ಚಿನ್ನಸ್ವಾಮಿ ಅಂಗಳದಲ್ಲಿ ‘ರನ್‌ ಹೊಳೆ’ ನಿರೀಕ್ಷೆ

6

ಚಿನ್ನಸ್ವಾಮಿ ಅಂಗಳದಲ್ಲಿ ‘ರನ್‌ ಹೊಳೆ’ ನಿರೀಕ್ಷೆ

Published:
Updated:
ಚಿನ್ನಸ್ವಾಮಿ ಅಂಗಳದಲ್ಲಿ ‘ರನ್‌ ಹೊಳೆ’ ನಿರೀಕ್ಷೆ

ಬೆಂಗಳೂರು: ಹೊನಲು ಬೆಳಕು ಚೆಲ್ಲಿದ ಅಂಗಳದಲ್ಲಿ ನಡೆಯುವ ಟ್ವೆಂಟಿ–20 ಕ್ರಿಕೆಟ್ ಪಂದ್ಯದಲ್ಲಿ ಬ್ಯಾಟ್ಸ್‌ಮನ್‌ಗಳ ಅಬ್ಬರವೇ ಪ್ರಮುಖ ಆಕರ್ಷಣೆ. ಅದರಲ್ಲೂ  ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಪಂದ್ಯಗಳಲ್ಲಿ ರನ್ ಹೊಳೆ ಹರಿದರೆ ನೋಡುಗರಿಗೆ ಹಬ್ಬ. ಅದಕ್ಕಾಗಿಯೇ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಸಿದ್ಧವಾಗಿ ನಿಂತಿದೆ.

ಇಲ್ಲಿ ಹೋದ ವರ್ಷ ನಡೆದಿದ್ದ ಪಂದ್ಯಗಳಲ್ಲಿ ಹೆಚ್ಚು ರನ್‌ಗಳು ದಾಖಲಾಗಿರಲಿಲ್ಲ. ಬ್ಯಾಟ್ಸ್‌ಮನ್‌ಗಳು ದೊಡ್ಡ ಮೊತ್ತ ಗಳಿಸಲು ಪರದಾಡಿದ್ದರು. ಪಿಚ್‌ನಲ್ಲಿ ಚೆಂಡು ನಿಧಾನವಾಗಿ ಪುಟಿಯುತ್ತಿದ್ದ ಕಾರಣ ಬ್ಯಾಟ್ಸ್‌ಮನ್‌ಗಳಿಗೆ ದೊಡ್ಡ ಹೊಡೆತಗಳನ್ನು ಆಡಲು ಸಾಧ್ಯವಾಗಿರಲಿಲ್ಲ ಎಂದು ವೀಕ್ಷಕ ವಿವರಣೆಕಾರರು ಅಭಿಪ್ರಾಯಪಟ್ಟಿದ್ದರು. ಅಲ್ಲದೇ ಆರ್‌ಸಿಬಿ ಕೂಡ ಸೋಲಿನ ಕಹಿ ಉಂಡಿದ್ದೇ ಹೆಚ್ಚು. ಇದರಿಂದಾಗಿ ಸ್ಥಳೀಯ ಅಭಿಮಾನಿಗಳು ನಿರಾಸೆಗೊಂಡಿದ್ದರು.

ಆದರೆ ಈ ಬಾರಿ ಹಾಗಾಗದಂತೆ ನೋಡಿಕೊಳ್ಳುವತ್ತ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಚಿತ್ತ ಹರಿಸಿದೆ. ಕಳೆದ ನವೆಂಬರ್‌ನಿಂದ ಇಲ್ಲಿಯವರೆಗೆ ಪಿಚ್‌ನ ಕೆಳಪದರದ ಮಣ್ಣನ್ನು ಎತ್ತರಿಸುವ ಕಾರ್ಯ ಮಾಡಿದೆ. ಇದರಿಂದ ಪಿಚ್‌ನ ಸತ್ವ ಹೆಚ್ಚಿದೆ. ಮುಖ್ಯ ಪಿಚ್ ಕ್ಯುರೇಟರ್ ಶ್ರೀರಾಮ್ ಅವರ ಮಾರ್ಗದರ್ಶನದಲ್ಲಿ ಈ ಕೆಲಸ ನಡೆದಿದೆ.  ಮಂಡ್ಯ ಮತ್ತು ಆಂಧ್ರಪ್ರದೇಶದ ಕಾಕಿನಾಡದಿಂದ ತರಿಸಿದ್ದ ಮಣ್ಣನ್ನು ಬಳಸಲಾಗಿದೆ. ಔಟ್‌ಫೀಲ್ಡ್‌ನ ಹುಲ್ಲುಹಾಸನ್ನೂ ನವೀಕರಿಸಲಾಗಿದೆ.

‘ಬಹಳ ವರ್ಷಗಳಿಂದ ಇಲ್ಲಿ ಪಂದ್ಯಗಳು ನಡೆಯುತ್ತಿವೆ. ಆದ್ದರಿಂದ ಪಿಚ್‌ನಲ್ಲಿ ಚೆಂಡು ತುಸು ನಿಧಾನವಾಗಿ ಪುಟಿಯುತ್ತಿತ್ತು. ಅದಕ್ಕಾಗಿ ಈ ಬಾರಿ ಹೊಸ ಹೊದಿಕೆ ಹಾಕಲಾಗಿದೆ. ತೇವಾಂಶ ಹಿಡಿದುಕೊಂಡು ಸತ್ವಯುತವಾಗಿರುವ ಮಣ್ಣನ್ನು ಹಾಕಲಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್‌ಗೆ ಸ್ಪರ್ಧಾತ್ಮಕ ಎಂಬ ಹೆಗ್ಗಳಿಕೆ ಇದೆ. ಆ ಘನತೆಯನ್ನು ಕಾಪಾಡಿಕೊಳ್ಳಲು ಪಿಚ್‌ನ ಶ್ರೇಷ್ಠತೆಯನ್ನು ಹೆಚ್ಚಿಸಲಾಗಿದೆ. ಔಟ್‌ಫೀಲ್ಡ್‌ಗೆ ಬರ್ಮುಡಾ ಗ್ರಾಸ್‌ ಹಾಕಲಾಗಿದೆ’ ಎಂದು ಸಂಸ್ಥೆಯ ಕಾರ್ಯದರ್ಶಿ ಸುಧಾಕರ್ ರಾವ್ ’ಪ್ರಜಾವಾಣಿ’ಗೆ ಹೇಳಿದರು.

ಹೋದ ವರ್ಷ ಇಲ್ಲಿ ಆಡಿದ್ದ ಯಾವುದೇ ತಂಡದ ಮೊತ್ತವು 200ರ ಗಡಿ ದಾಟಿರಲಿಲ್ಲ. ನಾಲ್ಕು ಸಲ ಮಾತ್ರ 150ಕ್ಕೂ ಹೆಚ್ಚು ರನ್‌ಗಳು ದಾಖಲಾಗಿದ್ದವು.  ಆದರೆ 2016ರ ಟೂರ್ನಿಯಲ್ಲಿ ಇಲ್ಲಿ ನಡೆದಿದ್ದ ಒಂಬತ್ತು ಪಂದ್ಯಗಳಲ್ಲಿಯೂ 150ಕ್ಕಿಂತ ಹೆಚ್ಚಿನ ಮೊತ್ತ ದಾಖಲಾಗಿತ್ತು.

ಐಪಿಎಲ್‌ ಪಂದ್ಯಗಳಿಗಾಗಿ ಒಟ್ಟು ಮೂರು ಪಿಚ್‌ಗಳನ್ನು ಸಿದ್ಧಗೊಳಿಸಲಾಗಿದೆ. ಬ್ಯಾಟ್ಸ್‌ಮನ್ ಮತ್ತು ಬೌಲರ್‌ಗಳಿಬ್ಬರಿಗೂ ಪಿಚ್‌ ನೆರವು ನೀಡುವ ನಿರೀಕ್ಷೆ ಇದೆ. ಐಪಿಎಲ್ 11ನೇ ಆವೃತ್ತಿಯ ಟೂರ್ನಿಯು ಏ. 7ರಿಂದ ಶುರುವಾಗಲಿದೆ.

ಬೆಂಗಳೂರಿನಲ್ಲಿ ಮೊದಲ ಪಂದ್ಯವು ಏ. 13ರಂದು ನಡೆಯಲಿದೆ. ವಿರಾಟ್ ಕೊಹ್ಲಿ ನಾಯಕತ್ವದ ಆರ್‌ಸಿಬಿ ತಂಡದ ಸ್ಫೋಟಕ ಬ್ಯಾಟ್ಸ್‌ಮನ್‌ಗಳ ಆಟ ನೋಡಲು  ಇಲ್ಲಿಯ ಅಭಿಮಾನಿಗಳು ಕಾತರರಾಗಿದ್ದಾರೆ. ಆದರೆ ಈ ಸಲ ಯಾರೂ ನಿರಾಶರಾಗುವುದಿಲ್ಲ ಎಂಬ ನಿರೀಕ್ಷೆಯಲ್ಲಿ ಆಯೋಜಕರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry