ಶುಕ್ರವಾರ, ಡಿಸೆಂಬರ್ 13, 2019
19 °C
ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ನಿವೃತ್ತ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ.ಬಿ.ಮಂಜುನಾಥ್ ಸಲಹೆ

ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಿ

ತುಮಕೂರು: 'ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸಾರ್ವಜನಿಕರಿಗೆ ಯಾವುದೇ ರೀತಿಯ ಕಿರಿಕಿರಿ ಉಂಟಾಗದಂತೆ ಕಾನೂನು ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ವೈಯಕ್ತಿಕ ಪ್ರತಿಷ್ಠೆಗಾಗಿ ಹೆಸರು ಗಳಿಸುವ ಮನೋಭಾವ ಹೊಂದಿರಬಾರದು' ಎಂದು ನಿವೃತ್ತ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ.ಬಿ.ಮಂಜುನಾಥ್ ಹೇಳಿದರು.ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾ ಪೊಲೀಸ್‌ ವತಿಯಿಂದ ಆಯೋಜಿಸಿದ್ಧ ಕಾರ್ಯಕ್ರಮದಲ್ಲಿ ಪೊಲೀಸ್ ಧ್ವಜ ಬಿಡುಗಡೆ ಮಾಡಿ ಮಾತನಾಡಿದರು.

ಕಾನೂನು ಸುವ್ಯವಸ್ಥೆ ಕಾಪಾಡಲು ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಪೊಲೀಸರು ಧರಿಸುವ ಖಾಕಿ, ಸಮಾಜ ಮತ್ತು ಪೊಲೀಸರ ರಕ್ಷಣೆಗೆ ‘ಕವಚ’ ಇದ್ದಂತೆ. ಖಾಕಿ ಎಂದಾಕ್ಷಣ ಜನರಲ್ಲಿ ಭಯ ಮೂಡುವ ವಾತಾವರಣದ ಬದಲು ಜನಸ್ನೇಹಿ ವಾತಾವರಣವನ್ನು ರೂಪಿಸಬೇಕು. ಖಾಕಿಯನ್ನು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ತಾವು ಧರಿಸುವ ಖಾಕಿಯನ್ನು ಗುರುತರವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಸಮಾಜದಲ್ಲಿ ಯಾವುದೇ ರೀತಿಯ ಅನಾಹುತಗಳು ನಡೆದರೂ ಮೊದಲು ಸಾರ್ವಜನಿಕರು ಮಾಹಿತಿ ನೀಡುವುದು ಪೊಲೀಸರಿಗೆ. ನಂತರ ಅಗ್ನಿ ಶಾಮಕ ದಳ, ಬೇರೆ ಇಲಾಖೆಗಳಿಗೆ ತಿಳಿಸುತ್ತಾರೆ. ಎಂಥದ್ದೇ ಕ್ಲಿಷ್ಟಕರ ಪರಿಸ್ಥಿತಿ ಎದುರಾದರೂ ಅದನ್ನು ತಿಳಿಗೊಳಿಸುವಲ್ಲಿ ಪೊಲೀಸರು ಪ್ರಾಣ ಲೆಕ್ಕಿಸದೇ ಕಾರ್ಯನಿರ್ವಹಿಸುತ್ತಾರೆ ಎಂದು ಪೊಲೀಸರ ಸೇವೆಯನ್ನು ಶ್ಲಾಘಿಸಿದರು.

ಪ್ರಾಸ್ತಾವಿಕ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಗೋಪಿನಾಥ್, ಭಾರತೀಯ ಸೇನೆಯಲ್ಲಿ 1949ರಲ್ಲಿ ಧ್ವಜ ದಿನಾಚರಣೆ ಪ್ರಾರಂಭಿಸಲಾಯಿತು. ದೇಶದಲ್ಲಿ ಪೊಲೀಸ್ ಕಾಯ್ದೆ ಜಾರಿಗೊಂಡ ನಂತರ 1965ರ ಏಪ್ರಿಲ್ 2ರಿಂದ ಪೊಲೀಸ್ ಧ್ವಜ ದಿನ ಆಚರಿಸಲಾಗುತ್ತಿದೆ ಎಂದು ಹೇಳಿದರು. ನಿವೃತ್ತ ಪೊಲೀಸರು ಮತ್ತು ಅವರ ಕುಟುಂಬದವರ ಹಿತ ಕಾಪಾಡುವುದೇ ಈ ಪೊಲೀಸ್ ಧ್ವಜ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಜಿಲ್ಲೆಯ ನಿವೃತ್ತ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಲ್ಯಾಣ ನಿಧಿಯಲ್ಲಿ ₹ 25.85 ಲಕ್ಷ ಠೇವಣಿ ಇದೆ. ಉಳಿತಾಯ ಖಾತೆಯಲ್ಲಿ ₹ 1.55 ಲಕ್ಷ ಇದೆ. 2017ರಲ್ಲಿ ನಡೆದ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಧ್ವಜ ಮಾರಾಟದಿಂದ ₹ 4.13 ಲಕ್ಷ ಸಂಗ್ರಹವಾಗಿದೆ ಎಂದು ಹೇಳಿದರು.ಈ ಹಣದಲ್ಲಿ ನಿವೃತ್ತ ಪೊಲೀಸರ ವೈದ್ಯಕೀಯ ವೆಚ್ಚಕ್ಕೆ ₹ 4.80 ಲಕ್ಷ ಮತ್ತು ಶವ ಸಂಸ್ಕಾರಕ್ಕಾಗಿ ₹ 1.30 ಲಕ್ಷ ಖರ್ಚು ಮಾಡಲಾಗಿದೆ ಎಂದು ವಿವರಿಸಿದರು.

ಇದೇ ಸಂದರ್ಭದಲ್ಲಿ ಜಿಲ್ಲೆಯ 6 ಪೊಲೀಸ್ ಉಪವಿಭಾಗಗಳ ಪೊಲೀಸರಿಂದ ಆಕರ್ಷಕ ಪಥ ಸಂಚಲನ ನಡೆಯಿತು.

ಡಿವೈಎಸ್ಪಿಗಳಾದ ಕೆ.ಎಸ್ ನಾಗರಾಜ್, ಕಲ್ಲೇಶಪ್ಪ, ವೆಂಕಟೇಶ್ ನಾಯ್ಡು ಸೇರಿ ಜಿಲ್ಲೆಯ ಎಲ್ಲ ಠಾಣೆಗಳ ಅಧಿಕಾರಿಗಳು, ಸಿಬ್ಬಂದಿ, ನಿವೃತ್ತ ಪೊಲೀಸರು ಇದ್ದರು.

ಆರೋಗ್ಯ, ಕುಟುಂಬ ರಕ್ಷಣೆಗೆ ಒತ್ತು ಕೊಡಿ

'ಪೊಲೀಸರ ಆರೋಗ್ಯ ಚೆನ್ನಾಗಿದ್ದರೆ ತಾನೆ ಬೇರೋಬ್ಬರಿಗೆ ರಕ್ಷಣೆ ನೀಡಲು ಸಾಧ್ಯ. ಹೀಗಾಗಿ, ಪೊಲೀಸರು ತಮ್ಮ ಆರೋಗ್ಯ ರಕ್ಷಣೆಗೆ ಹೆಚ್ಚಿನ ಒತ್ತು ಕೊಡಬೇಕಾಗುತ್ತದೆ. ಇಲ್ಲದೇ ಇದ್ದರೆ ನಿವೃತ್ತಿ ನಂತರ ಪಶ್ಚಾತಾಪ ಪಡಬೇಕಾಗುತ್ತದೆ. ಕುಟುಂಬದವರ ರಕ್ಷಣೆಗೂ ನಿಗಾ ವಹಿಸಬೇಕು' ಎಂದು ಜಿ.ಬಿ.ಮಂಜುನಾಥ್ ಎಚ್ಚರಿಕೆ ನೀಡಿದರು.

ನಿವೃತ್ತರಿಗೆ ಸನ್ಮಾನ

2017ರಲ್ಲಿ ನಿವೃತ್ತರಾದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ.ಬಿ ಮಂಜುನಾಥ್ ಸೇರಿದಂತೆ 45 ಮಂದಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಗೋಪಿನಾಥ್ ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ ಸನ್ಮಾನಿಸಿದರು.

 

ಪ್ರತಿಕ್ರಿಯಿಸಿ (+)