ಬುಧವಾರ, ಜುಲೈ 15, 2020
22 °C
ಮಾಜಿ ಶಾಸಕ ಜಮೀರ್‌ ಅಹ್ಮದ್‌ ಖಾನ್‌ ವಿರುದ್ಧ ಎಚ್‌.ಡಿ. ದೇವೇಗೌಡ ಆಕ್ರೋಶ

‘ಪಕ್ಷಕ್ಕೆ ದ್ರೋಹ ಬಗೆಯುವುದು ತಾಯಿಗೆ ದ್ರೋಹ ಮಾಡಿದಂತೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಪಕ್ಷಕ್ಕೆ ದ್ರೋಹ ಬಗೆಯುವುದು ತಾಯಿಗೆ ದ್ರೋಹ ಮಾಡಿದಂತೆ’

ಬೆಂಗಳೂರು: ‘ಪಕ್ಷಕ್ಕೆ ದ್ರೋಹ ಬಗೆಯುವುದು ತಾಯಿಗೆ ದ್ರೋಹ ಮಾಡಿದಂತೆ’ ಎಂದು ಜೆಡಿಎಸ್ ‌ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಆಕ್ರೋಶ

ವ್ಯಕ್ತಪಡಿಸಿದರು.

ಚಾಮರಾಜಪೇಟೆಯ ಕಾಂಗ್ರೆಸ್ ಮುಖಂಡ ಅಲ್ತಾಫ್ ಖಾನ್ ಅವರನ್ನು ಪಕ್ಷಕ್ಕೆ ಸೋಮವಾರ ಬರಮಾಡಿಕೊಂಡ ಬಳಿಕ ಅವರು ಮಾತನಾಡಿದರು.

‘ಜೆಡಿಎಸ್‌ನಿಂದ ಬೆಳೆದು ಹೊರಹೋದ ಅನೇಕ ಸ್ನೇಹಿತರಿದ್ದಾರೆ. ಅವರಲ್ಲಿ ಮುಖ್ಯಮಂತ್ರಿ ಆದವರೊಬ್ಬರು ಜೆಡಿಎಸ್ ಮುಗಿಸಲು ಕಾಯುತ್ತಿದ್ದಾರೆ. ಏಳು ಜನ ಮಾಜಿ ಶಾಸಕರು ಅವರ ಕೈ ಜೋಡಿಸಿದ್ದಾರೆ. ಅವರ ಬಗ್ಗೆ ನಾನು ಈಗಲೇ ಮಾತನಾಡುವುದಿಲ್ಲ. ಎಲ್ಲದಕ್ಕೂ ಕಾಲ ಬರುತ್ತದೆ’ ಎಂದು ಗುಡುಗಿದರು.

‘ನಾನು ದೈವದಲ್ಲಿ ನಂಬಿಕೆ ಇಟ್ಟವನು. ಈಶ್ವರ, ಅಲ್ಲಾ ಇಬ್ಬರೂ ಒಂದೇ. ಯಾವಾಗಲೂ ತಾಯಿ ಹೆಸರಲ್ಲಿ‌ ಪ್ರಮಾಣ ಮಾಡುವ ಪ್ರವೃತ್ತಿ ಬಿಡಿ. ನೀವು ಮಕ್ಕಾ ಮದೀನಾಗೆ ಹೋಗುವವರು. ತಾಯಿ ಹೆಸರು ಹೇಳಿ ಪ್ರಮಾಣ ಮಾಡುವುದು ಒಳ್ಳೆಯದಲ್ಲ’ ಎಂದು ಜಮೀರ್ ಅಹ್ಮದ್ ಖಾನ್ ವಿರುದ್ಧ ಹೆಸರು ಹೇಳದೆ ಹರಿಹಾಯ್ದರು.

‘ಮುಹೂರ್ತ ನೋಡಿಯೇ ಅಲ್ತಾಫ್ ಕೈಗೆ ಪಕ್ಷದ ಬಾವುಟ ಕೊಟ್ಟಿದ್ದೇನೆ. ಅವರು ಎಷ್ಟು ಕೆಲಸ ಮಾಡುತ್ತಾರೆ ಎನ್ನುವುದನ್ನು ಕಾದು ನೋಡಿ. ಇವತ್ತಿನಿಂದ ಪಕ್ಷ ಅಲ್ತಾಫ್‌ ಅವರದ್ದೆ’ ಎಂದರು.

‘ಚಾಮರಾಜಪೇಟೆಯಲ್ಲಿ ಚುನಾವಣೆ ಗೆಲ್ಲುವುದು ಹೇಗೆ ಎಂಬುದು ನನಗೆ ಗೊತ್ತಿದೆ. ಕ್ಷೇತ್ರದಲ್ಲಿ ಹೊಸ ಶಕೆ ಆರಂಭವಾಗಿದೆ. ಅಲ್ತಾಫ್ ಗೆಲ್ಲುವುದರಲ್ಲಿ ಸಂಶಯವಿಲ್ಲ. ಜಮೀರ್ ಗೆಲ್ಲಿಸಲು ದರಿದ್ರನಾರಾಯಣ ರ‍್ಯಾಲಿ ಮಾಡಿದ್ದೆ. ಆಗ ಸಿದ್ದರಾಮಯ್ಯ ಎಲ್ಲಿ ಹೋಗಿದ್ದರು’ ಎಂದೂ ದೇವೇಗೌಡ ಪ್ರಶ್ನಿಸಿದರು.

‘ಅಲ್ತಾಫ್ ಮೇಲೆ ಕೆಲವರಿಗೆ ದ್ವೇಷ ಇದೆ. ಅವರ ಬೆಂಬಲಕ್ಕೆ ನಾನು, ಕುಮಾರಸ್ವಾಮಿ ಮತ್ತು ಪಕ್ಷದ ಲಕ್ಷಾಂತರ ಕಾರ್ಯಕರ್ತರಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಏನು ಬೇಕಾದರೂ ಆಗಬಹುದು. ಗೃಹ ಇಲಾಖೆ ಸಲಹೆಗಾರರ ಹುದ್ದೆಯಿಂದ ಕೆಂಪಯ್ಯ ಹೋಗಬೇಕು. ಈ ಬಗ್ಗೆ ಚುನಾವಣಾ ಆಯೋಗಕ್ಕೆ ಪತ್ರ ಬರೆಯುತ್ತೇನೆ’ ಎಂದು ಹೇಳಿದರು.‌

**

‘ನೀನು ನಾಲ್ಕೂವರೆ ಅಡಿ, ನಾನು ಆರು ಅಡಿ’

‘ಜಮೀರಣ್ಣ ನೀನು ನಾಲ್ಕೂವರೆ ಅಡಿ ಇದ್ದೀಯಾ, ನಾನು ಆರು ಅಡಿಗೆ ಒಂದು ಇಂಚು ಕಡಿಮೆ ಇದ್ದೀನಿ. ಅಲ್ತಾಫ್ ಖಾನ್ ಅನ್ನೋದು ನನ್ನ ಹೆಸರು, ಬಾ ಚಾಮರಾಜಪೇಟೆಯಲ್ಲಿ ಗೆದ್ದು ತೋರಿಸ್ತೀನಿ...’

ಇದು ಇತ್ತೀಚೆಗೆ ಕಾಂಗ್ರೆಸ್ ಸೇರಿದ ಜಮೀರ್ ಅಹ್ಮದ್ ಖಾನ್‌ಗೆ ಅಲ್ತಾಫ್ ಖಾನ್ ಹಾಕಿದ ಸವಾಲು.

‘ನನ್ನ ವಿರುದ್ಧ ಗೆಲ್ಲುವ ಗಂಡು ಯಾರೂ ಇಲ್ಲ ಅಂತ ಚಾಲೆಂಜ್ ಮಾಡಿದ್ದೀಯಾ ಜಮೀರ್, ಬಾ ಚಾಮರಾಜಪೇಟೆಯಲ್ಲೆ ಮನೆ ಮಾಡು, ಬಾಡಿಗೆ, ಅಡ್ವಾನ್ಸ್  ಎರಡೂ ನಾನೇ ಕೊಡ್ತಿನಿ’ ಎಂದು ಗುಟುರು ಹಾಕಿದರು.

‘ದೇವೇಗೌಡರೇ ತಂದೆ, ಪಕ್ಷವೇ ತಾಯಿ ಎಂದು ಹೇಳುತ್ತಿದ್ದ ಜಮೀರ್ ಈಗ ಇಬ್ಬರನ್ನು ಬಿಟ್ಟು ಹೋಗಿದ್ದಾರೆ. ಇಂಥವರು ಜನರ ಜೊತೆ ಇರುತ್ತಾರೆ ಎಂದು ನಂಬುವುದು ಹೇಗೆ’ ಎಂದು ಪ್ರಶ್ನಿಸಿದರು.

‘ಮಾತೆತ್ತಿದರೆ ಅಲ್ಲಾ ಕಿ ಕಸಮ್, ಮಾ ಕಿ ಕಸಮ್ ಎನ್ನುತ್ತೀರಿ. ಧರ್ಮಗುರುಗಳು, ದೇವರು ಎಲ್ಲರೂ ನಿಮಗಾಗಿಯೇ ಹುಟ್ಟಿದ್ದಾರೆಯೇ. ಉಳಿದವರ‍್ಯಾರು ಮುಸಲ್ಮಾನರಲ್ಲವೇ’ ಎಂದು ಪ್ರಶ್ನಿಸಿದರು.

‘ಕೈ ಹಿಡಿತೀನಿ, ಕಾಲು ಹಿಡಿತೀನಿ ಓಟ್ ಹಾಕಿಸು ಎಂದು ಜಮೀರ್ ಬೇಡಿಕೊಂಡ ವಿಡಿಯೊ ಇದೆ. ಸದ್ಯದಲ್ಲೆ ಬಿಡುಗಡೆ ಮಾಡುತ್ತೇನೆ’ ಎಂದು ಹೇಳಿದರು.

**

‘ಫಾರೂಕ್ ಅಬ್ದುಲ್ಲಾ ಬಂದರೂ ನಾನು ಸೋಲಲ್ಲ’

‘ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರನ್ನು ಕರೆಸಿ ನನ್ನ ಎದುರು ನಿಲ್ಲಿಸಿದರೂ ನಾನೇ ಗೆಲ್ಲುತ್ತೇನೆ’ ಎಂದು ಮಾಜಿ ಶಾಸಕ ಜಮೀರ್ ಅಹ್ಮದ್ ಖಾನ್ ತಿರುಗೇಟು ನೀಡಿದರು.

‘ನಾನು ನಾಲ್ಕೂವರೆ ಅಡಿ ಇದ್ದೀನಿ ಎಂದಿದ್ದಾರೆ. ಸಚಿನ್ ತೆಂಡೂಲ್ಕರ್ ಎಷ್ಟು ಉದ್ದ ಇದ್ದಾರೆ. ಅಮಿತಾಬ್ ಬಚ್ಚನ್ ಎಷ್ಟು ಉದ್ದ ಇದ್ದಾರೆ. ಆದರೆ, ಇಬ್ಬರಲ್ಲಿ ಸಚಿನ್ ಫೇಮಸ್ ಅಲ್ವಾ, ಹಾಗೇ ಅಲ್ತಾಫ್‌ಗಿಂತ ನಾನೇ ಫೇಮಸ್. ಅಲ್ತಾಫ್‌ ಕಾಲು ಹಿಡಿದು ಸಹಾಯ ಕೇಳಿದ್ದನ್ನು ಸಾಬೀತು ಮಾಡಿದರೆ ಚುನಾವಣೆಯಿಂದ ಹಿಂದೆ ಸರಿಯುತ್ತೇನೆ’ ಎಂದೂ ಹೇಳಿದರು.

**

ರಾಜರಾಜೇಶ್ವರಿನಗರದಲ್ಲಿ ಇದೇ 13ರಂದು ಜೆಡಿಎಸ್ ಸಮಾವೇಶ ನಡೆಯಲಿದೆ. ಆ ಕ್ಷೇತ್ರದ ಅಭ್ಯರ್ಥಿಯ ಹೆಸರನ್ನು ಅಲ್ಲೇ ಘೋಷಣೆ ಮಾಡಲಾಗುವುದು. ‌

–ಎಚ್‌.ಡಿ. ದೇವೇಗೌಡ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.