ಬಡ್ತಿ ನಿರೀಕ್ಷೆಯಲ್ಲಿ ‘ಕಾನ್‌ಸ್ಟೆಬಲ್‌ ಸರೋಜಾ’

7

ಬಡ್ತಿ ನಿರೀಕ್ಷೆಯಲ್ಲಿ ‘ಕಾನ್‌ಸ್ಟೆಬಲ್‌ ಸರೋಜಾ’

Published:
Updated:
ಬಡ್ತಿ ನಿರೀಕ್ಷೆಯಲ್ಲಿ ‘ಕಾನ್‌ಸ್ಟೆಬಲ್‌ ಸರೋಜಾ’

ನೀಳಕಾಯದ ಸುಂದರ ನಗೆಯ ಈ ಹುಡುಗಿಯ ಹೆಸರು ತ್ರಿವೇಣಿ ರಾವ್‌. ಹುಟ್ಟಿ ಬೆಳೆದಿದ್ದೆಲ್ಲ ಬೆಂಗಳೂರಿನಲ್ಲಿಯೇ. ಬಿ.ಕಾಂ. ಮುಗಿಸಿ ಅವರು ಜಿಗಿದಿದ್ದು ಮಾಡೆಲಿಂಗ್‌ ಲೋಕದ ಕಡೆಗೆ. ತನ್ನ ದೇಹಾಕಾರದ ಬಗ್ಗೆ ಇದ್ದ ಪ್ರೀತಿಯೇ ಅವರಲ್ಲಿ ರೂಪದರ್ಶಿಯಾಗುವ ಅಭಿಲಾಷೆ ಮೊಳೆಸಿದ್ದು. 2016ರಲ್ಲಿ ‘ಮಿಸ್‌ ಆಂಧ್ರಪ್ರದೇಶ’ ಕಿರೀಟವನ್ನೂ ಮುಡಿಗೇರಿಸಿಕೊಂಡ ತ್ರಿವೇಣಿ ಮನಸ್ಸು ಮಾತ್ರ ಸಿನಿಮಾ ಧ್ಯಾನದಲ್ಲಿ ತನ್ಮಯವಾಗಿತ್ತು. ಅವರು ಬಣ್ಣದ ಲೋಕಕ್ಕೆ ಅಡಿಯಿಟ್ಟಿದ್ದು ‘ಚಕ್ರವರ್ತಿ’ ಸಿನಿಮಾ ಮೂಲಕ. ಈ ನಡುವೆ ಹಲವಾರು ಫ್ಯಾಷನ್‌ ಷೋಗಳಲ್ಲಿ ರ‍್ಯಾಂಪ್‌ ಮೇಲೆ ದಿಟ್ಟವಾಗಿ ನಡೆಯುವುದನ್ನು ರೂಢಿಸಿಕೊಂಡಿದ್ದರು.

ಊಹೂಂ... ಇದ್ಯಾವುದೂ ಈ ಹುಡುಗಿಯ ಸರಿಯಾದ ಗುರುತಾಗಲಾರದು. ಕಾನ್‌ಸ್ಟೆಬಲ್‌ ಸರೋಜಾ! ಹೀಗೆಂದರೆ ಸಾಕು ಎಲ್ಲರೂ ಒಮ್ಮೆ ತಿರುಗಿ ನೋಡುತ್ತಾರೆ. ಪಡ್ಡೆ ಹೈಕಳ ಬಾಯಲ್ಲಂತೂ ‘ಓ... ಸರೋಜಾ...’ ಎಂಬ ಉದ್ಗಾರ ಗೊತ್ತಿಲ್ಲದೆಯೇ ಹೊರಡುತ್ತದೆ. ‘ಟಗರು’ ಚಿತ್ರದ ಸಣ್ಣ ಪಾತ್ರವೊಂದು ತನಗೆ ಈ ಮಟ್ಟದ ಜನಪ್ರಿಯತೆಯನ್ನು ತಂದುಕೊಡುತ್ತದೆ ಎಂದು ತ್ರಿವೇಣಿ ರಾವ್‌ ಕನಸು ಮನಸಿನಲ್ಲಿಯೂ ಊಹಿಸಿರಲಿಲ್ಲ. ತಮ್ಮ ಹಿಂದಿನ ಚಿತ್ರಗಳ ಹಾಗೆಯೇ ಹೀಗೆ ಬಂದು ಹಾಗೆ ಹೋಗುವ ಪಾತ್ರವಿದು. ಹೆಚ್ಚೆಂದರೆ ಇದರಿಂದ ಇನ್ನೊಂದು ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕರೆ ಸಾಕು ಎಂದಷ್ಟೇ ಅಂದುಕೊಂಡಿದ್ದ ಅವರಿಗೆ ಇದು ಕನಸೋ ನನಸೋ ಎಂದು ಖಾತ್ರಿಪಡಿಸಿಕೊಳ್ಳುವಷ್ಟು ಜನಪ್ರಿಯತೆ ಸಿಕ್ಕಿದೆ. ಜತೆಗೆ ಟ್ರೋಲಿಗರಿಂದ ‘ಕರ್ನಾಟಕ ಕ್ರಶ್‌’ ಎಂಬ ಬಿರುದೂ ಸಿಕ್ಕಿದೆ!

‘ನನ್ನನ್ನು ಈಗ ಯಾರೂ ತ್ರಿವೇಣಿ ಎಂದು ಗುರ್ತಿಸುತ್ತಲೇ ಇಲ್ಲ. ಎಲ್ಲರೂ ಇನ್‌ಸ್ಪೆಕ್ಟರ್‌ ಸರೋಜಾ ಎಂದೇ ಕರೆಯುತ್ತಾರೆ. ಒಬ್ಬ ಕಲಾವಿದೆಗೆ ತನ್ನ ಪಾತ್ರದ ಹೆಸರಿನಿಂದ ಗುರ್ತಿಸುವುದಕ್ಕಿಂತ ಹೆಚ್ಚಿನದು ಇನ್ನೇನು ಬೇಕು’ ಎಂದು ಜನರ ಪ್ರೀತಿಯ ಕುರಿತು ಭಾವುಕರಾಗಿಯೇ ಪ್ರತಿಕ್ರಿಯಿಸುತ್ತಾರೆ ಸರೋಜಾ ಅಲ್ಲಲ್ಲ, ತ್ರಿವೇಣಿ.

ಅಂದಹಾಗೆ ನಟನೆಯಲ್ಲಿಯೇ ಬೇರೂರುವ ಕನಸು ಕಾಣುತ್ತಿರುವ ಇವರು ಫ್ಯಾಷನ್‌ ಡಿಸೈನರ್‌ ಕೂಡ ಹೌದು. ಫ್ಯಾಷನ್‌ ಡಿಸೈನಿಂಗ್‌ ಕೋರ್ಸ್‌ ಮಾಡಿರುವ ಅವರು ತಮ್ಮ ಸೃಜನಶೀಲತೆಯನ್ನು ವಸ್ತ್ರವಿನ್ಯಾಸಕ್ಕಾಗಿಯೂ ಮೀಸಲಿಟ್ಟಿದ್ದಾರೆ.

‘ನನ್ನ ಇಷ್ಟು ವರ್ಷಗಳ ಶ್ರಮ ಸಾರ್ಥಕವಾಯ್ತು. ಇದೆಲ್ಲ ದೇವರ ಆಶೀರ್ವಾದ ಮತ್ತು ಜನರ ಪ್ರೀತಿ’ ಎಂದು ಮುಗುಳುನಗುತ್ತಾರೆ ಅವರು. ನಿಜ. ಈಗ ತ್ರಿವೇಣಿ ಅವರಿಗೆ ಅವಕಾಶದ ಬಾಗಿಲು ತೆರೆದಿದೆ. ಚಿರಂಜೀವಿ ಸರ್ಜಾ ಅವರ ಹೊಸ ಸಿನಿಮಾ ‘ರಾಜ ಮಾರ್ತಾಂಡ’ ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಅವರಿಗೆ ಸಿಕ್ಕಿದೆ.

ಕನ್ನಡವಷ್ಟೇ ಅಲ್ಲ, ಬೇರೆ ಭಾಷೆಗಳಿಂದಲೂ ಅವರಿಗೆ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಪೂರಿ ಜಗನ್ನಾಥ ನಿರ್ದೇಶನದ ‘ಮೆಹಬೂಬಾ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇನ್ನೊಂದು ತೆಲುಗು ಚಿತ್ರದಲ್ಲಿಯೂ ನಟಿಸುವ ಅವಕಾಶ ಸಿಕ್ಕಿದೆ. ‘ಯಾವ ಭಾಷೆಯಲ್ಲಿ ಒಳ್ಳೆಯ ಪಾತ್ರ ಸಿಕ್ಕರೂ ನಟಿಸುತ್ತೇನೆ. ಆದರೆ ನನ್ನ ಪ್ರೀತಿ, ಆದ್ಯತೆ ಇರುವುದು ಯಾವಾಗಲೂ ಕನ್ನಡದಲ್ಲಿಯೇ’ ಎಂದು ಸ್ಪಷ್ಟವಾಗಿಯೇ ಹೇಳುತ್ತಾರೆ ತ್ರಿವೇಣಿ.

ಮಾಡೆಲಿಂಗ್‌ ಹಿನ್ನೆಲೆಯಿಂದ ಬಂದವರಾದರೂ ಅವರಿಗೆ ನಟನೆ ಮತ್ತು ರ‍್ಯಾಂಪ್‌ವಾಕ್‌ ನಡುವಿನ ವ್ಯತ್ಯಾಸ ತಿಳಿದಿದೆ. ‘ಮಾಡೆಲಿಂಗ್‌ನಲ್ಲಿ ದೇಹಾಕಾರ ತುಂಬ ಮುಖ್ಯ. ಹಾಗೆಯೇ ಆ್ಯಟಿಟ್ಯೂಡ್‌ ಇರಬೇಕು. ಆದರೆ ನಟನೆಯಲ್ಲಿ ಅಷ್ಟೇ ಸಾಲುವುದಿಲ್ಲ. ಒಂದು ಪಾತ್ರವನ್ನು ನಮ್ಮದೇ ಬದುಕಿನಲ್ಲಿ ಘಟಿಸಿದ ಘಟನೆ ಎನ್ನುವಂತೆ ಜೀವ ತುಂಬಬೇಕಾಗುತ್ತದೆ. ಕೂತು ನೋಡುತ್ತಿರುವ ಪ್ರೇಕ್ಷಕನಿಗೂ ಅದು ತನ್ನದೇ ಬದುಕಿನ ಘಟನೆ ಅನಿಸಬೇಕು. ಅದೇ ನಟನೆ’ ಎಂದು ಅವರು ತಮ್ಮ ಅಭಿನಯ ಮೀಮಾಂಸೆಯನ್ನು ಮಂಡಿಸುತ್ತಾರೆ. ತ್ರಿವೇಣಿ ದೈವಭಕ್ತೆ. ಬಿಡುವಿದ್ದಾಗಲೆಲ್ಲ ದೇವಸ್ಥಾನಗಳಿಗೆ ಹೋಗುವುದು ಅವರ ಅಭ್ಯಾಸ. ತನಗೆ ಸಿಕ್ಕ ಯಶಸ್ಸನ್ನೂ ಅವರು ದೇವರ ಪಾದಗಳಿಗೇ ಮುಡಿಪಾಗಿಡುತ್ತಾರೆ.

ರೂಪದರ್ಶಿಯಾಗಿ ಕೆಲಸ ಮಾಡಿದ್ದರಿಂದಲೇ ಅವರಿಗೆ ತಮ್ಮ ಅಂಗಸೌಷ್ಟವ ಕಾಪಾಡಿಕೊಳ್ಳುವ ಕಲೆಯೂ ಸಹಜವಾಗಿಯೇ ಒಲಿದಿದೆ. ಅವರು ಶುದ್ಧ ಸಸ್ಯಾಹಾರಿ. ಚಾಕೋಲೆಟ್‌, ಅನ್ನ, ಸಿಹಿ ತಿನಿಸುಗಳು, ಕರಿದ ಪದಾರ್ಥಗಳು, ಐಸ್‌ಕ್ರೀಂಗಳಿಂದ ಸಾಧ್ಯವಾದಷ್ಟೂ ದೂರವಿರುತ್ತಾರೆ. ದಿನಕ್ಕೆ ಕನಿಷ್ಠ ಐದರಿಂದ ಆರು ಲೀಟರ್‌ ನೀರು ಕುಡಿಯುತ್ತಾರೆ. ಹಣ್ಣಿನ ರಸ, ಸೂಪು, ಮಜ್ಜಿಗೆ, ಎಳನೀರನ್ನು ಹೆಚ್ಚಾಗಿ ಸೇವಿಸುತ್ತಾರೆ. ಡ್ರೈ ಫ್ರೂಟ್ಸ್‌ ಸಹ ಅವರ ಮುಖ್ಯ ಮೆನುವಿನಲ್ಲಿರುತ್ತದೆ. ದಿನವೂ ಒಂದು ತಾಸು ತಪ್ಪದೇ ಯೋಗ ಮಾಡುತ್ತಾರೆ.

ಇನ್ನು ಕನಸಿನ ಪಾತ್ರದ ವಿಷಯಕ್ಕೆ ಬಂದರೂ ತ್ರಿವೇಣಿ ಅವರ ದೈವಭಕ್ತಿಯೇ ಮುಖ್ಯವಾಗಿ ಕಾಣುತ್ತದೆ. ಅವರಿಗೆ ಒಂದಲ್ಲಾ ಒಂದು ದಿನ ದೇವಿಯ ಪಾತ್ರದಲ್ಲಿ ನಟಿಸಬೇಕು ಎಂಬ ಅದಮ್ಯ ಆಸೆ ಇದೆ. ಅಷ್ಟೇ ಅಲ್ಲ, ಕಾನ್‌ಸ್ಟೆಬಲ್‌ ಪಾತ್ರದ ಮೂಲಕ ಜನಪ್ರಿಯರಾದ ಅವರಿಗೆ ನಾಯಕಿ ಪ್ರಧಾನ ಚಿತ್ರವೊಂದರಲ್ಲಿ ಇನ್‌ಸ್ಪೆಕ್ಟರ್ ಅಥವಾ ಐಪಿಎಸ್‌ ಅಧಿಕಾರಿಯಾಗಿ ನಟಿಸುವ ಕನಸೂ ಇದೆ. ‘ಕಾನ್‌ಸ್ಟೆಬಲ್‌ ಪಾತ್ರದಿಂದ ಪ್ರಮೋಶನ್‌ ಸಿಗಲಿ ಎಂದು ಕಾಯುತ್ತಿದ್ದೇನೆ’ ಎಂದು ಅವರು ನಗುತ್ತಾರೆ.

‘ನನ್ನೊಳಗಿನ ಕಲಾವಿದೆಗೆ ಸವಾಲೊಡ್ಡುವ ಪಾತ್ರಗಳಲ್ಲಿ ನಟಿಸಬೇಕು. ಅದರ ಮೂಲಕ ನಾನೂ ಬೆಳೆಯಬೇಕು’ ಎಂಬ ಕನಸೇ ಅವರನ್ನು ಬಣ್ಣದ ಬದುಕಿನ ದಾರಿಯಲ್ಲಿ ಕೈದೀವಿಗೆಯಾಗಿ ನಡೆಸುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry