‘ಕಲಾಭಿರುಚಿ ಹುಟ್ಟಿಸುವ ಕಾರ್ಯ ಹೆಚ್ಚಲಿ’

7
13ನೇ ಅಖಿಲ ಭಾರತ ಯಕ್ಷಗಾನ –ಬಯಲಾಟ ಸಾಹಿತ್ಯ ಸಮ್ಮೇಳನದ ಸಮಾರೋಪ

‘ಕಲಾಭಿರುಚಿ ಹುಟ್ಟಿಸುವ ಕಾರ್ಯ ಹೆಚ್ಚಲಿ’

Published:
Updated:
‘ಕಲಾಭಿರುಚಿ ಹುಟ್ಟಿಸುವ ಕಾರ್ಯ ಹೆಚ್ಚಲಿ’

ಕುಂದಾಪುರ: ಯಕ್ಷಗಾನದಂತಹ ವಿಶೇಷ ಸಾಂಸ್ಕೃತಿಕ ಕಲೆಗೆ ಪ್ರತ್ಯೇಕ ಅಕಾಡೆಮಿ ಆಗಬೇಕು ಎನ್ನುವ ಆಶಯಕ್ಕೆ ಸ್ಪಂದನ ದೊರಕಿರುವುದು ಸಂತೋಷ ತಂದಿದೆ. ಅಕಾಡೆಮಿ ಕಾರ್ಯಕ್ರಮಗಳಿಗೆ ಸೀಮಿತವಾಗದೆ ಕಲಾಭಿರುಚಿ ಹುಟ್ಟಿಸುವ ನೆಲೆಯಲ್ಲಿ ಕೆಲಸ ಮಾಡಿದರೆ ಅಕಾಡೆಮಿ ರಚನೆಗಾಗಿ ಶ್ರಮಿಸಿದವರಲ್ಲಿ ಸಾರ್ಥಕತೆ ಮೂಡುತ್ತದೆ ಎಂದು ಖ್ಯಾತ ಯಕ್ಷಗಾನ ಪ್ರಸಂಗಕರ್ತ ಕಂದಾವರ ರಘುರಾಮ ಶೆಟ್ಟಿ ಹೇಳಿದರು.

ಇಲ್ಲಿನ ಭಂಡಾರ್‌ಕಾರ್ಸ್ ಕಾಲೇಜು ಮತ್ತು ಬೆಂಗಳೂರಿನ ಕರ್ನಾಟಕ ಸಾಂಸ್ಕೃತಿಕ ಕಲಾ ಪ್ರತಿಷ್ಠಾನದ ವತಿಯಿಂದ ನಡೆದ ಕಾಲೇಜಿನಲ್ಲಿ ಮೂರು ದಿನಗಳ ಕಾಲ ನಡೆದ 13ನೇ ಅಖಿಲ ಭಾರತ ಯಕ್ಷಗಾನ –ಬಯಲಾಟ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಸಮ್ಮೇಳನಾಧ್ಯಕ್ಷತೆಯ ನುಡಿಯನ್ನು ಹೇಳಿದರು.

ಬದಲಾವಣೆಯ ಕಾಲಘಟ್ಟದಲ್ಲಿ ಯಕ್ಷಗಾನವೂ ಹೊರತಲ್ಲ. ಯಕ್ಷಗಾನ ಪ್ರದರ್ಶನಕ್ಕೂ ಸಹ ಒಂದು ಕಾಲಮಿತಿ ಬೇಕು. ಜನಮಾನಸದ ಅಭಿರುಚಿಗೆ ಅನುಸಾರವಾಗಿ ಕಾಲಮಿತಿ ಇದ್ದಾಗ ಕಲೆಯ ಉಳಿಯುವಿಕೆ ಸಾಧ್ಯವಾಗುತ್ತದೆ. ಹಿಂದೆ ಕಂಡಿದ್ದ ಗುಣಮಟ್ಟ ಹಾಗೂ ಶಿಸ್ತುಗಳು ಸ್ವಲ್ಪ ಮಟ್ಟಿಗೆ ಮರೆಯಾಗುತ್ತಿದೆಯೋ ಎನ್ನುವ ಭಾವನೆಗಳು ಬಲವಾಗುತ್ತಿದೆ. ಯಕ್ಷಗಾನ ಅಕಾಡೆಮಿಯ ಮೂಲಕ ಸಮರ್ಥ ಭಾಗವತರು, ಕಲಾವಿದರು ಹಾಗೂ ಹಿಮ್ಮೇಳದವರು ತಯಾರಾಗಬೇಕು. ಕೇರಳದ ಕಥಕ್ಕಳಿ, ತಮಿಳುನಾಡಿನ ಭರತ ನಾಟ್ಯ, ಆಂಧ್ರದ ಕೂಚಿಪುಡಿಯಂತೆ ಯಕ್ಷಗಾನ ನಮ್ಮ ರಾಜ್ಯದ ಪ್ರಾತಿನಿಧಿಕ ಕಲೆಯಾಗಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದರು.

ಸಮಾರೋಪ ಭಾಷಣ ಮಾಡಿದ ಕರ್ನಾಟಕ ಬಯಲಾಟ ಅಕಾಡೆಮಿಯ ನಿಕಟ ಪೂರ್ವ ಅಧ್ಯಕ್ಷ ಪ್ರೊ.ಎಂ.ಎಲ್.ಸಾಮಗ, ‘ಅಕಾಡೆಮಿ ಸ್ಥಾಪನೆಯಿಂದ ಕಾರ್ಯ ಸಾಧನೆ ಆಗೋದಿಲ್ಲ. ಅದರ ಸಮರ್ಪಕ ಬಳಕೆ ಆಗಬೇಕು. ಸರ್ಕಾರಕ್ಕೆ ಬಿಲ್ ತೋರಿಸಲು ಅಥವಾ ಪ್ರದರ್ಶನಕ್ಕೋ ಅಕಾಡೆಮಿ ಸೀಮಿತವಾಗಿರದೆ ಕಲೆಯ ಬೆಳವಣಿಗೆಗೆ ಹಾಗೂ ಜೀವಂತಿಕೆ ಉಳಿಸುವ ಪ್ರಾಮಾಣಿಕ ಪ್ರಯತ್ನಗಳು ನಡೆಯಬೇಕು’ ಎಂದರು.

ಮಣಿಪಾಲ ವಿಶ್ವವಿದ್ಯಾಲಯದ ಸಹ ಕುಲಪತಿ ಡಾ.ಎಚ್.ಎಸ್.ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು. ಮಣಿಪಾಲ ಅಕಾಡೆಮಿ ಆಫ್‌ ಜನರಲ್ ಎಜುಕೇಶನ್ ಆಡಳಿತಾಧಿಕಾರಿ ಡಾ.ಎಚ್.ಶಾಂತಾರಾಮ್, ಧರ್ಮದರ್ಶಿ ಹರಿಕೃಷ್ಣ ಪುನರೂರ್, ಪತ್ರಕರ್ತ ಕೆ.ಶ್ರೀಕರ ಭಟ್ ಇದ್ದರು.

ರಾಜಶೇಖರ ಹೆಬ್ಬಾರ್ ನಿರ್ಣಯ ಮಂಡಿಸಿದರು, ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಪಿ.ನಾರಾಯಣ ಶೆಟ್ಟಿ ಸ್ವಾಗತಿಸಿದರು, ಕರ್ನಾಟಕ ಸಾಂಸ್ಕೃತಿಕ ಕಲಾ ಪ್ರತಿಷ್ಠಾನ ಬೆಂಗಳೂರು ಇದರ ಅಧ್ಯಕ್ಷ ಎಸ್‌.ಎನ್‌.ಪಂಜಾಜೆ ವಂದಿಸಿದರು. ಉಪನ್ಯಾಸಕ ರಂಜಿತ್‌ಕುಮಾರ ಶೆಟ್ಟಿ ವಕ್ವಾಡಿ ನಿರೂಪಿಸಿದರು.

**

ವಿಶೇಷ ಪ್ರಶಸ್ತಿ ನೀಡಿ ಗೌರವ

ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗೋವಿಂದ ನಾಯಕ್ (ತೆಂಕು), ಕೆ.ಸದಾನಂದ ಐತಾಳ್ (ಬಡಗು), ರವೀಂದ್ರ ತಲಕಾಡು (ಮೂಡಲಪಾಯ – ಮೈಸೂರು ಮಟ್ಟು), ಎಚ್.ಸಿ.ಶಿವಬುದ್ಧಿ (ಗೊಂಬೆಯಾಟ), ಆನಂದ ಸಿದ್ದವೀರಪ್ಪ ಮಗುದಂ (ಪಾರಿಜಾತ), ಬಸವರಾಜ್‌ ಬಾ ಮದೀಹಳ್ಳಿ (ಸಣ್ಣಾಟ), ವೀರಭದ್ರಪ್ಪ ಶಿವಪುತ್ರಪ್ಪ ಹರ್ತಿ (ದೊಡ್ಡಾಟ – ಗೋಕಾಕ ಮಟ್ಟ), ನೀಲಪ್ಪ ಹೊನ್ನಪ್ಪ ಜೋಗಿ (ಬಯಲಾಟ), ಸುರೇಂದ್ರ ಪಣಿಯೂರು (ಸಂಘಟನೆ), ಕರ್ಗಲ್ಲು ವಿಶ್ವೇಶ್ವರ ಭಟ್ (ಜೀವಮಾನ ಸಾಧನೆ) ಹಾಗೂ ದಾವಣಗೆರೆಯ ಯಕ್ಷರಂಗ ಯಕ್ಷಗಾನ ಸಂಸ್ಥೆಗೆ ಕರ್ನಾಟಕ ಸಾಂಸ್ಕೃತಿಕ ಕಲಾ ಪ್ರತಿಷ್ಠಾನದ ವತಿಯಿಂದ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry