ತೋಟದ ಮನೆಗಳ ಮೇಲೆ ನಿಗಾ

7
ಚುನಾವಣೆ ವೇಳೆ ಅಕ್ರಮ ಮದ್ಯ ಸಂಗ್ರಹಕ್ಕೆ ತಡೆ: ಅಬಕಾರಿ ಇಲಾಖೆ ಕ್ರಮ

ತೋಟದ ಮನೆಗಳ ಮೇಲೆ ನಿಗಾ

Published:
Updated:

ಬಾಗಲಕೋಟೆ: ಚುನಾವಣೆ ವೇಳೆ ಬಳಕೆಗೆ ಅಕ್ರಮವಾಗಿ ಮದ್ಯ ಸಂಗ್ರಹಿಡುವುದನ್ನು ತಡೆಯಲು ಜಿಲ್ಲೆಯ ತೋಟದ ಮನೆಗಳು ಹಾಗೂ ಉಗ್ರಾಣಗಳ (ಗೋಡೋನ್‌) ಮೇಲೆ ಕಣ್ಣಿಡಲು ಅಬಕಾರಿ ಇಲಾಖೆ ಮುಂದಾಗಿದೆ.ಹಿಂದಿನ ಚುನಾವಣೆಗಳ ವೇಳೆ ಮದ್ಯ ಸಂಗ್ರಹಕ್ಕೆ ಕೆಲವು ತೋಟದ ಮನೆಗಳನ್ನು ಬಳಕೆ ಮಾಡಿಕೊಳ್ಳಲಾಗಿತ್ತು. ಹಾಗಾಗಿ ಈ ಬಾರಿ ಅಬಕಾರಿ ಇಲಾಖೆ ಅಗತ್ಯ ಮುನ್ನೆಚ್ಚರಿಕೆ ವಹಿಸಿದೆ. ಅಕ್ರಮ ಮದ್ಯ ನಿಯಂತ್ರಣ ಕಾಯ್ದೆಯಡಿ ಜಿಲ್ಲೆಯ 700 ತೋಟದ ಮನೆಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಜೊತೆಗೆ ಅಲ್ಲಿನ ನಿವಾಸಿಗಳಿಗೆ ತಿಳಿವಳಿಕೆ ನೀಡಲಾಗಿದೆ.ತೋಟದ ಮನೆ ಹಾಗೂ ಉಗ್ರಾಣಗಳಲ್ಲಿ ಅಕ್ರಮವಾಗಿ ಮದ್ಯ ಸಂಗ್ರಹಿಸಿ ಇಡುವಂತಿಲ್ಲ ಜೊತೆಗೆ ಆಸುಪಾಸಿನಲ್ಲಿ ಯಾರೇ ಸಂಗ್ರಹಿಸಿ ಇಟ್ಟರೂ ಆ ಬಗ್ಗೆ ಅಬಕಾರಿ ಇಲಾಖೆಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ಕೋರಿದ್ದಾರೆ.

ಹೆಚ್ಚಿನ ಮಾರಾಟದ ಮೇಲೆ ನಿಗಾ: ವೈನ್‌ಶಾಪ್ ಹಾಗೂ ಬಾರ್ ಅಂಡ್ ರೆಸ್ಟೋರೆಂಟ್‌ಗಳಲ್ಲಿ ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ಮಾರಾಟವಾದ ಮದ್ಯದ ಪ್ರಮಾಣಕ್ಕಿಂತ ಈ ಬಾರಿ ಶೇ 15ರಷ್ಟು ಹೆಚ್ಚಳವಾದರೂ ಅದಕ್ಕೆ ಸಂಬಂಧಿಸಿದವರು ಅಬಕಾರಿ ಇಲಾಖೆಗೆ ವಿವರಣೆ ನೀಡಬೇಕಿದೆ. ಅದರಲ್ಲಿ ಯಾರಿಗೆ, ಎಷ್ಟು ಮಾರಾಟ ಮಾಡಲಾಗಿದೆ ಎಂಬುದರ ಮಾಹಿತಿಯೂ ಇರಬೇಕಿದೆ ಎಂದು ಇಲಾಖೆಯ ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.ಜಿಲ್ಲೆಯಲ್ಲಿ ಈಗ ನಿತ್ಯ 2,500 ಬಾಕ್ಸ್ ಮದ್ಯ ಮಾರಾಟವಾಗುತ್ತಿದೆ. ಅದರ ಪ್ರಮಾಣ 2,875ಕ್ಕೆ ಹೆಚ್ಚಳವಾದರೂ ಚುನಾವಣಾ ಆಯೋಗಕ್ಕೆ ಇಲಾಖೆ ವಿವರಣೆ ನೀಡಬೇಕಿದೆ. ಹಾಗಾಗಿ ಮಾರಾಟಗಾರರಿಂದಲೇ ಸಮಜಾಯಿಷಿ ಪಡೆಯಲಾಗುತ್ತಿದೆ ಎಂದು ಅವರು ಹೇಳುತ್ತಾರೆ.

ಕಳ್ಳಬಟ್ಟಿ ಮೇಲೆ ನಿಗಾ: ‘ಚುನಾವಣೆ ವೇಳೆ ಕಳ್ಳಬಟ್ಟಿ ಮಾರಾಟ ನಿಯಂತ್ರಣಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. ಕೇವಲ ಅಬಕಾರಿ ಇಲಾಖೆ ಮಾತ್ರವಲ್ಲದೇ ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಪ್ರತ್ಯೇಕವಾಗಿ ದಾಳಿ ಸಂಘಟಿಸುತ್ತಿದ್ದಾರೆ. ಹೀಗೆ ದಿನಕ್ಕೆ ಎರಡು ಬಾರಿ ದಾಳಿ ನಡೆಸುವುದು ಕಡ್ಡಾಯವಾಗಿದೆ. ಮಾಹಿತಿ ಬಂದ ಕಡೆ ದಾಳಿ ನಡೆಸಲಾಗುತ್ತಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಸಿ.ಸಿ.ಟಿವಿ ಕ್ಯಾಮೆರಾ ಅಳವಡಿಕೆ: ಜಿಲ್ಲೆಯ ಆರು ಡಿಸ್ಟಿಲರಿಗಳಿವೆ. ಅಲ್ಲಿ ಸಿ.ಸಿ.ಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಅಬಕಾರಿ ಇಲಾಖೆ ಜಿಲ್ಲಾ ಅಧಿಕಾರಿ ಕಚೇರಿಯಿಂದಲೇ ಡಿಸ್ಟಿಲರಿಗಳಲ್ಲಿನ ಚಟುವಟಿಕೆಗಳ ಮೇಲೆ ನಿಗಾ ಇಡಲಾಗುತ್ತಿದೆ. ಅಲ್ಲಿನ ದೈನಂದಿನ ವಹಿವಾಟಿನ ಬಗ್ಗೆ ಸಂಬಂಧಿಸಿದವರು ಕಡ್ಡಾಯವಾಗಿ ಇಲಾಖೆಗೆ ಮಾಹಿತಿ ನೀಡಬೇಕಿದೆ.ಮದುವೆ, ಜಾತ್ರೆಗೆ ಅನುಮತಿ ಕಡ್ಡಾಯ: ಸಾಮಾನ್ಯವಾಗಿ ಮದುವೆ, ಜಾತ್ರೆ ಹಾಗೂ ಉತ್ಸವಗಳ ಸಂದರ್ಭದಲ್ಲಿ ಮದ್ಯ ಮಾರಾಟ ಪ್ರಮಾಣ ಹೆಚ್ಚಳವಾಗುತ್ತಿದೆ. ಈ ವೇಳೆ ಹೆಚ್ಚಿನ ಮದ್ಯ ಖರೀದಿಗೆ ಅಬಕಾರಿ ಇಲಾಖೆಯಿಂದ ಪೂರ್ವಾನುಮತಿ ಪಡೆಯಬೇಕಿದೆ. ಆಗ ಜಾತ್ರೆ, ಮದುವೆಯ ಆಮಂತ್ರಣ ಪತ್ರವನ್ನು ದಾಖಲೆಯಾಗಿ ಸಲ್ಲಿಸಬೇಕಿದೆ ಎಂದು ಹೇಳುತ್ತಾರೆ.

ಚೆಕ್‌ ಪೋಸ್ಟ್, ಫ್ಲೈಯಿಂಗ್ ಸ್ಕ್ವಾಡ್..

‘ಹೊರ ರಾಜ್ಯ ಹಾಗೂ ಜಿಲ್ಲೆಗಳಿಂದ ಮದ್ಯದ ಹರಿವು ತಡೆಯಲು ಪೊಲೀಸ್, ವಾಣಿಜ್ಯ ತೆರಿಗೆ, ಕಂದಾಯ ಇಲಾಖೆಯ ಸಹಯೋಗದಿಂದ ಜಿಲ್ಲೆಯ 23 ಕಡೆ ಚೆಕ್‌ಪೋಸ್ಟ್ ರಚಿಸಲಾಗಿದೆ. ಏಳು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 45 ಸಂಚಾರಿ ವಿಚಕ್ಷಣಾ ದಳಗಳು ಕಾರ್ಯನಿರ್ವಹಿಸುತ್ತಿವೆ. ಆ ತಂಡಗಳು ನಿಗಾ ಇಡಲಿವೆ’ ಎಂದು ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್ ತಿಳಿಸಿದರು.

ಬೇಡಿಕೆ ಸಲ್ಲಿಸುವವರ ಮೇಲೆ ನಿಗಾ: ‘ಚುನಾವಣೆ ವೇಳೆ ಸಾಮಾನ್ಯವಾಗಿ ಗೋವಾ ಹಾಗೂ ಮಧ್ಯಪ್ರದೇಶದಿಂದ ರಾಜ್ಯಕ್ಕೆ ಅಕ್ರಮವಾಗಿ ಮದ್ಯ ಪೂರೈಕೆಯಾಗುತ್ತದೆ. ಹಿಂದಿನ ಅನುಭವಗಳು ಇದಕ್ಕೆ ಸಾಕ್ಷ್ಯ ಒದಗಿಸಿವೆ. ಹಾಗಾಗಿ ಗೋವಾ, ಮಧ್ಯಪ್ರದೇಶ ಹೊರತಾಗಿ ರಾಜ್ಯದೊಂದಿಗೆ ಗಡಿ ಹಂಚಿಕೊಂಡಿರುವ ರಾಜ್ಯಗಳಲ್ಲೂ ಈಗಾಗಲೇ ನಮ್ಮ ಮಾಹಿತಿದಾರರ ಜಾಲ ಸಿದ್ಧಗೊಳಿಸಿದ್ದೇವೆ. ರಾಜ್ಯದಿಂದ ಯಾರೇ ಮದ್ಯ ಪೂರೈಕೆಗಾಗಿ ಅಲ್ಲಿಗೆ ಬೇಡಿಕೆ ಸಲ್ಲಿಸಿದರೂ ತಕ್ಷಣ ಮಾಹಿತಿ ಸಿಗಲಿದೆ. ಆ ವಿಚಾರದಲ್ಲಿ ಕಟ್ಟುನಿಟ್ಟಿನ ನಿಗಾ ಇಡಲಾಗಿದೆ’ ಎಂದು ಅಬಕಾರಿ ಇಲಾಖೆ ಅಧಿಕಾರಿಯೊಬ್ಬರು ಹೇಳುತ್ತಾರೆ. ‘ಚುನಾವಣೆ ನೀತಿ ಸಂಹಿತೆ ಜಾರಿಯಾದ ಸಮಯದಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ₹5 ಲಕ್ಷ ಮೌಲ್ಯದ ಅಕ್ರಮ ಮದ್ಯ ವಶಪಡಿಸಿಕೊಳ್ಳಲಾಗಿದೆ. ಒಂದು ಕಾರು, ಮೂರು ದ್ವಿಚಕ್ರ ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡಿರುವುದಾಗಿ’ ಅವರು ತಿಳಿಸಿದರು.

**

ಮದ್ಯದ ಹರಿವನ್ನು ತಡೆಯಲು ಈಗಾಗಲೇ ವಿವಿಧ ಇಲಾಖೆ ಅಧಿಕಾರಿಗಳ ನಡುವೆ ಸಮನ್ವಯದೊಂದಿಗೆ ತಂಡಗಳನ್ನು ಸಿದ್ಧಗೊಳಿಸಲಾಗಿದೆ – ಕೆ.ಜಿ.ಶಾಂತಾರಾಮ್,ಜಿಲ್ಲಾಧಿಕಾರಿ.

**

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry