‘ಯಂತ್ರಗಳ ಬಳಕೆಯಿಂದ ಹಣ, ಸಮಯ ಉಳಿತಾಯ’

6
ಕೃಷಿ ಯಂತ್ರಧಾರೆ ಕೇಂದ್ರಗಳ ಕಾರ್ಯಾಚರಣೆಗೆ ಮೊಬೈಲ್ ತಂತ್ರಾಂಶ ಬಿಡುಗಡೆ

‘ಯಂತ್ರಗಳ ಬಳಕೆಯಿಂದ ಹಣ, ಸಮಯ ಉಳಿತಾಯ’

Published:
Updated:
‘ಯಂತ್ರಗಳ ಬಳಕೆಯಿಂದ ಹಣ, ಸಮಯ ಉಳಿತಾಯ’

ಕೈಲಾಂಚ (ರಾಮನಗರ): ಕೃಷಿ ಚಟುವಟಿಕೆಗಳಲ್ಲಿ ಯಂತ್ರಗಳನ್ನು ಬಳಸಿಕೊಂಡು ಆರ್ಥಿಕವಾಗಿ ಸಬಲರಾಗಲು ಸಾಧ್ಯ, ಇದಕ್ಕಾಗಿ ರಾಜ್ಯದ 342 ಹೋಬಳಿ ಕೇಂದ್ರಗಳಲ್ಲಿ ಕೃಷಿ ಯಂತ್ರಧಾರೆ ಕಾರ್ಯಕ್ರಮದಡಿ ಯಂತ್ರೋಪಕರಣಗಳನ್ನು ಬಾಡಿಗೆಗೆ ನೀಡುವ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಕೃಷಿ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.

ಕೃಷಿ ಇಲಾಖೆ ವತಿಯಿಂದ ಇಲ್ಲಿನ ಗೌಡಯ್ಯನದೊಡ್ಡಿ ಗ್ರಾಮದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಕೃಷಿ ಯಂತ್ರಧಾರೆ ಕೇಂದ್ರಗಳ ಕಾರ್ಯಾಚರಣೆಗಾಗಿ ಸಿದ್ಧಪಡಿಸಲಾದ ಮೊಬೈಲ್‌ ಆಧಾರಿತ ತಂತ್ರಾಂಶವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಪ್ರಸ್ತುತ ಕೃಷಿಗೆ ಕೂಲಿ ಕಾರ್ಮಿಕರ ಸಮಸ್ಯೆ ಇದೆ. ಯಂತ್ರೋಪಕರಣಗಳ ಬಳಕೆ ಇದಕ್ಕೆ ಪರಿಹಾರವಾಗಿದೆ. ಕೂಲಿಕಾರರು ಮಾಡುವ ಒಂದು ದಿನದ ಕೆಲಸವನ್ನು ಯಂತ್ರೋಪಕರಣಗಳು ಒಂದು ಗಂಟೆಯಲ್ಲೇ ಮಾಡುತ್ತವೆ. ಅಲ್ಲದೇ ಈ ಯಂತ್ರಗಳ ಬಾಡಿಗೆಯೂ ಕಡಿಮೆಯಿದ್ದು, ₹8–10 ಸಾವಿರಕ್ಕೆ ಆಗುವ ಕೆಲಸವು ₹2 ಸಾವಿರ ವೆಚ್ಚದಲ್ಲಿ ಮುಗಿಯುತ್ತಿದೆ ಎಂದು ವಿವರಿಸಿದರು.

ಕೃಷಿಯಲ್ಲಿ ಶೇ 100 ರಷ್ಟು ಕೆಲಸ ಕಾರ್ಯಗಳಿಗೆ ಯಂತ್ರೋಪಕರಣಗಳ ಬಳಕೆ ಸಾಧ್ಯವಿಲ್ಲ, ಆದರೆ ಶೇ 50 ರಷ್ಟಾದರೂ ಬಳಸಬೇಕು. ಈ ನಿಟ್ಟಿನಲ್ಲಿ ಕಳೆದ ಎರಡೂವರೆ ವರ್ಷಗಳಿಂದ ಸರ್ಕಾರವು ಕೃಷಿ ಯಂತ್ರಧಾರೆ ಯೋಜನೆ ಆರಂಭಿಸಿ ಯಂತ್ರೋಪಕರಣಗಳನ್ನು ಬಾಡಿಗೆ ಆಧಾರದ ಮೇಲೆ ರೈತರಿಗೆ ನೀಡಲಾಗುತ್ತಿದೆ. ಇದರಲ್ಲಿ ಸರ್ಕಾರವು ಶೇ 75 ಹಾಗೂ ಖಾಸಗಿ ಸಂಸ್ಥೆಗಳು ಶೇ 25ರಷ್ಟು ಬಂಡವಾಳ ಹೂಡಿವೆ. ರಾಜ್ಯದ ಇನ್ನೂ 95 ಹೋಬಳಿಗಳಲ್ಲಿ ಕೃಷಿ ಯಂತ್ರಧಾರೆ ಕೇಂದ್ರ ಆರಂಭಕ್ಕೆ ಆದೇಶ ನೀಡಲಾಗಿದ್ದು, ಒಟ್ಟು 437 ಕೇಂದ್ರಗಳನ್ನು ಆರಂಭಿಸಲಾಗುವುದು ಎಂದರು.

ಪ್ರಸ್ತುತ 342 ಹೋಬಳಿಗಳಲ್ಲಿ ಈ ಕೇಂದ್ರಗಳ ಮೂಲಕ 8.46 ಲಕ್ಷ ರೈತರು ಇಂತಹ ಸೌಲಭ್ಯಗಳನ್ನು ಪಡೆದುಕೊಳ್ಳುತಿದ್ದಾರೆ. ಎಲ್ಲಾ ಹೋಬಳಿ ಕೇಂದ್ರಗಳಲ್ಲಿಯೂ ಯಂತ್ರೋಪಕರಣಗಳನ್ನು ನೀಡಿದ್ದಲ್ಲಿ 20 ಲಕ್ಷ ರೈತರು ಯಂತ್ರಗಳನ್ನು ಬಳಸುವ ಸಾಧ್ಯತೆ ಇದೆ. ಇದಕ್ಕಾಗಿ ₹153 ಕೋಟಿ ಖರ್ಚಾಗಿದ್ದು, ಸರ್ಕಾರಕ್ಕೆ ಬಾಡಿಗೆ ದರದ ಲಾಭ ಪಡೆಯುವ ಉದ್ದೇಶವಿಲ್ಲ. ಈ ಕೇಂದ್ರಗಳ ನಿರ್ವಹಣೆಗೆ ಹಾಗೂ ಇತರೆ ಖರ್ಚು ವೆಚ್ಚಗಳಿಗೆ ಬಾಡಿಗೆ ಪಡೆಯಲಾಗುತ್ತಿದೆ ಎಂದರು.

ಈ ಯಂತ್ರೋಪಕರಣಗಳನ್ನು ಮೊಬೈಲ್ ಮೂಲಕವೂ ಬುಕ್ ಮಾಡಬಹುದಾಗಿದೆ, ಅದಕ್ಕಾಗಿ ತಮ್ಮ ಮೊಬೈಲ್‌ನಲ್ಲಿ ಪ್ಲೇ ಸ್ಟೋರ್‌ ಮೂಲಕ ಕೃಷಿ ಯಂತ್ರಧಾರೆ ಎಂದು ಟೈಪ್ ಮಾಡಿ, ಆ ತಂತ್ರಾಂಶವನ್ನು ಡೌನ್‌ಲೋಡ್‌ ಮಾಡಿ, ರೈತರು ತಮ್ಮ ಹೆಸರು ಹಾಗೂ ತಮ್ಮ ಜಮೀನಿನ ಸರ್ವೆ ನಂಬರ್ ಅನ್ನು ದಾಖಲಿಸಿದಲ್ಲಿ ಕೃಷಿ ಯಂತ್ರೋಪಕರಣ ಬುಕ್ ಮಾಡಬಹುದಾಗಿದೆ ಎಂದು ಅವರು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಸದಸ್ಯ ಸಿ.ಎಂ. ಲಿಂಗಪ್ಪ, ಇ-–ಆಡಳಿತ ಇಲಾಖೆಯ ನಿರ್ದೇಶಕ ಡಾ. ಸುನಿಲ್ ಪನ್ವಾರ್, ಹಾಗೂ ಕೃಷಿ ಯಂತ್ರಧಾರೆಯ ಉಪಕರಣಗಳ ಪ್ರಯೋಜನ ಪಡೆದ ರೈತರಾದ ಕೃಷ್ಣಪ್ಪ, ದಾಸಪ್ಪ ಮಾತನಾಡಿದರು.

ಕೃಷಿ ಆಯುಕ್ತ ಸತೀಶ್, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ. ಕೆ. ರಾಜೇಂದ್ರ ಇದ್ದರು. ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ದೀಪಜಾ ನಿರೂಪಿಸಿದರು.

**

ಮಾತಿನ ಚಕಮಕಿ

ಸರ್ಕಾರಿ ಕಾರ್ಯಕ್ರಮದಲ್ಲಿ ರಾಜಕೀಯ ಪ್ರಸ್ತಾವಕ್ಕೆ ಸಂಬಂಧಿಸಿ ವಿಧಾನ ಪರಿಷತ್‌ ಸದಸ್ಯ ಸಿ.ಎಂ. ಲಿಂಗಪ್ಪ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಾಂಡುರಂಗ ನಡುವೆ ಮಾತಿನ ಚಕಮಕಿ ನಡೆಯಿತು.

ಸಿ.ಎಂ. ಲಿಂಗಪ್ಪ ಮಾತನಾಡಿ ‘ರಾಜ್ಯದಲ್ಲಿ 30 ಸೀಟು ಪಡೆಯುವವರು ಮುಖ್ಯಮಂತ್ರಿ ಆಗುವುದಾದರೆ 130 ಸ್ಥಾನ ಪಡೆಯುವ ನಾವು ಮುಖ್ಯಮಂತ್ರಿ ಆಗುವುದಿಲ್ಲವೇ’ ಎಂದು ಲೇವಡಿ ಮಾಡಿದರು. ಇದಕ್ಕೆ ವೇದಿಕೆಯಲ್ಲೇ ವಿರೋಧ ವ್ಯಕ್ತಪಡಿಸಿದ ಪಾಂಡುರಂಗ ‘ಇದು ಸರ್ಕಾರಿ ಕಾರ್ಯಕ್ರಮ. ಇಲ್ಲಿ ನಿಮ್ಮ ರಾಜಕೀಯ ಬೇಡ’ ಎಂದು ಧ್ವನಿ ಏರಿಸಿದರು. ಕೃಷಿ ಸಚಿವ ಕೃಷ್ಣಬೈರೇಗೌಡ ಮೂಕ ಪ್ರೇಕ್ಷಕರಾಗಿದ್ದರು.

**

ರಾಜ್ಯದ 700 ಹೋಬಳಿ ಕೇಂದ್ರಗಳಲ್ಲಿ ಕೃಷಿ ಯಂತ್ರಧಾರೆ ಕೇಂದ್ರಗಳನ್ನು ಆರಂಭಿಸಿ ಕೃಷಿ ಯಂತ್ರಗಳನ್ನು ಬಾಡಿಗೆಗೆ ನೀಡಲು ಚಿಂತಿಸಲಾಗಿದೆ. ಇದರಿಂದಾಗಿ ರೈತರಿಗೆ ಶೇ. 50 ರಿಂದ 60 ಖರ್ಚು ಕಡಿಮೆಯಾಗಲಿದೆ.

–ಕೃಷ್ಣ ಭೈರೇಗೌಡ, ಕೃಷಿ ಸಚಿವ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry