ಮತದಾನ ಬಹಿಷ್ಕಾರ ಎಚ್ಚರಿಕೆ

7
ನಿವೇಶನ ಒದಗಿಸಲು ಕುಸುಗುಂಡಿ–ಕಾರಕ್ಕಿ ಗ್ರಾಮಸ್ಥರ ಒತ್ತಾಯ

ಮತದಾನ ಬಹಿಷ್ಕಾರ ಎಚ್ಚರಿಕೆ

Published:
Updated:

ರಿಪ್ಪನ್‌ಪೇಟೆ: ಕೋಡೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕುಸುಗುಂಡಿ–ಕಾರಕ್ಕಿ ಗ್ರಾಮದಲ್ಲಿ ನಿವೇಶನ ನೀಡುವಂತೆ ಒತ್ತಾಯಿಸಿ ಸೋಮವಾರ ಪ್ರತಿಭಟನೆ ನಡೆಸಿದ ನಿರಾಶ್ರಿತರು, ಬೇಡಿಕೆ ಈಡೇರಿಸದಿದ್ದರೆ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದರು. ಗ್ರಾಮದ ಸರ್ವೆ ನಂಬರ್‌ 10–11ರಲ್ಲಿ 1992– 93ನೇ ಸಾಲಿನಲ್ಲಿ ನಿರಾಶ್ರಿತರಿಗೆ ಮನೆ, ನಿವೇಶನ ರಹಿತ 66 ಫಲಾನುಭವಿಗಳನ್ನು ಗುರುತಿಸಿ ಭೂಮಿ ಮಂಜೂರು ಮಾಡಿ ಹಕ್ಕುಪತ್ರ ನೀಡಲಾಗಿತ್ತು. ಈ ಜಾಗವನ್ನು ಕಂದಾಯ ಇಲಾಖೆಯ ಅಧಿಕಾರಿಗಳು ಸರ್ವೆ ನಡೆಸಿ, ನಕ್ಷೆ ಮತ್ತು ಚಕ್ಬಂದಿ, ಭೂ ಪರಿವರ್ತನೆ ಮಾಡಿ, ನಿವೇಶನಕ್ಕೆ ಗುರುತು ಹಾಕಿದ್ದರು. ಆದರೆ, ಇನ್ನೂ ಫಲಾನುಭವಿಗಳಿಗೆ ಜಾಗವನ್ನು ಗುರುತುಪಡಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ವಿದ್ಯುತ್‌ ಯೋಜನೆಗಾಗಿ ನಿರಾಶ್ರಿತರಾಗಿ ವಲಸೆ ಬಂದು ಕುಸುಗುಂಡಿ ಹಾಗೂ ಕಾರಕ್ಕಿ ಗ್ರಾಮಗಳಲ್ಲಿ ನೆಲೆಸಿರುವ ಇವರಿಗೆ ಸರ್ವೆ ನಂಬರ್‌ 11ರಲ್ಲಿ 19 ಎಕರೆ ಭೂಮಿಯನ್ನು ಕೆಪಿಸಿ ಮೀಸಲಿಟ್ಟಿತ್ತು. ಆದರೆ, ತಹಶೀಲ್ದಾರ್‌ ಹಾಗೂ ಸಾಗರ ಉಪ ವಿಭಾಗಾಧಿಕಾರಿ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಫಲಾನುಭವಿ ಪಟ್ಟಿಯಲ್ಲಿರುವ ಅಂಗವಿಕಲ ಕೃಷ್ಣಪ್ಪ, ‘15 ವರ್ಷಗಳಿಂದ ನಿವೇಶನಕ್ಕಾಗಿ ಸರ್ಕಾರಿ ಕಚೇರಿ ಅಲೆದರೂ ಕೆಲಸವಾಗಿಲ್ಲ. ಚುನಾಯಿತ ಪ್ರತಿನಿಧಿಗಳು ಸಹ ಸ್ಪಂದಿಸಿಲ್ಲ’ ಎಂದು ಅಳಲು ತೋಡಿಕೊಂಡರು.

ಗ್ರಾಮ ಪಂಚಾಯ್ತಿ ಸದಸ್ಯ ಜಯಪ್ರಕಾಶ ಶೆಟ್ಟಿ, ಸ್ವಾಮಿಗೌಡ, ರಮೇಶ್‌ ಭಟ್, ನಾರಾಯಣಪ್ಪ, ರಾಧಮ್ಮ, ಕೋಮಲ ಅವರು ಪ್ರತಿಭಟನಾಕಾರರಿಗೆ ಬೆಂಬಲ ವ್ಯಕ್ತಪಡಿಸುವುದಾಗಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry