‘ನೀರು: ಸಮನ್ವಯ ಅಗತ್ಯ’

7
ಜಿ.ಪಂ. ಸಿಇಒ ಎಂ.ಸುಂದರೇಶಬಾಬು ಸೂಚನೆ

‘ನೀರು: ಸಮನ್ವಯ ಅಗತ್ಯ’

Published:
Updated:
‘ನೀರು: ಸಮನ್ವಯ ಅಗತ್ಯ’

ವಿಜಯಪುರ: ‘ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆಯಾಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿ’ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಸುಂದರೇಶಬಾಬು ಸೂಚಿಸಿದರು.

ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ಬರ ಪರಿಸ್ಥಿತಿ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲು ಕರೆದಿದ್ದ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಾದ್ಯಂತ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಈಗಿನಿಂದಲೇ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕು ಎಂದು ಹೇಳಿದರು.

‘ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಪಿಡಿಓ, ಗ್ರಾಮ ಲೆಕ್ಕಾಧಿಕಾರಿ ಸೇರಿದಂತೆ ಸಮಿತಿ, ತಾಲ್ಲೂಕು ಪಂಚಾಯ್ತಿ ವ್ಯಾಪ್ತಿಯಲ್ಲಿ ಇಓ, ತಹಶೀಲ್ದಾರರು, ಸಹಾಯಕ ಎಂಜಿನಿಯರ್‌, ಕೃಷಿ, ತೋಟಗಾರಿಕೆ, ಪಶು ಸಂಗೋಪನೆ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಿಕೊಂಡು ಕ್ರಿಯಾ ಯೋಜನೆ ಯನ್ವಯ ಕಾರ್ಯ ಪ್ರವೃತ್ತರಾಗುವಂತೆ’ ಸೂಚನೆ ನೀಡಿದರು.

‘ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಪ್ರತಿ ಸೋಮವಾರ ಸಭೆ ನಡೆಸಬೇಕು. ಪ್ರತಿ ಬುಧವಾರ ತಾಲ್ಲೂಕು ಮಟ್ಟದಲ್ಲಿ ಆಯಾ ಸಮಿತಿಗಳು ಸಭೆ ನಡೆಸಿ, ಸಮಸ್ಯೆಗಳ ಚರ್ಚಾ ವರದಿ, ಕೈಗೊಂಡ ಕ್ರಮಗಳ ಕುರಿತಂತೆ ಜಿಲ್ಲಾ ಮಟ್ಟದ ಸಮಿತಿಗೆ ವರದಿ ಸಲ್ಲಿಸಿ’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘ಗ್ರಾಮಗಳಲ್ಲಿ ಲಭ್ಯವಿರುವ ಜಲಸಂಪನ್ಮೂಲ, ಕುಡಿಯುವ ನೀರಿನ ನಿರ್ವಹಣೆ, ಟ್ಯಾಂಕರ್‌ಗಳ ಅವಶ್ಯಕತೆ, ಖಾಸಗಿ ಬೋರ್‌ವೆಲ್‌ಗಳ ಮಾಲೀಕರೊಟ್ಟಿಗೆ ಒಪ್ಪಂದ ಮಾಡಿಕೊಂಡು, ತಕ್ಷಣ ನೀರಿನ ಸಮಸ್ಯೆ ನಿವಾರಣೆಗೆ ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಬೇಕು’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ಬಗ್ಗೆ ಪರಿಶೀಲನೆ ನಡೆಸಬೇಕು. ಅಗತ್ಯವಿದ್ದರೆ 48 ಗಂಟೆಯೊಳಗೆ ದುರಸ್ತಿಗೊಳಿಸಬೇಕು. ಈ ಘಟಕಗಳ ಸಮರ್ಪಕ ಕಾರ್ಯ ನಿರ್ವಹಣೆ ಪರಿಶೀಲನೆಗಾಗಿ ಸಂಚಾರಿ ವಾಹನಗಳನ್ನು ನುರಿತ ತಜ್ಞರೊಂದಿಗೆ ಕಳುಹಿಸಿಕೊಡಬೇಕು. ಮಾರ್ಚ್‌ 31ರೊಳಗೆ ದುರಸ್ತಿಗೆ ಕ್ರಮ ಜರುಗಿಸಿ’ ಎಂದು ಸಿಇಓ ಸೂಚಿಸಿದರು.

‘ಮುದ್ದೇಬಿಹಾಳ, ಸಿಂದಗಿ ತಾಲ್ಲೂಕುಗಳಲ್ಲಿ ಪ್ರತಿ ಬಾರಿ ನೀರಿಗೆ ಸಂಬಂಧಪಟ್ಟಂತೆ ದೂರುಗಳು ಹೆಚ್ಚು ಬರುತ್ತಿವೆ. ಈ ಕುರಿತು ಸೂಕ್ತ ಗಮನ ಹರಿಸಬೇಕು. ಹೊರ ರಾಜ್ಯಗಳಿಗೆ ಮೇವು ಸಾಗಣೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಚುನಾವಣಾ ಕರ್ತವ್ಯದ ಜತೆಗೆ ಬರ ಪರಿಸ್ಥಿತಿಯನ್ನು ಕೂಡ ಸಮರ್ಥವಾಗಿ ನಿಭಾಯಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ’ ಸೂಚನೆ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಸನ್ನ ಸೇರಿದಂತೆ ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿಗಳು, ತಹಶೀಲ್ದಾರರು, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

**

ಜನ-ಜಾನುವಾರುಗಳಿಗೆ ನೀರಿನ ಕೊರತೆಯಾಗದಂತೆ ಗಮನ ನೀಡಬೇಕು. ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆಯೂ ಎಚ್ಚರ ವಹಿಸಬೇಕು.

-ಎಂ.ಸುಂದರೇಶ ಬಾಬು, ಜಿ.ಪಂ. ಸಿಇಒ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry