ಮಂಗಳವಾರ, ಜೂಲೈ 7, 2020
25 °C

‘ಕ್ರೈಸ್‌’ ಕಾಮಗಾರಿ ಅಕ್ರಮ?

ವೈ.ಗ. ಜಗದೀಶ್‌ Updated:

ಅಕ್ಷರ ಗಾತ್ರ : | |

‘ಕ್ರೈಸ್‌’ ಕಾಮಗಾರಿ ಅಕ್ರಮ?

ಬೆಂಗಳೂರು: ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ, ಇಂದಿರಾಗಾಂಧಿ ವಸತಿ ಶಾಲೆ ಕಟ್ಟಡಗಳ ₹1,033 ಕೋಟಿ ಮೊತ್ತದ ಕಾಮಗಾರಿಗಳ ಗುತ್ತಿಗೆ ಟೆಂಡರ್‌ಗಳಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪ ಬಂದಿದೆ.

ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿರುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (ಕ್ರೈಸ್) ತನಗೆ ಬೇಕಾದವರಿಗೆ ಗುತ್ತಿಗೆ ನೀಡುವ ಸಲುವಾಗಿ ಅರ್ಹ ಗುತ್ತಿಗೆದಾರರನ್ನು ಉದ್ದೇಶ ಪೂರ್ವಕವಾಗಿ ‘ಅನರ್ಹ’ ಗೊಳಿಸಿದೆ. ಅರ್ಹತೆ ಇಲ್ಲದವರಿಗೆ ಗುತ್ತಿಗೆ ನೀಡಿದೆ ಎಂಬ ದೂರು ದಾಖಲಾಗಿದೆ.

ಈ ಪೈಕಿ ₹800 ಕೋಟಿ ಮೊತ್ತದ ಗುತ್ತಿಗೆ ನೀಡುವಾಗ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಕನ್‌ಸ್ಟ್ರಕ್ಷನ್ ಕಂ‍ಪನಿಯೊಂದು, ಹೈಕೋರ್ಟ್ ಮೆಟ್ಟಿಲೇರಿದೆ. ಮಾರ್ಚ್‌ 13ರಂದು ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ವಿನೀತ್ ಕೊಠಾರಿ ಅವರಿದ್ದ ನ್ಯಾಯ ಪೀಠ, ಟೆಂಡರ್ ಪ್ರಕ್ರಿಯೆ ಸ್ಥಗಿತಗೊಳಿಸಿ, ಮುಂದಿನ ಆದೇಶದವರೆಗೆ ಯಥಾಸ್ಥಿತಿ ಕಾಪಾಡುವಂತೆ ಸೂಚಿಸಿದೆ.

‘ವಿಧಾನಸಭಾ ಚುನಾವಣೆ ಸನಿಹದಲ್ಲಿರುವಾಗ ರಾಜಕೀಯ ಉದ್ದೇಶಕ್ಕಾಗಿ ಇಷ್ಟು ಬೃಹತ್ ಮೊತ್ತದ ಟೆಂಡರ್‌ ನೀಡಿರುವುದು, ಟೆಂಡರ್‌ ಪ್ರಕ್ರಿಯೆ ನಡೆಸುವಾಗ ಪಾರದರ್ಶಕವಾಗಿ ನಡೆದುಕೊಳ್ಳದೇ ಇರುವುದು, ಕ್ರೈಸ್‌ಗೆ ಇಷ್ಟು ದೊಡ್ಡ ಮೊತ್ತದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡ ಅನುಭವ ಇಲ್ಲದಿರುವುದರ ಬಗ್ಗೆ ನ್ಯಾಯಾಲಯವು ಪರಿಶೀಲನೆ ಮಾಡಬೇಕಾಗಿದೆ’ ಎಂದೂ ಪೀಠ ಅಭಿಪ್ರಾಯಪಟ್ಟಿದೆ.

‘ಗುತ್ತಿಗೆದಾರರು ಮತ್ತು ಕ್ರೈಸ್ ಶಾಮೀಲಾಗಿ ಇ–ಪೋರ್ಟಲ್‌ನಲ್ಲಿ ತಿರುಚಿರುವ ಸಾಧ್ಯತೆಯೂ ಇದೆ’ ಎಂದೂ ನ್ಯಾಯಪೀಠ ಅನುಮಾನಿಸಿದೆ.

ಏನಿದು ಹಗರಣ: ರಾಜ್ಯದ ವಿವಿಧ ಕಡೆಗಳಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು 2017ರ ಡಿಸೆಂಬರ್ 18 ರಿಂದ 2018ರ ಜನವರಿ 6 ವರೆಗೆ ಬೇರೆ ಬೇರೆ ಅಧಿಸೂಚನೆಯಡಿ ಇಲಾಖೆಯ ಇ ಪೋರ್ಟಲ್‌ನಲ್ಲಿ ಕ್ರೈಸ್ ಟೆಂಡರ್ ಕರೆದಿತ್ತು.

₹800 ಕೋಟಿ ಮೊತ್ತದ 54 ಕಾಮಗಾರಿಗಳ ಒಂದು ಪ್ಯಾಕೇಜ್ ಹಾಗೂ ₹233 ಕೋಟಿ ಮೊತ್ತದ 38 ಕಾಮಗಾರಿಗಳಿರುವ ಮತ್ತೊಂದು ಪ್ಯಾಕೇಜ್‌ನಲ್ಲಿ ಟೆಂಡರ್‌ಗಳನ್ನು

ವಿಂಗಡಿಸಲಾಗಿತ್ತು.

ಸಮಾಜ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಎಂ. ಲಕ್ಷ್ಮೀನಾರಾಯಣ ಉಪಾಧ್ಯಕ್ಷ ರಾಗಿರುವ ಟೆಂಡರ್ ಒಪ್ಪಿಗೆ ಸಮಿತಿ, ಕ್ರಮವಾಗಿ ಫೆಬ್ರುವರಿ 16 ಹಾಗೂ ಫೆಬ್ರುವರಿ 20ರಂದು ಸಭೆ ನಡೆಸಿ ಟೆಂಡರ್ ಆಖೈರುಗೊಳಿಸಿದೆ

ತಕರಾರು ಏನು?: ಕೋರ್ಟ್‌ ಮೆಟ್ಟಿಲೇರಿರುವ ಮೈಕಾನ್‌ ಕನ್‌ಸ್ಟ್ರಕ್ಷನ್‌ ಕಂಪನಿಯು ಒಂದೇ ಮಾದರಿಯ ಎರಡು ಕಾಮಗಾರಿಗಳಿಗೆ ಟೆಂಡರ್ ಹಾಕಿತ್ತು. ₹ 16 ಕೋಟಿ ಮೊತ್ತದ ಕಾಮಗಾರಿಗೆ ಈ ಕಂಪನಿಯನ್ನು ಅರ್ಹ ಎಂದು ಸಮಿತಿ ತೀರ್ಮಾನಿಸಿದೆ.

ಎಲ್‌–1ಗೆ ಟೆಂಡರ್‌ ಎಂಬ ವಾದ

ಅತಿ ಕಡಿಮೆ ಮೊತ್ತ ನಮೂದಿಸಿದ ಟೆಂಡರ್‌ ದಾರರಿಗೆ (ಎಲ್ –1 ಬಿಡ್ಡರ್‌) ಗುತ್ತಿಗೆ ನೀಡಲಾಗಿದೆ ಎಂದು ಕ್ರೈಸ್ ಪ್ರತಿಪಾದಿಸುತ್ತಿದೆ.

₹ 233 ಕೋಟಿ ಮೊತ್ತದ ಟೆಂಡರ್‌ ಹಂಚಿಕೆ ಮಾಡುವಾಗ 2017–18ರ ಎಸ್ಆರ್‌ ದರ ಪಟ್ಟಿ ಆಧರಿಸಿ ಟೆಂಡರ್ ಅನುಮೋದನೆ ನೀಡಲಾಗಿದೆ. ಹಾಗೆ ಮಾಡುವಾಗ 2016ರಲ್ಲಿ ಗುತ್ತಿಗೆ ನೀಡಿದ್ದ ದರಕ್ಕೆ ಹೋಲಿಕೆ ಮಾಡಿ, ಗುತ್ತಿಗೆ ಮೊತ್ತವು ಶೇ –2ರಿಂದ ಶೇ –12ಕ್ಕಿಂತ ಕಡಿಮೆ ಇದೆ ಎಂದು ಉಲ್ಲೇಖಿಸಲಾಗಿದೆ. ಆದರೆ, 2016ರಲ್ಲಿ ಗುತ್ತಿಗೆ ನೀಡಿದಾಗ, ಎಸ್‌ಆರ್ ದರ ಪಟ್ಟಿಗಿಂತ ಶೇ 20ರಿಂದ ಶೇ 22ರಷ್ಟು ಹೆಚ್ಚಿನ ಮೊತ್ತಕ್ಕೆ ಟೆಂಡರ್ ಅಂಗೀಕರಿಸಲಾಗಿತ್ತು. ಹೀಗೆ ಮಾಡುವ ಮೂಲಕ ದಿಕ್ಕು ತಪ್ಪಿಸಲಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಗುತ್ತಿಗೆದಾರರೊಬ್ಬರು ತಿಳಿಸಿದರು.

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕ ಕಾಯ್ದೆ ಅಡಿ ₹10 ಕೋಟಿಗಿಂತ ಹೆಚ್ಚಿನ ಮೊತ್ತದ ಕಾಮಗಾರಿಗಳನ್ನು ನೀಡಬೇಕಾದರೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯಬೇಕು. ಇದನ್ನು ತಪ್ಪಿಸಲು 38 ಕಾಮಗಾರಿಗಳ ಪೈಕಿ 15ಕ್ಕೂ ಹೆಚ್ಚು ಕಾಮಗಾರಿಗಳ ಮೊತ್ತವನ್ನು ₹ 9.50 ಕೋಟಿ ಆಸುಪಾಸಿಗೆ ಇಳಿಸಲಾಗಿದೆ ಎಂದೂ ಅವರು ದೂರಿದರು.

‘ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ’

‘ಯಾವುದೇ ರೀತಿಯ ಭ್ರಷ್ಟಾಚಾರಕ್ಕೆ ಅವಕಾಶ ಇಲ್ಲದಂತೆ ಪಾರದರ್ಶಕವಾಗಿ ಟೆಂಡರ್ ಪ್ರಕ್ರಿಯೆ ನಡೆದಿದೆ. ನಾನು ಯಾವುದೇ ಹಸ್ತಕ್ಷೇಪ ಮಾಡಿಲ್ಲ’ ಎಂದು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಹೇಳಿದರು.

‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ಟೆಂಡರ್ ನೀಡಿಕೆಯಲ್ಲಿ ಅಧಿಕಾರಿಗಳ ಸಮಿತಿ ತೀರ್ಮಾನವೇ ಅಂತಿಮ. ಗುತ್ತಿಗೆ ಸಿಗದೇ ಇದ್ದವರು ಟೆಂಡರ್‌ನಲ್ಲಿ ಅಕ್ರಮ ನಡೆದಿದೆ ಎಂದು ಆಪಾದಿಸುವುದು ಸಾಮಾನ್ಯ. ಚುನಾವಣೆ ಹೊತ್ತಿನಲ್ಲಿ ಕೆಟ್ಟ ಹೆಸರು ತರುವ ಯತ್ನವನ್ನೂ ಕೆಲವರು ಮಾಡುತ್ತಿದ್ದಾರೆ. ಟೆಂಡರ್‌ ಪ್ರಕ್ರಿಯೆ ಪ್ರಶ್ನಿಸಿ ಕೆಲವರು ಕೋರ್ಟ್‌ಗೆ ಹೋಗಿದ್ದಾರೆ. ವಿಚಾರಣೆ ನಡೆಯಲಿ. ಯಾರಾದರೂ ತಪ್ಪು ಮಾಡಿದ್ದರೆ ಅವರು ಶಿಕ್ಷೆ ಅನುಭವಿಸುತ್ತಾರೆ ಎಂದು ಅವರು ಹೇಳಿದರು.

**

ಕಾಮಗಾರಿಗಳ ವಿವರ‌ಮೊರಾರ್ಜಿ, ಚೆನ್ನಮ್ಮ ಶಾಲೆಗಳ ಕಟ್ಟಡ ಸಂಕೀರ್ಣ–44

ವಸತಿ ಶಾಲೆಗಳ ಸಂಕೀರ್ಣದಲ್ಲಿ ಪಿಯು ಕಟ್ಟಡ–02

ಮೊರಾರ್ಜಿ ಶಾಲೆಗಳ ದುರಸ್ತಿ–05

ಹಾಸ್ಟೆಲ್ ಕಟ್ಟಡಗಳು–29

ಬಾಬು ಜಗಜೀವನರಾಂ ಭವನ–04

ಡಾ.ಅಂಬೇಡ್ಕರ್ ಭವನ–01

ದೇವರಾಜ ಅರಸು ಭವನ–01

ಆಶ್ರಮ ಶಾಲೆ–02

ಕೊಳವೆ ಬಾವಿ ಕೊರೆಯುವುದು–02

ಮೊರಾರ್ಜಿ ಶಾಲೆಗಳಲ್ಲಿ ವಿದ್ಯುತ್ ವ್ಯವಸ್ಥೆ–02

ಮಾತಂಗ ಮಹರ್ಷಿ ಸೇವಾಶ್ರಮ ಟ್ರಸ್ಟ್ 1

ಒಟ್ಟು–94

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.