ಮತಪಟ್ಟಿಯಲ್ಲಿ ಹೆಸರು ಖಚಿತಪಡಿಸಿ

7
ಅಧಿಕಾರಿಗಳಿಗೆ ಚುನಾವಣೆ ತಯಾರಿ ಕುರಿತು ನಡೆದ ಸಭೆಯಲ್ಲಿ ಶ್ರೀವಿದ್ಯಾ ಸೂಚನೆ

ಮತಪಟ್ಟಿಯಲ್ಲಿ ಹೆಸರು ಖಚಿತಪಡಿಸಿ

Published:
Updated:

ಮಡಿಕೇರಿ: ವಿಧಾನಸಭಾ ಚುನಾವಣೆ ಹಿನ್ನೆಲೆ ಮತದಾರರ ಪಟ್ಟಿಯಲ್ಲಿ ಪ್ರಮುಖರ ಹೆಸರು ಮತ್ತು ಕುಟುಂಬದವರ ಹೆಸರು ಇದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳುವಂತೆ ಸಂಬಂಧಪಟ್ಟ ಚುನಾವಣಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಸೂಚಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾನುವಾರ ಚುನಾವಣಾಧಿಕಾರಿಗಳು ಹಾಗೂ ನೋಡೆಲ್ ಅಧಿಕಾರಿಗಳೊಂದಿಗೆ ಚುನಾವಣೆ ತಯಾರಿ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಹೆಸರು ಸೇರ್ಪಡೆ ಮಾಡಲು 4 ಸಾವಿರ ಅರ್ಜಿಗಳು ಬಂದಿದ್ದು, ಇದರಲ್ಲಿ 250 ಅರ್ಜಿಗಳಿಗೆ ಮತದಾರರ ಗುರುತಿನ ಚೀಟಿ ನೀಡಲಾಗಿದೆ. ಉಳಿದವುಗಳನ್ನು ತ್ವರಿತವಾಗಿ ಪರಿಶೀಲಿಸಿ ಮತದಾರರ ಗುರುತಿನ ಚೀಟಿ ನೀಡುವಂತೆ ತಹಶೀಲ್ದಾರರಿಗೆ ಜಿಲ್ಲಾಧಿಕಾರಿ ಸೂಚಿಸಿದರು. ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ವಿವಿಧ ತಂಡಗಳೊಂದಿಗೆ ಸಮನ್ವಯತೆಯಿಂದ ಹದ್ದಿನ ಕಣ್ಣಿಟ್ಟು ಚುನಾವಣೆಯಲ್ಲಿ ಯಾವುದೇ ರೀತಿಯ ಅಕ್ರಮಗಳು ಆಗದಂತೆ ಎಚ್ಚರಿಕೆ ವಹಿಸಬೇಕು. ಅಕ್ರಮಗಳು ಕಂಡುಬಂದಲ್ಲಿ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಹೇಳಿದರು.

ಸಿಬ್ಬಂದಿ ರಜೆ ಪಡೆಯುವಂತಿಲ್ಲ: ನೋಡಲ್ ಅಧಿಕಾರಿಗಳು ಪ್ರತಿನಿತ್ಯ ತಮ್ಮ ಕ್ಷೇತ್ರ ವ್ಯಾಪ್ತಿಯ ಮಾಹಿತಿ ನೀಡಬೇಕು. ಸಮಸ್ಯೆಗಳಿದ್ದಲ್ಲಿ ತಕ್ಷಣ ಗಮನಕ್ಕೆ ತರಬೇಕು, ಅಧಿಕಾರಿಗಳು ಮತ್ತು ಸಿಬ್ಬಂದಿ ರಜೆ ಪಡೆಯುವಂತಿಲ್ಲ. ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿಯೇ ಇರಬೇಕು ಎಂದು ಶ್ರೀವಿದ್ಯಾ ಸೂಚಿಸಿದರು.

ಸಿ.ಸಿ. ಟಿವಿ ಕ್ಯಾಮೆರಾ ಕಡ್ಡಾಯ: ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಉಪ ವಿಭಾಗಾಧಿಕಾರಿ ನಂಜುಂಡೇ ಗೌಡ ಹಾಗೂ ವಿರಾಜಪೇಟೆ

ವಿಧಾನಸಭಾ ಕ್ಷೇತ್ರಕ್ಕೆ ಕೃಷಿ ಇಲಾಖೆಯ ಉಪ ನಿರ್ದೇಶಕ ರಾಜು ಅವರನ್ನು ಚುನಾವಣಾಧಿಕಾರಿಯಾಗಿ (ಆರ್‌ಒ) ನಿಯೋಜಿಸಲಾಗಿದ್ದು, ಕಡ್ಡಾಯವಾಗಿ ಸಿ.ಸಿ. ಟಿವಿ ಕ್ಯಾಮೆರಾ ಅಳವಡಿಸಿಕೊಳ್ಳುವಲ್ಲಿ ಕ್ರಮ ವಹಿಸಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸಿಇಒ ಪ್ರಶಾಂತ್ ಕುಮಾರ್ ಮಿಶ್ರ ಮಾತನಾಡಿ, ವಿರಾಜಪೇಟೆ ಮತ್ತು ಸೋಮವಾರಪೇಟೆ ತಾಲ್ಲೂಕಿನ ಹಾಡಿಗಳು ಸೇರಿದಂತೆ ಅಲ್ಲಿನ ಕುಟುಂಬದವರಿಗೆ ಮತದಾರರ ಗುರುತಿನ ಚೀಟಿ ನೀಡಲಾಗಿದೆಯೆ ಎಂಬುದನ್ನು ತ್ವರಿತವಾಗಿ ಪರಿಶೀಲಿಸುವಂತೆ ನೋಡೆಲ್ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ಅವರು ಜಿಲ್ಲೆಯ ಚೆಕ್‌ಪೋಸ್ಟ್‌ಗಳಲ್ಲಿ ಅಗತ್ಯ ಬಂದೋಬಸ್ತ್ ಮಾಡಲಾಗಿದೆ. ಬ್ಯಾನರ್, ಪೋಸ್ಟರ್ ಮತ್ತು ಬಂಟಿಂಗ್ಸ್‌ಗಳನ್ನು ಅಳವಡಿಸುವಂತಿಲ್ಲ, ಇಂತಹದು ಕಂಡುಬಂದಲ್ಲಿ ಕೂಡಲೇ ಮಾಹಿತಿ ನೀಡಬೇಕು ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಿ.ಎಂ.ಸತೀಶ್ ಕುಮಾರ್, ಚುನಾವಣಾಧಿಕಾರಿ ರಾಜು, ಸಹಾಯಕ ಚುನಾವಣಾಧಿಕಾರಿಗಳಾದ ಗೋವಿಂದ ರಾಜು, ಶಾರದಾಂಬ, ಬಾಡಕರ್, ನೋಡಲ್ ಅಧಿಕಾರಿಗಳಾದ ವಾಲ್ಟರ್ ಡಿಮೆಲ್ಲೊ, ಮಂಜಳಾ, ಸುಂದರರಾಜ್, ಪ್ರಭು, ರಾಜಕುಮಾರ ರೆಡ್ಡಿ, ಬಿ.ಶುಭಾ ಹಾಜರಿದ್ದರು.

ಪೊಲೀಸ್ ಇಲಾಖೆಯಿಂದ ಎನ್‌ಒಸಿ ಅಗತ್ಯ

ರಾಜಕೀಯ ಪಕ್ಷಗಳ ಸಭೆ ಸಮಾರಂಭ ಅನುಮತಿ ನೀಡುವ ಸಂದರ್ಭದಲ್ಲಿ ಪೊಲೀಸ್ ಇಲಾಖೆಯಿಂದ ಎನ್‌ಒಸಿ ಪಡೆಯಲಾಗಿದೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಬೇಕು. ಈ ಸಂಬಂಧ ಅನುಮತಿ ನೀಡುವ ಅಧಿಕಾರ ಆಯಾಯ ವಿಧಾನಸಭೆ ಕ್ಷೇತ್ರಕ್ಕೆ ನಿಯೋಜನೆಗೊಂಡಿರುವ ಚುನಾವಣಾಧಿಕಾರಿಯದ್ದು ಎಂದು ಶ್ರೀವಿದ್ಯಾ ತಿಳಿಸಿದರು.

**

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮದ್ಯ ಮಾರಾಟ ಹೆಚ್ಚಳವಾಗಿದೆ. ಇದಕ್ಕೆ ಕಾರಣ, ಯಾವ ಕಡೆಗಳಲ್ಲಿ ಮದ್ಯ ಸಂಗ್ರಹಿಸಿರಬಹುದು ಎಂಬ ಮಾಹಿತಿಯನ್ನು ನೋಡಲ್ ಅಧಿಕಾರಿಗಳು ಸಂಗ್ರಹಿಸಬೇಕು – ಶ್ರೀವಿದ್ಯಾ, ಜಿಲ್ಲಾಧಿಕಾರಿ, ಕೊಡಗು

**

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry