ವಿಳಂಬ ಪ್ರಯಾಣ, ಪ್ರಯಾಣಿಕರು ಹೈರಾಣ!

7
ಗದಗ–ಹೂಟಗಿ ಜೋಡಿ ರೈಲು ಮಾರ್ಗ ನಿರ್ಮಾಣ: ರೈಲುಗಳ ನಿಧಾನ ಓಡಾಟ

ವಿಳಂಬ ಪ್ರಯಾಣ, ಪ್ರಯಾಣಿಕರು ಹೈರಾಣ!

Published:
Updated:
ವಿಳಂಬ ಪ್ರಯಾಣ, ಪ್ರಯಾಣಿಕರು ಹೈರಾಣ!

ಬಾಗಲಕೋಟೆ: ಜೋಡಿ ಮಾರ್ಗ ನಿರ್ಮಾಣಕ್ಕಾಗಿ ಹಳಿ ಜೋಡಣೆ ಕಾರಣ ಸೊಲ್ಲಾಪುರ–ಹುಬ್ಬಳ್ಳಿ ನಡುವೆ ಸಂಚರಿಸುವ ಹಲವು ರೈಲುಗಳು 4ರಿಂದ 5 ತಾಸು ತಡವಾಗಿ ಸಂಚರಿಸುತ್ತಿವೆ. ಇದರಿಂದ ರೈಲು ಪ್ರಯಾಣಿಕರು ಹೈರಾಣಾಗಿದ್ದಾರೆ.ವಿಳಂಬವಾಗಿ ಸಂಚರಿಸುವ ರೈಲುಗಳ ಬಗ್ಗೆ ರೈಲ್ವೆ ಇಲಾಖೆ ಮೊದಲೇ ಸಾರ್ವಜನಿಕವಾಗಿ ಪ್ರಕಟಣೆ ನೀಡದ ಪರಿಣಾಮ ಪ್ರಯಾಣಿಕರು ನಾಲ್ಕೈದು ತಾಸು ನಿಲ್ದಾಣಗಳಲ್ಲಿಯೇ ಕಾಯುತ್ತಾ ಕುಳಿತುಕೊಳ್ಳಬೇಕಿದೆ. ಏಪ್ರಿಲ್ 3ರಂದು ಸಂಜೆ 6.50ಕ್ಕೆ ಬಾಗಲಕೋಟೆ ನಿಲ್ದಾಣ ಬಿಡಬೇಕಿದ್ದ ಸೊಲ್ಲಾಪುರ–ಮೈಸೂರು ಗೋಲಗುಂಬಜ್ ಎಕ್ಸ್‌ಪ್ರೆಸ್ ರೈಲು ರಾತ್ರಿ 11.10ಕ್ಕೆ ಹೊರಟಿದೆ. ಇದರಿಂದ ಪ್ರಯಾಣಿಕರು ತೀವ್ರ ಸಂಕಷ್ಟ ಅನುಭವಿಸಿದರು.

ಬುಧವಾರ ಬಾಗಲಕೋಟೆ ನಿಲ್ದಾಣಕ್ಕೆ ಬೆಳಿಗ್ಗೆ 7.20ಕ್ಕೆ ಬರಬೇಕಿದ್ದ ಮೈಸೂರು–ಸೊಲ್ಲಾಪುರ ನಡುವಿನ ಗೋಲಗುಂಬಜ್ ಎಕ್ಸ್‌ಪ್ರೆಸ್ ರೈಲು 10.50ಕ್ಕೆ ಬಂದಿದೆ. ಸೊಲ್ಲಾಪುರ–ಹುಬ್ಬಳ್ಳಿ ಪ್ಯಾಸೆಂಜರ್ ರೈಲು ಬೆಳಿಗ್ಗೆ 9.30ರ ಬದಲು 11ಕ್ಕೆ ಬಂದಿದೆ. ಹುಬ್ಬಳ್ಳಿ–ವಿಜಯಪುರ ನಡುವಿನ ಪ್ಯಾಸೆಂಜರ್ ರೈಲು ಬಾಗಲಕೋಟೆಗೆ ಬೆಳಿಗ್ಗೆ 10.20ರ ಬದಲಿಗೆ ಮಧ್ಯಾಹ್ನ 2.20ಕ್ಕೆ ಬಂದಿದೆ. ಹೀಗೆ 2ರಿಂದ 4 ತಾಸು ರೈಲುಗಳು ವಿಳಂಬವಾಗಿ ಸಂಚರಿಸುತ್ತಿರುವ ಕಾರಣ ಪ್ರಯಾಣಿಕರು ಹೈರಾಣಾಗಿದ್ದಾರೆ.

‘ಮಂಗಳವಾರ ಸಂಜೆ ರೈಲು ನಿಲ್ದಾಣಕ್ಕೆ ಬಂದಾಗ ಗೋಲಗುಂಬಜ್‌ ಎಕ್ಸ್‌ಪ್ರೆಸ್‌ ನಾಲ್ಕು ತಾಸು ತಡವಾಗಿ ಸಂಚರಿಸುತ್ತಿದೆ ಎಂದು ಸಿಬ್ಬಂದಿ ಹೇಳಿದರು. ಇಲ್ಲಿಯೇ ವಿನಾಯಕ ನಗರದಲ್ಲಿ ಮನೆ ಇದ್ದ ಕಾರಣ ನಾನು ವಾಪಸ್ ಮರಳಿ ರಾತ್ರಿ ವೇಳೆಗೆ ಬಂದೆನು. ಆದರೆ ಪಕ್ಕದ ಬೀಳಗಿ, ಮುಧೋಳ, ಹುನಗುಂದ ಕಡೆಯಿಂದ ಬಂದ ಪ್ರಯಾಣಿಕರು ರೈಲು ನಿಲ್ದಾಣದಲ್ಲಿಯೇ ಕುಳಿತುಕೊಳ್ಳಬೇಕಾಯಿತು’ ಎಂದು ನಗರದ ನಿವಾಸಿ ಪಾಂಡುರಂಗ ವರ್ಣೇಕರ ‘ಪ್ರಜಾವಾಣಿ’ಗೆ ತಿಳಿಸಿದರು. ‘ಆ ದಿನ ಯಾವ ರೈಲು ಎರಡು ಗಂಟೆಗೂ ಹೆಚ್ಚು ಕಾಲ ತಡವಾಗಿ ಸಂಚರಿಸಲಿದೆ ಎಂಬುದರ ಬಗ್ಗೆ ಇಲಾಖೆ ಪ್ರಯಾಣಿಕರ ಮೊಬೈಲ್‌ಫೋನ್‌ಗೆ ಮೊದಲೇ ಸಂದೇಶ ಕಳುಹಿಸುವ ಇಲ್ಲವೇ ಪತ್ರಿಕೆಗಳಲ್ಲಿ ಪ್ರಕಟಣೆ ನೀಡಲಿ. ಅದಕ್ಕೆ ತಕ್ಕಂತೆ ಪ್ರಯಾಣದ ಸಿದ್ಧತೆ ಮಾಡಿಕೊಳ್ಳಬಹುದು’ ಎಂದು ವರ್ಣೇಕರ ಹೇಳುತ್ತಾರೆ.ಇನ್ನು ರೈಲು ಪ್ರಯಾಣಿಕರ ಪಾಡಂತೂ ಹೇಳತೀರದರು. ರೈಲಿನಲ್ಲಿಯೇ ಕುಳಿತು ಕಾಲ ಕಳೆಯಬೇಕಿದೆ. ಬೇಸಿಗೆಯ ಬಿಸಿಲ ಝಳ, ಸೆಕೆಗೆ ಮಕ್ಕಳು–ಮರಿ ಕಟ್ಟಿಕೊಂಡು ಓಡಾಡುವವರು ಹಾಗೂ ಹಿರಿಯರು ತೊಂದರೆ ಅನುಭವಿಸಬೇಕಿದೆ. ರೈಲು ಪ್ರಯಾಣದ ಬಗ್ಗೆಯೇ ಹಿಡಿಶಾಪ ಹಾಕುತ್ತಿದ್ದಾರೆ.

ನೈರುತ್ಯ ರೈಲ್ವೆ ವ್ಯಾಪ್ತಿಯ ಗದಗ–ಹೂಟಗಿ ನಡುವಿನ 284 ಕಿ.ಮಿ ದೂರದ ಜೋಡು ಮಾರ್ಗ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಅದರಲ್ಲಿ ಹೆಬಸೂರು–ಅಣ್ಣಿಗೇರಿ ಹಾಗೂ ವಿಜಯಪುರದಿಂದ ಮಿಂಚಿನಾಳ–ಲಚ್ಚ್ಯಾಣ ನಡುವಿನ 43 ಕಿ.ಮೀ ರೈಲು ಮಾರ್ಗ ಈಗಾಗಲೇ ಸಿದ್ಧಗೊಂಡಿದೆ. ಅದರ ಪ್ರಾಯೋಗಿಕ ಪರೀಕ್ಷೆಯ ತಾಂತ್ರಿಕ ಕಾರಣದಿಂದಾಗಿ ಈ ಭಾಗದ ರೈಲುಗಳ ಓಡಾಟದಲ್ಲಿ ವಿಳಂಬವಾಗುತ್ತಿತ್ತು. ಈಗ ಅದು ಪೂರ್ಣಗೊಂಡಿದೆ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.

ಉದ್ಯೋಗಿಗಳು, ವಿದ್ಯಾರ್ಥಿಗಳಿಗೆ ತೊಂದರೆ: ಬಾಗಲಕೋಟೆಯಿಂದ ವಿಜಯಪುರ, ಬಸವನಬಾಗೇವಾಡಿ, ಆಲಮಟ್ಟಿ, ಬಾದಾಮಿ, ಹೊಳೆಆಲೂರು ಭಾಗದಲ್ಲಿ ಕೆಲಸ ಮಾಡುವ ಶಿಕ್ಷಕರು, ಬ್ಯಾಂಕ್ ಹಾಗೂ ಖಾಸಗಿ ಸಂಸ್ಥೆಗಳ ಉದ್ಯೋಗಿಗಳು ಓಡಾಡಲು ಈ ರೈಲುಗಳನ್ನೇ ನೆಚ್ಚಿಕೊಂಡಿದ್ದಾರೆ. ಸುತ್ತಲಿನ ಹಳ್ಳಿಗಳ ವಿದ್ಯಾರ್ಥಿಗಳು ಬಾಗಲಕೋಟೆಗೆ ಓದಲು ಬರಲು ಮಾಸಿಕ ಪಾಸ್ ಆಧಾರದ ಮೇಲೆ ಈ ರೈಲುಗಳಲ್ಲಿಯೇ ಸಂಚರಿಸುತ್ತಾರೆ. ಆದರೆ ರೈಲುಗಳು ಸಮಯ ತಪ್ಪುತ್ತಿರುವುದರಿಂದ ಉದ್ಯೋಗಿಗಳು, ಶಿಕ್ಷಕರಿಗೆ ಸಮಯಕ್ಕೆ ಸರಿಯಾಗಿ ಹೋಗಲು ಆಗುತ್ತಿಲ್ಲ. ‘ಮದುವೆ–ಮುಂಜಿ, ಕೆಲಸದ ಸಂದರ್ಶನಕ್ಕೆ ಹೋಗುವವರ ಪಾಡು ದೇವರಿಗೆ ಪ್ರೀತಿ’ ಎಂದು ಆಲಮಟ್ಟಿಯ ಶಿಕ್ಷಕಿ ಸುವರ್ಣಾ ಬಾಯಿ ಹೇಳುತ್ತಾರೆ.‘ಬಾದಾಮಿ ಸೇರಿದಂತೆ ಕೆಲವು ರೈಲು ನಿಲ್ದಾಣದಲ್ಲಿ ಊಟ–ಉಪಹಾರ ಸಿಗುವುದಿಲ್ಲ. ಅಲ್ಲಿ ಪ್ರಯಾಣಿಕರು ನಾಲ್ಕಾರು ಗಂಟೆ ಕಾಯುತ್ತಾ ಕುಳಿತುಕೊಳ್ಳುವುದು ದೊಡ್ಡ ಸವಾಲಿನ ಕೆಲಸ. ಇದನ್ನು ರೈಲ್ವೆ ಇಲಾಖೆ ಅರಿತುಕೊಳ್ಳಬೇಕು’ ಎಂದು ನವನಗರದ ನಿವಾಸಿ ಮಂಜುನಾಥ ದೊಡಮನಿ ಹೇಳುತ್ತಾರೆ.

**

ತಡವಾಗಿ ಸಂಚರಿಸುವ ರೈಲುಗಳ ಬಗ್ಗೆ ನಿತ್ಯ ಪತ್ರಿಕೆಗಳಿಗೆ ಪ್ರಕಟಣೆ ನೀಡುತ್ತಿದ್ದೇವೆ. ಆದರೆ ಅದು ಕೆಲವು ಜಿಲ್ಲೆಗಳಿಗೆ ತಲುಪುತ್ತಿಲ್ಲ ಅದನ್ನು ಸರಿಪಡಿಸಲಾಗುವುದು – 

ಇ.ವಿಜಯಾ, ಹುಬ್ಬಳ್ಳಿಯ ನೈರುತ್ಯ ರೈಲ್ವೆ ಸಾರ್ವಜನಿಕ ಸಂಪರ್ಕಾಧಿಕಾರಿ.

**

ರೈಲುಗಳು ತಡವಾಗಿ ಸಂಚರಿಸುತ್ತಿರುವುದರಿಂದ ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆ ಬಗ್ಗೆ ರೈಲ್ವೆ ಅಧಿಕಾರಿಗಳ ಗಮನ ಸೆಳೆದು ಸಮಸ್ಯೆ ಪರಿಹರಿಸಲು ಸೂಚಿಸುವೆ – ಪಿ.ಸಿ.ಗದ್ದಿಗೌಡರ, ಸಂಸದ.

**

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry