ವಿದೇಶದಲ್ಲಿ ಕನ್ನಡದ ‘ವಾಣಿ’

7

ವಿದೇಶದಲ್ಲಿ ಕನ್ನಡದ ‘ವಾಣಿ’

Published:
Updated:
ವಿದೇಶದಲ್ಲಿ ಕನ್ನಡದ ‘ವಾಣಿ’

ಸಣ್ಣವಳಿದ್ದಾಗ ಸಂಗೀತದಲ್ಲಿ ನನಗೆ ಆಸಕ್ತಿ ಇರಲಿಲ್ಲ. ಆದರೆ ಅಪ್ಪ, ಅಮ್ಮ, ಅಣ್ಣ ಎಲ್ಲರೂ ಹಾಡುಗಾರರು. ಬೇಡ ಎಂದರೂ ಸ್ವರಗಳು ನನ್ನ ಕಿವಿಗೆ ಬೀಳುತ್ತಿದ್ದವು. ಒಂದು ದಿನ ನನಗೂ ಸಂಗೀತ ಪಾಠ ಪ್ರಾರಂಭವಾಯಿತು. ಅಣ್ಣನೇ ನನ್ನ ಗುರುವಾದ. ಹೀಗೆ ಸಂಗೀತದಲ್ಲಿ ಆಸಕ್ತಿ ಇಲ್ಲದ ನಾನು ಸ್ವರಗಳನ್ನು ಹಾಡಲು ಶುರುಮಾಡಿದೆ. ಈ ಅಭ್ಯಾಸದಲ್ಲಿ ಯಾವಾಗ ನನ್ನನ್ನು ಸ್ವರಗಳು ಆವರಿಸಿದವೋ ಗೊತ್ತಿಲ್ಲ. ಇಂದು ಆ ಸಂಗೀತವೇ ನನ್ನ ಜೀವವಾಗಿದೆ.

ನಾಲ್ಕು ಜನರ ಮುಂದೆ ಹಾಡಿದಾಗ, ನನ್ನ ಹಾಡಿನ ಬಗೆಗೆ ಅವರ ಮೆಚ್ಚುಗೆಯ ಮಾತುಗಳು ನನ್ನಲ್ಲಿ ಪ್ರೋತ್ಸಾಹ ಮತ್ತು ಧೈರ್ಯ ಎರಡನ್ನೂ ತುಂಬಿತು.  ನಾನು ಪಿಯುಸಿಯಲ್ಲಿ ಇದ್ದಾಗ, ಸಂಗೀತ ನಿರ್ದೇಶಕರೊಬ್ಬರು ಸಿನಿಮಾದಲ್ಲಿ ಹಾಡಲು ಆಹ್ವಾನಿಸಿದ್ದರು. ಆದರೆ, ಆಗ ವಿಜ್ಞಾನ ವಿಷಯ ತೆಗೆದುಕೊಂಡಿದ್ದರಿಂದ ಆ ಅವಕಾಶವನ್ನು ನಿರಾಕರಿಸಿದ್ದೆ. ಆದರೆ, ಸಿನಿಮಾದಲ್ಲಿ ಹಾಡುವಷ್ಟು ನನ್ನ ಕಂಠ ಚೆನ್ನಾಗಿದೆ ಎನ್ನುವ ಅಂಶ ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಿಸಿತ್ತು.

ಓದು ಮುಗಿದ ಮೇಲೆ ಮದುವೆಯಾಗಿ ಲಂಡನ್‌ಗೆ ಹೋದೆ. ಆಗಲೂ ನನ್ನೊಳಗಿದ್ದ ಸಂಗೀತದ ತುಡಿತ ಸದಾ ಜಾಗೃತವಾಗಿತ್ತು. ಲಂಡನ್‌ನಲ್ಲಿ ಕೆಲವು ಕಾರ್ಯಕ್ರಮಗಳಿಗೆ ಹಾಡಿದೆ. ಮೆಚ್ಚುಗೆಯ ಮಾತುಗಳು ಹುರಿದುಂಬಿಸಿದವು. ನನ್ನ ಹಾಡನ್ನು ಕೇಳಿ, ಅಲ್ಲಿನ ಮೇಯರ್‌ ಸಹ ಹೊಗಳಿಕೆಯ ಮಾತಾಡಿದರು.

ನಂತರ ನಾವು ಅಮೆರಿಕಕ್ಕೆ ಬಂದೆವು. ಅಲ್ಲಿಯೂ ನನ್ನ ಸಂಗೀತದ ಒಲವು ಮುಂದುವರೆಯಿತು. ಕೆಲವು ಚಾರಿಟೆಬಲ್‌ ಟ್ರಸ್ಟ್‌ಗಳು ಆಯೋಜಿಸುವ ಕಾರ್ಯಕ್ರಮಗಳಲ್ಲೂ ಹಾಡುತ್ತಿರುತ್ತೇನೆ. ನನ್ನಿಂದ ಹಲವು ಮಕ್ಕಳಿಗೆ ಸಹಾಯವಾಗುತ್ತದೆ ಎನ್ನುವುದೇ ನನಗೆ ತೃಪ್ತಿ.

‘ಕಾರಂಜಿ ಫೋಕ್ ಪ್ರೊಡಕ್ಷನ್’ ಎಂಬ ತಂಡ ಕಟ್ಟಿಕೊಂಡು ಅಮೆರಿಕದಾದ್ಯಂತ ಕಾರ್ಯಕ್ರಮಗಳನ್ನು ನೀಡುತ್ತಿದ್ದೇವೆ. ತಂಡದಲ್ಲಿ ನಾನು ಮುಖ್ಯಗಾಯಕಿ. ನಮ್ಮ ತಂಡದ ಸಂಗೀತ ಸಂಯೋಜನೆಯ ಹಲವಾರು ಹಾಡುಗಳು ಹೊರಬಂದಿವೆ. ನಾನೇ ನಟಿಸಿ ಹಾಡಿರುವ ‘ನಾ ಕಂಡ ಕನಸು‘ ಎಂಬ ಹಾಡನ್ನು ಫೆ.14ರಂದು ಬಿಡುಗಡೆ ಮಾಡಿದ್ದೆವು. ಅದು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಜತೆಗೆ ‘ಗುರು ಬೃಂದಾವನ’ ಮೊದಲಾದ ಧ್ವನಿಸುರುಳಿಗಳಲ್ಲಿಯೂ ಹಾಡಿದ್ದೇನೆ.

ಪ್ರಸ್ತುತ, ಒಂದು ಹೊಸ ಪ್ರಯೋಗದಲ್ಲಿ ತೊಡಗಿದ್ದೇನೆ. ಅದು ‘ಗುರು ವಂದನೆ’. ‘ಗುರುಬ್ರಹ್ಮ...’ ಎನ್ನುವ ಶ್ಲೋಕವನ್ನು ಇಟ್ಟುಕೊಂಡು ವಿಶಿಷ್ಟವಾಗಿ ರಾಗ ಸಂಯೋಜನೆ ಮಾಡಿದ್ದೇನೆ. ಸದ್ಯದಲ್ಲೇ ಅದು ಬಿಡುಗಡೆಯಾಗಲಿದೆ. ‘ಕುಂಬಾರಣ್ಣ ಡಿಜಿಟಲ್‌’ ಎನ್ನುವ ಹಾಡಿಗಾಗಿ ಖ್ಯಾತ ಸಂಗೀತ ನಿರ್ದೇಶಕ ಮನೋಮೂರ್ತಿ ಅವರೊಂದಿಗೂ ಕೆಲಸ ಮಾಡಿದ್ದೇನೆ. ಅವರ ನಿರ್ದೇಶನದ ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯವಾಗಿದೆ. ಅವರಿಂದ ಬಹಳ ಕಲಿತಿದ್ದೇನೆ.

ಖ್ಯಾತ ಹಿನ್ನೆಲೆ ಗಾಯಕ ಶಂಕರ್‌ ಮಹದೇವನ್‌ ಅವರೊಂದಿಗೆ ಹಾಡಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟವೇ ಸರಿ. ನಾನು ಕೇವಲ ಚಿತ್ರಗೀತೆಗಳನ್ನಷ್ಟೇ ಹಾಡುವುದಿಲ್ಲ. ಭಕ್ತಿಗೀತೆ, ಜನಪದ ಗೀತೆ, ಭಾವಗೀತೆ ಎಲ್ಲವನ್ನೂ ಹಾಡುತ್ತೇನೆ.

ಸದ್ಯ ಕನ್ನಡದಲ್ಲಿ ಬರುತ್ತಿರುವ ನಾಗೇಂದ್ರ ಬಾಬು ಅವರ ನಿರ್ದೇಶನದ ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಸಿನಿಮಾದಲ್ಲಿ ‘ಸಂತಸದ ದೋಣಿ ಏರಾಯ್ತು’ ಎನ್ನುವ ಹಾಡನ್ನು ಹಾಡಿದ್ದೇನೆ. ಆಡಿಯೊ ಮುಂದಿನ ತಿಂಗಳಲ್ಲಿ ಬಿಡುಗಡೆಯಾಗಬಹುದು.

ಗಾಯಕ ವಿಜಯ ಪ್ರಕಾಶ್ ಸರ್‌ ಅವರೊಂದಿಗೆ ಹಾಡಿರುವ ಅನುಭವ ಚೆನ್ನಾಗಿತ್ತು. ಅವರಿಂದ ಬಹಳ ಕಲಿತಿದ್ದೇನೆ. ಮುಂದೆಯೂ ಅವಕಾಶ ಸಿಕ್ಕರೆ ಕನ್ನಡ ಸಿನಿಮಾಗಳಿಗೆ ಹಾಡುವಾಸೆ.

ವಿದೇಶಿ ನೆಲದಲ್ಲಿ ಕನ್ನಡ ಗೀತೆಗಳನ್ನು ಹಾಡುವುದು ಹೆಮ್ಮೆ ಅನಿಸುತ್ತದೆ. ಇಂಗ್ಲಿಷ್‌ ಭಾಷೆಯ ಹಾಡನ್ನು ಆಸ್ವಾದಿಸುವಂತೆಯೇ ನಮ್ಮ ಹಾಡನ್ನು ಅಲ್ಲಿನವರು ಆಸ್ವಾದಿಸುತ್ತಾರೆ. ‘ನಿಮ್ಮ ಹಾಡುಗಳನ್ನು ನಾವು ಮನೆಯಲ್ಲಿ ಹಾಡುತ್ತೇವೆ’ ಎಂದು ಕೆಲವರು ಹೇಳಿದಾಗ ಬಹಳ ಸಂತೋಷವಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry