ಸೋಮವಾರ, ಫೆಬ್ರವರಿ 24, 2020
19 °C

ಪರಿಶಿಷ್ಟರ ಕಾಯ್ದೆ: ತಡೆಗೆ ‘ಸುಪ್ರೀಂ’ ನಕಾರ

ಪಿಟಿಐ Updated:

ಅಕ್ಷರ ಗಾತ್ರ : | |

ಪರಿಶಿಷ್ಟರ ಕಾಯ್ದೆ: ತಡೆಗೆ ‘ಸುಪ್ರೀಂ’ ನಕಾರ

ನವದೆಹಲಿ (ಪಿಟಿಐ): ಪರಿಶಿಷ್ಟ ಜಾತಿ, ಪಂಗಡಗಳ ಜನರ ಮೇಲಿನ ದೌರ್ಜನ್ಯದ ದೂರು ದಾಖಲಾದ ಕೂಡಲೇ ಆರೋಪಿ
ಯನ್ನು ಬಂಧಿಸುವಂತಿಲ್ಲ ಎಂದು ಮಾರ್ಚ್‌ 20ರಂದು ನೀಡಿದ ತೀರ್ಪನ್ನು ಅಮಾನತಿನಲ್ಲಿ ಇಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಆದರೆ, ಕೇಂದ್ರ ಸರ್ಕಾರ ಸಲ್ಲಿಸಿರುವ ಮರುಪರಿಶೀಲನಾ ಅರ್ಜಿಯ ವಿಚಾರಣೆ ನಡೆಸಲಾಗುವುದು ಎಂದಿದೆ.

ಸುಪ್ರೀಂಕೋರ್ಟ್‌ ತೀರ್ಪನ್ನು ಖಂಡಿಸಿ ಉತ್ತರ ಭಾರತದ ವಿವಿಧ ಭಾಗಗಳಲ್ಲಿ ಸೋಮವಾರ ನಡೆದ ಹಿಂಸಾತ್ಮಕ ಪ್ರತಿಭಟನೆಯನ್ನು ನ್ಯಾಯಮೂರ್ತಿಗಳಾದ ಎ.ಕೆ. ಗೋಯಲ್‌ ಮತ್ತು ಯು.ಯು.ಲಲಿತ್‌ ಅವರ ಪೀಠ ಉಲ್ಲೇಖಿಸಿತು. ತೀರ್ಪಿನಲ್ಲಿ ಏನಿದೆ ಎಂಬುದು ಪ್ರತಿ
ಭಟನೆ ನಡೆಸುತ್ತಿರುವವರಿಗೆ ಗೊತ್ತಿಲ್ಲ. ಅವರು ತೀರ್ಪನ್ನು ಓದಿಲ್ಲ.

ಈ ಜನರನ್ನು ಸ್ಥಾಪಿತ ಹಿತಾಸಕ್ತಿಗಳು ತಪ್ಪು ದಾರಿಗೆಳೆದಿವೆ ಎಂದು ಪೀಠ ಅಭಿಪ್ರಾಯಪಟ್ಟಿದೆ.  ಕೇಂದ್ರ ಸರ್ಕಾರದ ಅರ್ಜಿಯನ್ನು ಹತ್ತು ದಿನಗಳ ಬಳಿಕ ವಿಚಾರಣೆಗೆ ಎತ್ತಿಕೊಳ್ಳಲಗುವುದು. ಅದಕ್ಕೆ ಮೊದಲು ಹೇಳಿಕೆಗಳನ್ನು ಸಲ್ಲಿಸುವಂತೆ ಮಹಾರಾಷ್ಟ್ರ ಸರ್ಕಾರ ಮತ್ತು ಇತರರಿಗೆ ಪೀಠ ಸೂಚಿಸಿತು. ಕಾಯ್ದೆ ಅಡಿಯಲ್ಲಿ ದೂರು ದಾಖಲಾದ ಕೂಡಲೇ ಆರೋಪಿಗಳನ್ನು ಬಂಧಿಸಬಾರದು.

ಸರ್ಕಾರಿ ಅಧಿಕಾರಿಗಳ ವಿರುದ್ಧ ದೂರು ದಾಖಲಾದರೆ ಸೂಕ್ತ ಪ್ರಾಧಿಕಾರದ ಅನುಮತಿ ಪಡೆದ ನಂತರವೇ ಆರೋಪಿಗಳನ್ನು ಬಂಧಿಸಬಹುದು. ಆರೋಪಿಗಳು ಸರ್ಕಾರಿ ನೌಕರರಲ್ಲವಾದರೆ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯ ಅನುಮೋದನೆಯ ನಂತರವಷ್ಟೇ ಬಂಧಿಸಬಹುದು ಎಂದು ಸುಪ್ರೀಂ ಕೋರ್ಟ್‌ ಮಾರ್ಚ್‌ 20ರ ತೀರ್ಪಿನಲ್ಲಿ ಹೇಳಿತ್ತು.

ಇದನ್ನು ಖಂಡಿಸಿ ದಲಿತ ಸಂಘಟನೆಗಳು ‘ಭಾರತ ಬಂದ್‌’ಗೆ ಕರೆ ನೀಡಿದ್ದವು. ಸೋಮವಾರ ನಡೆದ ಬಂದ್‌ ವೇಳೆ ಭಾರಿ ಹಿಂಸಾಚಾರ ನಡೆದಿತ್ತು.

ಅರ್ಜಿ ಸೀಮಿತ: ಎಸ್‌ಸಿ/ಎಸ್‌ಟಿ ಕಾಯ್ದೆಯ ಅಡಿಯಲ್ಲಿ ದೂರು ದಾಖಲಾದ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಪಡೆಯುವ ಅವಕಾಶವನ್ನು ಸುಪ್ರೀಂ ಕೋರ್ಟ್‌ನ ಮಾರ್ಚ್‌ 20ರ ತೀರ್ಪು ನೀಡಿದೆ. ಈ ಅಂಶವನ್ನು ಪ್ರಶ್ನಿಸದಿರಲು ಕೇಂದ್ರ ಸರ್ಕಾರ
ನಿರ್ಧರಿಸಿದೆ.

ಆರೋಪಿಗಳನ್ನು ಬಂಧಿಸುವುದಕ್ಕೆ ಮೊದಲು ಸೂಕ್ತ ಪ್ರಾಧಿಕಾರದ ಅನುಮತಿ ಪಡೆದುಕೊಳ್ಳಬೇಕು ಎಂಬ ಅಂಶ ಸುಪ್ರೀಂ ಕೋರ್ಟ್‌ತೀರ್ಪಿನಲ್ಲಿದೆ.

ಕೇಂದ್ರದ ಮರುಪರಿಶೀಲನಾ ಮನವಿಯು ಈ ಅಂಶಕ್ಕೆ ಸೀಮಿತ ಎಂದು ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌, ಸುಪ್ರೀಂ ಕೋರ್ಟ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ.

ಕೋರ್ಟ್‌ ಹೇಳಿದ್ದೇನು

ಮಾರ್ಚ್‌ 20ರ ತೀರ್ಪಿನ ಮೂಲಕ ಎಸ್‌ಸಿ/ಎಸ್‌ಟಿ ಕಾಯ್ದೆಯನ್ನು ಯಾವ ರೀತಿಯಲ್ಲಿಯೂ ದುರ್ಬಲಗೊಳಿಸಲಾಗಿಲ್ಲ. ದೂರು ದಾಖಲಾದ ಕೂಡಲೇ ಆರೋಪಿಯನ್ನು ಬಂಧಿಸಬೇಕು ಎಂಬುದನ್ನು ಕಡ್ಡಾಯಗೊಳಿಸುವ ಯಾವ ಅಂಶವೂ ಈ ಕಾಯ್ದೆಯಲ್ಲಿ ಇಲ್ಲ

ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತರಿಗೆ ಎಫ್‌ಐಆರ್‌ ದಾಖಲಿಸುವುದಕ್ಕೂ ಮೊದಲು ಪರಿಹಾರ ನೀಡಲು ಅವಕಾಶ ಇದೆ

ನಿರಪರಾಧಿಗಳಿಗೆ ರಕ್ಷಣೆ ನೀಡುವುದಷ್ಟೇ ತೀರ್ಪಿನ ಉದ್ದೇಶ. ಈ ಕಾನೂನಿನ ಆಧಾರದಲ್ಲಿ ನಿರಪರಾಧಿಗಳಲ್ಲಿ ಭೀತಿ ಸೃಷ್ಟಿಸಬಾರದು

ಎಸ್‌ಸಿ/ಎಸ್‌ಟಿ ಕಾಯ್ದೆ ಒಂದು ಸ್ವತಂತ್ರ ಕಾನೂನು; ಅಪರಾಧ ಪ್ರಕ್ರಿಯಾ ಸಂಹಿತೆಯಲ್ಲಿ ಇರುವ ಪ್ರಕ್ರಿಯೆಗಳ ಮೂಲಕವೇ ಇದರ ಅನುಷ್ಠಾನ ಆಗಬೇಕು

ಎಸ್‌ಸಿ/ಎಸ್‌ಟಿ ಕಾಯ್ದೆಯಲ್ಲಿ ಸೂಚಿಸಲಾಗಿರುವ ಅಪರಾಧಗಳಿಗೆ ಮಾತ್ರ ಈ ತೀರ್ಪು ಅನ್ವಯವಾಗುತ್ತದೆ. ಕೊಲೆ ಮತ್ತು ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಬರುವ ವಿಚಾರಣಾರ್ಹ ದೂರುಗಳು ದಾಖಲಾದರೆ ಎಫ್‌ಐಆರ್‌ ದಾಖಲಿಸುವ ಮುನ್ನ ತನಿಖೆ ಮಾಡಬೇಕಾಗಿಲ್ಲ

ಆರೋಪಿಯನ್ನು ಬಂಧಿಸಬೇಕೇ ಎಂಬ ಬಗ್ಗೆ ತನಿಖೆ ನಡೆಸಲು ಏಳು ದಿನಗಳ ಕಾಲಾವಕಾಶ ನೀಡಲಾಗಿದೆಯೇ ಹೊರತು ಏಳು ದಿನಗಳ ಒಳಗೆ ಬಂಧಿಸಬಾರದು ಎಂದು ಹೇಳಿಲ್ಲ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)