ಸೋಮವಾರ, ಡಿಸೆಂಬರ್ 16, 2019
17 °C
ರಾಜಧಾನಿಯಲ್ಲಿ ಮತ್ತೆ ಗುಂಡಿನ ಸದ್ದು l ಎರಡೂವರೆ ವರ್ಷದಿಂದ ತಲೆಮರೆಸಿಕೊಂಡಿದ್ದ ರೌಡಿ ಪರ್ಮಿ

ಕುಖ್ಯಾತ ರೌಡಿಗಳಿಗೆ ಗುಂಡೇಟಿನ ಪಾಠ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಖ್ಯಾತ ರೌಡಿಗಳಿಗೆ ಗುಂಡೇಟಿನ ಪಾಠ

ಬೆಂಗಳೂರು: ತಮ್ಮನ್ನು ಬಂಧಿಸಲು ಬಂದ ಪೊಲೀಸರತ್ತ ಪಿಸ್ತೂಲ್ ಹಾಗೂ ಮಚ್ಚಿನಿಂದ ದಾಳಿ ನಡೆಸಲು ಮುಂದಾದ ಕುಖ್ಯಾತ ರೌಡಿಗಳಾದ ಪರಮೇಶ್ ಅಲಿಯಾಸ್ ಪರ್ಮಿ (30) ಹಾಗೂ ಸಂತೋಷ್ ಅಲಿಯಾಸ್ ದೊಂಬಿ (28) ಕಾಲಿಗೆ ತಲಘಟ್ಟಪುರ ಪೊಲೀಸರು ಗುಂಡು ಹೊಡೆದಿದ್ದಾರೆ.

ಬನಶಂಕರಿ 6ನೇ ಹಂತದ ಚಿಕ್ಕೇಗೌಡನಪಾಳ್ಯದಲ್ಲಿ ಬೆಳಿಗ್ಗೆ 7 ಗಂಟೆ ಸುಮಾರಿಗೆ ಈ ಶೂಟೌಟ್ ನಡೆದಿದೆ. ಗುಂಡೇಟಿನಿಂದ ಗಾಯಗೊಂಡಿರುವ ಆರೋಪಿಗಳು, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಂತೋಷ್‌ನಿಂದ ಹಲ್ಲೆಗೊಳಗಾದ ಹೆಡ್‌ ಕಾನ್‌ಸ್ಟೆಬಲ್ ಸುರೇಶ್ ಹಾಗೂ ಕಾನ್‌ಸ್ಟೆಬಲ್ ನೇಮಿನಾಥ್ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.

ಕೆಂಬತ್ತಹಳ್ಳಿಯ ಪರಮೇಶ್ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ, ಡಕಾಯಿತಿ ಸೇರಿದಂತೆ ಒಂಬತ್ತು ಪ್ರಕರಣಗಳು ದಾಖಲಾಗಿವೆ. 2006ರಿಂದ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ಈತನ ವಿರುದ್ಧ ತಲಘಟ್ಟಪುರ, ಸುಬ್ರಹ್ಮಣ್ಯಪುರ ಹಾಗೂ ಕೋಣನಕುಂಟೆ ಠಾಣೆಗಳಲ್ಲಿ ರೌಡಿಪಟ್ಟಿ ತೆರೆಯಲಾಗಿದೆ. ಸಂತೋಷ್ ನಾಲ್ಕು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ತಲಘಟ್ಟಪುರ ಠಾಣೆಯ ರೌಡಿಪಟ್ಟಿಯಲ್ಲಿ ಈತನ ಹೆಸರಿದೆ.

2012ರಲ್ಲಿ ಅಂಜನಾಪುರದ ರಿಯಲ್ ಎಸ್ಟೇಟ್ ಉದ್ಯಮಿ ಅಶ್ವತ್ಥನಾರಾಯಣ್ ಶೆಟ್ಟಿ ಎಂಬುವರ ಹತ್ಯೆ ಹಾಗೂ 2014ರಲ್ಲಿ ಸುಬ್ರಹ್ಮಣ್ಯಪುರ ಠಾಣೆ ವ್ಯಾಪ್ತಿಯಲ್ಲಿ ನಡೆದ ಫೈನಾನ್ಶಿಯರ್‌ ಕೊಲೆ ಪ್ರಕರಣದಲ್ಲೂ ಪರಮೇಶ್‌ ಆರೋಪಿಯಾಗಿದ್ದ. ಆರು ತಿಂಗಳು ಜೈಲಿನಲ್ಲಿದ್ದ ಈತ, ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಅಂದಿನಿಂದ ನ್ಯಾಯಾಲಯದ ವಿಚಾರಣೆಗೂ ಹಾಜರಾಗದೆ ತಲೆಮರೆಸಿಕೊಂಡು ಓಡಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

2017ರ ಏಪ್ರಿಲ್ 24ರಂದು ಆವಲಹಳ್ಳಿ ಸಮೀಪದ ಬಿಡಿಎ ಬಡಾವಣೆಯ ಶೆಡ್‌ಗೆ ನುಗ್ಗಿ ಉಮೇಶ್ ಅಲಿಯಾಸ್ ವಾಸು ಎಂಬ ರೌಡಿಯನ್ನು ಬರ್ಬರವಾಗಿ ಹತ್ಯೆಗೈದಿದ್ದ. ಆ ನಂತರ ಪೊಲೀಸರು ವಿಶೇಷ ತಂಡಗಳನ್ನು ರಚಿಸಿಕೊಂಡು ಪರಮೇಶ್‌ ಬಂಧನಕ್ಕೆ ಬಲೆ ಬೀಸಿದ್ದರು.

‘ತಮಿಳುನಾಡು, ಆಂಧ್ರಪ್ರದೇಶ ಹಾಗೂ ಕೇರಳ ರಾಜ್ಯಗಳಲ್ಲಿ ಓಡಾಡಿಕೊಂಡಿದ್ದ ಪರಮೇಶ್, ಆಗಾಗ್ಗೆ ಮೈಸೂರಿಗೆ ಬಂದು ಸಹಚರರನ್ನು ಭೇಟಿಯಾಗಿ ಹೋಗುತ್ತಿದ್ದ. ಈ ವಿಚಾರ ತಿಳಿದು ತಲಘಟ್ಟಪುರ ಠಾಣೆ ಇನ್‌ಸ್ಪೆಕ್ಟರ್ ಶಿವಸ್ವಾಮಿ ನೇತೃತ್ವದ ತಂಡ ವಾರದ ಹಿಂದೆ ಮೈಸೂರಿಗೆ ತೆರಳಿತ್ತು. ಆಗ ಆರೋಪಿ ಕೂದಲೆಳೆ ಅಂತರದಿಂದ ತಪ್ಪಿಸಿಕೊಂಡಿದ್ದ’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಗುಂಡೇಟಿನಿಂದ ಆಸ್ಪತ್ರೆಗೆ ದಾಖಲಾಗಿರುವ ಪರಮೇಶ್

‘ಆರೋಪಿಯ ಮೊಬೈಲ್ ಕರೆಗಳ (ಸಿಡಿಆರ್) ಮೇಲೆ ನಿರಂತರ ನಿಗಾ ಇಟ್ಟಿದ್ದೆವು. ಭಾನುವಾರ ಬೆಳಿಗ್ಗೆ ಆತ ನೈಸ್ ರಸ್ತೆ ಮಾರ್ಗವಾಗಿ ಬರುತ್ತಿರುವ ವಿಚಾರ ಗೊತ್ತಾಯಿತು. ಕೂಡಲೇ ಕಾರ್ಯಾಚರಣೆ ಪ್ರಾರಂಭಿಸಿದ ಪೊಲೀಸರು, ಬೆಳಿಗ್ಗೆ 7 ಗಂಟೆ ಸುಮಾರಿಗೆ ಚಿಕ್ಕೇಗೌಡನಪಾಳ್ಯದಲ್ಲಿ ಆತನ ಸ್ಯಾಂಟ್ರೊ ಕಾರನ್ನು ಅಡ್ಡಗಟ್ಟಿದರು. ಈ ಸಂದರ್ಭದಲ್ಲಿ ಪರಮೇಶ್‌ನ ಜತೆಗಿದ್ದ ಸಂತೋಷ್, ಮಚ್ಚಿನಿಂದ ಕಾನ್‌ಸ್ಟೆಬಲ್ ಹಾಗೂ ಹೆಡ್‌ಕಾನ್‌ಸ್ಟೆಬಲ್ ಅವರ ಕೈಗೆ ಹೊಡೆದ. ಆಗ ಪಿಎಸ್‌ಐ ಶಿವಕುಮಾರ್ ಆತನ ಕಾಲಿಗೆ ಗುಂಡು ಹೊಡೆದರು’.

‘ಈ ಹಂತದಲ್ಲಿ ಪರಮೇಶ್ ಕಾರಿನಿಂದ ಇಳಿದು ಪಿಸ್ತೂಲ್‌ನಿಂದ ಸಿಬ್ಬಂದಿಯತ್ತ ಎರಡು ಸುತ್ತು ಗುಂಡು ಹಾರಿಸಿದ. ಆಗ ಇನ್‌ಸ್ಪೆಕ್ಟರ್ ಆತ್ಮರಕ್ಷಣೆಗಾಗಿ ಆತನ ಎಡಗಾಲಿಗೆ ಗುಂಡು ಹೊಡೆದರು. ನಂತರ ಇಬ್ಬರನ್ನೂ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಯಿತು’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

**

ಎರಡು ತಿಂಗಳಲ್ಲಿ 8 ಮಂದಿಗೆ ಗುಂಡೇಟು

ಮಾರ್ಚ್ 28: ಚಾಮರಾಜಪೇಟೆ ಸ್ಮಶಾನದಲ್ಲಿ ಮಲಗಿದ್ದ ರೌಡಿ ರೂಪೇಶ್‌ಗೆ ಕಾಟನ್‌ಪೇಟೆ ಪೊಲೀಸರಿಂದ ಗುಂಡೇಟು.

ಮಾರ್ಚ್ 25: ಯುವತಿಯನ್ನು ಕಾರಿನಲ್ಲಿ ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ ಧರ್ಮಪುರಿಯ ಸೆಲ್ವಕುಮಾರ್ ಹಾಗೂ ಶಂಕರ್ ಅವರ ಕಾಲಿಗೆ ಬೆಳ್ಳಂದೂರು ಪೊಲೀಸರಿಂದ ಗುಂಡೇಟು.

ಫೆಬ್ರುವರಿ 2: ಪೊಲೀಸರಿಗೆ ಹೊಡೆದು ರೈಫಲ್ ಕಿತ್ತುಕೊಂಡು ಹೋಗಿದ್ದ ಮಧ್ಯಪ್ರದೇಶದ ಭಿಲ್ ಬುಡಕಟ್ಟು ಜನಾಂಗದ ಅಜಂ ಭಾಯ್‌ಸಿಂಗ್, ಜಿತೇನ್‌ ರೇಮಸಿಂಗ್ ಪಲಾಶೆ ಹಾಗೂ ಸುರೇಶ್ ಕೋದ್ರಿಯಾ ಮೆಹರ್ ಅವರಿಗೆ ಗುಂಡು ಹೊಡೆದ ವಿದ್ಯಾರಣ್ಯಪುರ ಪೊಲೀಸರು.

ಪ್ರತಿಕ್ರಿಯಿಸಿ (+)