ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೈನಲ್‌ಗೆ ಸ್ಟೀಫನ್ಸ್‌–ಓಸ್ತಪೆಂಕೊ

Last Updated 30 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಮಿಯಾಮಿ: ಅಮೆರಿಕದ ಆಟಗಾರ್ತಿ ಸೊಲನೆ ಸ್ಟೀಫನ್ಸ್‌ ಇಲ್ಲಿ ನಡೆಯುತ್ತಿರುವ ಮಿಯಾಮಿ ಓಪನ್ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ಮೊದಲ ಬಾರಿಗೆ ಫೈನಲ್‌ ತಲುಪುವ ಮೂಲಕ ಸಂಭ್ರಮ ಆಚರಿಸಿದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೆ ಏರಿದ್ದ ಅನುಭವಿ ಆಟಗಾರ್ತಿ ವಿಕ್ಟೋರಿಯಾ ಅಜರೆಂಕಾ ಎದುರು ಸ್ಟೀಫನ್ಸ್‌ ಗೆಲುವು ಒಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಮಹಿಳೆಯರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಸ್ಟೀಫನ್ಸ್‌ 3–6, 6–2, 6–1ರಲ್ಲಿ ಬೆಲಾರಸ್‌ನ ಆಟಗಾರ್ತಿಗೆ ಪೈಪೋಟಿ ನೀಡಿ ಗೆದ್ದರು. ಇತ್ತೀಚೆಗೆ ನಡೆದ ಇಂಡಿಯಾನ ವೇಲ್ಸ್ ಟೂರ್ನಿಯಲ್ಲಿಯೂ ಅಜರೆಂಕಾ ಎದುರು ಸ್ಟೀಫನ್ಸ್ ಜಯಗಳಿಸಿದ್ದರು.

ಡಬ್ಲ್ಯುಟಿಎ ರ‍್ಯಾಂಕಿಂಗ್‌ನಲ್ಲಿ ಐದನೇ ಸ್ಥಾನದಲ್ಲಿರುವ ಜೆಲೆನಾ ಓಸ್ತಪೆಂಕೊ ಎದುರು ಸ್ಟೀಫನ್ಸ್‌ ಫೈನಲ್‌ನಲ್ಲಿ ಪೈಪೋಟಿ ನಡೆಸಲಿದ್ದಾರೆ. ಫ್ರೆಂಚ್ ಓಪನ್ ಗೆದ್ದುಕೊಂಡಿರುವ ಜೆಲೆನಾ ಇಲ್ಲಿ ನಡೆದ ಸೆಮಿಫೈನಲ್‌ನಲ್ಲಿ 7–6, 6–3ರಲ್ಲಿ ನೇರ ಸೆಟ್‌ಗಳಿಂದ ಡೇನಿಯಲ್‌ ಕೊಲಿನ್ಸ್‌ಗೆ ಸೋಲುಣಿಸಿದರು.

ಸ್ಟೀಫನ್ಸ್ ಇದುವರೆಗೂ ಆಡಿದ ಐದೂ ಫೈನಲ್‌ ಪಂದ್ಯಗಳಲ್ಲಿ ಗೆದ್ದಿದ್ದಾರೆ. ‘ತವರಿನಲ್ಲಿ ಫೈನಲ್‌ ಪಂದ್ಯ ಆಡುತ್ತಿರುವ ಅನುಭವ ನನಗೆ ಆಗುತ್ತಿದೆ. ವೃತ್ತಿಜೀವನ ಆರಂಭಿಸಿದಾಗಿನಿಂದ ಇಲ್ಲಿ ಫೈನಲ್ ತಲುಪುವ ಕನಸು ಇತ್ತು. ಈಗ ನನ್ನ ಬಹುದೊಡ್ಡ ಕನಸು ನನಸಾಗಿದೆ’ ಎಂದು ಸ್ಟೀಫನ್ಸ್ ಹೇಳಿದ್ದಾರೆ.

ಈ ಋತುವಿನ ಮೊದಲ ಡಬ್ಲ್ಯುಟಿಎ ಫೈನಲ್‌ನಲ್ಲಿ ಓಸ್ತಪೆಂಕೊ ಆಡುತ್ತಿದ್ದಾರೆ. ಹೋದ ವರ್ಷ ಬೀಜಿಂಗ್‌ ಓಪನ್‌ ಸೆಮಿಫೈನಲ್‌ನಲ್ಲಿ ಅವರು ಸೋತಿದ್ದರು.

‘ಫೈನಲ್‌ನಲ್ಲಿ ಆಡುತ್ತಿರುವುದೇ ನನ್ನ ಅದೃಷ್ಟ’ ಎಂದು ಓಸ್ತಪೆಂಕೊ ಹೇಳಿದ್ದಾರೆ.

ಸೆಮಿಫೈನಲ್‌ಗೆ ಜ್ವೆರವ್‌: ಮೂರನೇ ಎಟಿಪಿ ಪ್ರಶಸ್ತಿಯ ಮೇಲೆ ಕಣ್ಣು ನೆಟ್ಟಿರುವ ಅಲೆಕ್ಸಾಂಡರ್‌ ಜ್ವೆರವ್‌ ಇಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್‌ ಹಣಾಹಣಿಯಲ್ಲಿ ಅವರು 6–4, 6–4ರಲ್ಲಿ ಬೋರ್ನಾ ಕೊರಿಕ್‌ ಎದುರು ಗೆದ್ದರು. ಮುಂದಿನ ಪೈಪೋಟಿಯಲ್ಲಿ ಪ್ಯಾಬ್ಲೊ ಬೂಸ್ಟಾ ಎದುರು ಆಡಲಿದ್ದಾರೆ.

ವಿಶ್ವದ ಐದನೇ ರ‍್ಯಾಂಕ್‌ನ ಆಟಗಾರ ಜರ್ಮನಿಯ ಜ್ವೆರವ್‌ ನೇರ ಸೆಟ್‌ಗಳಿಂದ ಎದುರಾಳಿಯನ್ನು ಮಣಿಸಿದರು. 2017ರಲ್ಲಿ ಅವರು ಇಟಲಿ ಓಪನ್‌ನಲ್ಲಿ ಪ್ರಶಸ್ತಿ ಗೆದ್ದಿದ್ದರು. ಅನುಭವಿ ಆಟಗಾರರಾದ ನೊವಾಕ್ ಜೊಕೊವಿಚ್ ಹಾಗೂ ರೋಜರ್ ಫೆಡರರ್‌ ಎದುರು ಗೆದ್ದಿದ್ದರು.

ಫೈನಲ್‌ ಪಂದ್ಯದಲ್ಲಿ ಗೆದ್ದರೆ ಅವರು ಮೂರನೇ ರ‍್ಯಾಂಕಿಂಗ್‌ ಸ್ಥಾನಕ್ಕೆ ಏರಲಿದ್ದಾರೆ.

ಸ್ಪೇನ್‌ನ ಆಟಗಾರ ಬೂಸ್ಟಾ 6–4, 5–7, 7–6ರಲ್ಲಿ ದಕ್ಷಿಣ ಆಫ್ರಿಕಾದ ಕೆವಿನ್ ಆ್ಯಂಡರ್ಸನ್ ಎದುರು ಗೆದ್ದು ಸೆಮಿಫೈನಲ್‌ ತಲುಪಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT