ಆಶಯ ಮರೆತ ಸಾಂಸ್ಕೃತಿಕ ಸಮುಚ್ಚಯ

7
ಸಭಾಭವನದಲ್ಲಿ ಈ ತನಕ ಸಭೆಗಳು ನಡೆದೇ ಇಲ್ಲ.. ಕಲಾ ಗ್ಯಾಲರಿಯಲ್ಲಿ ಯಾವುದೇ ಪ್ರದರ್ಶನವೂ ಆಗಿಲ್ಲ...

ಆಶಯ ಮರೆತ ಸಾಂಸ್ಕೃತಿಕ ಸಮುಚ್ಚಯ

Published:
Updated:

ಬಳ್ಳಾರಿ: ಮುಚ್ಚಿದ ವಿಚಾರ ಸಂಕಿರಣ ಭವನದಲ್ಲಿ ಪ್ರದರ್ಶನ ಕಾಣದೆ ವ್ಯರ್ಥವಾಗಿರುವ ಖ್ಯಾತ ಲೇಖಕರು ಹಾಗೂ ಕಲಾವಿದರ ಪಿಒಪಿ ಮೂರ್ತಿಗಳು, ಕಲಾ ಗ್ಯಾಲರಿಯಲ್ಲಿ ಕಲಾಕೃತಿಗಳನ್ನು ಪ್ರದರ್ಶಿಸಲು ಕಲಾವಿದರಿಗೆ ಅವಕಾಶವೇ ಇಲ್ಲ, ಅದೇ ಗ್ಯಾಲರಿಯಲ್ಲಿ, ಹತ್ತು ವರ್ಷದಿಂದ ನಡೆಯುತ್ತಲೇ ಇರುವ ಸಂಗನಕಲ್ಲು ಪ್ರತಿಕೃತಿ ನಿರ್ಮಾಣ ಕಾರ್ಯ. ಸದ್ಯಕ್ಕೆ ಕಲೆ ಸಂಗೀತ, ನಾಟಕಕ್ಕೆ ಬಳಕೆಯಾಗುತ್ತಿರುವುದು ಬಯಲು ರಂಗಮಂದಿರ ಮಾತ್ರ...ಇದು ಕನ್ನಡ ಸಂಸ್ಕೃತಿ ಇಲಾಖೆಯ ಸಾಂಸ್ಕೃತಿಕ ಸಮುಚ್ಚಯದ ಚಿತ್ರಣ.

₹1.40 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ಸಮುಚ್ಛಯವನ್ನು 1999ರಲ್ಲಿ ಉದ್ಘಾಟಿಸುವ ಸಂದರ್ಭದಲ್ಲಿ ವಿಚಾರ ಸಂಕಿರಣ ಭವನ, ಕಲಾ ಗ್ಯಾಲರಿ, ಬಯಲು ರಂಗಮಂದಿರ ಮತ್ತು ಸಂಗೀತ ಗ್ರಂಥಾಲಯ ಕಟ್ಟಡವಿತ್ತು. ಸಂಗೀತ ಗ್ರಂಥಾಲಯ ಕಟ್ಟಡದಲ್ಲಿ ಇಲಾಖೆಯ ಕಚೇರಿ ಕಾರ್ಯನಿರ್ವಹಿಸುತ್ತಿದೆ. ಅಲ್ಲಿಯೇ, ಹಂಪಿ ಉತ್ಸವದಲ್ಲಿ ನಡೆದಿರುವ ಕಾಷ್ಠಶಿಲ್ಪ ಶಿಬಿರದಲ್ಲಿ ತಯಾರಾದ ಕಲಾಕೃತಿಗಳನ್ನು ಜೋಡಿಸಿಡಲಾಗಿದೆ.

ಇಲಾಖೆಯ ಪುಸ್ತಕ ಮಳಿಗೆಯು ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ನಿರ್ಮಾಣವಾಗುವವರೆಗೂ, ಪುಸ್ತಕಗಳನ್ನು ಇದೇ ಕಟ್ಟಡ ದಾಸ್ತಾನು ಕೊಠಡಿಯೂ ಆಗಿತ್ತು! ಸಂಗೀತ ಗ್ರಂಥಾಲಯವಂತೂ ಇಲ್ಲಿ ಸ್ಥಾಪನೆಯೇ ಆಗಿಲ್ಲ.

ವಿಚಾರ ಸಂಕಿರಣ: ವಿಚಾರ ಸಂಕಿರಣ ಭವನದಲ್ಲಿ ಸಂಕಿರಣಗಳು ನಡೆದಿಲ್ಲ. 2014ರಲ್ಲಿ ಉದ್ಘಾಟನೆಗೊಂಡಿರುವ ಭವನದಲ್ಲಿ ₹9 ಲಕ್ಷ ವೆಚ್ಚದಲ್ಲಿ ಲೇಖಕರು ಮತ್ತು ಕಲಾವಿದರ ಪಿಓಪಿ ಮೂರ್ತಿಗಳನ್ನು ರೂಪಿಸಿ ಇಡಲಾಗಿದೆ.ನಿರ್ಮಿತಿ ಕೇಂದ್ರವು ನಿರ್ಮಿಸಿಕೊಟ್ಟಿದ್ದ 18 ಮೂರ್ತಿಗಳು ನಿಜ ಲೇಖಕರು ಮತ್ತು ಕಲಾವಿದರನ್ನು ಹೋಲುವುದಿಲ್ಲ ಎಂಬ ಕಾರಣದಿಂದ ಅವುಗಳ ಪ್ರದರ್ಶನವನ್ನೂ ತಡೆ ಹಿಡಿಯಲಾಗಿದೆ.‘ಹೊಸ ಮೂರ್ತಿಗಳನ್ನು ರೂಪಿಸಿಕೊಡುವಂತೆ ಅಂದಿನ ಜಿಲ್ಲಾಧಿಕಾರಿ ನೀಡಿದ್ದ ಸೂಚನೆಯನ್ನು ನಿರ್ಮಿತಿ ಕೇಂದ್ರದ ಅಧಿಕಾರಿಗಳು ಪಾಲಿಸಲಿಲ್ಲ. ಅವರು ಮಾಡಿದ್ದ ಕೆಲಸಕ್ಕೆ ಹಣವೂ ಮಂಜೂರಾಗಲಿಲ್ಲ’ ಎಂದು ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ತಿಳಿಸಿದರು.‘ಮೂರ್ತಿಗಳನ್ನು ಪರಿಷ್ಕರಿಸಿ ಕೊಡಬೇಕು ಎಂದು ಶಿಲ್ಪಕಲಾ ಅಕಾಡೆಮಿಗೂ ಪತ್ರ ಬರೆಯಲಾಗಿತ್ತು. ಪರಿಷ್ಕರಿಸಲು ಒಪ್ಪದ ಅಕಾಡೆಮಿ, ಹೊಸದಾಗಿ ನಿರ್ಮಿಸಿಕೊಡುವುದಾಗಿ ಹೇಳಿತ್ತು’ ಎಂದು ಮಾಹಿತಿ ನೀಡಿದರು.

ಕಲಾ ಗ್ಯಾಲರಿ: ಕಲಾಕೃತಿಗಳ ಪ್ರದರ್ಶನಕ್ಕೆಂದೇ ನಿರ್ಮಿಸಿರುವ ಕಲಾ ಗ್ಯಾಲರಿಯೂ ಆ ಉದ್ದೇಶಕ್ಕೆ ಬಳಕೆಯಾಗುತ್ತಿಲ್ಲ. ಅನ್ಯ ಉದ್ದೇಶಕ್ಕಾದರೂ ಬಳಕೆಯಾಗುತ್ತಿದೆ ಎಂದು ಸಮಾಧಾನ ಪಟ್ಟುಕೊಳ್ಳುವಂತೆಯೂ ಇಲ್ಲ. ‘ಆದಿಮಾನವರ ಆವಾಸ ಸ್ಥಾನವೆಂದೇ ಖ್ಯಾತವಾಗಿರುವ ತಾಲ್ಲೂಕಿನ ಸಂಗನಕಲ್ಲು ಗುಡ್ಡದ ಪ್ರತಿಕೃತಿಯೊಂದಿಗೆ ವಸ್ತು ಸಂಗ್ರಹಾಲಯ ಮಾಡುವುದಾಗಿ ಹತ್ತು ವರ್ಷದ ಪ್ರೊ.ರವಿ ಕೋರಿ ಶೆಷ್ಟರ್‌ ನೇತೃತ್ವದಲ್ಲಿ ಕಾರ್ಯ ಆರಂಭಿಸಿದಾಗ ಈ ಕಟ್ಟಡವನ್ನು ಬಿಟ್ಟುಕೊಡಲಾಗಿತ್ತು. ಆದರೆ ಇದುವರೆಗೂ ಪೂರ್ಣಗೊಂಡಿಲ್ಲ. ಅದಕ್ಕಾಗಿ ಪುರಾತತ್ವ ಮತ್ತು ಪ್ರಾಚ್ಯ ವಸ್ತು ಇಲಾಖೆಯು ₹10 ಲಕ್ಷ ಅನುದಾನವನ್ನೂ ನೀಡಿದೆ’ ಎಂದು ನಾಗರಾಜ್‌ ಮಾಹಿತಿ ನೀಡಿದರು. ‘ವಸ್ತುಸಂಗ್ರಹಾಲಯ ಕಾರ್ಯವನ್ನು ಶೀಘ್ರ ಪೂರ್ಣಗೊಳಿಸಿದರೆ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಬಹುದು ಎಂಬ ಸಲಹೆಯನ್ನೂ ಶೆಟ್ಟರ್‌ ಗಂಭೀರವಾಗಿ ಪರಿಗಣಿಸಿಲ್ಲ. ಮೂರ್ನಾಲ್ಕು ತಿಂಗಳಿಗೊಮ್ಮೆ ಅವರು ಭೇಟಿ ನೀಡುವುದು ಬಿಟ್ಟರೆ, ಹೆಚ್ಚಿನ ಕೆಲಸ ನಡೆಯುತ್ತಿಲ್ಲ’ ಎಂದರು.

ಶತಮಾನೋತ್ಸವ ಭವನ: ‘ಸಮುಚ್ಛಯದ ಆವರಣದಲ್ಲೇ ಕನ್ನಡ ಭವನದ ಮೇಲ್ಭಾಗ ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವ ಭವನವನ್ನು ಉದ್ಘಾಟಿಸಲಾಗಿದೆ. ಆದರೆ ನಿರ್ಮಾಣ ಕಾರ್ಯ ಮಾತ್ರ ಇನ್ನೂ ನಡೆದಿದೆ. ಭವನದಲ್ಲಿ ಆಗಾಗ ಕಾರ್ಯಕ್ರಗಳು ನಡೆಯುತ್ತವೆ’ ಎಂದರು.ಇಲ್ಲಿಯೇ ನಗರ ಕೇಂದ್ರ ಗ್ರಂಥಾಲಯವೂ ಇದ್ದು, ನೂರಾರು ವಿದ್ಯಾರ್ಥಿಗಳು ಭೇಟಿ ನೀಡುತ್ತಾರೆ. ಸಮುಚ್ಚಯದ ಆವರಣದ ಮರ–ಗಿಡಗಳ ನೆರಳಲ್ಲಿ ಕುಳಿತು ಓದಿಕೊಳ್ಳುತ್ತಾರೆ.

ಜಿಲ್ಲಾಧಿಕಾರಿ ಬಂಗಲೆಯ ಜಾಗ ಇದು!

ಬಳ್ಳಾರಿ: ‘ಸಾಂಸ್ಕೃತಿಕ ಸಮುಚ್ಛಯ ಇರುವ ನಾಲ್ಕು ಎಕರೆ ಪ್ರದೇಶ ಜಿಲ್ಲಾಧಿಕಾರಿ ಬಂಗಲೆಗೆ ಸೇರಿದ್ದು. ಅಂದು ಜಿಲ್ಲಾಧಿಕಾರಿಯಾಗಿದ್ದ ಗೌರಿ ತ್ರಿವೇದಿಯವರು ಜಮೀನನ್ನು ಬಿಟ್ಟುಕೊಟ್ಟು ಔದಾರ್ಯ ಮೆರೆದಿದ್ದರು’ ಎಂದು ಸ್ಮರಿಸುತ್ತಾರೆ ಆಗ ಜಿಲ್ಲಾ ವಾರ್ತಾಧಿಕಾರಿಯಾಗಿದ್ದ ಚೋರನೂರು ಕೊಟ್ರಪ್ಪ.

₹73 ಲಕ್ಷ ಮಂಜೂರು

ಬಳ್ಳಾರಿ: ‘ಸಮುಚ್ಚಯದ ಅಭಿವೃದ್ಧಿಗಾಗಿ ಈಗ ₹73.26 ಲಕ್ಷ ಬಿಡುಗಡೆಯಾಗಿದೆ. ಸಮುಚ್ಚಯದಲ್ಲಿ ಕಾಂಕ್ರೀಟ್‌ ಚರಂಡಿ ನಿರ್ಮಾಣ, ಬಯಲು ರಂಗಮಂದಿರದ ಪಕ್ಕದಲ್ಲಿರುವ ವಿಸ್ತಾರ ಜಗುಲಿಯನ್ನು ಅಭಿವೃದ್ಧಿಪಡಿಸಿ ವಿಚಾರ ಸಂಕೀರ್ಣವನ್ನು ನಿರ್ಮಿಸಲಾಗುವುದು’ ಎಂದು ನಾಗರಾಜ ತಿಳಿಸಿದರು.

**

ಮುಂದಿನ ದಿನಗಳಲ್ಲಿ ಸಾಂಸ್ಕೃತಿಕ ಸಮುಚ್ಚಯದ ಎಲ್ಲ ಭವನಗಳನ್ನು ಅವುಗಳ ಆಶಯಕ್ಕೆ ತಕ್ಕಂತೆ ಬಳಸಲು ಪ್ರಯತ್ನಿಸಲಾಗುವುದು – ಬಿ.ನಾಗರಾಜ,ಸಹಾಯಕ ನಿರ್ದೇಶಕ, ಕನ್ನಡ–ಸಂಸ್ಕೃತಿ ಇಲಾಖೆ.

**

ಸಾಂಸ್ಕೃತಿಕ ಸಮುಚ್ಛಯ ನಿರ್ಮಾಣಗೊಳ್ಳುವಲ್ಲಿ ಎಂ.ಪಿ.ಪ್ರಕಾಶರ ಕೊಡುಗೆ ದೊಡ್ಡದು. ಹೀಗಾಗಿ ಸಮುಚ್ಚಯಕ್ಕೆ ಅವರ ಹೆಸರಿಟ್ಟರೆ ಸಾರ್ಥಕವಾಗುತ್ತದೆ – ಚೋರನೂರು ಕೊಟ್ರಪ್ಪ,ವೀರಶೈವ ವಿದ್ಯಾವರ್ಧಕ ಸಂಘದ ಗೌರವ ಕಾರ್ಯದರ್ಶಿ

**

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry