಾಲನೆಯಲ್ಲಿ ನಿರತರಾದ ನಂತರವೂ ತಮ್ಮ ಒಳಗಿನ ಸೌಂದರ್ಯಕ್ಕೊಂದು ಮಾರುಕಟ್ಟೆಯನ್ನು ಸದಾ ಉಳಿಸಿಕೊಂಡೇ ಬಂದವರು ಐಶ್ವರ್ಯಾ.

ಎರಡು ವರ್ಷಗಳ ಹಿಂದೆ ‘ಸರಬ್ಜಿತ್’ ಹಿಂದಿ ಸಿನಿಮಾ ಕಾನ್ ಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾದದ್ದೇ ಅವರು ಅಭಿನಯಿಸಿದ್ದಾರೆ ಎನ್ನುವ ಕಾರಣಕ್ಕೆ. ಅದಕ್ಕೂ ಮೊದಲು ‘ಪ್ರೊವೋಕ್ಡ್’, ‘ಚೋಕರ್ ಬಾಲಿ’, ‘ರೇನ್ ಕೋಟ್’, ‘ರಾವಣ್’ ಚಿತ್ರಗಳೂ ಕಾನ್‌ನಲ್ಲಿ ಪ್ರದರ್ಶನಗೊಂಡಿದ್ದರಲ್ಲಿ ಐಶ್ವರ್ಯಾ ಉಪಸ್ಥಿತಿಯ ಹೆಗ್ಗಳಿಕೆ ಇತ್ತೆನ್ನುವುದು ಅನೇಕರಿಗೆ ತಿಳಿದೇ ಇದೆ. ಮಜಾವೆಂದರೆ, ‘ಸರಬ್ಜಿತ್’ ಸಮೇತ ಕಾನ್‌ಗೆ ಹೋದಾಗ ಸುದ್ದಿಯಾದದ್ದು ಐಶ್ವರ್ಯಾ ಹಚ್ಚಿದ್ದ ತುಟಿಬಣ್ಣವೇ ಹೊರತು ಆ ಚಿತ್ರವಲ್ಲ. ಆಗ ಅವರು ನೇರಳೆ ತುಟಿಬಣ್ಣ ಹಚ್ಚಿದ್ದನ್ನು ಫ್ಯಾಷನ್ ಪರಿಣತರು ಚರ್ಚೆಗೆ ಒಳಪಡಿಸಿದ್ದರು. ಮೇಕಪ್‌ಮನ್ ಚಾರ್ಲೊ ಹಾಗೂ ಕೇಶವಿನ್ಯಾಸಕ ಸ್ಟೀಫನ್ ಕಡೆಗೆ ಐಶ್ವರ್ಯಾ ಆಗ ಬೆರಳು ತೋರಿಸಿದ್ದರು.

ಲೋರಿಯಲ್ ಉತ್ಪನ್ನದ ಪ್ರಚಾರ ರಾಯಭಾರಿಯಾದ ಐಶ್ವರ್ಯಾ, ತುಟಿಗೆ ಯಾವ ರಂಗು ಹಚ್ಚಬೇಕು ಎನ್ನುವುದನ್ನು ತಾವೇ ಸದಾ ನಿರ್ಧರಿಸುವುದಿಲ್ಲ. ಕಾನ್‌ನಲ್ಲಿ ಆಗ ಅವರಿಗೆ ನೇರಳೆ ತುಟಿಬಣ್ಣ ಹಚ್ಚಿದ್ದೇ ಚಾರ್ಲೊ. ಮೇಕಪ್ ಒಂದು ಕಲೆ ಎಂದೇ ನಂಬಿರುವ ಐಶ್ವರ್ಯಾ, ‘ಪ್ರತಿಯೊಬ್ಬರಿಗೂ ‘ಪಿಕಾಸೊತನ’ ತೋರುವ ಭಿತ್ತಿ ಬೇಕಾಗುತ್ತದೆ. ಅಂದು ನನ್ನ ತುಟಿಯೇ ಆ ಭಿತ್ತಿಯಾಗಿರಲಿಕ್ಕೆ ಸಾಕು’ ಎಂದಿದ್ದರು.

ತಮ್ಮ ವೃತ್ತಿಬದುಕನ್ನೂ ವಿನ್ಯಾಸ ಮಾಡಿಕೊಂಡಿಟ್ಟಂತೆಯೇ ಐಶ್ವರ್ಯಾ ವರ್ತಿಸಿದ್ದಾರೆ. ಮಾಡೆಲ್ ಆಗುವ ಮೊದಲೇ ಮಂಗಳೂರಿನ ಕಡಲತಟದಲ್ಲಿ ಅವರು ಮೂಡಿಸಿದ ಹೆಜ್ಜೆ ಗುರುತುಗಳನ್ನು ಕಂಡಿದ್ದ ಸಮುದ್ರದ ಅಲೆಗಳು ಈಗಲೂ ನಗುತ್ತಿವೆ. ಅವರ ಆಯ್ಕೆಗಳನ್ನು ಗಮನಿಸಿದರೆ ಆ ವಿನ್ಯಾಸದ ಸೂಕ್ಷ್ಮ ಗೊತ್ತಾಗುತ್ತದೆ.

ಅವರ ಮೊದಲ ಸಿನಿಮಾದ ನಿರ್ದೇಶಕ ಮಣಿರತ್ನಂ (‘ಗುರು’, ‘ರಾವಣ್’ ಚಿತ್ರಗಳ ನಿರ್ದೇಶಕರೂ ಅವರೇ). ಆಮೇಲೆ ತಿರುವು ನೀಡಿದ ‘ಜೀನ್ಸ್’ ತಮಿಳು ಸಿನಿಮಾ ನಿರ್ದೇಶಕ ಶಂಕರ್. ಅದಾದ ಮೇಲೆ ಜನಪ್ರಿಯತೆ ತಂದುಕೊಟ್ಟ ‘ತಾಲ್’ ಹಿಂದಿ ಚಿತ್ರಕ್ಕೆ ಆಕ್ಷನ್‌–ಕಟ್ ಹೇಳಿದ್ದು ಸುಭಾಷ್ ಘಯ್. ‘ಹಮ್ ದಿಲ್ ದೇ ಚುಕೇ ಸನಂ’ ಸಿನಿಮಾ ಮೂಲಕ ನಟಿಯಾಗಿ ಪಳಗಿಸಿದವರು ಸಂಜಯ್ ಲೀಲಾ ಬನ್ಸಾಲಿ. ‘ದೇವದಾಸ್’ ಚಿತ್ರದಲ್ಲಿ ಮಾಧುರಿ ದೀಕ್ಷಿತ್, ಶಾರುಖ್ ಖಾನ್ ಜೊತೆಗೂಡಿ ನಿಕಷಕ್ಕೆ ಒಡ್ಡಿಕೊಂಡ ಐಶ್ವರ್ಯಾ ಮದುವೆಯಾದ ನಂತರವೂ ಪ್ರಯೋಗಮುಖಿಯಾಗಿಯೇ ಉಳಿದರು.

‘ಸರಬ್ಜಿತ್’ ನಿಜ ಬದುಕಿನ ಕಥಾನಕದ ವಸ್ತುವಿನ ಸಿನಿಮಾ. ‘...ದಿಲ್ ಹೈ ಮುಷ್ಕಿಲ್’ನಲ್ಲಿ ಇದ್ದದ್ದು ಆಧುನಿಕ ಕಾಲದ ಹೆಣ್ಣು–ಗಂಡಿನ ಸಂಬಂಧದ ಸಂಕೀರ್ಣ ಕಥಾವಸ್ತು. ‘ರಾವಣ್’ ತರಹದ ಮಹಾಭಾರತದ ಕಥೆಯ ಕ್ವಾನ್ವಾಸ್ ಇಷ್ಟಪಟ್ಟಿದ್ದ ಐಶ್ವರ್ಯಾ, ದೊಡ್ಡಮನೆಯ ಸೊಸೆಯಾಗುವ ನಿರ್ಧಾರ ತೆಗೆದುಕೊಂಡಿದ್ದೂ ಬದುಕಿನ ವಿನ್ಯಾಸದ ಭಾಗದಂತೆಯೇ ಕಾಣುತ್ತದೆ. ಬಿಗ್‌–ಬಿ ಸೊಸೆ ಎಂಬ ಗುಣವಿಶೇಷಣಕ್ಕೆ ಸಾಕ್ಷಿ ‘ಐಶ್ವರ್ಯಾ ಬಚ್ಚನ್’ ಎಂದು ಬದಲಾದ ಅವರ ಸಂಬೋಧನೆ. ‘ಅಭಿಷೇಕ್ ಬಚ್ಚನ್ ಪತ್ನಿ’ ಎನ್ನುವುದಕ್ಕಿಂತ ಹೆಚ್ಚಾಗಿ ಅವರ ಮಾರುಕಟ್ಟೆಯನ್ನು ಕಾಯ್ದದ್ದು ‘ಅಮಿತಾಭ್ ಸೊಸೆ’ ಎಂಬ ಐಡೆಂಟಿಟಿ ಎಂದೇ ಮಾರುಕಟ್ಟೆ ಪರಿಣತರೂ ವಿಶ್ಲೇಷಿಸಿದ್ದಾರೆ. ಸಲ್ಮಾನ್ ಜೊತೆಗಿನ ಪ್ರೇಮಸಲ್ಲಾಪದ ಸುದ್ದಿಗೆ ಅವರು ತುಪ್ಪ ಸುರಿಯಲೇ ಇಲ್ಲ. ಕಳೆದ ಕೆಲವು ವರ್ಷಗಳಿಂದ ಐಶ್ವರ್ಯಾ ಅವರಂತೆ ಮಗಳು ಆರಾಧ್ಯ ಕೂಡ ಫೇಮಸ್ಸು. ಇದೆಲ್ಲ ಅವರ ಬದುಕಿನ ವಿನ್ಯಾಸ.

‘ಎಂದಿರನ್’ (ರೋಬೊ) ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ಅಭಿಮಾನಿಗಳು ಬೊಕ್ಕತಲೆಯ ರಜನೀಕಾಂತ್ ಅವರ ಒಂದು ಝಲಕ್‌ಗಾಗಿ ಮುಗಿಬಿದ್ದಿದ್ದನ್ನು ಕಂಡು, ಮೇಕಪ್ ಇಲ್ಲದೆ ಹೊರಬರಲೂ ಹಿಂಜರಿಯುವ ಐಶ್ವರ್ಯಾ ಚಕಿತಗೊಂಡಿದ್ದರು. ಒಂದು ದೊಡ್ಡ ಗುಂಪು ತಮ್ಮತ್ತ ಬರುತ್ತಿದೆ ಎಂದು ಭಾವಿಸಿದ್ದ ಅವರಿಗೆ ಅದು ರಜನಿ ಕಡೆಗೆ ಹೊರಟಿದ್ದನ್ನು ಕೆಲವು ದಿನಗಳ ಕಾಲ ಜೀರ್ಣಿಸಿಕೊಳ್ಳಲು ಆಗಿರಲಿಲ್ಲ.

ಸಂತೋಷ, ವಿಷಾದ, ಪ್ರಶ್ನೆ, ತಕರಾರು ಎಲ್ಲವನ್ನೂ ಪ್ರಜ್ಞಾಪೂರ್ವಕ ನಿರ್ಭಾವುಕತೆಯಲ್ಲಿ ದಾಟಿಸುವಂತೆ ಕಾಣುವ ಐಶ್ವರ್ಯಾ ಅವರ ಮುಖದಲ್ಲಿ ವಯಸ್ಸಿನ ಒಂದೂ ಗೆರೆ ಕಾಣದಂತೆ ಲೋರಿಯಲ್ ಕಾಪಿಟ್ಟಿದೆ. ಮೇಕಪ್ ಅಳಿಸಿದರೆ ಅವುಗಳಲ್ಲಿ ಹುದುಗಿರಬಹುದಾದ ಭಾವಗಳು ಹೊರಗೆ ಬಂದಾವು. ತುಟಿ ಮೇಲಿನ ಬಣ್ಣದಾಳದಲ್ಲಿ ಹುದುಗಿರಬಹುದಾದ ವಿಷಾದವೂ ಅವರಿಗಷ್ಟೇ ಗೊತ್ತು. ಇವೆಲ್ಲವುಗಳ ನಡುವೆಯೂ ಅಂತೂ ಇನ್ನೂ ಐಶ್ವರ್ಯಾ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿ ಇದ್ದಾರೆ; ತಮ್ಮ ನಲವತ್ತನಾಲ್ಕನೇ ವಯಸ್ಸಿನಲ್ಲಿಯೂ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry