₹ 18 ಕೋಟಿ ಆಸ್ತಿ ದಾನ

7

₹ 18 ಕೋಟಿ ಆಸ್ತಿ ದಾನ

Published:
Updated:
₹ 18 ಕೋಟಿ ಆಸ್ತಿ ದಾನ

ಕುಣಿಗಲ್: ಚುಂಚನಗಿರಿ ಮಠಕ್ಕೆ ಸುಮಾರು ₹18 ಕೋಟಿ ಮೌಲ್ಯದ ಆಸ್ತಿಯನ್ನು ಇಲ್ಲಿನ ಎರಡು ಶಿಕ್ಷಣ ಸಂಸ್ಥೆಗಳು ದಾನ ನೀಡಿವೆ.

‌ಕುಣಿಗಲ್‌ನಿಂದ ಬೆಂಗಳೂರು ಮತ್ತಿತರ ಕಡೆ ವಲಸೆ ಹೋಗಿದ್ದ ಉದ್ಯಮಿಗಳು, ವೈದ್ಯರು, ಎಂಜಿನಿಯರ್‌ಗಳು ಸೇರಿಕೊಂಡು 26 ವರ್ಷಗಳ ಹಿಂದೆ ‘ಕುಣಿಗಲ್‌ ಅನಿವಾಸಿ ಟ್ರಸ್ಟ್‌’ ಸ್ಥಾಪಿಸಿದ್ದರು. ಆ ಟ್ರಸ್ಟ್‌ಗೆ ಸೇರಿದ್ದ ಪಟ್ಟಣದ ಐಟಿಐ ಕಾಲೇಜು, ಪ್ರೌಢಶಾಲೆ ಸೇರಿ ಸುಮಾರು ₹ 8 ಕೋಟಿ ಮೌಲ್ಯದ ಆಸ್ತಿಯನ್ನು ಸೋಮವಾರ ಆದಿಚುಂಚನಗಿರಿ ಮಠಾಧೀಶ ನಿರ್ಮಲಾನಂದನಾಥ ಸ್ವಾಮೀಜಿ ಅವರಿಗೆ ಹಸ್ತಾಂತರಿಸಲಾಯಿತು.

ಟ್ರಸ್ಟ್‌ನಲ್ಲಿದ್ದ ಪದಾಧಿಕಾರಿಗಳಿಗೆ ವಯಸ್ಸಾಗಿದೆ. ಕಾಲೇಜು, ಶಾಲೆ ನಡೆಸಲು ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿ ಈ ದಾನ ನೀಡಲಾಗಿದೆ. ಮಠದ ಸುಪರ್ದಿಯಲ್ಲಿದ್ದರೆ ಬಡಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಲಿದೆ ಎಂದು ಟ್ರಸ್ಟ್‌ನ ಪದಾಧಿಕಾರಿಗಳು ಆಶಯ ವ್ಯಕ್ತಪಡಿಸಿದ್ದಾರೆ.

‘ಭಕ್ತರ ಸಹಕಾರದಿಂದ ಮಠ ಪ್ರವರ್ಧಮಾನಕ್ಕೆ ಬಂದಿದೆ. ಗ್ರಾಮೀಣ ಪ್ರದೇಶಗಳಲ್ಲಿರುವ ಮಠದ ಶಿಕ್ಷಣ ಸಂಸ್ಥೆಗಳು ಅಲ್ಲಿನ ಶೈಕ್ಷಣಿಕ, ಸಾಮಾಜಿಕ ಮತ್ತು ಆರೋಗ್ಯಕರ ಪ್ರಗತಿಗೆ ಶ್ರಮಿಸುತ್ತಿವೆ’ ಎಂದು ಸ್ವಾಮೀಜಿ ಹೇಳಿದರು.

ಟ್ರಸ್ಟ್‌ನ ಅಧ್ಯಕ್ಷ ಬಸವಯ್ಯ, ಪದಾಧಿಕಾರಿಗಳಾದ ಎಂ.ನಾಗರಾಜು, ನರಸಿಂಹಯ್ಯ, ಚುಂಚನಗಿರಿ ಮಠದ ಮುಖ್ಯ ಆಡಳಿತಾಧಿಕಾರಿ ಶಿವರಾಮ್‌, ವಿಧಾನ ಪರಿಷತ್ ಸದಸ್ಯ ರಾಮಚಂದ್ರೇಗೌಡ, ಡಾ.ಗಂಗಾಧರ್, ಕೃಷಿ ವಿ.ವಿಯ ವಿಶ್ರಾಂತ ಕುಲಪತಿ ನಾರಾಯಣಗೌಡ ಇದ್ದರು. ದಾನಿಗಳನ್ನು ಸನ್ಮಾನಿಸಲಾಯಿತು.

ಸಂಜೆ ಕಗ್ಗರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಗ್ಗರೆಯಲ್ಲಿರುವ ತೋಂಟದ ಸಿದ್ದಲಿಂಗಸ್ವಾಮಿ ಶಿಕ್ಷಣ ಟ್ರಸ್ಟ್‌ಗೆ ಸೇರಿದ್ದ ಶಾಲೆ ಹಾಗೂ 30 ಎಕರೆ ಭೂಮಿ, ಯಲಿಯೂರಿನಲ್ಲಿರುವ ಮಾರುತಿ ಗ್ರಾಮಾಂತರ ಪ್ರೌಢಶಾಲೆ ಮತ್ತು ಒಂದು ಎಕರೆ ಭೂಮಿಯ ದಾಖಲೆಗಳನ್ನು ನಿರ್ಮಲಾನಂದನಾಥ ಸ್ವಾಮೀಜಿ ಅವರಿಗೆ ಹಸ್ತಾಂತರಿಸಲಾಯಿತು.

ಈ ಆಸ್ತಿ ಮೌಲ್ಯ ಸುಮಾರು ₹ 10 ಕೋಟಿ ಎಂದು ಅಂದಾಜಿಸಲಾಗಿದೆ. ಶಾಲೆ ಆಡಳಿತ ನೋಡಿಕೊಳ್ಳಲು ಸಾಧ್ಯವಾಗದ ಕಾರಣ ಮಠಕ್ಕೆ ನೀಡಿದ್ದಾಗಿ ಟ್ರಸ್ಟ್‌ನ ಕಾರ್ಯದರ್ಶಿ ರಾಜಣ್ಣ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry