ಶುಕ್ರವಾರ, ಡಿಸೆಂಬರ್ 13, 2019
19 °C

ಅವರಿವರ ಶೋಕಿ ಪುರಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅವರಿವರ ಶೋಕಿ ಪುರಾಣ

ಉಗಿಬಂಡಿ ಖರೀದಿಸ್ತಾರಂತೆ ಸ್ಟಿವರ್ಟ್‌!

ಜಗತ್ತಿನಲ್ಲಿ ಯಾವ್ಯಾವ ನಮೂನೆಯ ರೈಲುಗಳು ಬಂದಿದ್ದವು, ಚಾಲ್ತಿಯಲ್ಲಿವೆ ಎಂದು ಕೇಳಿದರೆ ಯಾರಲ್ಲಿ ಉತ್ತರ ಸಿಗದಿದ್ದರೂ ಬ್ರಿಟನ್‌ನ ಗಾಯಕ ರಾಡ್ ಸ್ಟಿವರ್ಟ್‌ ಥಟ್‌ ಅಂತ ಹೇಳುವುದು ಗ್ಯಾರಂಟಿ.

ರೈಲು ಮಾದರಿಗಳ ಸಂಗ್ರಹದ ಹುಚ್ಚು ಎಷ್ಟರಮಟ್ಟಿಗಿದೆ ಎಂದರೆ, ಸ್ಟಿವರ್ಟ್‌ನ ಮನೆಯ ತಳಮಹಡಿಯಲ್ಲಿ ಟೆನಿಸ್‌ ಕೋರ್ಟ್‌ನಷ್ಟು ದೊಡ್ಡ ಜಾಗದಲ್ಲಿ ಒಂದು ಶಾಶ್ವತ ರೈಲನ್ನು ನಿಲ್ಲಿಸಿಬಿಟ್ಟಿದ್ದಾರೆ ಎಂದು ‘ಡೈಲಿ ಮೇಲ್‌’ ಒಮ್ಮೆ ವರದಿ ಮಾಡಿತ್ತು. ಅದಕ್ಕಿಂತಲೂ ಮೋಜಿನ ಸಂಗತಿಯೆಂದರೆ, ರೈಲು ಮಾದರಿ ಸಂಗ್ರಹಿಸುವುದಕ್ಕಿಂತ ಅವುಗಳನ್ನು ಯಥಾವತ್‌ ನಿರ್ಮಿಸುವುದರಲ್ಲಿ ಸ್ಟಿವರ್ಟ್‌ಗೆ ಹೆಚ್ಚು ಖುಷಿ ಸಿಗುತ್ತದಂತೆ.

‘ನನ್ನಪ್ಪ ನಾನು ಸಣ್ಣವನಿರುವಾಗ ಕೊಡಿಸಿದ ರೈಲು ಈಗಲೂ ಇದೆ. ಮಾದರಿಗಳ ಮಾತು ಹಾಗಿರಲಿ, ನಿಜವಾದ ಉಗಿಬಂಡಿಯೊಂದನ್ನು ಖರೀದಿಸಿ ಮನೆಯಲ್ಲಿಟ್ಟುಕೊಳ್ಳಬೇಕು, ನಾನು ಅದರಲ್ಲಿ ಒಬ್ಬನೇ ಕೂರಬೇಕು. ಇದು ನನ್ನ ಬಹು ದೊಡ್ಡ ಆಸೆ’ ಎಂದು ಸ್ಟಿವರ್ಟ್‌ ಬಿಬಿಸಿ ರೇಡಿಯೊಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

*

ಕಾಮಿಕ್‌ ಪುಸ್ತಕ, ಚಾಕು ಮತ್ತು ಕೇಜ್‌

ಹಾಲಿವುಡ್‌ ನಟ, ನಿರ್ದೇಶಕ ನಿಕೊಲಸ್‌ ಕೇಜ್‌ಗೆ ಕಾಮಿಕ್‌ ಪುಸ್ತಕಗಳು ಮತ್ತು ಚಾಕುಗಳನ್ನು ಸಂಗ್ರಹಿಸಿಟ್ಟುಕೊಳ್ಳುವ ಖಯಾಲಿ. ಕಾಮಿಕ್‌ ಪುಸ್ತಕಗಳನ್ನು ಇರಿಸಲು ಮನೆಯಲ್ಲಿ ಜಾಗವಿಲ್ಲ ಎಂಬ ಕಾರಣಕ್ಕೆ 2012ರಲ್ಲಿ ಅತ್ಯಂತ ಅಪರೂಪದ 400 ಕಾಮಿಕ್‌ ಪುಸ್ತಕಗಳನ್ನು ಹರಾಜು ಮಾಡಿದ್ದರು.

2007ರಲ್ಲಿ ತಮ್ಮ ಮಗ ವೆಸ್ಟನ್‌ ಜೊತೆಗೂಡಿ ‘ವೂಡೂ ಚೈಲ್ಡ್‌’ ಎಂಬ ಕಾಮಿಕ್‌ ಪುಸ್ತಕವನ್ನು ರಚಿಸಿದರು. ಒಂದು ಹಂತದಲ್ಲಿ ಕಾಮಿಕ್‌ ಪುಸ್ತಕಗಳ ಬಗ್ಗೆ ಜಿಗುಪ್ಸೆ ಬಂದಾಗ ದುಬಾರಿ ಮತ್ತು ಅಪರೂಪದ ಚಾಕುಗಳ ಸಂಗ್ರಹದಲ್ಲಿ ತೊಡಗಿದರು.

**

ದುಬಾರಿ ವಾಚುಗಳ ಸರದಾರ ಜೇಯ್ಸ್‌

ಮೊಬೈಲ್‌ ಫೋನ್‌ಗಳಲ್ಲಿ ಗಡಿಯಾರ ಸದ್ದಿಲ್ಲದೆ ಸಾಗುವ ಈ ದಿನಗಳಲ್ಲಿ ಕೈಗಡಿಯಾರ ಏನಿದ್ದರೂ ಶೋಕಿಯ ಬಾಬತ್ತು. ಆದರೆ ಅಮೆರಿಕದ ರ‍್ಯಾ‍‍ಪ್‌ ಮತ್ತು ಹಿಪ್‌ಹಾಪ್‌ ಹಾಡುಗಾರ ಜೇಯ್ಸ್‌ಗೆ ಕೂಡಾ ಈ ಶೋಕಿ ಇದೆ. ಆತನ ವಾಚ್‌ ಶೋಕಿಗೆ ಪತ್ನಿ, ಬಿಯಾನ್ಸ್‌ ಬೆಂಬಲವೂ ಇದೆ. ಸಾಲದು ಎಂಬಂತೆ ಜಗತ್ತಿನ ಅತ್ಯಂತ ದುಬಾರಿ ಕೈಗಡಿಯಾರ ಎನ್ನಲಾಗುವ  ‘ಹ್ಯೂಬ್ಲೊ’ ಬ್ರ್ಯಾಂಡ್‌ನ ‘ಬಿಗ್‌ ಬ್ಯಾಂಗ್‌’ನ್ನು ಖರೀದಿಸಿ ಉಡುಗೊರೆಯಾಗಿ ಕೊಟ್ಟಿದ್ದಾಳೆ ಬಿಯಾನ್ಸ್‌. ಅದರ ಬೆಲೆ ಕೇವಲ ₹50 ಲಕ್ಷ!

ರಿಚರ್ಡ್‌ ಮಿಲ್‌ ಡಿಎಲ್‌ಸಿ ಟರ್ಬಿಲನ್‌, ರೋಲೆಕ್ಸ್‌ ಡೇಯಂತಹ ವಿಲಾಸಿ ಕೈಗಡಿಯಾರಗಳ ಸಂಗ್ರಹವೂ ಜೇಯ್ಸ್‌ ಬಳಿ ಇದೆಯಂತೆ. ವಿಶೇಷವಾಗಿ, ಹ್ಯೂಬ್ಲೊದ ವಿಶಿಷ್ಟ ಕೈಗಡಿಯಾರಗಳನ್ನು ಜೋಪಾನವಾಗಿ ಇರಿಸಿಕೊಂಡಿದ್ದಾನಂತೆ.

ಜೇಯ್ಸ್‌ ಮೂಲ ಹೆಸರು ಶಾನ್‌ ಕಾರೆ ಕಾರ್ಟರ್‌ ಎಂದು ವೃತ್ತಿ ಕ್ಷೇತ್ರದಲ್ಲಿ ಯಾರಿಗೂ ಗೊತ್ತಿಲ್ಲ. ಅಮೆರಿಕ ಸೇರಿದಂತೆ ಜಗತ್ತಿನ ರ‍್ಯಾಪ್‌ ಸಂಗೀತಾಭಿಮಾನಿಗಳ ಸಾರ್ವಕಾಲಿಕ ಪ್ರೀತಿಪಾತ್ರ ಹಾಡುಗಾರರ ಪೈಕಿ ಒಬ್ಬರು ಎಂಬ ದಾಖಲೆ ಜೇಯ್ಸ್‌ ಹೆಸರಿನಲ್ಲಿದೆ. ಅಮೆರಿಕದ ಅತ್ಯಂತ ಶ್ರೀಮಂತ ಹಿಪ್‌ ಹಾಪ್‌ ಕಲಾವಿದ ಎಂಬ ಹೆಗ್ಗಳಿಕೆಯೂ ಜೇಯ್ಸ್‌ಗಿದೆ.

**

ಟಾಮ್‌ಗೆ ಟೈಪ್‌ರೈಟರ್‌ ಮೋಹ

ಆಸ್ಕರ್‌ ಪ್ರಶಸ್ತಿ ಪುರಸ್ಕೃತ ಅಮೆರಿಕನ್‌ ಹಾಸ್ಯ ನಟ ಟಾಮ್‌ ಹಾಂಕ್ಸ್‌ಗೆ ಟೈಪ್‌ರೈಟರ್‌ಗಳೆಂದರೆ ಪಂಚಪ್ರಾಣ. ಯಾವುದೇ ದೇಶದ ಯಾವುದೇ ಮೂಲೆಗೆ ಬೇಕಾದರೂ ಹೋಗಿ ವಿಶಿಷ್ಟವಾದ ಟೈಪ್‌ರೈಟರ್‌ನ್ನು ಹೇಳಿದ ಬೆಲೆಗೆ ಖರೀದಿಸಿ ತಮ್ಮ ಸಂಗ್ರಹಕ್ಕೆ ಸೇರ್ಪಡೆ ಮಾಡಿಬಿಡುತ್ತಾರೆ.

ಥಾಮಸ್‌ ಜೆಫ್ರಿ ಹಾಂಕ್ಸ್‌ ಎಂಬ ಮೂಲ ಹೆಸರನ್ನು ನಟನಾದ ಮೇಲೆ ಟಾಮ್‌ ಹಾಂಕ್ಸ್‌ ಎಂದು ಚುಟುಕಾಗಿಸಿಕೊಂಡರು. ಶೋಕಿಗಾಗಿ ವ್ಯವಹಾರಕ್ಕೋ, ಪ್ರದರ್ಶನಕ್ಕೋ ದುಡ್ಡು ಸುರಿಯುವುದಕ್ಕಿಂತ ನಮ್ಮ ಮನಸ್ಸಿಗೆ ಆಪ್ತವೆನಿಸುವ ಯಾವುದೋ ಅಮೂಲ್ಯ ವಸ್ತುವಿಗೆ 50 ಡಾಲರ್‌ ಖರ್ಚು ಮಾಡಿದರೂ ಸಿಗುವ ಸಂತೃಪ್ತಿ ದೊಡ್ಡದು ಎಂಬುದು ಟಾಮ್‌ ಸಮರ್ಥನೆ.

ಜಗತ್ತು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಇನ್ನಷ್ಟು ಸಾಧಿಸಲು ದಾಪುಗಾಲು ಹಾಕುತ್ತಿರುವಾಗ ಈತ ಮಾತ್ರ ಟೈಪ್‌ರೈಟರ್‌ಗೆ ಅಪಾರ ಮೊತ್ತ ವಿನಿಯೋಗಿಸುತ್ತಿದ್ದಾನಲ್ಲ ಎಂಬ ಟೀಕೆಗಳ ಬಗ್ಗೆ ಟಾಮ್‌ಗೂ ಗೊತ್ತಿದೆ. ಆದರೆ ಅವರು ಅದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಬದಲಾಗಿ, ‘ಟೈಪ್‌ರೈಟರ್‌ಗಳ ಬಗೆಗಿನ ಕಿರುಗತೆಗಳನ್ನು ಒಟ್ಟುಗೂಡಿಸಿ ಒಂದು ಸಂಗ್ರಹ ಹೊರತರುವ ಯೋಚನೆ ನನಗಿದೆ’ ಎಂದು ಖಚಿತ ಧ್ವನಿಯಲ್ಲಿ ಹೇಳುತ್ತಾರೆ.

 

ಪ್ರತಿಕ್ರಿಯಿಸಿ (+)