7

ಹ್ಯಾಟ್ರಿಕ್ ಹಂಬಲ, ಅನುಕಂಪದ ಬಲ

Published:
Updated:
ಹ್ಯಾಟ್ರಿಕ್ ಹಂಬಲ, ಅನುಕಂಪದ ಬಲ

ನಗರ ಮತ್ತು ಗ್ರಾಮೀಣ ಸಂಸ್ಕೃತಿಗಳ ನಡುವೆ ತೂಗುಯ್ಯಾಲೆ ಆಡುತ್ತಿರುವ ಪ್ರದೇಶಗಳು ಒಂದೆಡೆ. ರಿಯಲ್‍ ಎಸ್ಟೇಟ್‍ ಹಾಗೂ ಐ.ಟಿ- ಬಿ.ಟಿ ಕಂಪನಿಗಳ ಜೊತೆಗೆ ಪ್ರಸಿದ್ಧ ವಿದ್ಯಾಸಂಸ್ಥೆಗಳು ಹೊಂದಿರುವ ವರ್ಚಸ್ಸು ಇನ್ನೊಂದು ಕಡೆ. ವಿಶ್ವದ ವಿವಿಧ ಭಾಗಗಳಿಗೆ ಬೆಂಗಳೂರನ್ನು ಸಂಪರ್ಕಿಸುವ ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನೆರಳು ಮತ್ತೊಂದು ಕಡೆ. ಇದು, ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಮೇಲ್ಮೈ ಲಕ್ಷಣ. ಈ ವೈರುಧ್ಯಗಳೇ ಕ್ಷೇತ್ರದಲ್ಲಿ ಅಡ್ಡಾಡಿದಾಗ ಕಾಣಿಸುವ ಚುನಾವಣಾ ಬಿಂಬಗಳೂ ಹೌದು.

ಬೆಂಗಳೂರು ಮಹಾನಗರದ ಅತಿ ದೊಡ್ಡ ವಿಧಾನಸಭಾ ಕ್ಷೇತ್ರಗಳಲ್ಲೊಂದು ಎನ್ನುವುದು ಬ್ಯಾಟರಾಯನಪುರದ ವಿಶೇಷ. 2008ರಲ್ಲಿ ನಡೆದ ಕ್ಷೇತ್ರ ಪುನರ್ ವಿಂಗಡಣೆ ಸಂದರ್ಭದಲ್ಲಿ ಅಸ್ತಿತ್ವಕ್ಕೆ ಬಂದ ಈ ಕ್ಷೇತ್ರದಲ್ಲಿ, ಈವರೆಗೆ ನಡೆದ ಎರಡು ಚುನಾವಣೆಗಳಲ್ಲೂ ಕಾಂಗ್ರೆಸ್‍ನ ಕೃಷ್ಣ ಬೈರೇಗೌಡ ಗೆದ್ದಿದ್ದಾರೆ. ಅದಕ್ಕೆ ಮುನ್ನ ಕೋಲಾರದ ವೇಮಗಲ್‍ ಕ್ಷೇತ್ರದಲ್ಲಿ ಎರಡು ಚುನಾವಣೆಗಳಲ್ಲಿ ಸ್ಪರ್ಧಿಸಿ ಅವರು ಗೆಲುವು ಕಂಡಿದ್ದರು. 2008ರಲ್ಲಿ ವೇಮಗಲ್‍ ಕ್ಷೇತ್ರ ಅಸ್ತಿತ್ವ ಕಳೆದುಕೊಂಡಾಗ ಕೃಷ್ಣ ಬೈರೇಗೌಡರು ಬ್ಯಾಟರಾಯನಪುರ ಆಯ್ದುಕೊಂಡಿದ್ದರು. ಕೋಲಾರ, ಚಿಕ್ಕಬಳ್ಳಾಪುರ ಭಾಗದ ಜನ ಹೆಚ್ಚಾಗಿರುವ ಈ ಕ್ಷೇತ್ರ ಅವರ ಪಾಲಿಗೆ ತಮ್ಮ ತವರಿನ ನೆರಳಿನಂತೆ ಕಾಣಿಸಿರಬೇಕು. ಈ ಕ್ಷೇತ್ರದಲ್ಲಿ ಸತತ ಮೂರನೇ ಗೆಲುವಿನ ಮೂಲಕ ಹ್ಯಾಟ್ರಿಕ್ ಸಾಧಿಸುವ ಪ್ರಯತ್ನ ಅವರದು.

ಕ್ಷೇತ್ರದಲ್ಲಿ 7 ಬಿಬಿಎಂಪಿ ವಾರ್ಡ್‍ಗಳಿವೆ. 4 ವಾರ್ಡ್‍ಗಳಲ್ಲಿ (ಥಣಿಸಂದ್ರ, ಬ್ಯಾಟರಾಯನಪುರ, ಕೊಡಿಗೇಹಳ್ಳಿ, ಕುವೆಂಪು ನಗರ) ಕಾಂಗ್ರೆಸ್‍ ಕಾರ್ಪೊರೇಟರ್‌ಗಳಿದ್ದರೆ, ಮೂರು (ಜಕ್ಕೂರು, ವಿದ್ಯಾರಣ್ಯಪುರ, ದೊಡ್ಡಬೊಮ್ಮಸಂದ್ರ) ವಾರ್ಡ್‍ಗಳು ಬಿಜೆಪಿ ತೆಕ್ಕೆಯಲ್ಲಿವೆ.

ಕಳೆದ ಹತ್ತು ವರ್ಷಗಳಿಂದ ಬ್ಯಾಟರಾಯನಪುರವನ್ನು ಪ್ರತಿನಿಧಿಸುತ್ತಿರುವ ಕೃಷ್ಣ ಬೈರೇಗೌಡ ಕೃಷಿ ಸಚಿವರೂ ಹೌದು. ಅವರ ಮುಖ್ಯವಾದ ಶಕ್ತಿ, ಯಾವುದೇ ಕಳಂಕಗಳನ್ನು ಅಂಟಿಸಿಕೊಳ್ಳದಿರುವುದು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವುದು. ಮತದಾರರ ಕೈಗೆ ಕೂಡ ಸುಲಭವಾಗಿ ಸಿಗುತ್ತಾರೆ. ಇದೆಲ್ಲವೂ ಸರಿ, ಅಭಿವೃದ್ಧಿಯ ಸಂಗತಿಯೇನು ಎಂದರೆ, ಕಾಂಗ್ರೆಸ್‍ ಮುಖಂಡರು ಉತ್ಸಾಹದಿಂದ ಮಾತನಾಡುತ್ತಾರೆ. ‘ಕ್ಷೇತ್ರದಲ್ಲಿ ಫ್ಲೈಓವರ್‌ಗಳು ನಿರ್ಮಾಣಗೊಂಡಿವೆ. ವಿದ್ಯಾರಣ್ಯಪುರದಲ್ಲಿ ಅಂತರರಾಷ್ಟ್ರೀಯ ಮಟ್ಟದ ಒಳಾಂಗಣ ಕ್ರೀಡಾಂಗಣ ನಿರ್ಮಾಣಗೊಂಡಿದೆ. ಈಜುಕೊಳ ಕೂಡ ಉದ್ಘಾಟನೆ ಹಂತದಲ್ಲಿದೆ. ಸಹಕಾರ ನಗರದಲ್ಲೂ ಕ್ರೀಡಾಂಗಣದ ಕಾಮಗಾರಿ ಆರಂಭವಾಗಿದೆ.

ಇವೆಲ್ಲಕ್ಕೂ ಮುಖ್ಯವಾಗಿ, ಕ್ಷೇತ್ರದಾದ್ಯಂತ ತ್ಯಾಜ್ಯ ನೀರನ್ನು ಸಂಸ್ಕರಿಸಿ ತುಂಬಿಸುವ ಮೂಲಕ ಕೆರೆಗಳ ಪುನರುಜ್ಜೀವನಕ್ಕೆ ಒತ್ತು ನೀಡಲಾಗಿದೆ’ ಎಂದು ಕಾಂಗ್ರೆಸ್‍ ಮುಖಂಡ ಚೇತನ್‍ ಹೇಳುತ್ತಾರೆ. ಥಣಿಸಂದ್ರ ವಾರ್ಡ್‍ನಲ್ಲಿನ ನೀರಿನ ಕೊರತೆಯ ಕುರಿತು ಪ್ರಸ್ತಾಪಿಸಿದರೆ, ‘ಅಲ್ಲಿನ್ನೂ ಕಾವೇರಿ ಸಂಪರ್ಕ ಬಂದಿಲ್ಲ. ಹಾಗಾಗಿ ಬೋರ್‌ವೆಲ್‌ಗಳನ್ನೇ ಅವಲಂಬಿಸುವ ಸ್ಥಿತಿಯಿದೆ. ಕಾವೇರಿ ಸಂಪರ್ಕ ಸದ್ಯದಲ್ಲೇ ದೊರೆಯಲಿದ್ದು, ನೀರಿನ ಸಮಸ್ಯೆ ಬಗೆಹರಿಯಲಿದೆ’ ಎಂದು ಹೇಳುತ್ತಾರೆ.

ಬಾಗಲೂರಿನಿಂದ ವಿಮಾನ ನಿಲ್ದಾಣಕ್ಕೆ ಪರ್ಯಾಯ ರಸ್ತೆ ನಿರ್ಮಾಣ, 3ನೇ ಹಂತದಲ್ಲಿ ಕಾರ್ಯಗತಗೊಳ್ಳಲಿರುವ ಮೆಟ್ರೊ ರೈಲಿನ ಕಾಮಗಾರಿಗಳು ಕೂಡ ಕಾಂಗ್ರೆಸ್‍ ಪಕ್ಷದ ಸಾಧನೆಗಳ ಪಟ್ಟಿಯಲ್ಲಿವೆ. ‘ಕ್ಷೇತ್ರದಲ್ಲಿ ಸರ್ವಾಂಗೀಣ ಅಭಿವೃದ್ಧಿಯಾಗಿದೆ. ಗೆಲುವು ಕಷ್ಟವೇ ಅಲ್ಲ’ ಎನ್ನುವುದು ಕಾಂಗ್ರೆಸ್‍ ಮುಖಂಡ ಬ್ಯಾಟರಾಯನಪುರದ ಕಾರ್ಪೊರೇಟರ್ ಮಂಜುನಾಥ್‍ ಅವರ ಅನಿಸಿಕೆ.

ಬಿಜೆಪಿಯ ಮುನೀಂದ್ರ ಕುಮಾರ್‌ ಅವರಿಗೆ ಕೃಷ್ಣ ಬೈರೇಗೌಡರ ಅವಧಿಯಲ್ಲಿ ಬ್ಯಾಟರಾಯನಪುರ ಕ್ಷೇತ್ರ ಅಭಿವೃದ್ಧಿಯಿಂದ ಸಂಪೂರ್ಣ ವಂಚಿತವಾಗಿದೆ ಎನ್ನುವ ಅಸಮಾಧಾನ. ‘ಹೊಸ ಕಾಲೇಜುಗಳಾಗಿಲ್ಲ. ಆಸ್ಪತ್ರೆಗಳು ನಿರ್ಮಾಣವಾಗಿಲ್ಲ. ಬ್ಯಾಟರಾಯನಪುರ ಇವತ್ತಿಗೂ ಸ್ಲಂ ರೀತಿಯಲ್ಲೇ ಇದೆ’ ಎನ್ನುವುದು ಅವರ ದೂರು. ಈ ವೈಫಲ್ಯವೇ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಸಹಕಾರಿಯಾಗುತ್ತದೆ ಎನ್ನುವ ನಂಬಿಕೆ ಅವರದು.

ಜಕ್ಕೂರು ರೈಲ್ವೆ ಮೇಲ್ಸೇತುವೆ ಕಾಮಗಾರಿ ನನೆಗುದಿಗೆ ಬಿದ್ದಿರುವುದು ಹಾಗೂ ಕೊಡಿಗೇಹಳ್ಳಿಯ ಅಂಡರ್‌ಪಾಸ್‌ ನಿರ್ಮಾಣದ ವಿಳಂಬ ಕೂಡ ಶಾಸಕರ ಟೀಕಾಕಾರರ ಪ್ರಮುಖ ದೂರುಗಳಾಗಿವೆ. ಬೆಳ್ಳಹಳ್ಳಿ, ರಜಾಕ್‍ಪಾಳ್ಯ, ಬಾಗಲೂರಿನ ಪರಿಸರದಲ್ಲಿ ಕಸ ಸುರಿಯುತ್ತಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.

ಕಳೆದ ಎರಡು ಚುನಾವಣೆಗಳಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಎ. ರವಿ ಈ ಬಾರಿ ಕೂಡ ಟಿಕೆಟ್ ಆಕಾಂಕ್ಷಿ. ಬಿಜೆಪಿ ನಾಯಕ ಆರ್‌. ಅಶೋಕ್ ಸಂಬಂಧಿಯಾಗಿರುವ ಅವರು, ಹಿಂದಿನ ಸೋಲುಗಳ ಅನುಕಂಪದ ಅಲೆಯ ಮೇಲೆ ಗೆಲುವಿನ ದಡ ಸೇರುವ ಲೆಕ್ಕಾಚಾರದಲ್ಲಿದ್ದಾರೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‍ ಮತ್ತು ಬಿಜೆಪಿ ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆಯನ್ನು ಕಾಂಗ್ರೆಸ್‍ ಪ್ರಚಾರಕ್ಕಾಗಿ ಬಳಸಿಕೊಳ್ಳಲಾಗಿತ್ತು. ಹಾಗಾಗಿ ಈ ಬಾರಿ, ಉನ್ನತ ಶಿಕ್ಷಣ ಪಡೆದಿರುವ ಕೃಷ್ಣ ಬೈರೇಗೌಡರಿಗೆ ಶೈಕ್ಷಣಿಕವಾಗಿ ಸರಿಸಮನಾದ ಹುರಿಯಾಳನ್ನು ಬಿಜೆಪಿ ಸ್ಪರ್ಧೆಗಿಳಿಸುತ್ತದೆ ಎನ್ನುವ ಸುದ್ದಿ ಚಾಲ್ತಿಯಲ್ಲಿತ್ತು. ಆದರೀಗ ಈ ಸಂಗತಿ ಹಿನ್ನೆಲೆಗೆ ಸರಿದಿದ್ದು, ‘ರವಿ ಅವರು ಸ್ಪರ್ಧಿಸುವುದು ಹೆಚ್ಚೂ ಕಡಿಮೆ ಖಚಿತವಾಗಿದೆ’ ಎಂದು ಸ್ಥಳೀಯ ಬಿಜೆಪಿ ಮುಖಂಡರು ಹೇಳುತ್ತಾರೆ.

ಕಳೆದೆರಡು ಚುನಾವಣೆಗಳ ಫಲಿತಾಂಶದ ಹಿನ್ನೆಲೆಯಲ್ಲಿ ಕಾಂಗ್ರೆಸ್‍- ಬಿಜೆಪಿ ನಡುವೆ ನೇರ ಸ್ಪರ್ಧೆ ಎನ್ನುವಂತೆ ಕಾಣಿಸಿದರೂ, ಜೆಡಿಎಸ್‍ ಅನಿರೀಕ್ಷಿತ ಫಲಿತಾಂಶ ನೀಡುವ ಪ್ರಯತ್ನದಲ್ಲಿದೆ. ತಿಂಡ್ಲು ಮಂಜು ಜೆಡಿಎಸ್ ಟಿಕೆಟ್‍ ನಿರೀಕ್ಷೆಯಲ್ಲಿದ್ದು, ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ.

ಈ ವಿಧಾನಸಭಾ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 4,06,655. ಮೂರು ಪ್ರಮುಖ ಪಕ್ಷಗಳ ಅಭ್ಯರ್ಥಿಗಳೂ ಒಕ್ಕಲಿಗರೇ ಎನ್ನುವುದು ವಿಶೇಷ. ಇಲ್ಲಿನ ಮತದಾರರಲ್ಲಿ 70 ಸಾವಿರಕ್ಕೂ ಹೆಚ್ಚು ಮಂದಿ ಒಕ್ಕಲಿಗ ಸಮುದಾಯದವರಿರುವುದು ಇದಕ್ಕೆ ಕಾರಣ. ಹಿಂದುಳಿದ ವರ್ಗಗಳ ಮತದಾರರೂ ಗಣನೀಯ (ಸುಮಾರು 63 ಸಾವಿರ) ಪ್ರಮಾಣದಲ್ಲಿದ್ದಾರೆ.

ಕೃಷ್ಣ ಬೈರೇಗೌಡರು ತಮ್ಮ ವೈಯಕ್ತಿಕ ವರ್ಚಸ್ಸು ಹಾಗೂ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ಮತದಾರರ ಮುಂದೆ ಬಂದಿದ್ದಾರೆ. ಬಿಜೆಪಿ ಕಾರ್ಯಕರ್ತರು ಹುಮ್ಮಸ್ಸಿನಿಂದ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಜೆಡಿಎಸ್‍ ಹೊಸ ಮುಖಕ್ಕೆ ಅವಕಾಶ ಕೊಡಿ ಎಂದು ಮತದಾರರನ್ನು ಓಲೈಸಲು ಪ್ರಯತ್ನಿಸುತ್ತಿದೆ. ಒಕ್ಕಲಿಗ ಸಮುದಾಯದ ಬೆಂಬಲದ ಜೊತೆಗೆ ಹಿಂದುಳಿದ ವರ್ಗಗಳ ಮತದಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯಲು ಯಾರು ಯಶಸ್ವಿಯಾಗುತ್ತಾರೆ ಎನ್ನುವುದು ಗೆಲುವಿನ ನಿರ್ಣಾಯಕ ಅಂಶವಾಗಲಿದೆ.

ಕಾವೇರದ ಜ್ವರ

ಮೇಲ್ನೋಟಕ್ಕೆ ಕ್ಷೇತ್ರದಲ್ಲಿನ್ನೂ ಚುನಾವಣಾ ಜ್ವರ ಕಾವೇರಿಲ್ಲ. ‘ಮೂರು ಹೊತ್ತೂ ರಾಜಕೀಯ ಮಾಡುವವರ ಪಾಲಿಗೆ ಚುನಾವಣೆ ಜೋರಾಗಿದೆ. ಬೆಳಿಗ್ಗೆ ಕೆಲಸಕ್ಕೆ ಹೋಗಿ ರಾತ್ರಿ ಮನೆಗೆ ಬರುವ ನಮಗೆ ಯಾವ ಬದಲಾವಣೆಯೂ ಕಾಣುತ್ತಿಲ್ಲ’ ಎಂದು ತಮ್ಮ ಹೆಸರು ಹೇಳಲು ಹಿಂಜರಿದ ಐ.ಟಿ. ಕಂಪನಿಯೊಂದರ ಉದ್ಯೋಗಿ, ಚುನಾವಣೆ ಬಗ್ಗೆ ತಲೆ ಕೆಡಿಸಿಕೊಳ್ಳದಂತೆ ಹೇಳಿದರು.

***

ಈವರೆಗೆ ನನೆಗುದಿಯಲ್ಲಿದ್ದ ಕೊಡಿಗೇಹಳ್ಳಿಯ ಅಂಡರ್‌ಪಾಸ್‍ ನಿರ್ಮಾಣ ಕಾರ್ಯ ಚುನಾವಣೆ ಸಂದರ್ಭದಲ್ಲಿ ಆರಂಭವಾಗಿದೆ. ಕಾಮಗಾರಿ ನಿಧಾನವಾಗಿ ನಡೆಯುತ್ತಿರುವುದನ್ನು ನೋಡಿದರೆ ಇದು ಮುಗಿಯುತ್ತದೋ ಇಲ್ಲವೋ ಅನ್ನಿಸುತ್ತಿದೆ.

ಕರ್ಕಿ ಕೃಷ್ಣಮೂರ್ತಿ, ಜನರಲ್ ಮ್ಯಾನೇಜರ್, ಸಿನರ್ಜಿ ಪ್ರಾಪರ್ಟಿ ಡೆವಲಪ್‍ಮೆಂಟ್ ಸರ್ವೀಸಸ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry