ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೃತ್ತಿ ಬದುಕಿಗೆ ನಿಗದಿತ ಆದಾಯದ ಭರವಸೆ

Last Updated 27 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಇನ್ನು ಒಂದೆರಡು ದಶಕಗಳ ನಂತರ ಭಾರತದ ಸ್ಥಿತಿ ಹೇಗಿರಬಹುದು ಎಂದು ಕಲ್ಪಿಸಿಕೊಳ್ಳೋಣ... ಭಾರತದ ಸಾಮಾಜಿಕ ಸ್ಥಿತಿಯು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಂತಾಗಬಹುದು. ವೈದ್ಯಕೀಯ ಕ್ಷೇತ್ರ ಹೆಚ್ಚು ಹೆಚ್ಚು ಆಧುನಿಕಗೊಂಡು, ಮನುಷ್ಯನ ಜೀವಿತಾವಧಿ ಹೆಚ್ಚಬಹುದು. ಸಾಮಾಜಿಕ– ಆರ್ಥಿಕ ಸ್ಥಿತಿಯೂ ಬದಲಾಗಿ ಕೂಡುಕುಟುಂಬ ವ್ಯವಸ್ಥೆ ಕಡಿಮೆಯಾಗಬಹುದು. ಇವೆಲ್ಲದರ ಪರಿಣಾಮ ಹಿರಿಯ ನಾಗರಿಕರು ಹಾಗೂ ನಿವೃತ್ತ ಜೀವನ ನಡೆಸುವವರಿಗೆ ಆರ್ಥಿಕ ಸಮಸ್ಯೆ ಎದುರಾಗಿ ಜೀವನ ಸಾಗಿಸಲು ಹೆಣಗಾಡುವ ಸ್ಥಿತಿ ಬರಬಹುದು.

ನಾವು ಭಾರತೀಯರು ಮೂಲತಃ ಉಳಿತಾಯದ ಚಿಂತನೆ ಹೊಂದಿದವರು. ಹೀಗಿದ್ದರೂ, ಜೀವನದ ಮುಸ್ಸಂಜೆಯಲ್ಲಿ ನಿರಾಳವಾಗಿರಬೇಕಾದರೆ ಎಷ್ಟು ಉಳಿತಾಯ ಮಾಡಬೇಕು ಎಂದು ಈಗಲೇ ನಿರ್ಧರಿಸಲು ಯಾರಿಂದಲೂ ಸಾಧ್ಯವಾಗದು. ಪ್ರತಿಯೊಬ್ಬರೂ ಕಡ್ಡಾಯವಾಗಿ ನಿವೃತ್ತಿ ಯೋಜನೆಗಳನ್ನು ಯಾಕೆ ಮಾಡಿಕೊಳ್ಳಬೇಕು ಎಂಬುದಕ್ಕೆ ಇದು ಉತ್ತರವಾಗಿದೆ.

ಭಾರತದ ಸಂಘಟಿತ ವಲಯದ ಕಾರ್ಮಿಕರು ತಮ್ಮ ವೇತನದ ಒಂದಿಷ್ಟು ಭಾಗವನ್ನು ಕಡ್ಡಾಯವಾಗಿ ನಿವೃತ್ತಿ ಯೋಜನೆಯಲ್ಲಿ ತೊಡಗಿಸಬೇಕಾಗುತ್ತದೆ. ಪ್ರತಿ ತಿಂಗಳ ವೇತನದಿಂದ ನಿಗದಿತ ಮೊತ್ತವನ್ನು ಕಡಿತ ಮಾಡಿ, ಇಂಥ ಯೋಜನೆಯಲ್ಲಿ ತೊಡಗಿಸಲಾಗುತ್ತದೆ. ಆದರೆ, ದೇಶದ ಬಹುಪಾಲು ಜನರು ದುಡಿಯುತ್ತಿರುವುದು ಅಸಂಘಟಿತ ವಲಯದಲ್ಲಿ. ಇವರಿಗೆ ಸಾಮಾಜಿಕ ಭದ್ರತೆಯ ಯೋಜನೆ ಇಲ್ಲ. ಅವರು ತಾವೇ ಇಂತಹ ಯೋಜನೆಯೊಂದನ್ನು ಆಯ್ಕೆ ಮಾಡಿಕೊಂಡು ಹೂಡಿಕೆ ಮಾಡುವುದು ಅಗತ್ಯ. ವ್ಯಕ್ತಿಯೊಬ್ಬ ನಿವೃತ್ತಿಯ ನಂತರ ಹೆಚ್ಚು ಕಾಲ ಬಾಳದೆಯೂ ಇರಬಹುದು, ಆದರೆ ಆತನ ಅವಲಂಬಿತರಿಗಾದರೂ ಆರ್ಥಿಕ ಭದ್ರತೆ ಬೇಕಲ್ಲವೇ?

ನಿವೃತ್ತಿಯ ಬಳಿಕ ಮಾಸಾಶನ ಕೊಡುವಂತಹ ಅನೇಕ ಯೋಜನೆಗಳು ಈಗ ಲಭ್ಯ ಇವೆ. ಬ್ಯಾಂಕ್‌ಗಳು, ಮ್ಯೂಚುವಲ್‌ ಫಂಡ್‌ ಸಂಸ್ಥೆಗಳು ಹಾಗೂ ವಿಮಾ ಸಂಸ್ಥೆಗಳು, ಷೇರು ಸಂಬಂಧಿತ ಯೋಜನೆಗಳಿಂದ ಹಿಡಿದು ನಮ್ಮ ಸಾಂಪ್ರದಾಯಿಕ ಯೋಜನೆಗಳವರೆಗೆ ಹಲವು ಯೋಜನೆಗಳನ್ನು ನೀಡುತ್ತಿವೆ. ಆದರೆ ಈ ಎಲ್ಲ ಯೋಜನೆಗಳಲ್ಲಿರುವ ಒಂದು ಕೊರತೆ ಏನೆಂದರೆ– ಇವು, ಈಗಿನ ಬಡ್ಡಿ ದರದಲ್ಲಿಯೇ ಜೀವನಪರ್ಯಂತ ಪ್ರತಿ ತಿಂಗಳೂ ಒಂದು ನಿಗದಿತ ಮೊತ್ತ ಒದಗಿಸುವ ಭರವಸೆಯನ್ನು ನೀಡುವುದಿಲ್ಲ.

ವರ್ಷಕ್ಕೊಮ್ಮೆ ಆದಾಯ ಕೊಡುವಂತಹ (ವಾರ್ಷಿಕಾಶನ) ದೀರ್ಘಕಾಲೀನ ಯೋಜನೆಗಳು ಮಾತ್ರ ಜೀವಿತಾವಧಿಯವರೆಗೆ ನಿಗದಿತ ಮೊತ್ತದ ಭರವಸೆಯನ್ನು ನೀಡುತ್ತವೆ. ದೇಶದಲ್ಲಿ 2008ರಲ್ಲಿ ಆದಂತೆ ಸಾಲ ಬಿಕ್ಕಟ್ಟೇ ಬರಲಿ, ಬಡ್ಡಿ ದರ ಕನಿಷ್ಠ ಮಟ್ಟಕ್ಕೇ ಇಳಿಯಲಿ, ಈ ಯೋಜನೆಗಳು ಮಾತ್ರ ಪ್ರತಿವರ್ಷ ಹೂಡಿಕೆದಾರರಿಗೆ ನಿಗದಿತ ಮೊತ್ತವನ್ನು ಕೊಟ್ಟೇ ಕೊಡುತ್ತವೆ. ನಿಗದಿತ ಆದಾಯ ಬರುವುದು ಮಾತ್ರವಲ್ಲದೆ ಇಂತಹ ಯೋಜನೆಗಳಿಂದ ಇನ್ನೂ ಕೆಲವು ಲಾಭಗಳಿವೆ. ಹೂಡಿಕೆದಾರ ನಿಧನಹೊಂದಿದ ನಂತರ ಅವರ ಪತ್ನಿಯೂ ಅದೇ ಆದಾಯವನ್ನು ಪಡೆಯಬಹುದು ಎಂಬುದು ಪ್ರಮುಖ ಸಂಗತಿಯಾಗಿದೆ.

ಜೀವ ವಿಮಾ ಸಂಸ್ಥೆಗಳು ಹಲವು ವರ್ಷಗಳಿಂದ ಇಂತಹ ಯೋಜನೆಗಳನ್ನು ರೂಪಿಸಿ ಹೂಡಿಕೆಗೆ ಅವಕಾಶ ನೀಡುತ್ತಿವೆ. ಅಂತಹ ಕೆಲವು ಯೋಜನೆಗಳ ಧನಾತ್ಮಕ ಅಂಶಗಳೆಂದರೆ;

1. ಈಗಿರುವ ಬಡ್ಡಿ ದರದಲ್ಲೇ ನಿವೃತ್ತಿಯ ನಂತರ ಜೀವನಪರ್ಯಂತ ಆದಾಯ ಬರುತ್ತದೆ.

2. ಜೀವನಪರ್ಯಂತ ನಿಗದಿತ ಆದಾಯ ನೀಡಿ, ಹೂಡಿಕೆದಾರ ನಿಧನ ಹೊಂದಿದಾಗ ಹೂಡಿಕೆ ಮಾಡಿದ ಪೂರ್ತಿ ಹಣವನ್ನು ಅವರ ಪತ್ನಿಗೆ ನೀಡುವ ಆಯ್ಕೆಯೂ ಇದೆ.

3. ಜಂಟಿ ಆದಾಯ: ಪತಿ–ಪತ್ನಿಯರಲ್ಲಿ ಯಾರಾದರೂ ಒಬ್ಬರು ಜೀವಂತ ಇರುವವರೆಗೂ ನಿಗದಿತ ಮೊತ್ತ ಕೊಡುತ್ತಿರುವುದು. ಇಬ್ಬರೂ ನಿಧನ ಹೊಂದಿದ ಬಳಿಕ ನಾಮನಿರ್ದೇಶಿತ ವ್ಯಕ್ತಿಗೆ ಹೂಡಿಕೆಯ ಮೊತ್ತವನ್ನು ಹಿಂತಿರುಗಿಸುವ ಆಯ್ಕೆಯೂ ಇದೆ.

ಇಂತಹ ವಾರ್ಷಿಕ ಆದಾಯ ಯೋಜನೆಗಳಲ್ಲಿ, ಕೂಡಲೇ ಜಾರಿಗೆ ಬರುವ ಮತ್ತು ನಿವೃತ್ತಿಯ ನಂತರ ಜಾರಿಗೆ ಬರುವ ಎಂಬ ಎರಡು ವಿಧಗಳು ಇವೆ. ಹೂಡಿಕೆದಾರರು ತಮ್ಮ ವಯಸ್ಸಿಗೆ ಅನುಗುಣವಾಗಿ ಸೂಕ್ತವಾದುದನ್ನು ಆಯ್ಕೆ ಮಾಡಿಕೊಳ್ಳಬಹುದು. ಶೀಘ್ರ ಜಾರಿಯಾಗುವ ಯೋಜನೆಗಳಲ್ಲಿ ಹೂಡಿಕೆ ಮಾಡಿದ ಮರು ತಿಂಗಳಿನಿಂದಲೇ ಆದಾಯವನ್ನು ಪಡೆಯಲು ಆರಂಭಿಸಬಹುದು. ಕೆಲವೇ ತಿಂಗಳಲ್ಲಿ ನಿವೃತ್ತಿ ಹೊಂದಲಿರುವವರು ಈ ಯೋಜನೆ ಆಯ್ಕೆ ಮಾಡಿಕೊಳ್ಳಬಹುದು. ಎರಡನೇ ಪ್ರಕಾರದ ಯೋಜನೆಯಲ್ಲಿ ಹೂಡಿಕೆದಾರರು ನಿವೃತ್ತಿ ಹೊಂದಿದ ಬಳಿಕ ಪ್ರತಿ ವರ್ಷವೂ ನಿಗದಿತ ಮೊತ್ತ ಬರುತ್ತಿರುತ್ತದೆ.

ಈ ಎರಡನೇ ಪ್ರಕಾರದ ಯೋಜನೆಯಲ್ಲಿ ಮತ್ತೆ ಎರಡು ವಿಧಗಳಿವೆ. ಮೊದಲನೆಯದು– ದೀರ್ಘ ಅವಧಿಯವರೆಗೆ ಹೂಡಿಕೆದಾರರು ಹಣ ತುಂಬುತ್ತಲೇ ಇದ್ದು, ನಿವೃತ್ತಿಯ ನಂತರ ಅದರ ಪ್ರತಿಫಲ ಪಡೆಯಲು ಆರಂಭಿಸುತ್ತಾರೆ. ಇದರಲ್ಲಿ ನಿವೃತ್ತಿಯ ನಂತರ ಪ್ರತಿ ವರ್ಷ ಎಷ್ಟು ಹಣ ಬರಬಹುದೆಂಬ ಖಾತರಿ ಇರುವುದಿಲ್ಲ.

ಆಯಾ ಕಾಲದ ಬಡ್ಡಿ ದರಕ್ಕೆ ಅನುಗುಣವಾಗಿ ಆದಾಯ ಬರುತ್ತಿರುತ್ತದೆ. ಎರಡನೆಯ ವಿಧದ ಯೋಜನೆಯಲ್ಲಿ ನಿವೃತ್ತಿಯ ನಂತರ ಯಾವ ಪ್ರಮಾಣದಲ್ಲಿ ಹಣ ಬರುತ್ತದೆ ಎಂಬುದು ಹೂಡಿಕೆ ಮಾಡುವಾಗಲೇ ಗೊತ್ತಿರುತ್ತದೆ. ನಿವೃತ್ತಿಯ ನಂತರವೂ ಜೀವನ ಸುಗಮವಾಗಬೇಕಾದರೆ, ಒಂದು ನಿಗದಿತ ಆದಾಯದ ಭರವಸೆ ಇರುವುದು ಅಗತ್ಯ. ತಂತ್ರಜ್ಞಾನದ ಕ್ರಾಂತಿಯ ಪರಿಣಾಮ ಜನರು ಬೇರೆಬೇರೆ ಯೋಜನೆಗಳ ತುಲನೆ ಮಾಡಿ, ತಮಗೆ ಯಾವ ಯೋಜನೆ ಸೂಕ್ತ ಎಂಬುದನ್ನು ತಾವೇ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ತಮಗಲ್ಲದಿದ್ದರೂ, ಅವಲಂಬಿತರಿಗಾಗಿಯಾದರೂ ಜನರು ಇಂತಹ ಯೋಜನೆಯಲ್ಲಿ ಹಣ ತೊಡಗಿಸುವುದು ಅಗತ್ಯ.

(ಎಚ್‌ಡಿಎಫ್‌ಸಿ ಲೈಫ್‌ನ ಉತ್ಪನ್ನ ವಿಭಾಗದ ಉಪಾಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT