ಐಡಿಎಲ್‌ ಇನ್ನು ‘ಸ್ಮಾರ್ಟ್‌ಕಾರ್ಡ್‌’

7
ಪಾಸ್‌ಪೋರ್ಟ್‌ ಮಾದರಿ ಕಿರುಹೊತ್ತಿಗೆಗೆ ವಿದಾಯ ಹೇಳಲಿರುವ ಇಲಾಖೆ

ಐಡಿಎಲ್‌ ಇನ್ನು ‘ಸ್ಮಾರ್ಟ್‌ಕಾರ್ಡ್‌’

Published:
Updated:
ಐಡಿಎಲ್‌ ಇನ್ನು ‘ಸ್ಮಾರ್ಟ್‌ಕಾರ್ಡ್‌’

ಬೆಂಗಳೂರು: ಅಂತರರಾಷ್ಟ್ರೀಯ ಚಾಲನಾ ಪರವಾನಗಿ (ಐಡಿಎಲ್‌) ಖಚಿತಪಡಿಸಲು ನೀಡಲಾಗುತ್ತಿದ್ದ ಕಿರುಹೊತ್ತಿಗೆಗೆ ವಿದಾಯ ಹೇಳಲಿರುವ ಸಾರಿಗೆ ಇಲಾಖೆ, ಅದರ ಬದಲಾಗಿ ಸ್ಮಾರ್ಟ್‌ಕಾರ್ಡ್‌ ನೀಡಲು ತೀರ್ಮಾನಿಸಿದೆ.

ಪ್ರವಾಸ, ವಿದ್ಯಾಭ್ಯಾಸ ಹಾಗೂ ವ್ಯಾಪಾರ ಉದ್ದೇಶಕ್ಕಾಗಿ ರಾಜ್ಯದಿಂದ ವಿದೇಶಕ್ಕೆ ಹೋಗುವವರಿಗೆ ಇಲಾಖೆಯು ಐಡಿಎಲ್‌ ವಿತರಣೆ ಮಾಡುತ್ತಿದೆ. ಇದುವರೆಗೆ ಐಡಿಎಲ್‌ ಪಾಸ್‌ಪೋರ್ಟ್‌ ಮಾದರಿಯ ಕಿರುಪುಸ್ತಕದ ರೂಪದಲ್ಲಿತ್ತು. ಅದರ ಗಾತ್ರ ತುಸು ದೊಡ್ಡದಿದ್ದುದರಿಂದ ಅದನ್ನು ಒಯ್ಯುವುದು ಕಷ್ಟವಾಗುತ್ತಿತ್ತು.

ಸಮಸ್ಯೆಯನ್ನು ಕೆಲವರು ಸಾರಿಗೆ ಇಲಾಖೆಯ ಗಮನಕ್ಕೆ ತಂದಿದ್ದರು. ಕಿರುಪುಸ್ತಕ ನೀಡುವ ಬದಲಾಗಿ ಸ್ಮಾರ್ಟ್‌ಕಾರ್ಡ್‌ ನೀಡುವ ಸಂಬಂಧ ಪ್ರಸ್ತಾವ ಸಿದ್ಧಪಡಿಸಿದ್ದ ಅಧಿಕಾರಿಗಳು, ಇಲಾಖೆ ಕಾರ್ಯದರ್ಶಿಗೆ ಸಲ್ಲಿಸಿದ್ದರು. ಈ ಪ್ರಸ್ತಾವಕ್ಕೆ ಈಗ ಒಪ್ಪಿಗೆ ಸಿಕ್ಕಿದೆ. ಅರ್ಹರಿಗೆ ಸ್ಮಾರ್ಟ್‌ಕಾರ್ಡ್‌ ವಿತರಿಸುವ ಪ್ರಕ್ರಿಯೆ ಸದ್ಯದಲ್ಲೇ ಆರಂಭವಾಗಲಿದೆ.

‘ಮಾರ್ಚ್‌ ಅಂತ್ಯದೊಳಗೆ ಕಾರ್ಡ್‌ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಿದ್ದೆವು. ಆದರೆ, ಚುನಾವಣಾ ನೀತಿ ಸಂಹಿತೆ ಜಾರಿ ಆಗಿದೆ. ಆಯೋಗದ ಅಧಿಕಾರಿಗಳ ಅನುಮತಿ ಪಡೆದು ಕಾರ್ಡ್‌ ಬಿಡುಗಡೆ ಮಾಡಲು ಪ್ರಯತ್ನಿಸುತ್ತಿದ್ದೇವೆ’ ಎಂದು ಸಾರಿಗೆ ಇಲಾಖೆಯ ಆಯುಕ್ತ ಬಿ.ದಯಾನಂದ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇಲಾಖೆಯ ಪ್ರತಿಯೊಂದು ಪ್ರಕ್ರಿಯೆಯನ್ನು ಡಿಜಿಟಲೀಕರಣಗೊಳಿಸುತ್ತಿದ್ದೇವೆ. ವಿದೇಶಗಳಿಗೆ ಸಂಚರಿಸುವ ಸಾರ್ವಜನಿಕರು, ಅಲ್ಲಿ ವಾಹನಗಳನ್ನು ಓಡಿಸಬೇಕಾದರೆ ಐಡಿಎಲ್‌ ಪಡೆಯಲೇಬೇಕು. ಅಂಥ ವ್ಯಕ್ತಿಗಳು, ಪುಸ್ತಕ ರೂಪದ ಐಡಿಎಲ್‌ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇಲಾಖೆಯಿಂದ ಈಗಾಗಲೇ ಚಾಲನಾ ಪರವಾನಗಿ (ಡಿಎಲ್‌) ಹಾಗೂ ವಾಹನ ನೋಂದಣಿ (ಆರ್‌.ಸಿ) ಖಾತ್ರಿಪಡಿಸುವ ಸ್ಮಾರ್ಟ್‌

ಕಾರ್ಡ್‌ಗಳನ್ನು ವಿತರಣೆ ಮಾಡುತ್ತಿದ್ದೇವೆ. ಅದೇ ಮಾದರಿಯಲ್ಲೇ ಐಡಿಎಲ್‌ಗೂ ಸ್ಮಾರ್ಟ್‌ಕಾರ್ಡ್‌ ವಿತರಿಸಲು ನಿರ್ಧರಿಸಿದ್ದೇವೆ’ ಎಂದರು.

ಒಂದು ವರ್ಷ ವಾಯಿದೆ: ರಾಜ್ಯದ ಯಾವುದಾದರೊಂದು ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ವಾಹನ ಕಲಿಕಾ ಪರವಾನಗಿ ಪಡೆದು, ನಂತರ ಪರೀಕ್ಷೆಗೆ ಹಾಜರಾಗಿ ಚಾಲನಾ ಪರವಾನಗಿ ಪಡೆದವರಿಗಷ್ಟೇ ಐಡಿಎಲ್‌ ನೀಡಲಾಗುತ್ತದೆ. ಪಾಸ್‌ಪೋರ್ಟ್‌ ಹಾಗೂ ವೀಸಾ ಕೂಡ ಇದಕ್ಕೆ ಅಗತ್ಯ. ಅದನ್ನೆಲ್ಲ ಪರಿಶೀಲನೆ ಮಾಡಿಯೇ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು (ಆರ್‌ಟಿಒ) ಐಡಿಎಲ್‌ ಮಂಜೂರು ಮಾಡುತ್ತಾರೆ.

‘ವಿದೇಶದಲ್ಲೇ ನೆಲೆಸುವವರು, ಅಲ್ಲಿಯ ಶಾಶ್ವತ ಡಿಎಲ್‌ ಪಡೆಯಲು ಅರ್ಜಿ ಸಲ್ಲಿಸುವ ವೇಳೆ ನಮ್ಮ ಐಡಿಎಲ್‌ ಸಲ್ಲಿಕೆ ಮಾಡುತ್ತಾರೆ. ಅದರಿಂದ ಬೇಗನೇ ಅವರಿಗೆ ಶಾಶ್ವತ ಡಿಎಲ್‌ ಲಭಿಸುತ್ತದೆ’ ಎಂದರು.

