ಅನಾವರಣಗೊಂಡ ಸಾಂಸ್ಕೃತಿಕ ವೈವಿಧ್ಯ

7
ಜಿಗಣಿ ಸಮೀಪದ ಪ್ರಶಾಂತಿ ಕುಟೀರದಲ್ಲಿ ವಸಂತೋತ್ಸವ ಉದ್ಘಾಟನೆ

ಅನಾವರಣಗೊಂಡ ಸಾಂಸ್ಕೃತಿಕ ವೈವಿಧ್ಯ

Published:
Updated:
ಅನಾವರಣಗೊಂಡ ಸಾಂಸ್ಕೃತಿಕ ವೈವಿಧ್ಯ

ಆನೇಕಲ್‌: ವಸಂತ ಮಾಸ ಕವಿಗಳಿಗೆ ಸ್ಫೂರ್ತಿ ನೀಡುವ ಕಾಲ. ಮರ, ಗಿಡ, ಬಳ್ಳಿ ಚಿಗುರಿ ಹೊಸ ಸೌಂದರ್ಯದಿಂದ ನಳನಳಿಸುತ್ತವೆ. ಈ ಮಾಸದಲ್ಲಿ ಪ್ರಕೃತಿಯಲ್ಲಿ ಬದಲಾವಣೆಯಾದಂತೆ ಮನುಷ್ಯನೂ ಬದಲಾಗಿ ತನ್ನಲ್ಲಿನ ದುರ್ಗುಣಗಳನ್ನು ದೂರ ಮಾಡಿ ಸದ್ಗುಣಗಳನ್ನು ಜೀವನದಲ್ಲಿ ಬೆಳೆಸಿಕೊಳ್ಳಬೇಕೆದು ಎಸ್‌–ವ್ಯಾಸ ಯೋಗ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಎಚ್.ಆರ್.ನಾಗೇಂದ್ರ ಅಭಿಪ್ರಾಯಪಟ್ಟರು.

ಅವರು ತಾಲ್ಲೂಕಿನ ಜಿಗಣಿ ಸಮೀಪದ ಪ್ರಶಾಂತಿ ಕುಟೀರದ ಎಸ್‌–ವ್ಯಾಸ ಯೋಗ ವಿಶ್ವವಿದ್ಯಾಲಯದ ಸಂಸ್ಕೃತಿ ಭವನದಲ್ಲಿ ಆಯೋಜಿಸಿದ್ದ ವಸಂತೋತ್ಸವ–2018ಕ್ಕೆ ಚಾಲನೆ ನೀಡಿ ಮಾತನಾಡಿದರು.

ವಿಶ್ವವಿದ್ಯಾಲಯದಲ್ಲಿ ಹಲವು ರಾಜ್ಯಗಳ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, ಸಾಂಸ್ಕೃತಿಕ ಚಿತ್ರಣ ನೀಡುವ ಮೂಲಕ ರಾಷ್ಟ್ರೀಯ ಭಾವೈಕ್ಯ ಬೆಳೆಯಲು ಸಹಕಾರಿಯಾಗಿದೆ ಎಂದರು.

ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುರಳೀಧರ ಹಾಲಪ್ಪ ಮಾತನಾಡಿ, ಕರ್ನಾಟಕದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿಪಡಿಸಲು ನಿಗಮ ಹಲವು ಕಾರ್ಯಕ್ರಮ ಹಮ್ಮಿಕೊಂಡಿದೆ. ವೃತ್ತಿಗೆ ಬೇಕಾದ ಕೌಶಲ ವಿದ್ಯಾರ್ಥಿಗಳಿಗೆ ಕಲಿಸಲು ಶ್ರಮಿಸುತ್ತಿದೆ. ಏಳು ಲಕ್ಷ ನಿರುದ್ಯೋಗಿಗಳು ನೋಂದಣಿ ಮಾಡಿಸಿದ್ದು, ಐದು ಲಕ್ಷ ನಿರುದ್ಯೋಗಿಗಳಿಗೆ ವಿವಿಧ ತರಬೇತಿ ನೀಡಲಾಗಿದೆ. 5,600 ಮಂದಿ ಚಾಲಕರಿಗೆ ಕೆಎಸ್‌ಆರ್‌ಟಿಸಿ ತರಬೇತಿ ಶಾಲೆ ಮೂಲಕ ತರಬೇತಿ ನೀಡಲಾಗುತ್ತಿದೆ ಎಂದರು.

ಪೋಷಕರ ಹಾಗೂ ಯುವ ಜನರ ಕನಸು ಸಾಕಾರಗೊಳಿಸುವ ನಿಟ್ಟಿನಲ್ಲಿ ಕೌಶಲ್ಯ ಅಭಿವೃದ್ಧಿ ನಿಗಮ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಕಾರ್ಯನಿರ್ವಹಿಸುತ್ತಿದೆ ಎಂದರು.

ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಡಾ.ಎಂ.ಜಗದೀಶ್ ಮಾತನಾಡಿ, ಪ್ರಶಾಂತಿ ಕುಟೀರದಲ್ಲಿ 300ಕ್ಕೂ ಹೆಚ್ಚು ವಿವಿಧ ಜಾತಿಯ ಸಸ್ಯಸಂಕುಲವಿದ್ದು, ತಂಪಾದ ವಾತಾವರಣ ಓದಿಗೆ ‍ಪ್ರೇರೇಣೆ ನೀಡಿದೆ ಎಂದರು.

ಎಸ್‌ –ವ್ಯಾಸ ವಿಶ್ವವಿದ್ಯಾಲಯದ ಆರೋಗ್ಯ ವಿಭಾಗದ ನಿರ್ದೇಶಕಿ ಡಾ.ಎಚ್.ಆರ್.ನಾಗರತ್ನ, ಉಪಕುಲಪತಿ ಡಾ.ರಾಮಚಂದ್ರ ಭಟ್, ರಿಜಿಸ್ಟ್ರಾರ್ ಡಾ.ಅಮರನಾಥ್, ಸಂಶೋಧನಾ ವಿಭಾಗದ ನಿರ್ದೇಶಕ ಡಾ.ಮಂಜುನಾಥ್ ಇದ್ದರು.

ಸಂಸ್ಕೃತಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯಕ್ರಮ

ಯೋಗ ವಿಶ್ವವಿದ್ಯಾಲಯದ ಮೂಲಕ ಜನರಲ್ಲಿ ಮಧು ಮೇಹದ ಬಗ್ಗೆ ಜಾಗೃತಿ ಮೂಡಿಸಲು ‘ಸ್ಟಾಪ್‌ ಡಯಾಬಿಟಿಸ್‌ ಮೂಮೆಂಟ್‌’ ಎಂಬ ಆಂದೋಲನ ಪ್ರಾರಂಭಿಸಲಾಗಿದೆ ಎಂದು ಕುಲಾಧಿಪತಿ ಡಾ.ಎಚ್.ಆರ್.ನಾಗೇಂದ್ರ ತಿಳಿಸಿದರು.

ಯೋಗ ವಿಶ್ವವಿದ್ಯಾಲಯದಲ್ಲಿ ಡಿಪ್ಲೊಮಾದಿಂದ ಡಾಕ್ಟರೇಟ್‌ವರೆಗೂ ವಿವಿಧ ಕೋರ್ಸ್‌ಗಳನ್ನು ಪ್ರಾರಂಭಿಸಲಾಗಿದೆ. ಯೋಗದ ಜೊತೆಗೆ ಭಾರತೀಯ ಪರಂಪರೆ, ಸಂಸ್ಕೃತಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry