ವ್ಯಕ್ತಿಗಿಂತ ಪಕ್ಷ ದೊಡ್ಡದು: ಶಾಸಕ ಮೇಟಿ

7
ಕಾಂಗ್ರೆಸ್ ನಗರ ಘಟಕದ ಮುಖಂಡರು, ಕಾರ್ಯಕರ್ತರ ಸಭೆ

ವ್ಯಕ್ತಿಗಿಂತ ಪಕ್ಷ ದೊಡ್ಡದು: ಶಾಸಕ ಮೇಟಿ

Published:
Updated:

ಬಾಗಲಕೋಟೆ: ‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಾಗಲಕೋಟೆ ಮತಕ್ಷೇತ್ರದಲ್ಲಿ ಪಕ್ಷದ ವರಿಷ್ಠರು ಯಾರಿಗೆ ಟಿಕೆಟ್ ನೀಡಿದರೂ ಎಲ್ಲರೂ ಒಗ್ಗೂಡಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸೋಣ. ವ್ಯಕ್ತಿಗಿಂತ ಪಕ್ಷ ದೊಡ್ಡದು. ಪಕ್ಷ ತಾಯಿ ಇದ್ದಂತೆ. ತಾಯಿ ಇದ್ದರೆ ಮಕ್ಕಳ ಭವಿಷ್ಯವಿರುತ್ತದೆ’ ಎಂದು ಶಾಸಕ ಎಚ್.ವೈ.ಮೇಟಿ ಹೇಳಿದರು.ನಗರದ ಭಗಿನಿ ಸಮಾಜದ ಆವರಣದಲ್ಲಿರುವ ಪಕ್ಷದ ಕಚೇರಿಯಲ್ಲಿ ಭಾನುವಾರ ನಗರ ಘಟಕದ ಮುಖಂಡರು, ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ‘ಪಕ್ಷದ ಕಾರ್ಯಕರ್ತರು, ಮುಖಂಡರು ಪಕ್ಷವನ್ನು ಬಲಪಡಿಸಿ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕು. ಈ ಮೂಲಕ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು’ ಎಂದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಕೈಗೊಂಡಿರುವ ಜನಪರ ಯೋಜನೆ ಹಾಗೂ ಅಭಿವೃದ್ಧಿ ಕಾಮಗಾರಿಗಳನ್ನು ಮನೆ-ಮನೆಗೆ ತಲುಪಿಸಿ ಪಕ್ಷದ ಪರ ಮತ ಚಲಾಯಿಸುವಂತೆ ಅವರ ಮನಪರಿವರ್ತನೆಗೆ ಮುಂದಾಗಬೇಕು’ ಎಂದರು.

ಜಿಲ್ಲಾ ಉಸ್ತುವಾರಿ ಪಾರಸಮಲ್ ಜೈನ್ ಮಾತನಾಡಿ, ‘ಮುಖಂಡರು, ಕಾರ್ಯಕರ್ತರು ಎಂಬ ಭಾವನೆಯನ್ನು ಬದಿಗಿಟ್ಟು ಎಲ್ಲರೂ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ನಾಯಕರು ನೀಡುವ ಸಲಹೆ ಸೂಚನೆಗಳನ್ನು ಗಮನದಲ್ಲಿಟ್ಟುಕೊಂಡು ಪಕ್ಷದ ಸಾಧನೆಗಳನ್ನು ಜನತೆಗೆ ಮನವರಿಕೆ ಮಾಡಿಕೊಡಬೇಕು. ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸಬೇಕು’ ಎಂದರು.

ವಕೀಲ ಎಸ್.ಕೆ.ಯಡಹಳ್ಳಿ, ಶಹರ ಕಾಂಗ್ರೆಸ್ ಘಟಕದ ಅಧ್ಯಕ್ಷ ಎ.ಡಿ.ಮೋಕಾಶಿ, ಕೆಪಿಸಿಸಿ ಸದಸ್ಯ ಎಚ್.ಎಲ್. ರೇಶ್ಮಿ, ಜಿಲ್ಲಾ ಕಾಂಗ್ರೆಸ್ ವಕ್ತಾರ ಆನಂದ ಜಿಗಜಿನ್ನಿ, ಮೈನುದ್ದೀನ್ ನಬಿವಾಲೆ, ಯುವ ಕಾಂಗ್ರೆಸ್ ಉಸ್ತುವಾರಿ ವಿಶ್ವನಾಥ ಮಾತನಾಡಿದರು.

ವೇದಿಕೆಯಲ್ಲಿ ನಗರಸಭೆ ಸದಸ್ಯರಾದ ಹಾಜಿಸಾಬ್ ದಂಡಿನ, ತಿಪ್ಪಣ್ಣ ನೀಲನಾಯಕ, ಗೋವಿಂದ ಬಳ್ಳಾರಿ, ಮಹಾಬುಬ್ಬಿ ತುರೇದ, ರುಕ್ಮಾಬಾಯಿ ಚವ್ಹಾಣ, ಮಹ್ಮದ್ ಶಫಿ ಜಮಾದಾರ, ಪ್ರೇಮನಾಥ ಗರಸಂಗಿ ಇದ್ದರು. ರಾಜು ಮನ್ನಿಕೇರಿ ಸ್ವಾಗತಿಸಿದರು, ನಾರಾಯಣ ದೇಸಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರಾಜ ಹದ್ಲಿ ವಂದಿಸಿದರು.

ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ

ಬಾಗಲಕೋಟೆ: ತಾಲ್ಲೂಕಿನ ಕಮತಗಿಯ ಪಂಚಮಸಾಲಿ ಹಾಗೂ ಆದಿಬಣಜಿಗ ಸಮಾಜದ ಮುಖಂಡರು ವಿಶ್ವನಾಥ ಲೆಕ್ಕದ ಹಾಗೂ ಬಸವರಾಜ ನರಗುಂದ ಅವರ ನೇತೃತ್ವದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು. ಅವರನ್ನು ಶಾಸಕ ಎಚ್.ವೈ.ಮೇಟಿ ಪಕ್ಷಕ್ಕೆ ಬರಮಾಡಿಕೊಂಡರು.

ಪಕ್ಷಕ್ಕೆ ಸೇರ್ಪಡೆಯಾದ ಪ್ರಮುಖರು: ಅಶೋಕ ಇಂಡಿ, ಬಸಪ್ಪ ಮೇಟಿಗೌಡರ, ವಿರುಪಾಕ್ಷಪ್ಪ ಕಾಳಗಿ, ಬಸಪ್ಪ ಹಾರೂಗೇರಿ, ತಿಪ್ಪಣ್ಣ ಕಮತರ, ಶೇಖಪ್ಪ ತೋಟಗೇರ, ಹುಚ್ಚೇಶ ಮಲ್ಲಾಡಿ, ಮಲ್ಲಪ್ಪ ತೆಗ್ಗಿ, ಹುಚ್ಚೇಶ ಕೊಪ್ಪಿ, ಸುನೀಲ ತೆಗ್ಗಿ, ಬಸಪ್ಪ ಕಳ್ಳಿಗುಡ್ಡ, ರವಿ ಕೋಟಿ, ಬಸು ಬೆಲ್ಲದ, ದೊಡ್ಡಬಸಪ್ಪ ತೆಗ್ಗಿ, ಸಣ್ಣಬಸಪ್ಪ ತೆಗ್ಗಿ.

ಕಾಂಗ್ರೆಸ್ ಪ್ರಚಾರ ಸಮಿತಿ ಸಭೆ

ಬಾಗಲಕೋಟೆ: ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರ ಮಾರ್ಗದರ್ಶನ ಹಾಗೂ ನಿರ್ದೇಶನದ ಮೇರೆಗೆ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಮಂಜುನಾಥ ವಾಸನದ ಅವರನ್ನು ನೇಮಕ ಮಾಡಲಾಗಿದೆ.ಶಾಸಕ ಎಚ್.ವೈ.ಮೇಟಿ, ಜಿಲ್ಲಾ ಉಸ್ತುವಾರಿ ಪಾರಸಮಲ್ ಜೈನ್ ಅವರು ಪ್ರಚಾರ ಸಮಿತಿ ಆದೇಶ ಪತ್ರಗಳನ್ನು ವಾಸನದ ಅವರಿಗೆ ಹಸ್ತಾಂತರಿಸಿದರು. ಸಮಿತಿಯಲ್ಲಿ ಇಬ್ಬರು ಸಂಚಾಲಕರು ಏಳು ವಿಧಾನಸಭಾ ಕ್ಷೇತ್ರಗಳಲ್ಲಿ 14 ಘಟಕಗಳನ್ನು ರಚಿಸಿ ಅವುಗಳಿಗೆ ಪ್ರತ್ಯೇಕ ಪ್ರಚಾರ ಸಮಿತಿಗಳನ್ನು ನೇಮಕ ಮಾಡಿ ಬೂತ್ ಮಟ್ಟದಲ್ಲಿ ಪ್ರಚಾರ ಸಮಿತಿಗಳನ್ನು ಅಸ್ತಿತ್ವಕ್ಕೆ ತರಲಾಗುವುದು ಎಂದು ವಾಸನದ ತಿಳಿಸಿದರು.

ಪ್ರಚಾರ ಸಮಿತಿ ಸಂಚಾಲಕ ಆನಂದ ಜಿಗಜಿನ್ನಿ ಮಾತನಾಡಿ, ‘ರಾಜ್ಯ ಸರ್ಕಾರ ಕೈಗೊಂಡಿರುವ ಜನಪರ ಯೋಜನೆಗಳನ್ನು ಕ್ಷೇತ್ರದ ಪ್ರತಿಯೊಂದು ಗ್ರಾಮದಲ್ಲಿ ಮನೆ-ಮನೆಗಳಿಗೆ ತಲುಪಿಸುವ ಕಾರ್ಯ ನಡೆಯಬೇಕು’ ಎಂದರು.

ಇದೇ ಸಂದರ್ಭದಲ್ಲಿ ಪಕ್ಷದ ಪ್ರಚಾರ ಸಮಿತಿ ಪದಾಧಿಕಾರಿಗಳಿಗೆ ಅವರ ಆದೇಶ ಪತ್ರಗಳನ್ನು ಹಸ್ತಾಂತರಿಸಲಾಯಿತು. ಡಾ.ಸಿ.ಎಸ್.ನಾಯಕ, ಮುತ್ತಣ್ಣ ಬೆಣ್ಣೂರ, ಹೊಳೆಬಸು ಶೆಟ್ಟರ, ಶಶಿಕಾಂತ ಪೂಜಾರಿ, ತಾಜುದ್ದೀನ ಕೊಣ್ಣೂರ ಸೇರಿದಂತೆಮತ್ತಿತರರು ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry