ಮಂಗಳವಾರ, ಆಗಸ್ಟ್ 11, 2020
27 °C
ಸುಲಿಗೆ ಆರೋಪ l ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷನ ವಿರುದ್ಧ ಎಫ್‌ಐಆರ್‌

ದೂರು ಕೊಟ್ಟವನ ಬೆತ್ತಲೆಗೊಳಿಸಿ ಚಿತ್ರಹಿಂಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೂರು ಕೊಟ್ಟವನ ಬೆತ್ತಲೆಗೊಳಿಸಿ ಚಿತ್ರಹಿಂಸೆ

ಬೆಂಗಳೂರು: ತನ್ನ ವಿರುದ್ಧ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ಕೊಟ್ಟಿದ್ದ ನೌಕರನೊಬ್ಬನನ್ನು ಅಪಹರಿಸಿ, ಬೆತ್ತಲೆಗೊಳಿಸಿ ಚಿತ್ರಹಿಂಸೆ ನೀಡಿದ ಆರೋಪದಡಿ ‘ರಾಜ್ಯ ಸರ್ಕಾರಿ ನೌಕರರ ಸಂಘ’ದ ಉಪಾಧ್ಯಕ್ಷ ರಮೇಶ್‌ ಸಂಗಾ ಹಾಗೂ ಆತನ ಸ್ನೇಹಿತ ದಿಲೀಪ್ ರಾಥೋಡ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

‘ಗಾಯಗೊಂಡಿದ್ದ ನೌಕರ, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ಅವರು ನೀಡಿರುವ ದೂರಿನನ್ವಯ ಆರೋಪಿಗಳ ವಿರುದ್ಧ ಅಪಹರಣ (ಐಪಿಸಿ 365), ಸುಲಿಗೆ (ಐಪಿಸಿ 392), ಹಲ್ಲೆ (ಐಪಿಸಿ 324), ಅಕ್ರಮ ಬಂಧನ (343), ಅಪರಾಧ ಸಂಚು (ಐಪಿಸಿ 34) ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದೇವೆ’ ಎಂದು ವಿಧಾನಸೌಧ ಠಾಣೆಯ ಪೊಲೀಸರು ತಿಳಿಸಿದರು.

‘ಸಂಗಾ ಅವರು ಪರೀಕ್ಷೆಯಲ್ಲಿ ಅಕ್ರಮವೆಸಗಿ ಎಫ್‌ಡಿಎ ಹುದ್ದೆಗೆ ಆಯ್ಕೆಯಾಗಿದ್ದಾರೆ. ಆ ಬಗ್ಗೆ ತನಿಖೆ ನಡೆಸಿ’ ಎಂದು ಮುಖ್ಯ ಕಾರ್ಯದರ್ಶಿಗೆ ನೌಕರ ದೂರು ಕೊಟ್ಟಿದ್ದರು. ಅದೇ ಕಾರಣಕ್ಕೆ ಆರೋಪಿಗಳು ಈ ಕೃತ್ಯ ಎಸಗಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ಇಬ್ಬರೂ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದರು.

‘ಬಹುಮಹಡಿ ಕಟ್ಟಡದ ಮೂರನೇ ಮಹಡಿಯಲ್ಲಿರುವ ಕಚೇರಿಗೆ ಕೆಲಸ ನಿಮಿತ್ತ ಮಾ. 22ರಂದು ಮಧ್ಯಾಹ್ನ 1.30ಕ್ಕೆ ಹೋಗಿದ್ದೆ. ಆಗ ರಮೇಶ್‌ ಹಾಗೂ ದಿಲೀಪ್, ‘ನಿನ್ನ ಜತೆ ಮಾತನಾಡುವುದಿದೆ. ಪಾರ್ಕಿಂಗ್ ಜಾಗಕ್ಕೆ ಬಾ’ ಎಂದಿದ್ದರು. ಅಲ್ಲಿಗೆ ಹೋದ ನನ್ನನ್ನು ಆರೋಪಿಗಳು ಬಿಳಿ ಬಣ್ಣದ ಸ್ವಿಫ್ಟ್‌ ಕಾರಿನಲ್ಲಿ ಅಪಹರಿಸಿದ್ದರು’ ಎಂದು ನೌಕರ ದೂರಿನಲ್ಲಿ ಹೇಳಿದ್ದಾರೆ.

‘ಕೆಲ ಹೊತ್ತು ಕಾರಿನಲ್ಲಿ ಸುತ್ತಾಡಿಸಿದ್ದ ಆರೋಪಿಗಳು, ದೊಣ್ಣೆಯಿಂದ ಬಾಯಿಗೆ ಗುದ್ದಿದರು. ನಂತರ, ಹೊಟ್ಟೆ, ಬಲಗೈ, ಮೊಣಕೈ ಹಾಗೂ ಮೊಣಕಾಲಿಗೂ ಹೊಡೆದಿದ್ದರು. ರಕ್ತ ಬರಲಾರಂಭಿಸಿತ್ತು. ನನ್ನ ಬಳಿ ಇದ್ದ ಮೋಟೊ–ಸಿ  ಮೊಬೈಲ್, ಕಚೇರಿಯ ದಾಖಲೆ ಹಾಗೂ ಅಂಕಪಟ್ಟಿಗಳನ್ನು ಕಸಿದುಕೊಂಡಿದ್ದರು. ನಂತರ, ಪ್ಯಾಲೇಸ್‌ ಗುಟ್ಟಹಳ್ಳಿಯಲ್ಲಿರುವ ಸಂಗಾ ಮನೆಗೆ ಕರೆದೊಯ್ದು ಮಾ. 25ರ ಸಂಜೆ 6.30 ಗಂಟೆಯವರೆಗೂ ಅಕ್ರಮ ಬಂಧನದಲ್ಲಿರಿಸಿದ್ದರು.’

‘ಅಕ್ರಮ ಬಂಧನದ ವೇಳೆಯೂ ಆರೋಪಿಗಳು ಹಲ್ಲೆ ನಡೆಸಿದ್ದರು. ಎಡಗಾಲಿನ ಹೆಬ್ಬೆರಳು ಕತ್ತರಿಸಲು ಪ್ರಯತ್ನಿಸಿದ್ದರು. ಜತೆಗೆ, ನನ್ನನ್ನು ಬೆತ್ತಲೆಗೊಳಿಸಿ ವಿಡಿಯೊ ಚಿತ್ರೀಕರಣ ಮಾಡಿದ್ದರು. ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡುವುದಾಗಿ ಬೆದರಿಸಿದ್ದ ಆರೋಪಿಗಳು, ‘ರಮೇಶ್‌ ಸಂಗಾ ನೇಮಕಾತಿ ಕಾನೂನುಬದ್ಧವಾಗಿದೆ’ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಒತ್ತಾಯಪೂರ್ವಕವಾಗಿ ಪತ್ರ ಬರೆಸಿದ್ದರು. ಟ್ವೀಟ್ ಸಹ ಮಾಡಿಸಿದ್ದರು. ಮೊಬೈಲ್‌ ಹಾಗೂ ಸಿಮ್‌ ಕಾರ್ಡ್‌ ಕಸಿದುಕೊಂಡು ಬಿಟ್ಟು ಕಳುಹಿಸಿದ್ದಾರೆ’ ಎಂದು ದೂರುದಾರ ನೌಕರ ತಿಳಿಸಿದ್ದಾರೆ.

**

ಬೇರೆಯವರಿಂದ ಎಫ್‌ಡಿಎ ಪರೀಕ್ಷೆ ಬರೆಸಿದ್ದ ಆರೋಪ

‘ಎಫ್‌ಡಿಎ ನೇಮಕಾತಿಗಾಗಿ ಕರ್ನಾಟಕ ಲೋಕಸೇವಾ ಆಯೋಗವು ನಡೆಸಿದ್ದ ಪರೀಕ್ಷೆಯಲ್ಲಿ ರಮೇಶ್‌ ಸಂಗಾ, ಬೇರೆ ಅಭ್ಯರ್ಥಿಗಳಿಂದ ಪರೀಕ್ಷೆ ಬರೆಸಿದ್ದರು. ಹಾಗಾಗಿಯೇ ಅವರು ಹುದ್ದೆಗೆ ಆಯ್ಕೆಯಾಗಿದ್ದಾರೆ’ ಎಂದು ನೌಕರ ಆರೋಪ ಮಾಡಿದ್ದರು.

ಆ ಬಗ್ಗೆ ದಾಖಲೆಗಳನ್ನು ಸಂಗ್ರಹಿಸಿದ್ದ ಅವರು, ಅವುಗಳನ್ನು ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದರು. ಅಷ್ಟರಲ್ಲೇ ಆರೋಪಿಗಳು ಅವರನ್ನು ಅಪಹರಿಸಿ ಚಿತ್ರಹಿಂಸೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದರು.

**

‘ದೂರಿನ ಅಂಶವೆಲ್ಲ ಸುಳ್ಳು’

‘ಹಣ ದುರುಪಯೋಗ ಹಾಗೂ ಯುವತಿಯೊಬ್ಬರ ಜತೆ ಅನೈತಿಕವಾಗಿ ವರ್ತಿಸಿದ್ದ ಆರೋಪದಡಿ, ದೂರುದಾರ ನೌಕರನನ್ನು ಕೆಲಸದಿಂದ ಅಮಾನತು ಮಾಡಲಾಗಿದೆ. ನನ್ನ ಬೆಳವಣಿಗೆ ಸಹಿಸದ ವ್ಯಕ್ತಿಗಳೊಂದಿಗೆ ಸೇರಿಕೊಂಡು ಈ ರೀತಿ ದೂರು ನೀಡಿದ್ದಾರೆ’ ಎಂದು ರಮೇಶ್ ಸಂಗಾ ತಿಳಿಸಿದ್ದಾರೆ.

‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ‘ನನ್ನ ವಿರುದ್ಧ ಕೆಲ ದಾಖಲೆಗಳಿವೆ ಎಂದು ಬ್ಲ್ಯಾಕ್‌ಮೇಲ್‌ ಮಾಡಿದ್ದ ದೂರುದಾರ ನೌಕರ, ಹಣಕ್ಕೆ ಬೇಡಿಕೆ ಇಟ್ಟಿದ್ದರು. ಒಪ್ಪದಿದ್ದಕ್ಕೆ ಸುಳ್ಳು ದೂರು ನೀಡಿದ್ದಾರೆ. ಬಹುಮಹಡಿ ಕಟ್ಟಡದಲ್ಲಿ ಇರುವ ಸಿ.ಸಿ.ಟಿ.ವಿ ಕ್ಯಾಮೆರಾ ಪರಿಶೀಲಿಸಿದರೆ ನಿಜಾಂಶ ತಿಳಿಯುತ್ತದೆ’ ಎಂದು ಹೇಳಿದ್ದಾರೆ.

‘ನನ್ನದು ಎರಡು ಕೊಠಡಿಯ ಮನೆ. ನೌಕರನನ್ನು ಅಪಹರಣ ಮಾಡಿಕೊಂಡು ಅಲ್ಲಿಟ್ಟಿದ್ದರೆ, ನನ್ನ ಕುಟುಂಬದವರು ಎಲ್ಲಿಗೆ ಹೋಗಬೇಕಿತ್ತು. ನೀಡಿರುವ ದೂರು ಸುಳ್ಳು ಎಂಬುದಕ್ಕೆ ಪುರಾವೆ ಸಮೇತ ಇನ್‌ಸ್ಪೆಕ್ಟರ್‌ ಅವರಿಗೆ ಮಾಹಿತಿ ನೀಡಿದ್ದೇನೆ. ಹಣಕ್ಕೆ ಬೇಡಿಕೆ ಇಟ್ಟಿದ್ದ ಆಡಿಯೊ ಸಹ ಅದರಲ್ಲಿದೆ’ ಎಂದು ರಮೇಶ್‌ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.