ಶುಕ್ರವಾರ, ಡಿಸೆಂಬರ್ 6, 2019
26 °C
ನಿವೃತ್ತ ಮುಖ್ಯ ನ್ಯಾ. ಎಂ.ಎನ್‌.ವೆಂಕಟಾಚಲಯ್ಯ ಬೇಸರ

ಉತ್ತಮ ಸರ್ಕಾರ ಆಯ್ಕೆಗೆ ಆಸ್ಪದ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉತ್ತಮ ಸರ್ಕಾರ ಆಯ್ಕೆಗೆ ಆಸ್ಪದ ಇಲ್ಲ

ಬೆಂಗಳೂರು: ‘ಉತ್ತಮ ಆಡಳಿತ ನೀಡುವ ಸರ್ಕಾರ ಆಯ್ಕೆ ಮಾಡಲು ಪ್ರಜಾಪ್ರಭುತ್ವ ಸಹಕಾರಿ ಎನ್ನಲಾಗುತ್ತಿತ್ತು. ಆದರೆ, ಇದಕ್ಕೆ ಆಸ್ಪದ ಕೊಡದ ಪರಿಸ್ಥಿತಿಯನ್ನು ಇದೇ ಪ್ರಜಾಪ್ರಭುತ್ವ ವ್ಯವಸ್ಥೆ ನಿರ್ಮಿಸಿದೆ' ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್‌.ವೆಂಕಟಾಚಲಯ್ಯ ಬೇಸರ ವ್ಯಕ್ತಪಡಿಸಿದರು.

ಡಾ.ಬಾಬು ಕಷ್ಣಮೂರ್ತಿ ಅಭಿನಂದನಾ ಸಮಿತಿ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಅಭಿನಂದನೆ ಹಾಗೂ ವಿಚಾರಗೋಷ್ಠಿಯ ಸಮಾರೋಪದಲ್ಲಿ ಅವರು ಮಾತನಾಡಿದರು.

‘ಬಾಬು ಅವರ ಅಜೇಯ ಕೃತಿಯಿಂದ ಹಲವರು ಪ್ರಭಾವಿತರಾಗಿದ್ದಾರೆ.`ಈ ಪುಸ್ತಕ ಓದಿ ಪ್ರಭಾವಿತನಾಗಿ ಜೈಲಿಗೆ ಹೋಗಿದ್ದೆ. ಅಂದು ಜೈಲಿಗೆ ಹೋಗದೇ ಇದ್ದರೆ ಇಂದು ಕೇಂದ್ರ ಸಚಿವನಾಗಲು ಸಾಧ್ಯವಿರಲಿಲ್ಲ' ಎಂದು ಕೇಂದ್ರ ಸಚಿವರೊಬ್ಬರು ಇತ್ತೀಚೆಗೆ ಹೇಳಿರುವುದನ್ನು ಕೇಳಿದ್ದೇನೆ. ಇಂದಿನ ರಾಜಕಾರಣದಲ್ಲಿ ಅನೇಕರು ಜೈಲಿಗೆ ಹೋಗುವುದೇ ಸಚಿವನಾಗಲು ಎನ್ನುವ ಪರಿಸ್ಥಿತಿ ಬಂದಿದೆ. ಜೈಲಿಗೂ, ಆನಂದಭವನದ ಆತಿಥ್ಯಕ್ಕೂ ವ್ಯತ್ಯಾಸವೇ ಇಲ್ಲದಂತಾಗಿದೆ’ ಎಂದು ಅವರು ವ್ಯಂಗವಾಡಿದರು.

ಲೇಖಕ ಡಾ.ಬಾಬು ಕೃಷ್ಣಮೂರ್ತಿ, ‘ನನ್ನ ತಾಯಿ ತಮಿಳು ಹಾಗೂ ತೆಲುಗು ಕಾದಂಬರಿಗಳನ್ನು ಹೆಚ್ಚು ಓದುತ್ತಿದ್ದರು. ತಾಯಿಯಿಂದ ಕಥೆ ಕೇಳುತ್ತಾ ನನಗೆ ಸಾಹಿತ್ಯದ ರುಚಿ ಹತ್ತಿತು. ಧರ್ಮಭಕ್ತಿ ಮತ್ತು ದೇಶಭಕ್ತಿಯ ಸಮಾಜ ನಿರ್ಮಾಣಕ್ಕಾಗಿ ಬರೆಯುತ್ತಲೇ ಇರುತ್ತೇನೆ’ ಎಂದರು.

ವಿಚಾರಗೋಷ್ಠಿ ಉದ್ಘಾಟಿಸಿದ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎನ್.ಕುಮಾರ್, ‘ಇಂದು ಕನ್ನಡ ಸಾಹಿತ್ಯ ತಟಸ್ಥವಾಗಿದೆ. ಜನರಿಗೆ ಸ್ಫೂರ್ತಿ ನೀಡಲು ವಿಫಲವಾಗಿದೆ. ಇತ್ತೀಚಿನ ಕೆಲವು ಸಾಹಿತಿಗಳು ಸಾಹಿತ್ಯ ಕೃಷಿ ಬದಲು, ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಕೆಲ ಸಾಹಿತಿಗಳ ಮಾತುಗಳೂ ಅಸಹ್ಯ ಹುಟ್ಟಿಸುವಂತಿರುತ್ತವೆ’ ಎಂದು ಟೀಕಿಸಿದರು.

‘ಸ್ವಾತಂತ್ರ್ಯ ದೊರಕುವುದಕ್ಕಿಂತಲೂ ಮೊದಲು ಬ್ರಿಟಿಷರು ನಮ್ಮನ್ನು ಹಿಂಸಿಸುತ್ತಿದ್ದರು. ಇಂದಿನ ರಾಜಕಾರಣಿಗಳು ಬ್ರಿಟಿಷರಿಗಿಂತಲೂ ಅತ್ಯಂತ ಕ್ರೂರವಾಗಿ ನಮ್ಮನ್ನು ನಡೆಸಿಕೊಳ್ಳುತ್ತಿದ್ದಾರೆ. ನಮಗೆ ರಾಜಕೀಯ ಸ್ವಾತಂತ್ರ್ಯ ಮಾತ್ರ ಸಿಕ್ಕಿದೆ. ಆದರೆ, ಉಳಿದ ಯಾವುದೇ ಸ್ವಾತಂತ್ರ್ಯ ಸಿಕ್ಕಿಲ್ಲ’ ಎಂದರು.

 

ಪ್ರತಿಕ್ರಿಯಿಸಿ (+)