ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಡಿಕೆ ಮುಖ್ಯಮಂತ್ರಿ ಕನಸಿಗೆ ನೀರೆರೆಯಲಿದೆಯೇ ರಾಮನಗರ?

Last Updated 2 ಏಪ್ರಿಲ್ 2018, 20:09 IST
ಅಕ್ಷರ ಗಾತ್ರ

ರಾಜ್ಯಕ್ಕೆ ಮೂವರು ಮುಖ್ಯಮಂತ್ರಿಗಳನ್ನು ಕೊಟ್ಟ ಕೀರ್ತಿ ರಾಮನಗರದ್ದು. ಇಲ್ಲಿನವರೇ ಆದ ಕೆಂಗಲ್‌ ಹನುಮಂತಯ್ಯ ಮುಖ್ಯಮಂತ್ರಿಯಾಗಿ ವಿಧಾನಸೌಧ ಕಟ್ಟಿಸಿದರು. ಇನ್ನೊಬ್ಬರು ಮುಖ್ಯಮಂತ್ರಿ ಮಾತ್ರವಲ್ಲದೆ, ದೇಶದ ಪ್ರಧಾನಿಯೂ ಆದರು. ಮತ್ತೊಬ್ಬರು, ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಪ್ರಯತ್ನದಲ್ಲಿ ಇದ್ದಾರೆ.

ದೇವೇಗೌಡರ ಕುಟುಂಬಕ್ಕೆ ರಾಮನಗರವು ಅದೃಷ್ಟದ ವಿಧಾನಸಭಾ ಕ್ಷೇತ್ರವೆಂದೇ ಪರಿಗಣಿತವಾಗಿದೆ. 1994ರ ಚುನಾವಣೆಯಲ್ಲಿ ಇಲ್ಲಿ ಅಳುಕಿನಿಂದಲೇ ಸ್ಪರ್ಧೆಗೆ ಇಳಿದಿದ್ದ ಎಚ್‌.ಡಿ. ದೇವೇಗೌಡರು ಭರ್ಜರಿ ಗೆಲುವಿನೊಂದಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದರು. 2004ರ ಚುನಾವಣೆಯಲ್ಲಿ ಇಲ್ಲಿಂದಲೇ ಮೊದಲ ಬಾರಿ ಕಣಕ್ಕೆ ಇಳಿದ ಎಚ್.ಡಿ. ಕುಮಾರಸ್ವಾಮಿ, ಮುಂದೆ ಸಮ್ಮಿಶ್ರ ಸರ್ಕಾರ ರಚಿಸಿ ರಾಜ್ಯದ ಮುಖ್ಯಮಂತ್ರಿ ಆದರು. ಹೀಗಾಗಿ ರಾಮನಗರದ ಬಗ್ಗೆ ಅವರಿಗೆ ಅಪಾರ ಒಲವಿದೆ.

ಜಾತಿ ರಾಜಕಾರಣ ಮತ್ತು ಜನಪ್ರಿಯತೆ– ಎರಡರ ಬಲದಿಂದಲೂ ಕುಮಾರಸ್ವಾಮಿ ಇಲ್ಲಿ ಸತತವಾಗಿ ಗೆಲ್ಲುತ್ತಾ ಬಂದಿದ್ದಾರೆ. ಇಲ್ಲಿ ಒಕ್ಕಲಿಗ ಸಮುದಾಯ ಬಹುಸಂಖ್ಯಾತವಾಗಿದೆ. ಹಿಂದೊಮ್ಮೆ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ರಾಮನಗರ ಕ್ಷೇತ್ರವು ಎಚ್‌ಡಿಕೆ ರಾಜಕೀಯ ಪ್ರವೇಶದಿಂದ ಜೆಡಿಎಸ್ ತೆಕ್ಕೆಗೆ ಜಾರಿದೆ. 2004, 2008 ಹಾಗೂ 2013ರ ಚುನಾವಣೆಯಲ್ಲಿ ಕುಮಾರಸ್ವಾಮಿ ಸತತವಾಗಿ ಆಯ್ಕೆಯಾಗಿದ್ದಾರೆ.

2009ರಲ್ಲಿ ಎಚ್‌ಡಿಕೆ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಕೆ. ರಾಜು ಸಹ ಗೆಲುವು ಕಂಡಿದ್ದಾರೆ. ಒಟ್ಟು 5 ಬಾರಿ ಸ್ಪರ್ಧಿಸಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಕಾಂಗ್ರೆಸ್‌ ಮುಖಂಡ ಸಿ.ಎಂ. ಲಿಂಗಪ್ಪ, ಕುಮಾರಸ್ವಾಮಿ ಕ್ಷೇತ್ರ ಪ್ರವೇಶದ ಬಳಿಕ ಸ್ಪರ್ಧೆಯಿಂದಲೇ ಹಿಂದೆ ಸರಿದಿದ್ದಾರೆ.

ಮುಖ್ಯಮಂತ್ರಿಯಾದ ಸಂದರ್ಭದಲ್ಲಿ, ರಾಮನಗರವನ್ನು 2007ರ ಆಗಸ್ಟ್ 23ರಂದು ಜಿಲ್ಲಾ ಕೇಂದ್ರವಾಗಿ ಘೋಷಣೆ ಮಾಡುವ ಮೂಲಕ ಎಚ್‌ಡಿಕೆ ಮತದಾರರ ಋಣ ತೀರಿಸುವ ಪ್ರಯತ್ನ ಮಾಡಿದರು. ಇಲ್ಲಿಯೇ ಆರೋಗ್ಯ ವಿಶ್ವವಿದ್ಯಾಲಯ ಸ್ಥಾಪನೆಯ ಘೋಷಣೆ ಮಾಡಿದರು. ಮೊದಲಿನ ಚುನಾವಣೆಗಳಲ್ಲಿ ಕೇವಲ ನಾಮಪತ್ರ ಸಲ್ಲಿಸಿ, ಕಡೆಯ ದಿನಗಳಲ್ಲಿ ಪ್ರಚಾರ ಮಾಡಿದರೂ ಗೆಲುವು ಅವರ ಕೈ ಹಿಡಿದಿದೆ.

ಆದರೆ 2013ರ ಚುನಾವಣೆ ಅವರಿಗೆ ಅಷ್ಟು ಸುಲಭವಾಗಿರಲಿಲ್ಲ. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮರಿದೇವರು ತೀವ್ರ ಸ್ಪರ್ಧೆ ಒಡ್ಡಿದ್ದರು. ವರ್ಷಗಳ ಹಿಂದೆ ಮರಿದೇವರು ನಿಧನರಾದರು. ಇದೀಗ ಅವರ ಸ್ಥಾನದಲ್ಲಿ ಕೈ ಪಾಳಯವು ಜಿಲ್ಲಾ ಪಂಚಾಯಿತಿಯ ಮಾಜಿ ಅಧ್ಯಕ್ಷ ಇಕ್ಬಾಲ್ ಹುಸೇನ್‌ರನ್ನು ಕಣಕ್ಕೆ ಇಳಿಸುತ್ತಿದೆ. ಕ್ಷೇತ್ರದಲ್ಲಿ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದೂ ಈ ಆಯ್ಕೆಗೆ ಕಾರಣ
ವಾಗಿದೆ.

ರಾಜ್ಯ ರಾಜಕಾರಣದಲ್ಲಿ ಸಕ್ರಿಯವಾಗಿರುವ ಕಾರಣ ಎಚ್‌ಡಿಕೆ ಕ್ಷೇತ್ರಕ್ಕೆ ಭೇಟಿ ನೀಡುವುದು ಅಪರೂಪ. ಇಲ್ಲಿನ ಸರ್ಕಾರಿ ಸಭೆಗಳು, ಪ್ರಗತಿ ಪರಿಶೀಲನಾ ಕಾರ್ಯಕ್ರಮಗಳು ಅವರ ಅನುಪಸ್ಥಿತಿಯಲ್ಲಿಯೇ ನಡೆದಿವೆ.

ಕುಮಾರಸ್ವಾಮಿ ಅಧಿಕಾರದಿಂದ ಇಳಿದ ಬಳಿಕ ಕ್ಷೇತ್ರವು ಹೆಚ್ಚೇನೂ ಅಭಿವೃದ್ಧಿ ಕಂಡಿಲ್ಲ. ಅವರ ಆಡಳಿತಾವಧಿಯಲ್ಲಿ ಘೋಷಣೆ ಆಗಿದ್ದ ರಾಜೀವ್‌ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಕ್ಯಾಂಪಸ್‌ ನಿರ್ಮಾಣ ಕಾರ್ಯಕ್ಕೆ ದಶಕವಾದರೂ ಚಾಲನೆ ದೊರೆತಿಲ್ಲ.

ಇದೆಲ್ಲವನ್ನೂ ಮುಂದಿಟ್ಟುಕೊಂಡು ಅವರನ್ನು ಹಣಿಯಲು ಕಾಂಗ್ರೆಸ್‌ ತಂತ್ರ ರೂಪಿಸತೊಡಗಿದೆ. ಕಡೆಯ ವರ್ಷದಲ್ಲಿ ನಡೆದಿರುವ ಜಿಲ್ಲಾ ಆಸ್ಪತ್ರೆ ನಿರ್ಮಾಣ, ಕೆರೆ ತುಂಬಿಸುವ ಯೋಜನೆ, ಹೆದ್ದಾರಿ ವಿಸ್ತರಣೆ ಸಹಿತ ಅಭಿವೃದ್ಧಿ ಕಾರ್ಯಗಳ ಪ್ರತಿಫಲ ಪಡೆಯಲು ಹಣವಣಿಸುತ್ತಿದೆ. ಅದರಲ್ಲೂ ಎಚ್‌ಡಿಕೆಯ ರಾಜಕೀಯ ಬದ್ಧ ವೈರಿ ಎಂದೇ ಬಿಂಬಿತವಾಗಿರುವ ಡಿ.ಕೆ.ಶಿವಕುಮಾರ್‌ ಅವರ ಸಹೋದರ ಡಿ.ಕೆ. ಸುರೇಶ್‌ ಕ್ಷೇತ್ರದಲ್ಲಿ ಪ್ರಚಾರದ ಸಾರಥ್ಯ ವಹಿಸಿದ್ದಾರೆ. ‘ಜನಗಳ ಕೈಗೆ ಸಿಗುವ ನಾಯಕರನ್ನು ಆಯ್ಕೆ ಮಾಡಿ’ ಎನ್ನುತ್ತಾ ಮತಯಾಚನೆ ಮಾಡುತ್ತಿದ್ದಾರೆ. ಈ ಮೂಲಕ ಕುಮಾರಸ್ವಾಮಿ ಅವರನ್ನು ಆದಷ್ಟೂ ರಾಮನಗರದಲ್ಲಿ ಕಟ್ಟಿ ಹಾಕಿ, ರಾಜ್ಯ ರಾಜಕಾರಣದಲ್ಲಿ ಜೆಡಿಎಸ್‌ ಬಲ ಕುಗ್ಗಿಸುವ ತಂತ್ರವೂ ಇದರ ಹಿಂದೆ ಇದೆ.

‘ಕುಮಾರಸ್ವಾಮಿ ಕೇವಲ 20 ತಿಂಗಳ ಆಡಳಿತಾವಧಿಯಲ್ಲಿಯೇ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಶಾಸಕರಾಗಿ ವಿವಿಧೆಡೆಗಳಿಂದ ಅನುದಾನ ತಂದು ಕೆಲಸ ಮಾಡಿಸಿದ್ದಾರೆ. ಅವರು ಮತ್ತೊಮ್ಮೆ ಮುಖ್ಯಮಂತ್ರಿ ಆದರೆ ಕ್ಷೇತ್ರದ ಚಿತ್ರಣವೇ ಬದಲಾಗುತ್ತದೆ. ಅಭಿವೃದ್ಧಿ ಕಾರ್ಯಗಳು ಸಲೀಸಾಗುತ್ತವೆ. ಹೀಗಾಗಿ ಕುಮಾರಣ್ಣನಿಗೇ ಮತ ನೀಡಿ’ ಎಂದು ಜೆಡಿಎಸ್ ಕಾರ್ಯಕರ್ತರು ಪ್ರಚಾರ ಆರಂಭಿಸಿದ್ದಾರೆ.

ಎರಡೂ ಕಡೆ ಸ್ಪರ್ಧೆ: ಗೊಂದಲ

ರಾಮನಗರದ ಜೊತೆಗೆ ಚನ್ನಪಟ್ಟಣದಿಂದಲೂ ಸ್ಪರ್ಧಿಸುವುದಾಗಿ ಹೇಳುವ ಮೂಲಕ ಎಚ್‌.ಡಿ. ಕುಮಾರಸ್ವಾಮಿ ಜಿಲ್ಲೆಯ ರಾಜಕಾರಣದಲ್ಲಿ ಚರ್ಚೆಗೆ ಗ್ರಾಸವಾಗಿದ್ದಾರೆ.

ಚನ್ನಪಟ್ಟಣದಲ್ಲಿ 2013ರ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅನಿತಾ ಕುಮಾರಸ್ವಾಮಿ 6,464 ಮತಗಳ ಅಂತರದಿಂದ ಸಿ.ಪಿ. ಯೋಗೇಶ್ವರ್ ವಿರುದ್ಧ ಪರಾಭವಗೊಂಡಿದ್ದರು. ಈಗಲೂ ಅಲ್ಲಿ ಜೆಡಿಎಸ್ ಬಲಿಷ್ಠವಾಗಿದೆ. ಕಾಂಗ್ರೆಸ್‌ಗೆ ಕೈಕೊಟ್ಟು ಬಿಜೆಪಿ ಸೇರಿರುವ ಯೋಗೇಶ್ವರ್‌ರನ್ನು ಮಣಿಸಲು ಡಿ.ಕೆ.ಶಿ. ಹವಣಿಸುತ್ತಿದ್ದಾರೆ. ಇದನ್ನೇ ಬಳಸಿಕೊಂಡು ಗೆಲುವು ಸಾಧಿಸಲು ಎಚ್‌ಡಿಕೆ ಯೋಚಿಸಿದಂತೆ ಇದೆ.

ಹಾಗೊಂದು ವೇಳೆ ಎರಡೂ ಕಡೆ ಸ್ಪರ್ಧೆ ಖಚಿತವಾದಲ್ಲಿ ಅವರನ್ನು ಪೇಚಿಗೆ ಸಿಲುಕಿಸಲು ಯೋಗೇಶ್ವರ್‌ ಪ್ರತಿತಂತ್ರ ರೂಪಿಸಿದ್ದಾರೆ. ತಾವೂ ಎರಡು ಕಡೆ ಸ್ಪರ್ಧಿಸುವ ಸುದ್ದಿ ತೇಲಿಬಿಟ್ಟಿದ್ದಾರೆ. ಬಿಜೆಪಿಯು ರಾಮನಗರ ಕ್ಷೇತ್ರಕ್ಕೆ ಪ್ರಬಲ ಅಭ್ಯರ್ಥಿಯ ಹುಡುಕಾಟದಲ್ಲಿದ್ದು, ಆಯ್ಕೆ ಇನ್ನೂ ಅಂತಿಮಗೊಂಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT