ಭೂ ಉತ್ಖನನದಿಂದ ಅವಶೇಷ ಪತ್ತೆ

5
ಸೇಡಂ: ಮಹಾವೀರ ಜಯಂತಿಯಲ್ಲಿ ಹುನುಮಾಕ್ಷಿ ಸಲಹೆ

ಭೂ ಉತ್ಖನನದಿಂದ ಅವಶೇಷ ಪತ್ತೆ

Published:
Updated:

ಸೇಡಂ: ‘ರಾಜ ಮಹಾರಾಜರ ಕಾಲದಲ್ಲಿ ನಡೆದ ಧರ್ಮ ಸಂಘರ್ಷ, ದಾಳಿಗಳಿಂದ ಜೈನ ಧರ್ಮದ ಪುರಾವೆಗಳು ಮಣ್ಣಲ್ಲಿ ಮುಚ್ಚಲ್ಪಟ್ಟಿವೆ. ಭೂಉತ್ಖನನ ನಡೆದರೆ, ಅಡಿಗಡಿಗೆ ಜೈನ ಧರ್ಮದ ಅವಶೇಷಗಳು ನಮಗೆ ಸಿಗುತ್ತವೆ’ ಎಂದು ಕರ್ನಾಟಕ ಶಾಸನ ಸಾಹಿತ್ಯ ಪರಿಷತ್ ಅಧ್ಯಕ್ಷೆ ಹುನುಮಾಕ್ಷಿ ಗೋಗಿ ಹೇಳಿದರು.ಪಟ್ಟಣದಲ್ಲಿರುವ ಪ್ರಾಚೀನ ಪಾರ್ಶ್ವನಾಥ ದಿಗಂಬರ ಜೈನ ಮಂದಿರದಲ್ಲಿ ಗುರುವಾರ ನಡೆದ ಮಹಾವೀರ ಜಯಂತಿಯಲ್ಲಿ ಅವರು ಮಾತನಾಡಿದರು.

‘ದಕ್ಷಿಣ ಕರ್ನಾಟಕ ಭಾಗಕ್ಕಿಂತ ಉತ್ತರ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಜೈನ ಧರ್ಮದ ಕೇಂದ್ರಗಳಿವೆ. ಈ ಭಾಗದಲ್ಲಿ ಜೈನ ಧರ್ಮ ಪ್ರಸಾರ ವ್ಯಾಪ್ತಿಯಲ್ಲಿತ್ತು ಎಂಬುವುದನ್ನು ಅವಶೇಷಗಳು ಪ್ರಾತ್ಯಕ್ಷಿಕವಾಗಿ ಕಾಣಸಿಗುತ್ತವೆ. ವಿಶೇಷವಾಗಿ ಸೇಡಂ ತಾಲ್ಲೂಕಿನಲ್ಲಿ ಜೈನ ಧರ್ಮ ವ್ಯಾಪಕವಾಗಿತ್ತು. ಮಳಖೇಡ, ಆಡಕಿ ಹಾಗೂ ಸೇಡಂ ಪಟ್ಟಣದಲ್ಲಿ ಜೈನ ಧರ್ಮದ ಆರಾಧಕರಾಗಿದ್ದರು. ಜೈನ ಧರ್ಮದ ಬೆಳವಣಿಗೆಗೆ ಸೇಡಂ ಉನ್ನತ ಕೊಡುಗೆ ನೀಡಿದೆ’ ಎಂದು ಉಲ್ಲೇಖಸಿದರು.

‘ಸುಮಾರು 20 ವರ್ಷಗಳ ಹಿಂದೆ ನಾನು ಸೇಡಂ ಪಟ್ಟಣಕ್ಕೆ ಬಂದಾಗ ಇಲ್ಲಿರುವ ಜೈನ ಬಸೀದಿ ಹಾಳು ಬಿದ್ದಿತ್ತು. ಆದರೆ ಈಗ ಜೈನ ಸಮುದಾಯದವರು ವಿಶೇಷ ಕಾಳಜಿ ವಹಿಸಿ ಪಾರ್ಶ್ವನಾಥ ಬಸದಿಯನ್ನು ಜೀರ್ಣೋದ್ಧಾರಗೊಳಿಸಿ ಜೈನ ಧರ್ಮವನ್ನು ವಿಸ್ತರಿಸುತ್ತಿದ್ದಾರೆ ಎಂದರು.ಇಂತಹ ಪ್ರಾಚೀನ ಅವಶೇಷಗಳನ್ನು ಗುರುತಿಸಿ ಅಭಿವೃದ್ಧಿಪಡಿಸುವ ಕೆಲಸ ಪ್ರತಿಯೊಬ್ಬರಿಂದ ಆಗಬೇಕಿದೆ’ ಎಂದು ಹೇಳಿದರು.

ಜೈನ ಮಂದಿರದ ಸಂರಕ್ಷಕ ಡಾ.ಪವನಕುಮಾರ ಶಹಾ, ಶಾಂತಿಲಾಲ ಹರದೂರ, ನಿತಿನ ಶಹಾ, ಇಂದಿರಾ ಹರದೂರ, ಡಾ. ಉದಯಕುಮಾರ ಶಹಾ, ಧನ್ಯಕುಮಾರ ಕಂಚನಕೋಟಿ, ಮಹಾವೀರ ಜೈನ, ಕುಪೇಂದ್ರ ಜೈನ, ಸುನೀಲ ಹರದೂರ, ಶ್ರೀನಿವಾಸರೆಡ್ಡಿ ಪಾಟೀಲ ಕೋಲ್ಕುಂದಾ, ರಮೇಶ ಮಾಲಪಾಣಿ, ಸೋಮನಾಥರೆಡ್ಡಿ ಪುರ್ಮಾ ಇದ್ದರು.

**

ಜೈನ ಧರ್ಮವು ಸೇಡಂ ತಾಲ್ಲೂಕಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವ್ಯಾಪಕವಾಗಿತ್ತು ಎಂಬುವುದಕ್ಕೆ ಜೈನಧರ್ಮದ ಅವಶೇಷಗಳು ಪತ್ತೆಯಾಗಿವೆ. ಮುಂದಿನ ದಿನಗಳಲ್ಲಿ ಉತ್ಖನನ ನಡೆದರೆ ನೈಜ ಇತಿಹಾಸ ಅರಿಯಲು ಸಾಧ್ಯ – ಹುನುಮಾಕ್ಷಿ ಗೋಗಿ, ಅಧ್ಯಕ್ಷೆ, ಕರ್ನಾಟಕ ಶಾಸನ ಸಾಹಿತ್ಯ ಪರಿಷತ್ತು

**

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry