‘ಬಹುಗ್ರಾಮ’ಗಳಿಗೆ ಹರಿಯದ ಶುದ್ಧ ನೀರು

7
ನಿಧಾನಗತಿಯಲ್ಲಿ ಕೆರವಡಿ ಕುಡಿಯುವ ನೀರಿನ ಯೋಜನೆಯ ಕಾಮಗಾರಿ: ಗ್ರಾಮಸ್ಥರ ಅಸಮಾಧಾನ

‘ಬಹುಗ್ರಾಮ’ಗಳಿಗೆ ಹರಿಯದ ಶುದ್ಧ ನೀರು

Published:
Updated:
‘ಬಹುಗ್ರಾಮ’ಗಳಿಗೆ ಹರಿಯದ ಶುದ್ಧ ನೀರು

ಕಾರವಾರ: ತಾಲ್ಲೂಕಿನ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲಿರುವ ‘ಕೆರವಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ’ಯ ಕಾಮಗಾರಿ ಪೂರ್ಣಗೊಳಿಸಲು ನಿಗದಿ ಮಾಡಿದ್ದ ಅವಧಿ ಮುಗಿದು ಐದು ವರ್ಷಗಳೇ ಕಳೆದಿವೆ. ಕೆಲಸ ಆಮೆಗತಿಯಲ್ಲಿ ಸಾಗುತ್ತಿದ್ದು, ಪೂರ್ಣಗೊಳ್ಳಲು ಇನ್ನೂ ಒಂದು ತಿಂಗಳು ಬೇಕಾಗಬಹುದು ಎಂದು ಅಂದಾಜು ಮಾಡಲಾಗಿದೆ.

ಈ ಕಾಮಗಾರಿಗೆ 2013ರ ಜನವರಿಯಲ್ಲಿ ಚಾಲನೆ ನೀಡಲಾಗಿತ್ತು.ಗುತ್ತಿಗೆದಾರ ಸಂಸ್ಥೆಯು ಒಂಬತ್ತು ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸಬೇಕಿತ್ತು. ಆದರೆ, ಉಪ ಗುತ್ತಿಗೆದಾರರ ಮೂಲಕ ಕಾಮಗಾರಿ ಮಾಡಿಸಿದ್ದರಿಂದ ವಿಳಂಬವಾಗಿದೆ. ಈ ಬಗ್ಗೆ ಜಿಲ್ಲಾ ಪಂಚಾಯ್ತಿ ಸಭೆಯಲ್ಲೂ ಬಿಸಿಬಿಸಿ ಚರ್ಚೆಯಾಗಿತ್ತು.‘ಪ್ರಜಾವಾಣಿ’ ಜತೆ ಮಾತನಾಡಿದ ಜಿಲ್ಲಾ ಪಂಚಾಯ್ತಿ ಸದಸ್ಯೆ ಚೈತ್ರಾ ಕೊಠಾರಕರ್, ‘ಗ್ರಾಮಗಳಲ್ಲಿ ನಿರ್ಮಿಸಿರುವ ಟ್ಯಾಂಕ್‌ಗಳಿಗೆ ನೀರು ಹರಿಸುವ ಪೈಪ್‌ಗಳನ್ನು ಹೊಸದಾಗಿ ಅಳವಡಿಸುವ ಬದಲು ಗ್ರಾಮ ಪಂಚಾಯ್ತಿಗಳು ಈ ಮೊದಲು ಅಳವಡಿಸಿರುವ ಹಳೆಯ ಪೈಪ್‌ಗಳ ಮೂಲಕವೇ ನೀರು ಹರಿಸಲು ಸೂಚಿಸಿದ್ದೇವೆ. ಇದರಿಂದ ಸಮಯ ಉಳಿಯುತ್ತದೆ. ಕಾಮಗಾರಿಯ ವೇಗವರ್ಧನೆಗೆ ಒತ್ತಡ ನಾನೂ ತರುತ್ತಿದ್ದೇನೆ’ ಎಂದು ತಿಳಿಸಿದರು.

ಕೆರವಡಿಯ ಗ್ರಾಮಸ್ಥ ಮೋಹನ್ ಮಾತನಾಡಿ, ‘ಕಾಮಗಾರಿಯ ಈಗಿನ ವೇಗ ನೋಡಿದರೆ ಏಪ್ರಿಲ್ ಅಂತ್ಯದಲ್ಲಿ ಮುಕ್ತಾಯವಾಗುವುದು ಅನುಮಾನವಿದೆ. ಈ ಕಾಮಗಾರಿ ಮುಗಿಯುವಷ್ಟರಲ್ಲಿ ಮಳೆಗಾಲ ಆರಂಭವಾಗಿರುತ್ತದೆ. ಅಂದರೆ, ಇದು ಮುಂದಿನ ವರ್ಷವೇ ನಮ್ಮ ದಾಹ ನೀಗಿಸಬಹುದು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆಗಿರುವುದು: ಪಂಪ್‌ಹೌಸ್‌ನಲ್ಲಿ ತಲಾ 50 ಅಶ್ವಶಕ್ತಿಯ ಎರಡು ಪಂಪ್‌ಗಳ ಅಳವಡಿಕೆಯಾಗಿದೆ. ನದಿ ದಂಡೆಯಲ್ಲಿ 3.20 ಲಕ್ಷ ಲೀಟರ್ ಸಾಮರ್ಥ್ಯದ ಟ್ಯಾಂಕ್, ಬೆಟ್ಟದ ತುದಿಯಲ್ಲಿ ಹಾಗೂ ಸಿದ್ದರ ಗ್ರಾಮದ ಸಮೀಪ ತಲಾ 1.15 ಲಕ್ಷ ಲೀಟರ್ ಸಾಮರ್ಥ್ಯದ ಎರಡು ಟ್ಯಾಂಕ್‌ಗಳು ಮತ್ತು ಬೇಳೂರಿನಲ್ಲಿ 47 ಸಾವಿರ ಲೀಟರ್ ಸಾಮರ್ಥ್ಯದ ನೀರಿನ ತೊಟ್ಟಿ ನಿರ್ಮಾಣ ಮಾಡಲಾಗಿದೆ. ರಾಜ್ಯ ಹೆದ್ದಾರಿಯ ಸಮೀಪ ಅಳವಡಿಸಿರುವ ಪೈಪ್‌ಗಳಿಗೆ ಗೇಟ್‌ವಾಲ್ವ್‌ಗಳ ಅಳವಡಿಕೆ ಕಾರ್ಯ ನಡೆಯುತ್ತಿದೆ. ನದಿಯ ಎರಡೂ ದಂಡೆಗಳಲ್ಲಿ ನಿರ್ಮಿಸಿರುವ ವಿದ್ಯುತ್ ಟವರ್‌ಗಳಿಗೆ ವಿದ್ಯುತ್ ತಂತಿಗಳ ಅಳವಡಿಕೆ ಆಗುತ್ತಿದೆ.

ಆಗಬೇಕಿರುವುದು: ಕಿನ್ನರದವರೆಗೆ ಪೈಪ್‌ಲೈನ್‌ ಅಳವಡಿಕೆಯಾಗಿದ್ದು ಅಲ್ಲಿಂದ ಮುಂದೆ ಒಂದು ಕಿ.ಮೀ ಬಾಕಿಯಿದೆ. ಕಾಳಿ ನದಿಯಲ್ಲಿ ತಲಾ 20 ಅಶ್ವಶಕ್ತಿಯ ಎರಡು ಪಂಪ್‌ಗಳ ಅಳವಡಿಕೆ, ನೀರು ಪೂರೈಕೆ ಘಟಕಕ್ಕೆ 11 ಕಿಲೋವಾಟ್ ವಿದ್ಯುತ್ ಸಂಪರ್ಕ ಆಗಬೇಕಿದೆ. ನದಿಯಿಂದ ನೀರು ಹಾಯಿಸುವ ಪೈಪ್‌ಗಳ ಅಳವಡಿಕೆಯಾದ ನಂತರ

ಟ್ಯಾಂಕ್‌ಗಳಿಗೆ ನೀರು ತುಂಬಿಸಿ ಪ್ರಾಯೋಗಿಕವಾಗಿ ಹಾಯಿಸಬೇಕಿದೆ. ಇದಾದ ನಂತರವೇ ಗ್ರಾಮಗಳಿಗೆ ನೀರು ಹಾಯಿಸಲು ಸಾಧ್ಯ ಎಂದು ಹೆಸರು ಹೇಳಲು ಇಚ್ಛಿಸದ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

ಏನಿದು ಯೋಜನೆ?

ಕೆರವಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಾಳಿ ನದಿಯ ಸಮೀಪ ಪಂಪ್‌ಗಳನ್ನು ಅಳವಡಿಸಿ ಸಮೀಪದ ಗುಡ್ಡದ ಮೇಲಿರುವ ಟ್ಯಾಂಕ್‌ಗೆ ಹರಿಸಲಾಗುವುದು. ಅಲ್ಲಿ ಶುದ್ಧೀಕರಿಸಿದ ನೀರನ್ನು 15 ಗ್ರಾಮಗಳ ಸುಮಾರು 35 ಸಾವಿರ ಜನರಿಗೆ ಪೈಪ್‌ಲೈನ್ ಮೂಲಕ ನೀಡುವ ಯೋಜನೆ ಇದಾಗಿದೆ. ಯೋಜನೆಯ ಆರಂಭದಲ್ಲಿ ₹ 7.30 ಕೋಟಿ ಅಂದಾಜು ಮಾಡಲಾಗಿತ್ತು. ಗುತ್ತಿಗೆದಾರ ಜೈಪುರದ ಜಿಸಿಕೆಸಿ ಕಂಪನಿಯು ₹ 9 ಕೋಟಿ 3 ಲಕ್ಷದ 79 ಸಾವಿರಕ್ಕೆ ಗುತ್ತಿಗೆ ಪಡೆದುಕೊಂಡಿತು.

ನೀರಿನಲ್ಲಿ ಉಪ್ಪಿನ ಅಂಶ

ಕಾಳಿ ನದಿಯ ಎಡ ದಂಡೆಯಲ್ಲಿರುವ ಕಿನ್ನರ, ಸಿದ್ದರ, ವೈಲವಾಡ, ಖಾರ್ಗಾ, ದೇವಳಮಕ್ಕಿ, ಕೆರವಡಿ ಮುಂತಾದ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಣ್ಣಸಣ್ಣ ಯೋಜನೆಗಳಿದ್ದರೂ ಬೇಸಿಗೆ ಕಾಲದಲ್ಲಿ ಜನರಿಗೆ ತೊಂದರಯಾಗುತ್ತಿದೆ. ಈ ಭಾಗದಲ್ಲಿ ಗದ್ದೆಯ ಸಮೀಪವೇ 5–10 ಅಡಿ ಹೊಂಡ ತೆಗೆದರೂ ಹೇರಳವಾಗಿ ನೀರು ಸಿಗುತ್ತದೆ. ಆದರೆ, ಉಪ್ಪು ನೀರಿನ ಪ್ರಭಾವದಿಂದ ಬಳಕೆಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಗ್ರಾಮಸ್ಥರು ಬಳಕೆಗೆ ಯೋಗ್ಯವಾದ ನೀರಿಗಾಗಿ ಪರದಾಡುತ್ತಿದ್ದಾರೆ.

**

ತಿಂಗಳ ಒಳಗೆ ಕಾಮಗಾರಿ ಮುಗಿಯಬೇಕಿತ್ತು. ಆದರೆ, ಆಗಲಿಲ್ಲ. ಮುಂದಿನ ತಿಂಗಳ ಅಂತ್ಯದೊಳಗೆ ಎಲ್ಲ ಕೆಲಸಗಳೂ ಮುಕ್ತಾಯವಾಗಲಿವೆ – ಬಿ.ವಿ.ಪಾಟೀಲ್, ಎಂಜಿನಿಯರ್ ಜಿ.ಪಂ.ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ

**

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry