ಮಂಗಳವಾರ, ಆಗಸ್ಟ್ 11, 2020
21 °C
ನಗರಕ್ಕೆ ಲಗ್ಗೆ ಇಟ್ಟ ಬಗೆ ಬಗೆಯ ಮಣ್ಣಿನ ಮಡಿಕೆಗಳು

‘ಬಡವರ ಫ್ರಿಡ್ಜ್‌’ಗೆ ಹೆಚ್ಚಿದ ಬೇಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಬಡವರ ಫ್ರಿಡ್ಜ್‌’ಗೆ ಹೆಚ್ಚಿದ ಬೇಡಿಕೆ

ಬೀದರ್: ಬೇಸಿಗೆಯ ಬಿಸಿಲ ತಾಪ ದಿನೇ ದಿನೇ ಹೆಚ್ಚುತ್ತಿದಂತೆಯೇ, ‘ಬಡವರ ಫ್ರಿಡ್ಜ್‌’ ಎಂದೇ ಕರೆಯಲಾಗುವ ಮಣ್ಣಿನ ಮಡಿಕೆಗಳಿಗೆ ಬೇಡಿಕೆ ಬಂದಿದೆ. ವಿವಿಧ ಗಾತ್ರ ಹಾಗೂ ಪ್ರಕಾರಗಳ ಮಣ್ಣಿನ ಮಡಿಕೆಗಳು ನಗರದ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಬೇಸಿಗೆಯಲ್ಲಿ ಕುಡಿಯಲು ತಣ್ಣನೆ ನೀರು ಬಯಸುವುದು ಸಾಮಾನ್ಯ. ಹೀಗಾಗಿ ನಗರದ ಮಾರುಕಟ್ಟೆಯಲ್ಲಿ ಸದ್ಯ ಕುಂಬಾರರು ತಯಾರಿಸುವ ಸಾಂಪ್ರದಾಯಿಕ ಮಣ್ಣಿನ ಮಡಿಕೆಗಳ ಮಾರಾಟ ಜೋರಾಗಿ ನಡೆದಿದೆ.ಕುಂಬಾರರು ಸ್ವತಃ ತಾವು ತಯಾರಿಸಿದ ಹಾಗೂ ವಿವಿಧೆಡೆಯಿಂದ ಖರೀದಿಸಿ ತಂದ ಮಡಿಕೆ, ರಂಜಣಗಿಗಳನ್ನು ನಗರದ ವಿವಿಧೆಡೆ ಕಡೆ ರಸ್ತೆ ಬದಿಯಲ್ಲಿ ಸಾಲಾಗಿ ಜೋಡಿಸಿಟ್ಟು ಮಾರಾಟ ಮಾಡುತ್ತಿದ್ದಾರೆ.

ನಗರದ ನೆಹರೂ ಕ್ರೀಡಾಂಗಣ, ಜಿಲ್ಲಾ ಸರ್ಕಾರಿ ಆಸ್ಪತ್ರೆ, ಜನವಾಡ ರಸ್ತೆ, ಗುಂಪಾ, ಮೈಲೂರು ರಸ್ತೆ, ಚಿದ್ರಿ ರಸ್ತೆ ಸೇರಿದಂತೆ ವಿವಿಧೆಡೆ ಕುಂಬಾರರು ಮಡಿಕೆಗಳ ತಾತ್ಕಾಲಿಕ ಅಂಗಡಿಗಳನ್ನು ತೆರೆದಿದ್ದಾರೆ.ಸ್ಥಿತಿವಂತರು ಫ್ರಿಡ್ಜ್‌ಗಳನ್ನು ಖರೀದಿಸುತ್ತಾರೆ. ಆದರೆ, ಅದನ್ನು ಕೊಂಡುಕೊಳ್ಳಲು ಆಗದ ಬಡವರು ಕಡಿಮೆ ಖರ್ಚಿನಲ್ಲಿ ತಂಪು ನೀರು ಕುಡಿಯಲು ಮಣ್ಣಿನ ಮಡಿಕೆಗಳ ಮೊರೆ ಹೋಗುತ್ತಿದ್ದಾರೆ. ಪದೇ ಪದೇ ವಿದ್ಯುತ್‌ ಕೈಕೊಟ್ಟರೆ ಫ್ರಿಡ್ಜ್‌ನಲ್ಲಿ ನೀರು ತಂಪಾಗಿ ಇರುವುದಿಲ್ಲ. ಬಹಳ ತಣ್ಣನೆಯ ನೀರು ಕುಡಿದರೂ ಗಂಟಲು ನೋವು ಮತ್ತಿತರ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಮಣ್ಣಿನ ಮಡಿಕೆಗಳಲ್ಲಿ ನೀರು ಸದಾ ತಂಪಾಗಿರತ್ತದೆ. ಆರೋಗ್ಯ ಮೇಲೆ ಯಾವುದೇ ದುಷ್ಪರಿಣಾಮ ಉಂಟಾಗುವುದಿಲ್ಲ ಎನ್ನುತ್ತಾರೆ ಜನ. ನಗರದ ಮಾರುಕಟ್ಟೆಯಲ್ಲಿ ಸುರೈ, ಗಡಿಗೆ, ಕುಳ್ಳಿ ಸೇರಿದಂತೆ ವಿವಿಧ ಬಗೆಯ ದೊಡ್ಡ ಹಾಗೂ ಸಣ್ಣ ಗಾತ್ರದ ಮಡಿಕೆಗಳು ಬಂದಿವೆ. ಬೆಲೆ ₹ 80 ರಿಂದ ₹ 200ರ ವರೆಗೂ ಇವೆ. ರಂಜಣಗಿ ಬೆಲೆ ₹ 400 ರಿಂದ ₹ 1,000 ಇದೆ ಎಂದು ಹೇಳುತ್ತಾರೆ ಗಾದಗಿ ಗ್ರಾಮದ ಸುಧಾಕರ.

‘ನಗರದ ನೌಬಾದ್‌, ಬೀದರ್ ತಾಲ್ಲೂಕಿನ ಗಾದಗಿ, ಚಟ್ನಳ್ಳಿ, ಜಹೀರಾಬಾದ್ ತಾಲ್ಲೂಕಿನ ತಾಂಡೂರು, ಕೋಹಿನೂರು, ನಿಜಮಾಬಾದ್‌ ಮತ್ತಿತರ ಕಡೆಗಳಿಂದ ಮಡಿಕೆಗಳನ್ನು ತಂದು ಮಾರಾಟ ಮಾಡಲಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬೆಲೆಯಲ್ಲಿ ₹ 20 ರಿಂದ ₹ 30 ಜಾಸ್ತಿಯಾಗಿದೆ. ಆದರೆ, ಜನ ಇದನ್ನು ಲೆಕ್ಕಿಸದೇ ಖರೀದಿಸುತ್ತಿದ್ದಾರೆ’ ಎನ್ನುತ್ತಾರೆ ಅವರು.ಹೆಚ್ಚುತ್ತಿರುವ ಬಿಸಿಲಿನಿಂದಾಗಿ ಕಲ್ಲಂಗಡಿ ಮಾರಾಟ ಭರಾಟೆಯಿಂದ ಸಾಗಿದೆ. ತಂಪು ಪಾನೀಯಗಳಿಗೂ ಅಧಿಕ ಬೇಡಿಕೆ ಬಂದಿದೆ. ಜನ ಎಳೆನೀರು, ಕಬ್ಬಿನ ಹಾಲು, ಜ್ಯೂಸ್, ಕೂಲ್ ಡ್ರಿಂಕ್ಸ್‌ಗಳನ್ನು ಕುಡಿದು ದಾಹ ನೀಗಿಸಿಕೊಂಡು ಕೂಲ್ ಆಗುತ್ತಿದ್ದಾರೆ.

**

ಬಿಸಿಲ ಝಳ ಹೆಚ್ಚುತ್ತಿರುವ ಕಾರಣ ತಂಪು ನೀರಿಗಾಗಿ ಮಣ್ಣಿನ ಮಡಿಕೆ ಖರೀದಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಪ್ರತಿದಿನ 30 ರಿಂದ 40 ಮಡಿಕೆಗಳು ಬಿಕರಿಯಾಗುತ್ತಿವೆ –  ಸುಧಾಕರ ಗಾದಗಿ,ಮಡಿಕೆ ವ್ಯಾಪಾರಿ.

**

ಲೋಕೇಶ್‌ ಪಾಟೀಲ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.