‘ಸದ್ಯ ಐಡಿಎಲ್‌ ಮಂಜೂರಾತಿಗೆ ₹1,000 ಶುಲ್ಕ ಪಡೆಯುತ್ತಿದ್ದೇವೆ. ಸ್ಮಾರ್ಟ್‌ಕಾರ್ಡ್‌ಗೆ ಪ್ರತ್ಯೇಕ ಶುಲ್ಕವನ್ನು ನಿಗದಿಪಡಿಸಿಲ್ಲ. ಮುಂದಿನ ದಿನಗಳಲ್ಲಿ ಅವುಗಳ ಬೇಡಿಕೆ ನೋಡಿಕೊಂಡು ಶುಲ್ಕ ಹೆಚ್ಚಿಸುವ ಬಗ್ಗೆ ತೀರ್ಮಾನಿಸಲಿದ್ದೇವೆ’ ಎಂದರು.

ನಕಲು ತಡೆಗೆ ಅನುಕೂಲ: ‘ಪುಸ್ತಕ ರೂಪದಲ್ಲಿದ್ದ ಐಡಿಎಲ್‌ ಮಾಹಿತಿಯನ್ನು ಕೆಲವರು ನಕಲು ಮಾಡುತ್ತಿದ್ದರು. ಯಶವಂತಪುರ ಹಾಗೂ ಜಯನಗರ ಕಚೇರಿ ವ್ಯಾಪ್ತಿಯಲ್ಲಿ ಇಂಥ ಪ್ರಕರಣಗಳು ಪತ್ತೆಯಾಗಿದ್ದವು. ಇನ್ನು ಸ್ಮಾರ್ಟ್‌ಕಾರ್ಡ್‌ ಬರುವುದರಿಂದ, ಅಕ್ರಮಗಳಿಗೆ ಆಸ್ಪದ

ವಿರುವುದಿಲ್ಲ’ ಎಂದು ಆರ್‌ಟಿಒ ಹೇಳಿದರು.

‘ಸುರಕ್ಷಿತ ತಂತ್ರಜ್ಞಾನಗಳನ್ನು ಈ ಕಾರ್ಡ್‌ನಲ್ಲಿ ಅಳವಡಿಸಿದ್ದೇವೆ. ಇದನ್ನು ನಕಲು ಮಾಡುವುದು ಅಷ್ಟು ಸುಲಭವಲ್ಲ. ಗುಜರಾತ್‌ನಲ್ಲಿ ಈಗಾಗಲೇ ಇಂಥ ಸ್ಮಾರ್ಟ್‌ಕಾರ್ಡ್‌ಗಳನ್ನು ವಿತರಿಸಲಾಗುತ್ತಿದೆ. ಅದೇ ಮಾದರಿಯಲ್ಲೇ ನಮ್ಮಲ್ಲೂ ಕಾರ್ಡ್‌ಗಳು ಇರಲಿವೆ. ಕಾರ್ಡ್‌ದಾರರು ಬಯಸಿದರೆ ಪುಸ್ತಕವನ್ನು ಅದರ ಜತೆಗೆ ನೀಡಲಿದ್ದೇವೆ’ ಎಂದರು.

ರಾಜ್ಯದ ಅಂಕಿ– ಅಂಶ

5,000 -2017ರಲ್ಲಿ ಐಡಿಎಲ್‌ ಪಡೆದವರ ಸಂಖ್ಯೆ

3,000 -2018ರ ಫೆಬ್ರುವರಿವರೆಗೆ ಐಡಿಎಲ್‌ಗೆ ಅರ್ಜಿ ಸಲ್ಲಿಸಿದವರ ಸಂಖ್ಯೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry