ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಸಿಐಸಿಐ ಬ್ಯಾಂಕ್‌ಗೆ ₹ 59 ಕೋಟಿ ದಂಡ

Last Updated 29 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಮುಂಬೈ: ಸಾಲಪತ್ರಗಳ ನೇರ ಮಾರಾಟದಲ್ಲಿ ನಿರ್ದೇಶನಗಳನ್ನು ಉಲ್ಲಂಘಿಸಿರುವುದಕ್ಕೆ ಸಂಬಂಧಿಸಿದಂತೆ, ಖಾಸಗಿ ವಲಯದ ಅತಿದೊಡ್ಡ ಹಣಕಾಸು ಸಂಸ್ಥೆಯಾಗಿರುವ ಐಸಿಐಸಿಐ ಬ್ಯಾಂಕ್‌ಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ₹ 59 ಕೋಟಿ ದಂಡ ವಿಧಿಸಿದೆ.

ನಿರ್ದಿಷ್ಟ ದಿನಕ್ಕೆ ಪರಿಪಕ್ವಗೊಳ್ಳುವ ಸಾಲಪತ್ರಗಳನ್ನು (ಹೆಲ್ಡ್‌ ಟು ಮೆಚ್ಯುರಿಟಿ– ಎಚ್‌ಟಿಎಂ) ಮಾರಾಟ ಮಾಡುವುದಕ್ಕೆ ಸಂಬಂಧಿಸಿದಂತೆ ಆರ್‌ಬಿಐ ಕೆಲವು ನಿರ್ದೇಶನ ನೀಡಿತ್ತು. ಅದನ್ನು ಬ್ಯಾಂಕ್‌ ಪಾಲನೆ ಮಾಡಿಲ್ಲ. ಈ ಕಾರಣಕ್ಕಾಗಿ ಮಾರ್ಚ್‌ 26ರಂದು ದಂಡ ವಿಧಿಸಿ, ಆದೇಶ ಹೊರಡಿಸಲಾಗಿದೆ ಎಂದು ಆರ್‌ಬಿಐನ ಪ್ರಕಟಣೆ ತಿಳಿಸಿದೆ.

1949ರ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯ ಅನ್ವಯ, ಆರ್‌ಬಿಐ ನೀಡಿರುವ ನಿರ್ದೇಶನಗಳನ್ನು ಪಾಲಿಸಲು ವಿಫಲವಾಗುವ ಬ್ಯಾಂಕ್‌ಗಳ ವಿರುದ್ಧ ಕ್ರಮ ಜರುಗಿಸುವ ಅಧಿಕಾರವನ್ನು ಆರ್‌ಬಿಐ ಹೊಂದಿದೆ.

ಬ್ಯಾಂಕ್‌ ಸ್ಪಷ್ಟನೆ: ನಿಯಮಗಳ ಕಟ್ಟುನಿಟ್ಟಿನ ಪಾಲನೆಗೆ ಬ್ಯಾಂಕ್‌ ಆದ್ಯತೆ ನೀಡುತ್ತಾ ಬಂದಿದೆ. ಆರ್‌ಬಿಐ ನಿರ್ದೇಶನವು ಯಾವ ಅವಧಿಯಿಂದ ಅನ್ವಯ
ವಾಗುತ್ತದೆ ಎನ್ನುವುದನ್ನು ಸರಿಯಾಗಿ ತಿಳಿದುಕೊಳ್ಳದೇ ಇರುವುದರಿಂದ ನಿಯಮ ಉಲ್ಲಂಘನೆ ಆಗಿದೆ ಎಂದು ಐಸಿಐಸಿಐ ಬ್ಯಾಂಕ್‌ ತಿಳಿಸಿದೆ.

‘ಎಚ್‌ಟಿಎಂ’ ಎಂದು ವರ್ಗೀಕರಿಸಿದ್ದ ಸರ್ಕಾರಿ ಸಾಲಪತ್ರಗಳನ್ನು ನಿರಂತರವಾಗಿ ಮಾರಾಟ ಮಾಡಿರುವುದಕ್ಕೆ ಅರ್‌ಬಿಐ ದಂಡ ವಿಧಿಸಿದೆ ಎಂದು ಹೇಳಿದೆ.

2017ರ ಮಾರ್ಚ್ 31ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ, ಬ್ಯಾಂಕ್‌ ‘ಎಚ್‌ಟಿಎಂ’ ವಿಭಾಗದಲ್ಲಿ ಇದ್ದ ಸಾಲಪತ್ರಗಳನ್ನು ಕೆಲವು ವಾರಗಳವರೆಗೆ ನಿರಂತರವಾಗಿ ಮಾರಾಟ ಮಾಡಿತ್ತು.

ಬ್ಯಾಂಕ್‌ ತನ್ನ ಗ್ರಾಹಕರ ಜತೆ ನಡೆಸಿದ ವಹಿವಾಟು ಅಥವಾ ಮಾಡಿಕೊಂಡಿರುವ ಒಪ್ಪಂದದ ಸಿಂಧುತ್ವ ಘೋಷಿಸುವುದು ಈ ದಂಡ ವಿಧಿಸಿರುವುದರ ಉದ್ದೇಶವಲ್ಲ ಎಂದು ಆರ್‌ಬಿಐ ಹೇಳಿದೆ.

ಏನಿದು ಎಚ್‌ಟಿಎಂ?:  ಸಾಲಪತ್ರ ಮತ್ತು ಬಾಂಡ್‌ಗಳನ್ನು ಅಲ್ಪಾವಧಿಯಲ್ಲಿ ಮಾರಾಟ ಮಾಡುವ ಉದ್ದೇಶಕ್ಕೆ ಖರೀದಿಸಿದ (ಎಚ್‌ಎಫ್‌ಟಿ), ಮಾರಾಟಕ್ಕೆ ಲಭ್ಯ ಇರುವ (ಎಎಫ್‌ಎಸ್‌) ಮತ್ತು  ಸಾಲಪತ್ರಗಳ ಅವಧಿ ಉದ್ದಕ್ಕೂ ಹೂಡಿಕೆದಾರ ಅವುಗಳನ್ನು ಮಾರಾಟ ಮಾಡದೇ ತನ್ನ ಬಳಿಯೇ ಇಟ್ಟುಕೊಳ್ಳುವ ‘ಹೆಲ್ಡ್‌ ಟು ಮೆಚ್ಯುರಿಟಿ’ (ಎಚ್‌ಟಿಎಂ) ಎಂದು ಮೂರು ರೀತಿಯಲ್ಲಿ ವರ್ಗೀಕರಣ ಮಾಡಲಾಗುತ್ತದೆ.

ಒಂದೊಮ್ಮೆ ಹೂಡಿಕೆ ಮೊತ್ತವು ಎಚ್‌ಟಿಎಂನಲ್ಲಿ ನಿಗದಿಪಡಿಸಿರುವುದಕ್ಕಿಂತಲೂ (ಶೇ 5) ಹೆಚ್ಚಾದರೆ ಬ್ಯಾಂಕ್‌ಗಳು ತಮ್ಮ ವಾರ್ಷಿಕ ಹಣಕಾಸು ಲೆಕ್ಕಪತ್ರದಲ್ಲಿ ಅದನ್ನು ದಾಖಲಿಸಬೇಕು. ಎಚ್‌ಟಿಎಂ ಹೂಡಿಕೆಯ ಮಾರುಕಟ್ಟೆ ಮೌಲ್ಯ ಮತ್ತು ಹೆಚ್ಚುವರಿ ಮೌಲ್ಯವನ್ನೂ ಲೆಕ್ಕಪತ್ರದಲ್ಲಿ ತೋರಿಸಬೇಕು.

ಆದರೆ ಬ್ಯಾಂಕ್‌ ಈ ಯಾವುದೇ ಮಾಹಿತಿಯನ್ನು ನೀಡದೇ 2016–17ರ ಹಣಕಾಸು ವಾರ್ಷಿಕ ಲೆಕ್ಕಪತ್ರದ ವರದಿ ಬಿಡುಗಡೆ ಮಾಡಿತ್ತು.

ಆದರೆ, 2017ರ ಜೂನ್‌ 30ರವರೆಗೂ ಆರ್‌ಬಿಐ ನಿರ್ದೇಶನದಂತೆಯೇ ಎಲ್ಲಾ ಮಾಹಿತಿಗಳನ್ನೂ ಬಹಿರಂಗಪಡಿಸಲಾಗಿದೆ ಎಂದು ಬ್ಯಾಂಕ್‌ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT