ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನರ್ಹಗೊಳಿಸಿದರೆ ಏನು ಪ್ರಯೋಜನ?: ಹೈಕೋರ್ಟ್‌

ಬಂಡುಕೋರ ಜೆಡಿಎಸ್‌ ಮಾಜಿ ಶಾಸಕರ ವಿರುದ್ಧದ ಪ್ರಕರಣ
Last Updated 2 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಜೆಡಿಎಸ್‌ನ ಬಂಡಾಯ ಶಾಸಕರು ಈಗಾಗಲೇ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರುವುದರಿಂದ ವಿಧಾನಸಭಾಧ್ಯಕ್ಷರು ಒಂದು ವೇಳೆ ಅವರನ್ನು ಅನರ್ಹಗೊಳಿಸಿದರೆ ಏನು ಪ್ರಯೋಜನ’ ಎಂದು ಹೈಕೋರ್ಟ್‌ ಅರ್ಜಿದಾರರನ್ನು ಪ್ರಶ್ನಿಸಿದೆ.

‘ಇತ್ತೀಚೆಗೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಏಳು ಜನ ಬಂಡಾಯ ಶಾಸಕರಿಗೆ ಮತದಾನಕ್ಕೆ ಅವಕಾಶ ನೀಡಬಾರದು’ ಎಂದು ಕೋರಿ ಮೂಡಿಗೆರೆ ಶಾಸಕ ಬಿ.ಬಿ.ನಿಂಗಯ್ಯ ಹಾಗೂ ಶ್ರವಣಬೆಳಗೊಳದ ಶಾಸಕ ಸಿ.ಎನ್‌. ಬಾಲಕೃಷ್ಣ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಆರ್.ಎಸ್.ಚೌಹಾಣ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ವಿಧಾನಸಭಾಧ್ಯಕ್ಷರ ಪರ ಹಾಜರಿದ್ದ ಹಿರಿಯ ವಕೀಲ ಜಯಕುಮಾರ್ ಎಸ್.ಪಾಟೀಲ, ‘ವಿಧಾನಸಭಾಧ್ಯಕ್ಷರು ಇನ್ನೂ ಯಾವುದೇ ಆದೇಶ ಮಾಡಿಲ್ಲ. ಹೀಗಾಗಿ ಅರ್ಜಿದಾರರು ಪ್ರಾಥಮಿಕ ಹಂತದಲ್ಲಿ ಕೋರ್ಟ್‌ಗೆ ಬಂದಿರುವುದನ್ನು ಮಾನ್ಯ ಮಾಡಬಾರದು’ ಎಂದು ಆಕ್ಷೇಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ’ವಿಚ್ಛೇದನದ ಪ್ರಕರಣ ಕೋರ್ಟ್‌ನಲ್ಲಿರುವಾಗ ಹೆಂಡತಿ ಸತ್ತು ಹೋದರೆ ವಿಚ್ಛೇದನ ಯಾರಿಗೆ ಕೊಡಬೇಕು ಎಂಬಂತಿದೆಯೆಲ್ಲಾ ಈ ಪ್ರಕರಣ’ ಎಂದು ಚಟಾಕಿ ಹಾರಿಸಿದರು. ಇದೇ ವಿಚಾರಣೆ 11ಕ್ಕೆ ಮುಂದೂಡಲಾಗಿದೆ.
**
ಪಕ್ಷಾಂತರ ಪ್ರಶ್ನಿಸಿ ರಿಟ್‌
ಬೆಂಗಳೂರು: ರಾಯಚೂರು ಜಿಲ್ಲೆಯ ಜೆಡಿಎಸ್‌ ಮಾಜಿ ಶಾಸಕರಾದ ಎಸ್‌.ಶಿವರಾಜ್ ಪಾಟೀಲ ಹಾಗೂ ಮಾನಪ್ಪ ಡಿ.ವಜ್ಜಲ್‌ ಇತ್ತೀಚೆಗೆ ಬಿಜೆಪಿ ಸೇರ್ಪಡೆಯಾದ ಕ್ರಮವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ.

ಈ ಕುರಿತಂತೆ ವಿಧಾನ ಪರಿಷತ್ತಿನ ಜೆಡಿಎಸ್‌ ಸದಸ್ಯ ಟಿ.ಎ.ಶರವಣ ರಿಟ್‌ ಅರ್ಜಿ ಸಲ್ಲಿಸಿದ್ದು, ಈ ಅರ್ಜಿ ಇನ್ನೂ ವಿಚಾರಣೆಗೆ ಬರಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT