ಕಾಳ್ ಹಾಕೋರು, ಬೇಬ್ಸ್, ಹಾಟಿ!

7

ಕಾಳ್ ಹಾಕೋರು, ಬೇಬ್ಸ್, ಹಾಟಿ!

Published:
Updated:
ಕಾಳ್ ಹಾಕೋರು,  ಬೇಬ್ಸ್, ಹಾಟಿ!

ಪಕ್ಕದ ಏರಿಯಾದಲ್ಲಿದ್ದ ಧನಂಜಯ್‌ ಬೆಳಿಗ್ಗೆ ಫೋನಾಯಿಸಿ, ಮಚ್ಚಾ ರೆಡಿನೇನೊ, ಇವತ್ತೂ ಬಂಕಾ ಅಥ್ವಾ ಕಾಲೇಜ್‌ಗೆ ಬರ್ತಿಯಾ ಎಂದಾಗಲೇ ಕಾಲೇಜು ನೆನಪಾಗುತ್ತಿತ್ತು. ಅವ್ನು, ಗುರು, ಸಿಸ್ಯಾ, ಮಚಿ, ಮಗಾ ಎನ್ನುತ್ತಲೇ ಫ್ರೆಂಡ್ಸ್‌ ಸರ್ಕಲ್‌ ಬೆಳೆಸಿಕೊಂಡಿದ್ದ. ಕ್ಯಾಂಪಸ್‌ನಲ್ಲಿ ಒಳ್ಳೆ ಹವಾ ಮೇಂಟೇನ್‌ ಮಾಡಿದ್ದ.

ನಮ್ದು ಸರ್ಕಾರಿ ಕಾಲೇಜು. ಆದ್ರುನೂ ಫಿಗರ್‌ಗಳೇನು ಕಮ್ಮಿ ಇರಲಿಲ್ಲ. ಹಾಗಾಗಿ ಕಾಳ್‌ಹಾಕೋರು ಬಾಳ್‌ ಮಂದಿ ಇದ್ರು. ಹಾಕೋ ಬಿಸ್ಕೆಟ್‌ಗೆ ಕೆಲವರು ನುಲಿತಿದ್ರು, ಕೆಲವರು ಗುರಾಯಿಸುತಿದ್ರು. ಇನ್ನು ಕೆಲ ಹುಡ್ಗಿರೇ ಮೇಲೆಬಿದ್ದು ಪಟಾಯ್ಸಿಕೊಂಡು ಬಿಡುತಿದ್ರು. ನಮ್ಮಂಥ ಟೂಬ್‌ಲೈಟ್‌ಗಳನ್ನು ಹೊತ್ತಿಸೋರೆ ಇರಲಿಲ್ಲ.

ಸೈಲೆಂಟ್‌ ಇದ್ದು, ಯಾವಾಗ್ಲೂ ಸ್ಟಡೀಲಿ ಮುಳುಗಿದವರಿಗೆ ಗಾಂಧಿ ಪಟ್ಟ ಕಟ್‌ ಬಿಡ್ತಿದ್ರು. ಒಂಚೂರು ದಬಾಯಿಸಿ ಮಾತಾಡೊ ದಡಿಯರಿಗೆ ಗುರು ಅಂತಿದ್ರು. ತೀರಾ ದೋಸ್ತಿ ಆಗ್ಬುಟ್ರೆ ಅಣ್ತಮ್ಮ ಸಂಬೋಧನೆಯ ಸಂಬಂಧ ಬೆಳಿತಿತ್ತು. ಈಗ ಬ್ರೋ, ಬೇಬ್ಸ್‌, ಡ್ಯೂಡ್‌, ಹಾಟಿ ಎಂಬ ಪದಗಳು ಈ ಸಾಲಿಗೆ ಸೇರಿವೆಯಂತೆ.

ಇನ್ನು ಆ ಲೆಕ್ಚರ್‌ಗಳ ಬಗ್ಗೆ ಹೇಳೋದಾದ್ರೆ, ಅವ್ರಲ್ಲಿ ಕುಯ್ಯೋರೆ ಜಾಸ್ತಿ ಇದ್ರು. ಹಿಸ್ಟ್ರಿ ಮೇಡಂ ಅಂತೂ ‘ನಾನು ಓದುವಾಗ ಹಂಗಿತ್ತು, ಹಿಂಗಿತ್ತು. ನೀವೆಲ್ಲಾ ಹಿಂಗಾಗಿ ಹೋದ್ರಿ’ ಅಂತ ಓತ್ಲಾ ಹೊಡ್ಕೊಂಡೆ ಕ್ಲಾಸು ಮುಗಿಸುತಿದ್ರು. ಸೊಷಿಯಾಲಜಿ ಮೇಷ್ಟ್ರಂತೂ ‘ದೇಶದ ಜ್ವಲಂತ ಸಮಸ್ಯೆಗಳ ಬಗ್ಗೆ ಇವತ್ತು ಡಿಸ್ಕಸ್‌ ಮಾಡೋಣ’ ಅಂತ ತಲೆ ತಿನ್ನುತ್ತಲೇ ಮೆದುಳಿಗೆ ಕೈಹಾಕುತಿದ್ರು. ಜರ್ನಲಿಸಂ ಪ್ರೊಫೆಸರ್‌ ಅದು–ಇದು ಬರ್ಕೊಂಡು ಬನ್ರಿ ಅಂತ, ತಲೆಯಲ್ಲಿ ಹುಳ ಬಿಡುತಿದ್ರು. ಇವರುಗಳ ಕಾಟ ತಡಿಲಾರ್ದೆ ಕೆಲವರು ಕಾಗೆಹಾರ್ಸಿ, ಬಂಕ್‌ ಹೊಡುದು ಸಿನಿಮಾ ನೋಡಲು ಹೋಗ್ತಿದ್ರು. ಮಧ್ಯಾಹ್ನದ ಕ್ಲಾಸ್‌ಗಳಿಗಂತೂ ಕೆಲವೊಮ್ಮೆ ಸಾಮೂಹಿಕವಾಗಿ ಜೂಟ್‌ ಹೇಳಿ ಬಿಡುತಿದ್ವಿ. ಈ ಮಿಸ್ಟರ್‌ ಪರ್ಫೆಕ್ಟ್‌ ಅನಿಸ್ಕೊಬೇಕು ಎಂಬ ಖಯಾಲಿ ಇರೊ ಬಗಲ್‌ಮೆ ದುಷ್ಮನ್‌ಗಳು ಆ ಜೂಟ್‌ಗಳ ಬಗ್ಗೆ ಪ್ರಿನ್ಸಿಪಾಲ್‌ ಬಳಿಹೋಗಿ ಬತ್ತಿ ಇಡ್ತಿದ್ರು. ಆ ಪರ್ಫೆಕ್ಟ್‌ಗಳು ಜಾಸ್ತಿ ನಕ್ರಾ ಮಾಡಿದ್ರೆ, ಕಾಲೇಜ್‌ ಬಿಟ್‌ಮೇಲೆ ಸೈಡಿಗೆ ಕರ್ಕೊಂಡು ಹೋಗಿ ನೋಡಿಕೊಳ್ತಿದ್ವಿ.

ಕಾಲೇಜ್‌ ಡೇ ಬರೋದನ್ನೆ ಕೆಲವರು ಕಾಯುತಿದ್ರು. ಅದಕ್ಕಾಗಿ ಒಂದೆರಡು ತಿಂಗಳು ಸಾಂಗ್ಸು, ಡ್ಯಾನ್ಸ್‌ ಪ್ರಾಕ್ಟೀಸ್‌ ಮಾಡಿ, ಸ್ಟೇಜ್‌ ಮೇಲೆ ಚಿಂದಿ ಉಡಾಯಿಸಿ ಬಿಡುತಿದ್ರು. ಆ ದಿನ ಈ ಟ್ರೆಡಿಷ್ನಲ್‌ ಡ್ರೆಸ್‌ನಲ್ಲಿ ಫಿಗರ್‌ಗಳನ್ನು ನೋಡುತಿದ್ರೆ, ಚಳಿಜ್ವರ ಹಾರಿ ಹೋಗುತಿತ್ತು. ಕಡಿಮೆ ಮಾರ್ಕ್ಸ್‌ ತೆಗಿಯೊ ಬಡ್ಡಿಮಕ್ಳು ಸ್ಪೋರ್ಟ್‌, ಎನ್‌ಎಸ್‌ಎಸ್‌, ಎನ್‌ಸಿಸಿಯಲ್ಲಿ ಮುಂದಿರುತಿದ್ರು. ಎನ್‌ಎಸ್‌ಎಸ್‌ ಕ್ಯಾಂಪ್‌ನಲ್ಲಿ ಕೆಲವರು ಮೈಮುರುದು ಕೆಲಸ ಮಾಡದಿದ್ರು, ಊಟ ಮಾತ್ರ ಚೆನ್ನಾಗಿ ವಾಂಚ್‌ತಿದ್ರು. ಆದ್ರೂ ಆ ಮೇಷ್ಟ್ರುಗಳು ಬಕಿಟ್‌ ಹಿಡಿಯೋರಿಗೇನೆ ‘ಉತ್ತಮ ವಿದ್ಯಾರ್ಥಿ’ ‘ಎನ್‌ಎಸ್‌ಎಸ್‌: ಉತ್ತಮ ಶಿಬಿರಾರ್ಥಿ’ ಎಂಬ ಪಟ್ಟ ಕಟ್ಟುತ್ತಿದ್ರು. ಇದು ಅನೌನ್ಸ್‌ ಆದಾಗ ಮಾತ್ರ ಜಾಸ್ತಿ ಜನಕ್ಕೆ ಸ್ಟಮಕ್‌ ಬರ್ನಿಂಗ್ ಆಗಿದ್ದಂತೂ ಸುಳ್ಳಲ್ಲ.

ಕ್ರಿಕೆಟ್‌ನಲ್ಲಿ ನಾನ್‌ ಮೊದ್ಲೆ ವೀಕು. ಸ್ಲೋವಾಗಿ ಬೆಲ್ಲದಂಥ ಬಾಲ್‌ ಬಂದ್ರೂ ಮಿಸ್‌ ಮಾಡ್ತಿದ್ದೆ. ಆಗ ಕ್ಯಾಪ್ಟನ್ ಮುನಿರಾಜ, ‘ಆ ಲೊಡ್ಡೆನಾ ಕಳಿಸಿದ್ರೆ, ಇಸ್ಟೊತ್ಗೆ ಪಿಚ್‌ಗೆ ಕಚ್ಕಂಡ್‌ ಬಿಟ್ಟು, ವಿನ್‌ ಮಾಡಿಸ್ತಿದ್ದ’ ಅಂತ ಹೀಯಾಳಿಸುತ್ತಿದ್ದ. ಮ್ಯಾಚ್‌ ಆಡೋವಾಗ ಕೆಲವೊಮ್ಮೆ ಡೀಲು ಮಾಡಿಕೊಂಡು ಬೇಕಂತಲೇ ಸೋಲ್‌ತಿದ್ವಿ. ಈ ಡೀಲ್‌ಗಳಲ್ಲಿ ಕ್ಲಾಸ್‌ಮೇಟ್‌ ರಾಘವೇಂದ್ರ ಎತ್ತಿದ ಕೈ.

ಟ್ರಿಪ್‌ಗೆ ಅಂತ ದುಡ್ಡು ಕಲೆಕ್ಟ್‌ ಮಾಡಿ, ಡಕೋಟಾ ಬಸ್ಸಲ್ಲಿ ಊರುಗಳನ್ನು ಸುತ್ತಿಸಿದ್ದ. ದುಡ್ಡಿನ ಲೆಕ್ಕನೇ ಕೊಡ್ದೆ ಟೋಪಿ ಹಾಕಿಬಿಟ್ಟಿದ್ದ. ಇಂಥ ಕೆಲಸಗಳಿಂದಾಗಿನೇ ಅವನ ಮುಖದ ಮೇಲೆ ಒಂದು ಕುರ್ಪು ಬಿದ್ದಿತ್ತು. ಅದನ್ನು ಅವ ಕಾಂಜಿಪಿಂಜಿ ಪ್ರಕರಣವೆಂದು ಭಾವಿಸಿದ್ದ.

ಕಾಲೇಜ್‌ ಪಕ್ಕದ ದೇವಸ್ಥಾನ ಸೀನಿಯರ್‌ಗಳ ಅಡ್ಡ ಆಗಿತ್ತು. ಅಲ್ಲಿ ಜೂನಿಯರ್‌ಗಳು ನಿಂತು ಹಿರಿಯರು ರೀಲ್‌ ಬಿಡೋದನ್ನ ಕೇಳಿಸಿಕೊಳ್ಳುತ್ತಿದ್ರೆ, ‘ಇಲ್ಲಿಂದ ಕಳಚ್ಕೊ’ ಅಂತ ಧಮ್ಕಿ ಹಾಕುತಿದ್ರು. ಇಲ್ಲಿ ಮಾತಿಗೆ ಮಾತು ಬೆಳೆದಾಗ, ಮನೆಯಲ್ಲಿ ಹೇಳಿ ಬಂದಿದಿಯಾ, ಗುಬಾಲ್ಡ್, ಗುಲ್ಡು, ಹೆಂಗೈತೆ ಮೈಗೆ, ಮೀಟ್ರು ಇದೆಯಾ, ಬೀಳ್‌ತಾವೀಗ ಗೂಸಾ ಎಂಬ ವಾಕ್ಬಾಣಗಳು ಹೊರಬರುತ್ತಿದ್ದವು.

ಇಂಥ ಪದಗಳನ್ನು ಕೇಳಿಸಿಕೊಳ್ಳುತ್ತ ವಿದ್ಯಾರ್ಥಿ ಜೀವನ ಸವೆಸಿದ ನಾನು, ಈಗ ಕೆಲಸಕ್ಕೆ ಸೇರಿದ್ದೇನೆ. ಈ ಸ್ಲ್ಯಾಂಗ್ವೇಜು ಪದಗಳನ್ನು ಆಡುವುದು, ಆಲಿಸುವಿಕೆಯಿಂದ ವಂಚಿತನಾಗಿದ್ದಕ್ಕೆ ಸ್ವಲ್ಪ ಖೇದವಿದೆ. ‘ಇಂತಹ ಅಶಿಷ್ಟ ಪದಗಳನ್ನು ಶಿಷ್ಟ ಬರವಣಿಗೆಯಲ್ಲಿ ಸಾಮಾನ್ಯವಾಗಿ ಬಳಸುತ್ತಿಲ್ಲ. ಹಾಗಾಗಿ ಭಾಷೆಗೆ ಹಾನಿ ಆಗಲ್ಲ’ ಎಂದು ನಿಘಂಟು ತಜ್ಞ ಜಿ.ವೆಂಕಟಸುಬ್ಬಯ್ಯ ಅಜ್ಜನವರೇ ಸರ್ಟಿಫಿಕೇಟು ಕೊಟ್ಟಿದ್ದಾರೆ. ಹಾಗಂತ ನೀವು ಚಲ್ಲು–ಚಲ್ಲು ಪದಗಳನ್ನು ಬಳಸಿ ಅಪಾಯಕ್ಕೆ ಆಹ್ವಾನ ನೀಡಬೇಡಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry