ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಸ್‌ಬುಕ್: ಆ್ಯಂಡ್ರಾಯ್ಡ್ ಸಾಧನಗಳಲ್ಲಿನ ಮಾಹಿತಿ ಸಂಗ್ರಹ

ಮಾಹಿತಿ ದುರ್ಬಳಕೆಗೆ ಫೇಸ್‌ಬುಕ್ ಕ್ಷಮೆ ಕೇಳಿದ ಸಮಯದಲ್ಲೇ ವರದಿ ಪ್ರಕಟ
Last Updated 26 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ನ್ಯೂಯಾರ್ಕ್: ‘ಆ್ಯಂಡ್ರಾಯ್ಡ್ ಸಾಧನಗಳಲ್ಲಿ ಫೇಸ್‌ಬುಕ್ ಬಳಸುತ್ತಿರುವವರ ಕರೆ ವಿವರ ಮತ್ತು ಸಂದೇಶಗಳನ್ನು ಫೇಸ್‌ಬುಕ್ ಸಂಗ್ರಹಿಸುತ್ತಿದೆ’ ಎಂದು ತಾಂತ್ರಿಕ ಸುದ್ದಿ ಜಾಲತಾಣವೊಂದು ಭಾನುವಾರ ವರದಿ ಮಾಡಿದೆ. ಕೇಂಬ್ರಿಜ್ ಅನಲಿಟಿಕಾ ಸುಮಾರು 5 ಕೋಟಿ ಫೇಸ್‌ಬುಕ್ ಬಳಕೆದಾರರ ಮಾಹಿತಿಗೆ ಕನ್ನ ಹಾಕಿದ ಬಗ್ಗೆ ಕ್ಷಮೆ ಕೋರಿ ಅಮೆರಿಕ ಮತ್ತು ಬ್ರಿಟನ್‌ಗಳಲ್ಲಿ ಫೇಸ್‌ಬುಕ್ ಜಾಹೀರಾತು ಪ್ರಕಟಿಸಿದ ದಿನವೇ ಈ ವರದಿ ಪ್ರಕಟವಾಗಿದೆ.

‘ಆ್ಯಂಡ್ರಾಯ್ಡ್ ಸಾಧನಗಳಲ್ಲಿನ ಕರೆ ವಿವರ, ಸಂದೇಶಗಳು, ಸಂಪರ್ಕ ಸಂಖ್ಯೆಗಳು ಮತ್ತು ಬಳಕೆದಾರರೊಂದಿಗೆ ಸಂಪರ್ಕದಲ್ಲಿರುವ ವ್ಯಕ್ತಿಗಳ ಹೆಸರುಗಳನ್ನೂ ಫೇಸ್‌ಬುಕ್ ಸಂಗ್ರಹಿಸಿದೆ. ಒಬ್ಬೊಬ್ಬ ಬಳಕೆದಾರ ಕಳೆದ ಹಲವು ವರ್ಷಗಳಲ್ಲಿ ಮಾಡಿದ ಕರೆ ವಿವರಗಳೂ ಫೇಸ್‌ಬುಕ್‌ನ ಸಂಗ್ರಹದಲ್ಲಿವೆ’ ಎಂದು ಎಆರ್‌ಎಸ್‌ ಟೆಕ್ನಿಕಾ ಎಂಬ ಜಾಲತಾಣದಲ್ಲಿ ಪ್ರಕಟವಾಗಿರುವ ವರದಿಯಲ್ಲಿ ವಿವರಿಸಲಾಗಿದೆ. ಬಳಕೆದಾರರ ಮಾಹಿತಿಯನ್ನು ಫೇಸ್‌ಬುಕ್ ಸಂಗ್ರಹಿಸಿರುವುದರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಫೇಸ್‌ಬುಕ್ ಸ್ಪಷ್ಟನೆ: ‘ಈ ವಿವರಗಳನ್ನು ಸಂಗ್ರಹಿಸಲು ಅನುಮತಿ ನೀಡಿದ ಆ್ಯಂಡ್ರಾಯ್ಡ್ ಬಳಕೆದಾರರ ಮಾಹಿತಿಯನ್ನಷ್ಟೇ ಸಂಗ್ರಹಿಸಲಾಗಿದೆ. ಅದನ್ನು ಬೇರೆ ಕಂಪನಿಗಳು ಮತ್ತು ಅಪ್ಲಿಕೇಷನ್‌ಗಳ ಜತೆ ಹಂಚಿಕೊಂಡಿಲ್ಲ. ಫೇಸ್‌ಬುಕ್‌ನಲ್ಲಿ ಬಳಕೆದಾರರ ಅನುಭವವನ್ನು ಉತ್ತಮಪಡಿಸುವ ಉದ್ದೇಶದಿಂದಷ್ಟೇ ಈ ಮಾಹಿತಿಗಳನ್ನು ಕಲೆಹಾಕಲಾಗುತ್ತಿದೆ’ ಎಂದು ಅಸೋಸಿಯೇಟೆಡ್ ಪ್ರೆಸ್‌ಗೆ ನೀಡಿದ ಪ್ರತಿಕ್ರಿಯೆಯಲ್ಲಿ ಫೇಸ್‌ಬುಕ್ ತನ್ನನ್ನು ಸಮರ್ಥಿಸಿಕೊಂಡಿದೆ. ಜತೆಗೆ ಈ ಪ್ರತಿಕ್ರಿಯೆಯನ್ನು ತನ್ನ ಜಾಲತಾಣದಲ್ಲೂ ಪ್ರಕಟಿಸಿದೆ.

‘ನಾವು ಕರೆಯ ಧ್ವನಿಯನ್ನು ದಾಖಲಿಸುತ್ತಿಲ್ಲ ಮತ್ತು ಸಂದೇಶಗಳಲ್ಲಿ ಏನಿದೆ ಎಂಬುದನ್ನೂ ಸಂಗ್ರಹಿಸುತ್ತಿಲ್ಲ. ಫೇಸ್‌ಬುಕ್ ಮೆಸೆಂಜರ್ ಮತ್ತು ಫೇಸ್‌ಬುಕ್‌ ಲೈಟ್‌ಗೆ ಸೈನ್‌ಇನ್ ಆಗುವವರಿಂದ ಮಾತ್ರ, ಅವರ ಅನುಮತಿಯ ಬಳಿಕ ಈ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಬಳಕೆದಾರರು ಯಾರಿಗೆ ಹೆಚ್ಚು ಕರೆ ಮಾಡುತ್ತಾರೋ ಅವರ ಹೆಸರನ್ನು ಮೆಸೆಂಜರ್‌ನ ಸಂಪರ್ಕ ಪಟ್ಟಿಯ ಆರಂಭದಲ್ಲೇ ಮೂಡುವಂತೆ ಮಾಡುತ್ತೇವೆ. ಈ ಸವಲತ್ತನ್ನು ನೀಡಲು ಕರೆ ವಿವರಗಳ ಅಗತ್ಯವಿದೆ’ ಎಂದು ಫೇಸ್‌ಬುಕ್ ವಿವರಿಸಿದೆ.

‘ಈ ಮಾಹಿತಿಗಳ ಸಂಗ್ರಹಕ್ಕೆ ಈಗಾಗಲೇ ಅನುಮತಿ ನೀಡಿರುವವರು, ಅನುಮತಿಯನ್ನು ರದ್ದುಗೊಳಿಸಲೂ ಅವಕಾಶವಿದೆ. ಮೆಸೆಂಜರ್ ಮತ್ತು ಫೇಸ್‌ಬುಕ್‌ ಲೈಟ್‌ನ ಸೆಟ್ಟಿಂಗ್ ಆಯ್ಕೆ ಮಾಡಿಕೊಂಡು, ಅಲ್ಲಿ ಅನುಮತಿಯನ್ನು ರದ್ದುಪಡಿಸಬಹುದು. ಹಾಗೆ ಮಾಡಿದ ತಕ್ಷಣ ನಾವು ಸಂಗ್ರಹಿಸಿರುವ ಅವರ ಎಲ್ಲಾ ವಿವರಗಳು ಅಳಿಸಿಹೋಗುತ್ತವೆ’ ಎಂದು ಪ್ರಕಟಣೆಯಲ್ಲಿ ಅದು ವಿವರಿಸಿದೆ.

ಜಾಹೀರಾತಿನಲ್ಲಿ ಏನಿದೆ: ‘ನಿಮ್ಮ ಮಾಹಿತಿಯನ್ನು ರಕ್ಷಿಸಲು ನಮಗೆ ಸಾಧ್ಯವಿಲ್ಲದಿದ್ದರೆ, ಅದನ್ನು ಸಂಗ್ರಹಿಸಲೂ ನಾವು ಅರ್ಹರಲ್ಲ. ನಿಮ್ಮ ಮಾಹಿತಿ ದುರ್ಬಳಕೆ ಆಗಿದ್ದಕ್ಕೆ ವಿಷಾದಿಸುತ್ತೇವೆ. ಕೇಂಬ್ರಿಜ್ ಅನಲಿಟಿಕಾ ನಮಗೆ ದ್ರೋಹ ಮಾಡಿದೆ. ಇನ್ನು ಮುಂದೆ ಹೀಗಾಗದಂತೆ ಎಚ್ಚರ ವಹಿಸುತ್ತೇವೆ’ ಎಂದು ಜಾಹೀರಾತಿನಲ್ಲಿ ಹೇಳಲಾಗಿದೆ.

‘ಫೇಸ್‌ಬುಕ್‌ನಲ್ಲಿರುವ ಇತರ ಅಪ್ಲಿಕೇಷನ್‌ಗಳು ಬಳಕೆದಾರರ ಮಾಹಿತಿಯನ್ನು ಕಳವು ಮತ್ತು ದುರ್ಬಳಕೆ ಮಾಡಿಕೊಳ್ಳುತ್ತಿವೆಯೇ ಎಂಬುದನ್ನು ಪರಿಶೀಲಿಸುತ್ತಿದ್ದೇವೆ. ಅಂತಹದ್ದೇನಾದರೂ ಕಂಡುಬಂದರೆ ಆ ಅಪ್ಲಿಕೇಷನ್‌ಗಳನ್ನು ನಿಷೇಧಿಸುತ್ತೇವೆ. ಮತ್ತು ಆ ಅಪ್ಲಿಕೇಷನ್‌ಗಳು ಬಳಕೆದಾರರ ಮಾಹಿತಿಯನ್ನು ಹೇಗೆ ದುರ್ಬಳಕೆ ಮಾಡಿಕೊಂಡಿವೆ ಎಂಬುದನ್ನೂ ಬಹಿರಂಗಪಡಿಸುತ್ತೇವೆ’ ಎಂದು ಫೇಸ್‌ಬುಕ್ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT