ಮಂಗಳವಾರ, ಡಿಸೆಂಬರ್ 10, 2019
26 °C

60 ಕ್ಷೇತ್ರಗಳಲ್ಲಿ ಶಿವಸೇನೆ ಸ್ಪರ್ಧೆ: ಪ್ರಮೋದ್‌ ಮುತಾಲಿಕ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

60 ಕ್ಷೇತ್ರಗಳಲ್ಲಿ ಶಿವಸೇನೆ ಸ್ಪರ್ಧೆ: ಪ್ರಮೋದ್‌ ಮುತಾಲಿಕ್‌

ಚಿಕ್ಕಮಗಳೂರು: ಶ್ರೀರಾಮಸೇನೆಯು ಶಿವಸೇನೆಯೊಂದಿಗೆ ಸಖ್ಯ ಮಾಡಿಕೊಂಡಿದ್ದು, ವಿಧಾನಸಭೆ ಚುನಾವಣೆಗೆ ರಾಜ್ಯದಲ್ಲಿ ಶಿವಸೇನೆಯಿಂದ 60 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ‘60 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಿ ಮುಂಬೈನ ಶಿವಸೇನೆ ಕೇಂದ್ರ ಕಚೇರಿಗೆ ಕಳಹಿಸಲಾಗಿದೆ. ಸಿದ್ಧಲಿಂಗ ಸ್ವಾಮೀಜಿ ಅವರು ಶಿವಸೇನೆಯ ರಾಜ್ಯ ಘಟಕದ ಅಧ್ಯಕ್ಷರಾಗಿದ್ದು, ಕಲಬುರ್ಗಿ ಜಿಲ್ಲೆಯ ಜೇವರ್ಗಿ ಕ್ಷೇತ್ರದಲ್ಲಿ ಅವರನ್ನ ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ. ಶೃಂಗೇರಿ ಅಥವಾ ತೆರದಾಳ ಕ್ಷೇತ್ರಗಳ ಪೈಕಿ ಒಂದರಲ್ಲಿ ನಾನು ಕಣಕ್ಕಿಳಿಯಲಿದ್ದೇನೆ. ಎರಡು ದಿನಗಳಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಹಿಂದುತ್ವವೇ ನಮ್ಮ ಕಾರ್ಯಸೂಚಿ. ಜನಸಂಘವು ಬಿಜೆಪಿಯಾಗಿ ಪರಿವರ್ತನೆಯಾಗಿ ಡೊಂಗಿ ಹಿಂದುತ್ವ ಪಾಲಿಸುತ್ತಿದೆ. ಶ್ರೀರಾಮಸೇನೆಯ ಹಿಂದುತ್ವದ ವಿಚಾರದಲ್ಲಿ ಯಾವುದೇ ರಾಜೀ ಮಾಡಿಕೊಂಡಿಲ್ಲ. ಬಿಜೆಪಿಯು ರಾಜಕೀಯ ಸ್ವಾರ್ಥಕ್ಕಾಗಿ ಹಿಂದುತ್ವವನ್ನು ಬಳಸಿಕೊಳ್ಳುತ್ತಿದೆ. ನಾವು ಹಿಂದುತ್ವಕ್ಕಾಗಿಯೇ ರಾಜಕೀಯ ಪ್ರವೇಶಿಸಲು ನಿರ್ಧರಿಸಿದ್ದೇವೆ’ ಎಂದು ಹೇಳಿದರು.

‘ಗೋರಕ್ಷಣೆಗೆ ಬಗ್ಗೆ ಮಾತನಾಡಲು ಬಿಜೆಪಿಯವರಿಗೆ ನೈತಿಕ ಹಕ್ಕು ಇಲ್ಲ. ಗೋವಾದಲ್ಲಿ ಗೋಮಾಂಸ ನಿಷೇಧ ಕಾಯ್ದೆ ಜಾರಿ ಮಾಡುವುದಿಲ್ಲ ಎಂದು ಅಲ್ಲಿನ ಮುಖ್ಯಮಂತ್ರಿ ಮನೋಹರ್‌ ಪರ್ರೀಕರ್‌ ಈಚೆಗೆ ಹೇಳಿದ್ದಾರೆ. ಗೋಮಾಂಸ ರಫ್ತಿನಲ್ಲಿ ಭಾರತವು ಒಂದನೇ ಸ್ಥಾನದಲ್ಲಿದೆ. ಗೋಮಾಂಸ ರಫ್ತು ಸ್ಥಗಿತಕ್ಕೆ ಕ್ರಮ ಕೈಗೊಂಡರೆ, ಗೋಹತ್ಯೆ ತಾನಾಗಿಯೇ ನಿಲ್ಲುತ್ತದೆ. ಕೇಂದ್ರ ಬಿಜೆಪಿ ಸರ್ಕಾರವು ಕ್ರಮ ಕೈಗೊಳ್ಳದೆ ಬೂಟಾಟಿಕೆ ಮಾಡುತ್ತಿದೆ’ ಎಂದು ಆಪಾದಿಸಿದರು.

‘ಶ್ರೀಗುರುದತ್ತಾತ್ರೇಯ ಬಾಬಾಬುಡನ್‌ಸ್ವಾಮಿ ದರ್ಗಾ ವಿವಾದವನ್ನು ಅಯೋಧ್ಯಾ ಮಾದರಿಯಲ್ಲಿ ಜೀವಂತವಾಗಿ ಇಟ್ಟಿದ್ದಾರೆ. ವ್ಯವಸ್ಥಿತವಾಗಿ ಹಿಂದೂಗಳಿಗೆ ಮೋಸ ಮಾಡಿ ದತ್ತಪೀಠವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಬಿಜೆಪಿ ಆಡಳಿತಕ್ಕೆ ಬಂದರೆ 24 ಗಂಟೆಯೊಳಗೆ ದತ್ತಪೀಠ ವಿವಾದ ಬಗೆಹರಿಸುತ್ತೇನೆ ಎಂದು ಶಾಸಕ ಸಿ.ಟಿ.ರವಿ ಈಚೆಗೆ ಬೊಗಳೆಬಿಟ್ಟಿದ್ದಾರೆ. ಹಿಂದುಗಳ ಓಟಿಗಾಗಿ ಬೂಟಾಟಿಕೆ ಮಾತುಗಳನ್ನಾಡಿದ್ದಾರೆ. ದತ್ತಪೀಠದ ಹೆಸರಿನಲ್ಲಿ ಗೆದ್ದ ರವಿ ಅವರು ₹ 8 ಕೋಟಿಯ ಮನೆ ಕಟ್ಟಿಕೊಂಡರು. ದತ್ತಪೀಠಕ್ಕಾಗಿ ಏನೂ ಮಾಡಲಿಲ್ಲ’ ಎಂದು ಆರೋಪಿಸಿದರು.

‘ದತ್ತಪೀಠಕ್ಕಾಗಿ ಹೋರಾಟ ಆರಂಭಿಸಿದವರು ನಾವು. ಈ ಬಾರಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಶಿವಸೇನೆಯಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ. ಜಿಲ್ಲೆಯ ಮೂಡಿಗೆರೆ, ಶೃಂಗೇರಿ, ಚಿಕ್ಕಮಗಳೂರು ಈ ಮೂರು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ’ ಎಂದು ಹೇಳಿದರು.

ಶ್ರೀರಾಮ ಸೇನೆ ರಾಜ್ಯ ಕಾರ್ಯದರ್ಶಿ ಗಂಗಾಧರಕುಲಕರ್ಣಿ, ದಕ್ಷಿಣ ಪ್ರಾಂತ್ಯ ಪ್ರಮುಖ್‌ ಮಹೇಶ್‌ಕುಮಾರ್‌, ಜಿಲ್ಲಾಧ್ಯಕ್ಷ ರಂಜಿತ್‌ಶೆಟ್ಟಿ, ಶಿವಸೇನೆಯ ದಕ್ಷಿಣ ಪ್ರಮುಖ ಶಿವಕುಮಾರ ರೆಡ್ಡಿ, ಆನಂದಶೆಟ್ಟಿ ಅಡ್ಡಿಯಾರ್‌, ಅರ್ಜುನ್‌ ದುರ್ಗಾಶಕ್ತಿ ಸೇನೆಯ ಶಾರದಮ್ಮ ಇದ್ದರು.

ಪ್ರತಿಕ್ರಿಯಿಸಿ (+)